ಹಟ್ಟಿ

	ಭಾರತದ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಒಂದು ಗ್ರಾಮ. ರಾಯಚೂರು-ಲಿಂಗಸುಗೂರು ಮಾರ್ಗ ಮಧ್ಯದಲ್ಲಿ ಲಿಂಗಸುಗೂರಿಗೆ ಈಶಾನ್ಯದಲ್ಲಿ 17 ಕಿಮೀ ದೂರದಲ್ಲಿದೆ. ಚಿನ್ನದ ಗಣಿಗಳಿಗೆ ಈ ಊರು ಪ್ರಾಚೀನದಿಂದಲೂ ಪ್ರಸಿದ್ಧ. ಒಟ್ಟು ಜನಸಂಖ್ಯೆ 27,135.

ಗಣಿ ಉದ್ಯಮದ ಫಲವಾಗಿ ಈ ಗ್ರಾಮ ಪಟ್ಟಣವಾಗಿ ಬೆಳೆದಿದೆ. ಸುತ್ತಲ ಗ್ರಾಮಗಳಿಗೆ ವ್ಯಾಪಾರ ಕೇಂದ್ರವಾಗಿ ವಿಸ್ತರಿಸುತ್ತಿದೆ. ಗಣಿಕಾರ್ಮಿಕರ ಮತ್ತು ಅಧಿಕಾರಿಗಳ ಸಲುವಾಗಿ ಎಲ್ಲ ವಿಧದ ಪಟ್ಟಣ ಸೌಕರ್ಯಗಳನ್ನು ಇಲ್ಲಿ ಒದಗಿಸಿಕೊಡಲಾಗಿದೆ. ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಅನೇಕ ಚಿನ್ನದ ಗಣಿಗಳ ಅವಶೇಷಗಳು ಕಂಡುಬರುತ್ತವೆ. ಅಶೋಕನ ಕಾಲಕ್ಕೂ ಹಿಂದೆಯೇ ಈ ಗಣಿಗಳಲ್ಲಿ ಕೆಲಸ ನಡೆಯುತ್ತಿ ತ್ತೆಂದೂ ಆತನ ದಕ್ಷಿಣ ರಾಜಧಾನಿಯಾದ ಸುವರ್ಣನಗರಿ ಹಟ್ಟಿಗೆ ಸಮೀಪವಾಗಿರುವ ಮಸ್ಕಿಯ ಬಳಿ ಇತ್ತೆಂದೂ ಪ್ರತೀತಿ ಇದೆ. ಹಟ್ಟಿಯ ಬಳಿ ಎರಡು ಸಾವಿರ ವರ್ಷಗಳಿಗೂ ಹಿಂದೆ ಚಿನ್ನಕ್ಕಾಗಿ ಪರಿಶೋಧನೆ ನಡೆಸಿ ಆಳವಾದ ಗಣಿಗಳನ್ನು ತೋಡಲಾಗಿದ್ದು, ಆ ಗಣಿಗಳು 640 ಅಡಿ ಆಳವಾಗಿವೆ. ಬ್ರಿಟಿಷರ ಕಾಲದಲ್ಲಿ ಈ ಗಣಿಗಳನ್ನು ಊರ್ಜಿತಗೊಳಿಸಿ ಚಿನ್ನ ಪಡೆಯುವ ಕಾರ್ಯ ಮೊದಲಾಗಿ ಸು. 1800-1920ರ ವರೆಗೆ ಸಣ್ಣ ಪ್ರಮಾಣದಲ್ಲಿ ಕೆಲಸ ನಡೆಯಿತು. ಆಗ ಚಿನ್ನದ ಬೆಲೆ ತೀರ ಕಡಿಮೆಯಾಗಿದ್ದುದರಿಂದ ಗಣಿ ಉದ್ಯಮ ಲಾಭದಾಯಕವಾಗದೆ 1920ರ ಸುಮಾರಿಗೆ ಕೆಲಸ ನಿಂತಿತು. ಈ ಕಾಲದಲ್ಲಿ ಸು. 2,37,000 ಔನ್ಸ್ (6,04,350 ತೊಲ) ಚಿನ್ನ ಪಡೆಯಲಾಯಿತು.

ನಿಜಾಮ ಸರ್ಕಾರ 1937ರಲ್ಲಿ ಹಟ್ಟಿ ಗಣಿಗಳನ್ನು ಊರ್ಜಿತಗೊಳಿಸಲು ತೀರ್ಮಾನಿಸಿತು. ಆದರೆ ಎರಡನೆಯ ಮಹಾಯುದ್ಧ ಕಾಲದಲ್ಲಿ ಕೆಲಸ ಕುಂಠಿತಗೊಂಡು 1947 ರಿಂದೀಚೆಗೆ ಕೆಲಸ ಮುಂದುವರಿದು ಹಟ್ಟಿಯ ಚಿನ್ನದ ಗಣಿ ಉದ್ಯಮ ಭಾರತದ ಗಣಿ ಉದ್ಯಮಗಳಲ್ಲಿ ತನ್ನ ಸ್ಥಾನವನ್ನು ಗಳಿಸಿಕೊಂಡಿತು.

ಹಟ್ಟಿಯಲ್ಲಿನ ಗಣಿ ಕಾರ್ಯ ಮೂರು ಸಾವಿರ ಅಡಿ ಆಳಕ್ಕೆ ಇಳಿದಿದ್ದು ಸು. 4,000 ಜನರು ಕೆಲಸ ಮಾಡುತ್ತಿದ್ದರು. ವರ್ಷಂಪ್ರತಿ 45,000 ಔನ್ಸ್ (1,14,750 ತೊಲ) ಚಿನ್ನ ಪಡೆಯಲಾಗುತ್ತಿತ್ತು. ಇದರ ಬೆಲೆ ಸುಮಾರು ಆರೂವರೆ ಕೋಟಿ ರೂಪಾಯಿ.

(ಬಿ.ಪಿ.ಆರ್.)