ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಕ್ಲೂತ್, ರಿಚರ್ಡ್

ಹಕ್ಲೂತ್, ರಿಚರ್ಡ್ 1552-1616. ಪ್ರಸಿದ್ಧ ಇಂಗ್ಲಿಷ್ ಸಂಶೋಧಕ, ಪಂಡಿತ, ಅರ್ಥಶಾಸ್ತ್ರಜ್ಞ ಹಾಗೂ ಭೂಗೋಳಶಾಸ್ತ್ರಜ್ಞ. ಈತ 1552ರಲ್ಲಿ ಲಂಡನ್ನಿನ ಬಳಿ ಜನಿಸಿದ. ಇವನು ಬಾಲ್ಯದಲ್ಲಿ ತನ್ನ ಸಂಬಂಧಿಯೊಬ್ಬನನ್ನು ಸಂಧಿಸಿದಾಗ ಅವನಲ್ಲಿದ್ದ ಪ್ರಪಂಚವಿವರಣಶಾಸ್ತ್ರದ ಗ್ರಂಥವೊಂದನ್ನೂ ಪ್ರಪಂಚ ಭೂಪಟವನ್ನೂ ನೋಡಿದಾಗ ಆ ವಿಷಯವನ್ನು ಅಭ್ಯಸಿಸುವ ಆಸೆ ಅಂಕುರಿಸಿತು. ಅದರಂತೆ ಈತ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಭೂಗೋಳಶಾಸ್ತ್ರವನ್ನು ಅಭ್ಯಾಸಮಾಡಿ ಅಲ್ಲಿಯೇ ಅಧ್ಯಾಪಕ ವೃತ್ತಿಯನ್ನು ಅವಲಂಬಿಸಿದ. ಇಂಗ್ಲೆಂಡ್ ಪ್ರಗತಿ ಹೊಂದಲು ಸಮುದ್ರಯಾನದ ಅಗತ್ಯವಿದೆ ಎಂದು ಮನಗಂಡು ಭೂಗೋಳ ಸಂಶೋಧನ ಕಾರ್ಯದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ. ಇವನ ಪ್ರಶಂಸಾರ್ಹವಾದ ದೂರದೃಷ್ಟಿಯ ಪರಿಣಾಮವಾಗಿ ಇಂಗ್ಲೆಂಡ್, ನೌಕಾಯಾನ ವಾಣಿಜ್ಯ, ವಸಾಹತುಗಳ ಸ್ಥಾಪನೆಯಲ್ಲಿ ಮುಂದುವರಿಯಿತು.

ಭೂಗೋಳ ಮತ್ತು ಭೌಗೋಳಿಕ ಸಂಶೋಧನೆಗಳ ಬಗ್ಗೆ ಅಪಾರವಾದ ಆಸಕ್ತಿಯಿದ್ದುದರಿಂದ ಇವನು ಸಮುದ್ರಯಾನಗಳಿಂದ ಹಿಂದಿರುಗಿದ ನಾವಿಕರನ್ನು ಸಂಧಿಸಿ ಅವರಿಂದ ಸಮುದ್ರಯಾನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ. ದಿ ಡೈವರ್ಸ್ ವಾಯೆಜಸ್ ಟಚಿಂಗ್ ದಿ ಡಿಸ್ಕವರಿ ಆಫ್ ಅಮೆರಿಕ ಎಂಬುದು ಇವನ ಪ್ರಥಮ ಕೃತಿ. 1582ರಲ್ಲಿ ಪ್ರಕಟವಾದಾಗ ಇದು ಎಲ್ಲರ ಗಮನವನ್ನು ಸೆಳೆಯಿತು. ಅನಂತರ ಇವನಿಗೆ ಫ್ರೆಂಚ್ ರಾಯಭಾರಿಯ ಚಾಪ್ಲಿಲ್ ಆಗಿ ಫ್ರಾನ್ಸಿಗೆ ಹೋಗುವ ಅವಕಾಶ ದೊರೆಯಿತು. ಫ್ರಾನ್ಸಿನಲ್ಲಿ ಫ್ರೆಂಚ್ ಮತ್ತು ಸ್ಪಾನಿಷ್ ನೌಕಾಯಾನಗಳ ಬಗ್ಗೆ ವಿಷಯವನ್ನು ಸಂಗ್ರಹಿಸಿ ಗ್ರಂಥರೂಪದಲ್ಲಿ ಪ್ರಕಟಿಸಿದ. 1584ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದಾಗ ಎಲಿಜಬೆತ್ ರಾಣಿಗೆ ತನ್ನ ಹಲವು ಕೃತಿಗಳನ್ನು ಸಮರ್ಪಿಸಿದ. ಜೊತೆಗೆ ಕೆಲವು ಗ್ರಂಥಗಳ ಭಾಷಾಂತರ ಹಾಗೂ ಸಂಗ್ರಹ ಕಾರ್ಯವನ್ನೂ ಕೈಗೊಂಡ. ಈತ ಸ್ವಲ್ಪಕಾಲ ಈಸ್ಟ್‍ಇಂಡಿಯ ಕಂಪೆನಿಂiÀi ಸಲಹೆಗಾರನಾಗಿಯೂ ಕೆಲಸಮಾಡಿದ. ದಿ ಪ್ರಿನ್ಸಿಪಲ್ ನ್ಯಾವಿಗೇಶನ್: ವಾಯೆಜಸ್ ಅಂಡ್ ಡಿಸ್ಕವರಿಸ್ ಆಫ್ ದಿ ಇಂಗ್ಲಿಷ್ ನೇಶನ್ ಎಂಬುದು ಇವನ ಮುಖ್ಯ ಕೃತಿ. ಇದು 1589ರಲ್ಲಿ ಪ್ರಕಟವಾಯಿತು. ಈ ಗ್ರಂಥದಲ್ಲಿ ಎಲಿಜಬೆತ್ ಕಾಲದ ನಾವಿಕರ ರೋಮಾಂಚಕಾರಿ ಸಾಹಸಗಳನ್ನು ಚಿತ್ರಿಸಲಾಗಿದೆ. ಇದನ್ನು ಇಂಗ್ಲೆಂಡಿನ ಗದ್ಯ ಕಾವ್ಯವೆಂದೂ ಕರೆಯಲಾಗಿದೆ. ವೈಜ್ಞಾನಿಕ ತತ್ತ್ವಗಳ ಆಧಾರದ ಮೇಲೆ ರಚಿತವಾದ ಅತ್ಯಮೂಲ್ಯವಾದ ಭೂಪಟ ಕೂಡ ಇದರಲ್ಲಿದೆ. (ಎಸ್.ಎಮ್.ವಿ.)