ಹಕ್ಕಿರೋಗ - ಮಕ್ಕಳಲ್ಲಿ ಕಂಡುಬರುವ ವ್ಯಾಧಿ (ರಿಕೆಟ್ಸ್). ಮೆದು ಮೂಳೆರೋಗ ಪರ್ಯಾಯಪದ. ಇದರಿಂದ ನರಳುವ ಎಳೆಯರ ಎಲುಬುಗಳು ಸರಿಯಾಗಿ ಬೆಳೆಯುವುದಿಲ್ಲ. ಅಲ್ಲದೆ ಅವುಗಳಲ್ಲಿ ಶೇಖರವಾಗಬೇಕಾಗಿದ್ದ ಲವಣಗಳ ಕೊರತೆಯೂ ಬಾಧಿಸುತ್ತದೆ. ಇಂಥ ಮಕ್ಕಳ ಎಲುಬುಗಳು ತೀರ ಮೃದುವಾಗಿದ್ದು ಫಕ್ಕನೆ ಮುರಿದು ಹೋಗುವ ಸಾಧ್ಯತೆಯೂ ಇದೆ. ಜೀವಸತ್ತ್ವ ಡಿಯ ಕೊರತೆಯೇ ಹಕ್ಕಿರೋಗದ ಪ್ರಮುಖ ಕಾರಣ. ಪರಿಣಾಮವಾಗಿ ಮಗುವಿನ ಎದೆಗೂಡು ವಿಕೃತವಾಗಿ, ಕೈಕಾಲುಗಳು ವಿಕಾರವಾಗಿ ಒಟ್ಟಾರೆ ಮಗು ಹಕ್ಕಿಯ ಕಂಕಾಲದಂತೆ ಕಾಣುತ್ತದೆ.

ರೋಗಲಕ್ಷಣಗಳು: ಮುಖ್ಯವಾಗಿ 9 ಲಕ್ಷಣಗಳನ್ನು ಗುರುತಿಸಿದೆ. ಇವು 6-12 ವರ್ಷಗಳ ವಯಸ್ಸಿನ ಅಂತರದಲ್ಲಿ ಪ್ರಕಟವಾಗುತ್ತವೆ. 1. ಎಲುಬುಗಳಲ್ಲಿ ಬೆಳೆವ ತುದಿಗಳು ಮುರುಟುತ್ತವೆ. 2. ಪಕ್ಕೆಲುಬಿನ ಮೃದ್ವಸ್ಥಿಗಳು ಉಬ್ಬಿ ಒಟ್ಟಾರೆ ನೋಡಲು ವಿಕಾರರೂಪ ತಾಳುತ್ತದೆ. 3. ನೆತ್ತಿಗುಳಿ ದೀರ್ಘಕಾಲದ ತನಕ ತುಂಬಿಕೊಳ್ಳುವುದಿಲ್ಲ. 4. ತಲೆಯ ಎಲುಬುಗಳು ಉಬ್ಬುತ್ತವೆ. ಹೀಗಾಗಿ ತಲೆಬುರುಡೆಗೆ ವಿಚಿತ್ರ ಆಕಾರ ಬರುತ್ತದೆ. 5. ಕೈಕಾಲುಗಳ ಎಲುಬುಗಳ ಬೆಳೆವ ತುದಿಗಳು ಹಿಗ್ಗಿ ಆ ಎಲುಬುಗಳು ಬಿಲ್ಲಿನಂತೆ ಮಣಿಯುತ್ತವೆ. 6. ಪಾದಗಳು ಸೊಟ್ಟಗಾಗು ವುವು. 7. ಉದರ ಭಾಗ ಅತಿಶಯವಾಗಿ ಉಬ್ಬಿಕೊಂಡಿರುತ್ತದೆ. 8. ಹಲ್ಲುಗಳ ಮೊಳೆತ ಮತ್ತು ಬೆಳೆವಣಿಗೆ ನಿಧಾನವೂ ಕುಂಠಿತವೂ ಆಗುತ್ತವೆ. 9. ಕೈಕಾಲುಗಳು ತೀವ್ರ ಸೆಟೆತಕ್ಕೆ ಒಳಗಾಗುವುವು (ಧನುರ್ವಾಯು). ಇವೆಲ್ಲವುಗಳ ಜೊತೆಗೆ ಮಕ್ಕಳ ಜೀರ್ಣಾಂಗ ವ್ಯವಸ್ಥೆ ಸುಸ್ಥಿತಿಯಲ್ಲಿರುವುದಿಲ್ಲ. ಕೆಮ್ಮು, ಬೆವರುವಿಕೆ ಮುಂತಾದ ಬಾಧೆಗಳೂ ಮಗುವಿಗೆ ತಟ್ಟುತ್ತವೆ. ರೋಗ ಚಿಕಿತ್ಸೆ: ಯುಕ್ತ ಚಿಕಿತ್ಸೆಯಿಂದ ಈ ರೋಗವನ್ನು ನಿಯಂತ್ರಿಸ ಬಹುದು. ಸರಿಯಾದಪ್ರಮಾಣದಲ್ಲಿ ಕ್ಯಾಲ್ಸಿಯಮ್, ಹಾಲು, ಮೊಸರು ಮುಂತಾದ ಕ್ಷೀರೋತ್ಪನ್ನಗಳನ್ನು ಕೊಡಬೇಕು. ಬಿಸಿಲಿನಲ್ಲಿ ಸ್ವಲ್ಪಕಾಲ ವಾದರೂ ಕಳೆಯುವುದು ಒಳ್ಳೆಯದು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ನೋವು ಮತ್ತು ಊತ ನಿವಾರಿಸಲು ಶೈತ್ಯ ಚಿಕಿತ್ಸೆ ಮತ್ತು ಬರ್ಫ ಚಿಕಿತ್ಸೆ ನೆರವಾಗುತ್ತವೆ. ಇವುಗಳಿಂದ ಸಂಧಿನೋವು ಮತ್ತು ಒತ್ತಡ ಕಡಿಮೆಯಾಗುತ್ತವೆ. ಸೈಕಲ್ ಅರ್ಗೋಮೀಟರ್ ತುಳಿಯುವುದರಿಂದ ರೋಗಿಯ ತೂಕ ಕಡಿಮೆಯಾಗಿ ಆತನ ತ್ರಾಣ ಅಧಿಕವಾಗುತ್ತದೆ. (ಎಸ್.ಕೆ.ಎಚ್.)