ಹಡಗಲಿ ಭಾರತದ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಹಗರಿಬೊಮ್ಮನಹಳ್ಳಿ ಮತ್ತು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕುಗಳೂ ಪೂರ್ವದಲ್ಲಿ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳೂ ದಕ್ಷಿಣದಲ್ಲಿ ಹರಪನಹಳ್ಳಿ ತಾಲ್ಲೂಕೂ ಪಶ್ಚಿಮದಲ್ಲಿ ಹಾವೇರಿ ಜಿಲ್ಲೆಯ ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕುಗಳೂ ಸುತ್ತುವರಿದಿವೆ. ತಾಲ್ಲೂಕಿನಲ್ಲಿ ಈಗ ಹಡಗಲಿ, ಇಟ್ಟಿಗೆ, ಹಿರೇಹಡಗಲಿ-ಈ ಮೂರು ಹೋಬಳಿಗಳೂ 55 ಗ್ರಾಮಗಳೂ ಒಂದು ಪಟ್ಟಣವೂ ಇವೆ. ತಾಲ್ಲೂಕಿನ ವಿಸ್ತೀರ್ಣ 948.4 ಚ.ಕಿಮೀ ಜನಸಂಖ್ಯೆ 1,68,020.

ಹಗರಿಬೊಮ್ಮನಹಳ್ಳಿ ತಾಲ್ಲೂಕು ರಚನೆಗೆ ಮೊದಲು ಈ ತಾಲ್ಲೂಕನ್ನು ಮಲ್ಲಾಪುರ, ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ, ಶಿರಹಟ್ಟಿ, ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕುಗಳು ಸುತ್ತುವರಿದಿದ್ದುವು. ಇಟ್ಟಿಗೆ, ಹಿರೇಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ಹೋಬಳಿಗಳಿ ದ್ದವು. ಒಟ್ಟು 69 ಗ್ರಾಮಗಳೂ 1 ಪಟ್ಟಣವೂ ಸೇರಿ ಆಗ ತಾಲ್ಲೂಕು ವಿಸ್ತೀರ್ಣ 1,254.1 ಚ.ಕಿಮೀ. ಜನಸಂಖ್ಯೆ 1,27,452 ಇತ್ತು. ಇತ್ತೀಚೆಗೆ ಕೂಡ್ಲಿಗಿ, ಹಡಗಲಿ ಮತ್ತು ಮಲ್ಲಾಪುರ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಸೇರಿಸಿ ಮಲ್ಲಾಪುರ ತಾಲ್ಲೂಕಿನ ಬದಲು ಹಗರಿಬೊಮ್ಮನಹಳ್ಳಿ ತಾಲ್ಲೂಕು ರಚನೆಯಾಗಿದೆ.

ತಾಲ್ಲೂಕಿನ ದಕ್ಷಿಣ ಮತ್ತು ಪಶ್ಚಿಮದ ಅಂಚಿನಲ್ಲಿ ತಾಲ್ಲೂಕು ಗಡಿಯಾಗಿ ತುಂಗಭದ್ರಾ ನದಿ ಸ್ವಲ್ಪ ದೂರ ಹರಿಯುವುದು. ಈ ನದಿಯೇ ರಾಣೆಬೆನ್ನೂರು, ಹಾವೇರಿ ಮತ್ತು ಶಿರಹಟ್ಟಿ ತಾಲ್ಲೂಕುಗಳನ್ನು ಹಡಗಲಿ ತಾಲ್ಲೂಕಿನಿಂದ ಬೇರ್ಪಡಿಸಿದೆ. ತಾಲ್ಲೂಕಿನ ಪೂರ್ವದಲ್ಲಿ ಸ್ವಲ್ಪದೂರ ಚಿನ್ನಹಗರಿ ನದಿ ಹರಿಯುವುದು. ಮಲ್ಲಪ್ಪನ ಗುಡ್ಡ ಶ್ರೇಣಿ ಈ ತಾಲ್ಲೂಕಿನಲ್ಲಿ ಹಾದುಹೋಗಿದೆ. ಈ ಶ್ರೇಣಿಯ ಮಲ್ಲಪ್ಪನ ಬೆಟ್ಟ 978 ಮೀ ಎತ್ತರವಿದೆ. ಉತ್ತಮ ಹವಾಗುಣವಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 671.61 ಮಿಮೀ.

ಈ ತಾಲ್ಲೂಕಿನಲ್ಲಿ ಹತ್ತಿ ಬೆಳೆಯುವ ಕಪ್ಪು ಮಣ್ಣಿನ ಪ್ರದೇಶ ಹೆಚ್ಚು. ಚಿನ್ನಹಗರಿ ಮತ್ತು ತುಂಗಭದ್ರಾ ನದಿ ಬಯಲು ಪ್ರದೇಶಗಳಲ್ಲಿ ಕೆಂಪುಮಿಶ್ರಿತ ಮತ್ತು ಮರಳಿನಿಂದ ಕೂಡಿದ ಜೇಡಿಮಣ್ಣಿನ ಫಲವತ್ತಾದ ಪ್ರದೇಶವಿದೆ. ನದಿ ನೀರಿನ ಜೊತೆಗೆ ತಾಲ್ಲೂಕಿನ ಕೆಲವು ಬಾವಿ ಮತ್ತು ಕೆರೆಗಳು ವ್ಯವಸಾಯಕ್ಕೆ ಅನುಕೂಲವಾಗಿವೆ. ಜೋಳ, ಬತ್ತ, ಕಬ್ಬು, ಹತ್ತಿ, ಮೆಣಸಿನಕಾಯಿ ಇವುಗಳ ಜೊತೆಗೆ ಈ ತಾಲ್ಲೂಕಿನಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಹೆಚ್ಚಾಗಿ ಸೇಂಗಾವನ್ನು ಬೆಳೆಯುತ್ತಾರೆ. ಈ ತಾಲ್ಲೂಕಿನಲ್ಲಿ ಎಣ್ಣೆ ಉತ್ಪಾದನೆ ಮತ್ತು ಹತ್ತಿ ಸಂಸ್ಕರಣ ಕೈಗಾರಿಕೆಗಳುಂಟು.

ಹಡಗಲಿಯ ಆಗ್ನೇಯಕ್ಕೆ 11 ಕಿಮೀ ದೂರದಲ್ಲಿರುವ ಸೋಗಿ ಗ್ರಾಮ ವಿಶೇಷ ರುಚಿಯ ದೊಡ್ಡಗಾತ್ರದ ಕಲ್ಲಂಗಡಿ ಹಣ್ಣುಗಳಿಗೆ ಪ್ರಸಿದ್ಧ. ಇಲ್ಲಿ ಚಾಳುಕ್ಯ ಶೈಲಿಯ ಕಲ್ಲೇಶ್ವರ ದೇವಾಲಯವಿದೆ. ಸೋಗಿಯ ನೈಋತ್ಯಕ್ಕೆ ಸು. 5 ಕಿಮೀ ದೂರದಲ್ಲಿ ಮಲ್ಲಪ್ಪನ ಬೆಟ್ಟವಿದೆ. ಇಲ್ಲಿನ ಗುಹೆಯೊಂದರಲ್ಲಿ ಮುದಿಮಲ್ಲಪ್ಪನ ಮೂರ್ತಿಯಿದೆ. ಪ್ರತಿ ತಿಂಗಳ ಪೂರ್ಣಿಮೆಯಂದು ಇಲ್ಲಿ ಜಾತ್ರೆ ಸೇರುತ್ತದೆ. ಹಡಗಲಿಯ ನೈಋತ್ಯಕ್ಕೆ 24 ಕಿಮೀ ದೂರದಲ್ಲಿರುವ ಮಾಗಳದ ಚಾಳುಕ್ಯ ಶೈಲಿಯ ವೇಣುಗೋಪಾಲಸ್ವಾಮಿ ದೇವಾಲಯ ಪ್ರಸಿದ್ಧ. ಇದು ಕಪ್ಪು ಬಳಪದ ಕಲ್ಲಿನಲ್ಲಿ ನಿರ್ಮಿತವಾಗಿದೆ. ಇದರ ಹತ್ತಿರದಲ್ಲೆ ಇರುವ ಸೂರ್ಯನಾರಾ ಯಣ ದೇವಸ್ಥಾನದ ಒಳಛಾವಣಿ ಸೂಕ್ಷ್ಮ ಕೆತ್ತನೆಕೆಲಸದಿಂದ ಕೂಡಿದೆ. ಹಡಗಲಿಯ ನೈಋತ್ಯಕ್ಕೆ ರಾಣೆಬೆನ್ನೂರು-ಹಡಗಲಿ ಮಾರ್ಗದಲ್ಲಿ ತುಂಗಭದ್ರಾನದಿಯ ಬಲದಂಡೆಯ ಹತ್ತಿರವಿರುವ ಮೈಲಾರ, ಹಡಗಲಿಗೆ 33 ಕಿಮೀ ದೂರದಲ್ಲಿದೆ. ಇಲ್ಲಿದ್ದ ಮಲ್ಲನೆಂಬ ರಾಕ್ಷಸನನ್ನು ಶಿವ ಕೊಂದದ್ದರಿಂದ ಮಲ್ಲಾರಿ ಎಂಬ ಹೆಸರು ಬಂದು ಮುಂದೆ ಮೈಲಾರವಾಯಿತೆಂದು ಹೇಳುವರು. ಇಲ್ಲಿ ಪ್ರತಿವರ್ಷ ನಡೆಯುವ ಮೈಲಾರಲಿಂಗನ ಜಾತ್ರೆ ಹೆಸರಾದದ್ದು. ಮೈಲಾರದಿಂದ ದಕ್ಷಿಣಕ್ಕೆ 5 ಕಿಮೀ ದೂರದ ಹಿರೇಕುರುವತ್ತಿ ಗ್ರಾಮದಲ್ಲಿ ಪ್ರಸಿದ್ಧ ಬಸವೇಶ್ವರ ದೇವಾಲಯವಿದೆ, ಈ ದೇವಸ್ಥಾನದಲ್ಲಿ ಬೃಹತ್ ಗಾತ್ರದ ಮಲಗಿದ ಭಂಗಿಯ ಬಸವೇಶ್ವರ ಮೂರ್ತಿಯನ್ನು ಪೂಜಿಸಲಾಗುತ್ತಿದೆ, ಬಸವೇಶ್ವರ ದೇವಸ್ಥಾನದ ಎದಿರು ಈಶ್ವರ ದೇವಸ್ಥಾನವಿದೆ, ಎರಡು ದೇವಸ್ಥಾನಗಳನ್ನು ಭಾರತೀಯ ಪುರಾತತ್ವ ಇಲಾಖೆಯವರಿಂದ ನಿರ್ವಹಿಸಲಾಗುತ್ತಿದೆ, ಹಡಗಲಿಯ ನೈಋತ್ಯದಲ್ಲಿ ರಾಣೆಬೆನ್ನೂರು-ಹಡಗಲಿ ಮಾರ್ಗದಲ್ಲಿರುವ ಹೊಳಲು ಹಡಗಲಿಗೆ 32 ಕಿಮೀ ದೂರದಲ್ಲಿದೆ. ಇಲ್ಲಿರುವ ಆದಿಶೇಷನ ಮೇಲೆ ಮಲಗಿರುವ ಅನಂತಶಯನ ಮೂರ್ತಿ ಬಹು ಸುಂದರವಾದದ್ದು. ಇಲ್ಲಿ ಪ್ರತಿವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ವೀರಭದ್ರ ದೇವಾಲಯದ ಜಾತ್ರೆ ಪ್ರಸಿದ್ಧವಾದು. ಹಡಗಲಿಯ ನೈಋತ್ಯದಲ್ಲಿ 16 ಕಿಮೀ ದೂರದಲ್ಲಿರುವ ಹಿರೇಹಡಗಲಿಯಲ್ಲಿರುವ ಚಾಳುಕ್ಯ ಶೈಲಿಯ ದೇವಾಲಯದ ಬಾಗಿಲುಗಳು ಮತ್ತು ಹೊರಗೋಡೆಗಳು ಸುಂದರ ಕೆತ್ತನೆಗಳಿಂದ ಕೂಡಿವೆ. ಇಲ್ಲಿ ಪ್ರತಿವರ್ಷ ಜನವರಿ-ಫೆಬ್ರವರಿ ತಿಂಗಳಲ್ಲಿ ನಡೆಯುವ ಕಟ್ಟೆ ಬಸವೇಶ್ವರ ರಥೋತ್ಸವ ಹೆಸರಾದದ್ದು. *

ಹಡಗಲಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬಳ್ಳಾರಿಯ ಪಶ್ಚಿಮಕ್ಕೆ 140 ಕಿಮೀ ದೂರದಲ್ಲಿದೆ. ಜನಸಂಖ್ಯೆ 23,404.

ಈ ಪಟ್ಟಣ ಬಳ್ಳಾರಿ ಜಿಲ್ಲೆಯಲ್ಲೇ ಅತ್ಯಂತ ಆರೋಗ್ಯಕರ ಸ್ಥಳವೆಂದು ಹಿಂದಿನಿಂದಲೂ ಪ್ರಸಿದ್ಧಿಪಡೆದಿದೆ. ಈ ಊರಿನ ಸುತ್ತುಮುತ್ತ ವೀಳೆಯ ದೆಲೆ ಮತ್ತು ಬಾಳೆ ತೋಟಗಳು ಹೆಚ್ಚಾಗಿದ್ದು ಒಂದು ಮುಖ್ಯವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದೆ. ಇಲ್ಲಿನ ಪ್ರಸಿದ್ಧ ರಾಮದೇವರ ಜಾತ್ರೆ ಚೈತ್ರಮಾಸದ ಪೂರ್ಣಿಮೆಯಂದು ನಡೆಯುತ್ತದೆ. ವಿಜಯನಗರ ವೈಭವದ ಕಾಲದಲ್ಲಿ ಈ ಊರಿನ ಸುತ್ತುಮುತ್ತ ನೂರಾರು ಹೂವಿನ ತೋಟಗಳಿದ್ದುವೆಂದು ಹೇಳುತ್ತಾರೆ. ವಿಜಯನಗರದ ಅರಮನೆಗಳಿಗೆ, ದೇವಾಲಯಗಳಿಗೆ ಹಾಗೂ ಶ್ರೀಮಂತರ ಮನೆಗಳಿಗೆ ಶ್ರೇಷ್ಠಮಟ್ಟದ ಹೂವಿನ ಸರಬರಾಜು ಇಲ್ಲಿಂದಲೇ ಆಗುತ್ತಿತ್ತೆಂದೂ ಆದ್ದರಿಂದಲೇ ಹೂವಿನಹಡಗನ್ನು ಕಳುಹಿಸುವ ಸ್ಥಳವಾದ್ದರಿಂದ ಈ ಪಟ್ಟಣಕ್ಕೆ ಹೂವಿನಹಡಗಲಿ ಎಂಬ ಹೆಸರು ಬಂತೆಂದೂ ಪ್ರತೀತಿ. ಇಲ್ಲಿ ಚಾಳುಕ್ಯರ ಕಾಲದ ಕಲ್ಲೇಶ್ವರ ಮತ್ತು ಕೇಶವಸ್ವಾಮಿ ದೇವಾಲಯ ಗಳಿವೆ. ಈ ದೇವಾಲಯಗಳಲ್ಲಿ ಮುಕ್ಕಾದ ಸುಂದರ ಶಿಲ್ಪಗಳೂ ಜಾಲಂಧ್ರಗಳೂ ಇವೆ. ಕೇಶವಸ್ವಾಮಿ ದೇವಾಲಯದಲ್ಲಿರುವ 6ನೆಯ ವಿಕ್ರಮಾದಿತ್ಯನ ಕಾಲದ ಒಂದು ಶಾಸನದಿಂದ ಈ ದೇವಾಲಯವನ್ನು ರೇವಿದೇವ ದಂಡನಾಯಕನ ಹೆಂಡತಿ ರೆಬ್ಬಳದೇವಿ ಕಟ್ಟಿಸಿದಳೆಂದು ತಿಳಿದು ಬರುವುದು. (ಕೆ.ಆರ್.ಆರ್.)