ಹಗರಿ ಭಾರತದ ಕರ್ನಾಟಕ ರಾಜ್ಯದ ತುಂಗಭದ್ರಾ ನದಿಯ ಒಂದು ಮುಖ್ಯ ಉಪನದಿ. ಇದಕ್ಕೆ ಹಗರೆ, ಅಘಹರಿ ಅಥವಾ ಪಾಪನಾಶಿನಿ ಎಂಬ ಹೆಸರುಗಳೂ ಇವೆ. ಚಿಕ್ಕಮಗಳೂರಿನಲ್ಲಿ ಇದಕ್ಕೆ ವೇದಾವತಿ ಎಂಬ ಹೆಸರಿದೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನ ಗಿರಿಯ ಗೌರಿಹಳ್ಳದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ವೇದಾನದಿ ಮುಳ್ಳಯ್ಯನ ಗಿರಿಯ ಬಳಿಯೆ ಹುಟ್ಟುವ ಆವತಿ ನದಿಯನ್ನು ಕಡೂರಿನ ಆಗ್ನೇಯಕ್ಕೆ ಸು. 5 ಕಿಮೀ ದೂರದಲ್ಲಿರುವ ತಂಗಳಿ ಬಳಿ ಕೂಡಿಕೊಂಡು ವೇದಾವತಿ ಎಂಬ ಹೆಸರಿನಿಂದ ಮುಂದೆ ಸಾಗುತ್ತದೆ. ವೇದಾನದಿಗೆ ಶಕುನಗಿರಿಯ ಬಳಿ ಅಣೆಕಟ್ಟೆ ಕಟ್ಟಿದೆ. ಈ ಜಲಾಶಯಕ್ಕೆ ಅಯ್ಯನ ಕೆರೆ ಎಂದು ಹೆಸರು. ಆವತಿ ನದಿಗೆ ಕಟ್ಟಿರುವ ಅಣೆಕಟ್ಟೆ ಮದಗಕೆರೆ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ವೇದಾವತಿ ನೈಋತ್ಯದಿಂದ ಈಶಾನ್ಯಾಭಿ ಮುಖವಾಗಿ ಹರಿದು ಹಿರಿಯೂರಿಗೆ 11 ಕಿಮೀ ದೂರದಲ್ಲಿ ಶಿರಾ ಮತ್ತು ಹಾಗಲವಾಡಿ ಕಡೆಗಳಿಂದ ಬರುವ ಸಣ್ಣ ತೊರೆಗಳನ್ನು ಕೂಡಿಕೊಂಡು ಉತ್ತರಕ್ಕೆ ತಿರುಗಿ ಹಗರಿ ಎಂಬ ಹೆಸರನ್ನು ಪಡೆದು ಮುಂದೆ ಪ್ರವಹಿಸುತ್ತದೆ. ಈ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬ್ರಹ್ಮಗಿರಿಯ ದಕ್ಷಿಣಕ್ಕೆ ಮಾರಿಕಣಿವೆ ಎಂಬಲ್ಲಿ ಈ ನದಿಗೆ ಅಡ್ಡಲಾಗಿ ವಾಣಿವಿಲಾಸ ಸಾಗರ ಎಂಬ ಅಣೆಕಟ್ಟನ್ನು ಕಟ್ಟಲಾಗಿದೆ. ಚಳ್ಳಕೆರೆ ತಾಲ್ಲೂಕಿನ ಘಟಪರ್ತಿ ಗ್ರಾಮದ ಉತ್ತರಕ್ಕೆ 8 ಕಿಮೀ ದೂರದಲ್ಲಿ ಹಗರಿ ನದಿ ಈ ಜಿಲ್ಲೆಯನ್ನು ಬಿಟ್ಟು ಬಳ್ಳಾರಿ ತಾಲ್ಲೂಕಿನ ರೂಪನಗುಡಿಗೆ ಕೆಲವು ಕಿಮೀಗಳ ದೂರದಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಈ ನದಿ ಉತ್ತರಾಭಿಮುಖವಾಗಿ ಹರಿದು ಮಧ್ಯೆ ಸ್ವಲ್ಪ ದೂರ ಕರ್ನಾಟಕ, ಆಂಧ್ರ ಪ್ರದೇಶದ ಗಡಿಯಾಗಿ ಹರಿದು, ಮತ್ತೆ ಜಿಲ್ಲೆಯ ಒಳಗೆ ಉತ್ತರಾಭಿಮುಖವಾಗಿ ಪ್ರವಹಿಸಿ ಜಿಲ್ಲೆಯಲ್ಲಿ ಒಟ್ಟು 92.8 ಕಿಮೀ ದೂರ ಹರಿದು ಸಿರಗುಪ್ಪ ತಾಲ್ಲೂಕಿನ ಸಿದ್ದರ ಗದ್ದೆ ಗ್ರಾಮದ ಬಳಿ ತುಂಗಭದ್ರೆಯನ್ನು ಸೇರುತ್ತದೆ.

ಹಗರಿಯ ಕೂಡುನದಿಗಳಲ್ಲಿ ಚಿನ್ನಹಗರಿ ಮತ್ತು ಚಿಕ್ಕಹಗರಿ ಪ್ರಧಾನವಾದವು. ಚಿನ್ನಹಗರಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಹುಟ್ಟಿ ಜನಗಹಳ್ಳ ಎಂಬ ಹೆಸರಿನಿಂದ ಚಿತ್ರದುರ್ಗ, ಜಗಳೂರು, ಮೊಳಕಾಲ್ಮೂರು ತಾಲ್ಲೂಕಿನ ದಕ್ಷಿಣದಲ್ಲಿ ಕಲ್ಲಹಳ್ಳಿ ಹತ್ತಿರ ಬಳ್ಳಾರಿ ಜಿಲ್ಲೆಯನ್ನು ಪ್ರವೇಶಿಸಿ, ಚಿತ್ರದುರ್ಗ ಬಳ್ಳಾರಿ ಜಿಲ್ಲೆಗಳ ಗಡಿಯಾಗಿ ಸ್ವಲ್ಪ ದೂರ ಹರಿದು, ಮುಂದೆ ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಉತ್ತರದಲ್ಲಿ ಹಗರಿನದಿಯನ್ನು ಕೂಡಿಕೊಳ್ಳುತ್ತದೆ. ಪೆದ್ದವಂಕ (ದೊಡ್ಡತೊರೆ) ಕೂಡ್ಲಿಗಿಯ ಆಗ್ನೇಯದಲ್ಲಿ ಚಿನ್ನಹಗರಿಗೆ ಸೇರುವ ಒಂದು ಮುಖ್ಯ ಉಪನದಿ. ಚಿಕ್ಕಹಗರಿ, ಚಿತ್ರದುರ್ಗದಲ್ಲಿ ಹುಟ್ಟಿ ಹರಪನಹಳ್ಳಿ ತಾಲ್ಲೂಕಿನ ಅಂಜಿಗೇರಿ ಗ್ರಾಮದ ಬಳಿ ಬಳ್ಳಾರಿ ಜಿಲ್ಲೆಯನ್ನು ಪ್ರವೇಶಿಸಿ ಉತ್ತರಾಭಿಮುಖವಾಗಿ ಸು. 64 ಕಿಮೀ ದೂರಹರಿದು ತುಂಗಭದ್ರಾ ಅಣೆಕಟ್ಟಿನ ಹಿನ್ನೀರನ್ನು ಕೂಡಿಕೊಳ್ಳುತ್ತದೆ. ಈ ನದಿಗೆ ಹಗರಿಬೊಮ್ಮನ ಹಳ್ಳಿಯ ಬಳಿ ನೀರಾವರಿಗಾಗಿ ಒಂದು ಅಣೆಕಟ್ಟೆ ಕಟ್ಟಿದೆ.

ಹಗರಿ ನದಿ ಬೇಸಗೆಯಲ್ಲಿ ಬತ್ತಿಹೋದರೂ ನದಿಯ ಅಂಚಿನ ಕಪಿಲೆಗಳಿಂದ ವ್ಯವಸಾಯಕ್ಕೆ ನೀರೊದಗಿಸಿಕೊಳ್ಳಲಾಗುತ್ತದೆ. ಈ ನದಿಗೆ ಪರದೇವನಹಳ್ಳಿಯ ಬಳಿ ಒಂದು ರೈಲು ಸೇತುವೆ ಕಟ್ಟಲಾಗಿದೆ. ಅಲ್ಲಿ ನದಿ ಸಮುದ್ರಮಟ್ಟಕ್ಕೆ 404 ಮೀ ಎತ್ತರದಲ್ಲಿ ಹರಿಯುತ್ತದೆ. ಹಿರಿಯೂರಿನ ಬಳಿಯೂ ಈ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲಾಗಿದ್ದು ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. (ವಿ.ಜಿ.ಕೆ.)