ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಗುರ ಕಾಂಕ್ರೀಟುಗಳು

ಹಗುರ ಕಾಂಕ್ರೀಟುಗಳು

	ಘನಮೀಟರಿಗೆ 1,900 ಕೆಜಿಗಿಂತ ಕಡಿಮೆ ತೂಕದ ಕಾಂಕ್ರೀಟ್ (ಲೈಟ್‍ವೆಯ್ಟ್ ಕಾಂಕ್ರೀಟ್ಸ್). ಮಾಮೂಲೀ ಕಾಂಕ್ರೀಟ್ (ಇದು ಪೋರ್ಟ್‍ಲೆಂಡ್ ಸಿಮೆಂಟ್ ಕಾಂಕ್ರೀಟ್) ಘನಮೀಟರಿಗೆ 2,200-2,600 ಕೆಜಿ ತೂಗುತ್ತದೆ. ಇದಕ್ಕೆ ಸಾಧಾರಣ ತೂಕದ ಸಿಮೆಂಟ್ ಕಾಂಕ್ರೀಟ್ ಎಂದು ಹೆಸರು. ಘನಮೀಟರಿಗೆ 300 ಕೆಜಿ ತೂಗುವ ಹಗುರ ಕಾಂಕ್ರೀಟ್‍ಗಳೂ ಇವೆ. 

ಕಾಂಕ್ರೀಟಿನಲ್ಲಿ ಲಘುತ್ವವನ್ನು ಎರಡು ರೀತಿಗಳಲ್ಲಿ ಸಾಧಿಸಲಾಗುವುದು:

1. ನಮ್ಮ ಗಾರೆಯಲ್ಲಿ ವಾಯು ಇಲ್ಲವೇ ಅನಿಲವನ್ನು ಒಳಗೂಡಿಸು ವುದು ಒಂದು ರೀತಿ. ಇದರಿಂದ ಕಾಂಕ್ರೀಟಿನ ಒಳ ರಚನೆಯಲ್ಲಿ ಅಸಂಖ್ಯ ಸಣ್ಣ ಗುಳ್ಳೆಗಳು ಮೈದೋರಿ ಅದರ ಒಟ್ಟು ತೂಕ ಕಡಿಮೆ ಆಗುತ್ತದೆ. ಇಂಥ ತಯಾರಿಕೆಗೆ ಕೋಶಮಯ ಕಾಂಕ್ರೀಟ್ (ಸೆಲ್ಯುಲರ್ ಕಾಂಕ್ರೀಟ್), ವಾಯುಪೂರಿತ ಕಾಂಕ್ರೀಟ್ (ಏರೇಟೆಡ್ ಕಾಂಕ್ರೀಟ್), ನೊರೆ ಕಾಂಕ್ರೀಟ್ (ಫೋಮ್ ಕಾಂಕ್ರೀಟ್) ಅಥವಾ ಅನಿಲ ಕಾಂಕ್ರೀಟ್ (ಗ್ಯಾಸ್ ಕಾಂಕ್ರೀಟ್) ಎಂಬ ಹೆಸರುಗಳಿವೆ.

2. ಸಾಧಾರಣ ಕಾಂಕ್ರೀಟಿನಲ್ಲಿ ಸಿಮೆಂಟಿನೊಂದಿಗೆ ಮರಳು ಮತ್ತು ಜಲ್ಲಿ ಬೆರೆಸುತ್ತಾರೆ. ಜಲ್ಲಿ ಮತ್ತು ಮರಳಿನ ಸಮಷ್ಟಿ (ಆ್ಯಗ್ರಿಗೇಟ್) ಎಂದು ಹೆಸರು. ಇಲ್ಲಿ ಜಲ್ಲಿ ಸ್ಥೂಲ ಸಮಷ್ಟಿ, ಮರಳು ಸೂಕ್ಷ್ಮ ಸಮಷ್ಟಿ. ಇವುಗಳ ಬದಲಾಗಿ ಟೊಳ್ಳಾದ ಮತ್ತು ಲಘು ಕೋಶಮಯ ಸಮಷ್ಟಿ ಬಳಸಿ ಲಘುತ್ವ ಸಾಧಿಸುವುದೂ ಉಂಟು. ಹೀಗೆ ತಯಾರಿಸಿದ್ದು ಲಘು ಸಮಷ್ಟಿ ಕಾಂಕ್ರೀಟ್.

ಕೋಶಮಯ ಕಾಂಕ್ರೀಟಿನ ವಿಶಿಷ್ಟ ಗುಣಗಳು ಲಘುತ್ವ ಮತ್ತು ಅವಾಹಕತೆ. ಇದರ ಸಾಂದ್ರತೆ 400-1,000 ಕೆಜಿ/ಘಮೀ. ಈ ಕಾಂಕ್ರೀಟ್ ಅಗ್ನಿಯನ್ನು ಕ್ಷಿಪ್ರವಾಗಿ ಹರಡಲು ಬಿಡುವುದಿಲ್ಲ. ಉದಾಹರಣೆಗೆ 10 ಸೆಂಮೀ ದಪ್ಪವಿರುವ ಗೋಡೆಯ ಅಗ್ನಿಸಹಿಷ್ಣುತೆ 2 ಗಂಟೆ; ಆದರೆ ಅದೇ ದಪ್ಪದ ಸಾಧಾರಣ ಕಾಂಕ್ರೀಟಿನ ಅಥವಾ 11 ಸೆಂಮೀ ದಪ್ಪದ ಇಟ್ಟಿಗೆ ಗೋಡೆಯ ಅಗ್ನಿಸಹಿಷ್ಣುತೆ ಕೇವಲ 1 ಗಂಟೆ.

ಉಪಯೋಗಗಳು: ಕೋಶಮಯ ಕಾಂಕ್ರೀಟ್ ಹಗುರಾಗಿರುವುದರಿಂದ ಇದರ ಸಾಗಣೆ ಮತ್ತು ಜೋಡಣೆ ಸುಲಭ. ಕಟ್ಟಡ ಕಟ್ಟಲು ಬೇಕಾಗುವ ಅವಧಿ ಕಡಿಮೆ. ಅಲ್ಲದೆ ಅಳ್ಳಕವಾದ ಭೂಸ್ತರದ ಮೇಲೆಯೂ ಕಟ್ಟಡ ನಿರ್ಮಾಣ ಸಾಧ್ಯವಿದೆ. ಇತ್ತ ಕಟ್ಟಡದ ಅಂಗಗಳ ಅಳತೆಯೂ ಕಡಿಮೆ ಇರುವುದು. ಇದರಲ್ಲಿ ಅವಾಹಕತೆ ನಿಹಿತವಾಗಿದೆ. ಎಂದೇ ಕಟ್ಟಡದ ಬಾಹ್ಯಾವರಣ ಅತಿ ಉಷ್ಣ ಅಥವಾ ಅತಿ ಶೈತ್ಯ ಆಗಿರುವಾಗಲೂ ಒಳಗೆ ಮಾತ್ರ ಹಿತವಾಗಿರುತ್ತದೆ. ಹೀಗಾಗಿ ಉಷ್ಣತಾನಿಯಂತ್ರಣ ವೆಚ್ಚ ಕಡಿಮೆ. ಕಟ್ಟಡ ಅಗ್ನಿ ಮತ್ತು ಶಬ್ದ ಅವಾಹಕವಾಗಿರುವುದು ಹೆಚ್ಚಿನ ಅನುಕೂಲ.

ಇತಿಹಾಸ : ರಾಸಾಯನಿಕ ವಿಧಾನಗಳಿಂದ 1910ರಲ್ಲಿ ಕೋಶಮಯ ಕಾಂಕ್ರೀಟನ್ನು ತಯಾರಿಸಲಾಯಿತು. ಡೆನ್ಮಾರ್ಕ್‍ನ ಇ.ಸಿ.ಬೇಯರ್ ಎಂಬಾತ ನೊರೆ ಕಾಂಕ್ರೀಟಿನ ನಿರ್ಮಾಣ ತಂತ್ರವನ್ನು ಸಿದ್ಧಪಡಿಸಿದ (1923). ಎರಿಕ್ಸನ್ ಎಂಬಾತ ಸಿಲಿಕ ಮತ್ತು ಸುಣ್ಣದಿಂದ ತಯಾರಿಸುವ ಕೋಶಮಯ ಕಾಂಕ್ರೀಟಿನ ಏಕಸ್ವ ಪಡೆದ (1924). ಇದರ ಫಲವೇ (ವೈಟಿಓಎನ್‍ಜಿ) (ತಾಂಗ್) ಎಂದು ಹೆಸರುವಾಸಿ ಆಗಿರುವ ಕಾಂಕ್ರೀಟ್. ಸ್ವೀಡನ್ನಿನ ಎಕ್ಲೂಂಡ್ ಎಂಬಾತ ಆಟೊಕ್ಲೇವಿನಲ್ಲಿ (ಬೇಯಿಸುವ ಈ ಪಾತ್ರೆಗೆ ಆವಿ ಹೊರಕ್ಕೆ ಹೋಗದಂತೆ ಭದ್ರ ಮುಚ್ಚಳವಿದೆ) ಸಿಪೊರೆಕ್ಸ್ ಎಂಬ ಸಿಮೆಂಟ್ ಬಂಧದ ಅನಿಲ ಕಾಂಕ್ರೀಟ್ ತಯಾರಿಸಿದ (1924). ಮುಂದೆ 1928ರಲ್ಲಿ ಸ್ವೀಡನ್ನಿನ ಕ್ರಿಶ್ಚಿಯಾನಿ ಮತ್ತು ನೀಲ್ಸನ್ ಎಂಬವರು ಆಟೊಕ್ಲೇವಿನಲ್ಲಿ ಬೇಯಿಸಿದ ನೊರೆ ಕಾಂಕ್ರೀಟನ್ನು ತಯಾರಿಸಿದರು. ಭಾರತದಲ್ಲಿ ಸಿಪೊರೆಕ್ಸ್‍ನ ತಯಾರಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ.

(ಎಮ್.ಜಿ.ಎಸ್.)