ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಡಗುಗಳ ವಿನ್ಯಾಸ ಹಾಗೂ ನಿರ್ಮಾಣ

ಹಡಗುಗಳ ವಿನ್ಯಾಸ ಹಾಗೂ ನಿರ್ಮಾಣ

	ಜಲಯಾನಕ್ಕೆ ಅನುಕೂಲವಾಗುವ ವಾಹನ ರಚನೆಯ ಶಿಲ್ಪ. ಹಡಗು ಇಂಥ ಒಂದು ವಾಹನ. ಇದರ ವಿನ್ಯಾಸ ರೂಪಿಸಿ ಇದನ್ನು ನಿರ್ಮಿಸಲು ಎಂಜಿನಿಯರಿಂಗ್ ಮತ್ತು ತಂತ್ರವಿದ್ಯೆಯ ಹಲವು ವಿಭಾಗಗಳ ಪರಿಣತಿ ಅಗತ್ಯ. ಈ ಎಲ್ಲ ಶಾಖೆಗಳೂ ಹಾಗೂ ನಿರ್ಮಾಣದ ಹಂತ ಮುಗಿದ ಮೇಲೆ ಸಮುದ್ರದಲ್ಲಿ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲುಬೇಕಾದ ತಂತವಿದ್ಯೆಯೂ ಸೇರಿದಂತೆ ಸಮಗ್ರವಾಗಿ ಇದನ್ನು ಸಾಗರಿಕ ಎಂಜಿನಿಯರಿಂಗ್ (ಮರೀನ್ ಎಂಜಿನಿಯರಿಂಗ್) ಎನ್ನುತ್ತೇವೆ. ಆದರೆ ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ಹಡಗು ನಿರ್ಮಾಣ ಎಂಬ ಪರಿಚಿತವಾದ ಪದಪುಂಜವನ್ನೇ ಇಲ್ಲಿ ಬಳಸಲಾಗಿದೆ.

ಹಡಗಿನ ಅಳತೆ ಹೇಳುವಾಗ ಹೇಳುವ ಮಾನದಂಡಗಳಿವು:

1. ಉದ್ದ: ಹಡಗಿನ ಮುಂಚೂಣಿಯಿಂದ ಹಿಂಭಾಗದಲ್ಲಿರುವ ಚುಕ್ಕಾಣಿ ಸ್ತಂಭದ ಹಿಂಬದಿವರೆಗಿನ ಅಳತೆ. ಹಡಗಿನಲ್ಲಿ ಗರಿಷ್ಠ ಹೇರನ್ನು ತುಂಬಿದಾಗ ಜಲರೇಖೆಯ ಮಟ್ಟದಲ್ಲಿ ಈ ಅಳತೆ ಮಾಡಲಾಗುವುದು. 2. ಅಗಲ: ಹಡಗಿನ ಅತ್ಯಂತ ಅಗಲವಾದ ಭಾಗಕ್ಕೆ ತೊಲೆ (ಬೀಮ್) ಎಂದು ಹೆಸರು. ಸಾಮಾನ್ಯವಾಗಿ ಇದು ಹಡಗಿನ ನಡುಭಾಗದಲ್ಲಿರುತ್ತದೆ. ಕೆಲವು ವಿಶೇಷ ವಿನ್ಯಾಸಗಳಲ್ಲಿ ಹಿಂಬದಿಗೆ ಹತ್ತಿರವಾಗಿಯೂ ಇರಬಹುದು. 3. ಆಳ: ಹಡಗಿನ ಮೇಲಿನ ಅಟ್ಟದ ಮೇಲ್ಭಾಗದಿಂದ (ಡೆಕ್) ಹಡಗಿನ ಅಡಿಕಟ್ಟಿನ (ಕೀಲ್) ವರೆಗಿನ ಅಳತೆ. 4. ಮುಳುಗಿದ ಆಳ: ಹಡಗಿನ ಜಲರೇಖೆಯ ಕೆಳಗೆ ಅಡಿಕಟ್ಟಿನ ವರೆಗಿನ ಆಳ. ಇದಕ್ಕೆ ಡ್ರಾಫ್ಟ್ ಎಂದು ಹೆಸರು. 5. ನೀರಮೇಲಿನ ಎತ್ತರ (ಫ್ರೀ ಬೋರ್ಡ್): ಹಡಗಿನ ಜಲರೇಖೆಯಿಂದ ಮೇಲಿನ ಅಟ್ಟದ ಮೇಲ್ಭಾಗದ ವರೆಗಿನ ಎತ್ತರ.

ಪರೀಕ್ಷಾ ಮಾದರಿಯಿಂದ ನೂಕುಬಲದ ನಿರ್ಧಾರ: ಹಡಗಿಗೆ ಬೇಕಾದ ನೋದನಸಾಮಥ್ರ್ಯ (ಪ್ರೊಪಲ್ಶನ್ ಪವರ್) ಅದರ ವೇಗ ಮತ್ತು ಚಲನೆಗೆದುರಾಗುವ ರೋಧ ಇವೆರಡರ ಗುಣಲಬ್ಧದ ಅನುಪಾತದಲ್ಲಿದೆ. ಆದ್ದರಿಂದ ವಿನ್ಯಾಸ ಹಂತದಲ್ಲಿರುವ ಹಡಗಿಗೆ ಅದರ ಚಲನೆಯಲ್ಲಿ ಎದುರಾಗಬಹುದಾದ ಒಟ್ಟು ರೋಧವನ್ನು ಅಂದಾಜಿಸುವುದು ನೋದನಸಾಮಥ್ರ್ಯ ಮಾಪನೆಗೆ ಒಂದು ಪ್ರಮುಖ ಅಂಶವಾಗುತ್ತದೆ. ಹಲವು ವರ್ಷಗಳಿಂದ ದ್ರವಗತಿವಿಜ್ಞಾನದ ಸಂಶೋಧಕರು ಮೂಲ ತತ್ತ್ವಗಳಿಂದ ಈ ರೋಧವನ್ನು ಗಣಿಸಬಲ್ಲ ವಿಧಾನದ ಸಂಶೋಧನೆಯಲ್ಲಿ ನಿರತರಾಗಿದ್ದರೂ ಸರ್ವಮಾನ್ಯ ಹಾಗೂ ಕಾರ್ಯಸಾಧ್ಯ ವಿಧಾನವನ್ನು ಆವಿಷ್ಕರಿಸಲು ಸಾಧ್ಯವಾಗಲಿಲ್ಲ. ಈಗ ಕ್ರಿಯಶೀಲವಾಗಿರುವ ಹಡಗುಗಳ ಅನುಭವದಿಂದ ಅಥವಾ ಶಿಷ್ಟಮಾದರಿಗಳಿಂದ ವಿನ್ಯಾಸಕಾಲದಲ್ಲಿ ಹಡಗಿನ ಒಂದು ಮಾದರಿಯನ್ನು ತಯಾರಿಸಿ ಪರೀಕ್ಷೆಗೆ ಒಳಪಡಿಸುವುದೇ ಉತ್ತಮ ವಿಧಾನ.

    ದ್ರವಸ್ಥಿತಿ ವಿಜ್ಞಾನ: ಸ್ಥಾಯಿಸ್ಥಿತಿಯಲ್ಲಿ ತೇಲುತ್ತಿರುವ ಯಾವುದೇ ವಸ್ತುವಿನ ತೂಕ ಅದು ವಿಸ್ಥಾಪಿಸುವ ದ್ರವಗಾತ್ರದ ತೂಕಕ್ಕೆ ಸಮವೆಂಬ ಆರ್ಕಿಮಿಡಿಸ್ ಸಿದ್ಧಾಂತದಲ್ಲಿ ಹಡಗು ನಿರ್ಮಾಣದ ಮೂಲತತ್ತ್ವವನ್ನು ಕಾಣಬಹುದು. ಈ ನಿಯಮ ಹಡಗು ತೇಲುವಾಗ ಅದರ ಎಷ್ಟು ಭಾಗ ನೀರಿನಲ್ಲಿ ಮುಳುಗಿರುತ್ತದೆ ಎಂಬುದನ್ನು ಅದು ನೀರಿನ ಮೇಲೆ ಸಮತೋಲ ಸ್ಥಿತಿಯಲ್ಲಿರುವಾಗ ನೀರಿನ ಪಾತಳಿಯೊಡನೆ ಉಂಟುಮಾಡುವ ಕೋನವನ್ನೂ ನಿರ್ಧರಿಸುತ್ತದೆ.

   ಹಡಗನ್ನು ವಿನ್ಯಾಸಗೊಳಿಸುವಾಗ ಅದು ಸಂಪೂರ್ಣವಾಗಿ ಹೇರು ತುಂಬಿದ ಸಂದರ್ಭದಲ್ಲೂ ಖಾಲಿಯಾಗಿದ್ದಾಗಲೂ ಸಮತೋಲ ಸ್ಥಿತಿಯಲ್ಲಿರುವಂತೆ ನೋಡಬೇಕಾಗುತ್ತದೆ. ಹಡಗಿನಲ್ಲಿ ಹೇರಲಾಗುವ ಸರಕಿನ ತೂಕ, ಇಂಧನ, ಕೀಲೆಣ್ಣೆ, ಸಿಬ್ಬಂದಿ ಹಾಗೂ ಸಿಬ್ಬಂದಿಗೆ ಒದಗಿಸಬೇಕಾದ ಸೌಲಭ್ಯಗಳು - ಇವೆಲ್ಲವುಗಳ ಒಟ್ಟು ತೂಕವನ್ನು ಹಡಗಿನ ಜಡತೂಕ (ಡೆಡ್‍ವೇಯ್ಟ್) ಎನ್ನಲಾಗುತ್ತದೆ. ಹಡಗು ಎಂಜಿನ್ ಹಾಗೂ ಇತರ ಯಂತ್ರೋಪಕರಣಗಳು ಹಾಗೂ ಇನ್ನಿತರ ಸಲಕರಣೆಗಳ ಒಟ್ಟು ತೂಕವನ್ನು ಲಘು ಹಡಗಿನ ತೂಕ (ಲೈಟ್‍ಶಿಪ್‍ವೇಯ್ಟ್) ಎನ್ನುವರು. ಹಡಗು ತೇಲಬೇಕಾದರೆ ಅದರ ವಿಸ್ಥಾಪಿತ ನೀರಿನ ತೂಕ ಹಡಗಿನ ಜಡತೂಕ ಹಾಗೂ ಲಘುತೂಕಗಳ ಮೊತ್ತಕ್ಕೆ ಸಮವಾಗಬೇಕು.
    ಸ್ಥಾಯಿಸ್ಥಿರತೆ: ಹಡಗಿನ ಸ್ಥಿರತೆ ನಿರ್ಧರಿಸಲು ಜಲರೇಖೆಗಿಂತ ಕೆಳಗೆ ಅದು ಮುಳುಗಿರುವ ಆಳವೆಷ್ಟೆಂದು ತಿಳಿದರೆ ಮಾತ್ರ ಸಾಲದು. ಹಡಗಿನ ಯಂತ್ರೋಪಕರಣಗಳು ಹಾಗೂ ಸರಕು ಹಡಗಿನ ಉದ್ದಗಲಕ್ಕೂ ಪೂರ್ವನಿರ್ಧಾರಿತ ಪ್ರಮಾಣದಲ್ಲಿ ಹಂಚಲ್ಪಟ್ಟಿರಬೇಕು. ಇಲ್ಲವಾದರೆ ಹಡಗು ತೇಲುವಾಗ ಅಕ್ಕಪಕ್ಕಕ್ಕೆ ಓಲಾಡುವ ಅಥವಾ ಮುಂದಕ್ಕೆ ಇಲ್ಲವೇ ಹಿಂದಕ್ಕೆ ಮುಗ್ಗರಿಸುವ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ವಿನ್ಯಾಸಕರು ಈ ಅಂಶಗಳ ಅಧ್ಯಯನ ಮಾಡಬೇಕು.

   ಗತಿಸ್ಥಿರತೆ: ಒಡಲಿನಲ್ಲಿ ನೀರು ತುಂಬಿಕೊಳ್ಳದೆ ಬೃಹತ್ ಹಡಗುಗಳು ಎಂದಿಗೂ ಮುಳುಗಲಾರವು. ಆದರೆ ಲಘು ಹಡಗುಗಳ ವಿಷಯದಲ್ಲಿ ಇದು ಸರಿಯಲ್ಲ. ಸಾಧಾರಣ ಪರಿಸ್ಥಿತಿಯಲ್ಲೂ ಲಘು ಹಡಗುಗಳು ಮುಳುಗಬಹುದು. ಮೀನುಗಾರಿಕೆಯ ಹಡಗನ್ನು ಇಲ್ಲಿ ಉದಾಹರಿಸಬಹುದು. ಕಡಲು ಸ್ವಲ್ಪ ಪ್ರಕ್ಷುಬ್ಧವಾಗಿದ್ದಾಗ ಹಡಗಿನ ಒಂದು ಪಕ್ಕದಲ್ಲಿ ಮೀನು ತುಂಬಿದ ಬಲೆಯನ್ನು ಹಡಗಿನೊಳಕ್ಕೆ ಎಳೆಯಲು ಪ್ರಯತ್ನಿಸಿದರೆ ಹಡಗು ಸಮತೋಲನ ತಪ್ಪಿ ಮುಳುಗುವ ಸಾಧ್ಯತೆಯಿದೆ. ಹಡಗುಗಳ ವೈವಿಧ್ಯ, ಗಾತ್ರ ಹಾಗೂ ಉಪಯೋಗಗಳನ್ನು ಗಮನಿಸಿದಾಗ ಹಡಗಿನ ವಿನ್ಯಾಸದಲ್ಲಿ ಏಕರೂಪದ ಸುರಕ್ಷಾಶಿಷ್ಟತೆ ನಿರೂಪಿಸುವುದು ಕ್ಲಿಷ್ಟಕರವಾಗಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ಸಾಗರಿಕ ಸಂಸ್ಥೆ (ಇಂಟರ್ ನ್ಯಾಷನಲ್ ಮರೀನ್ ಆರ್ಗನೈಸೇಶನ್) ಈ ಸುರಕ್ಷಾಶಿಷ್ಟತೆಯನ್ನು ನಿರೂಪಿಸಿದ್ದು ಅದನ್ನು ನಿರಂತರವಾಗಿ ಪರಿಷ್ಕರಿಸುತ್ತಿದೆ.
   ವಿನಷ್ಟಪ್ಲವನತೆ ಮತ್ತು ಸ್ಥಿರತೆ: ಯಾವುದೇ ಹಡಗನ್ನು ಮುಳುಗದಂತೆ ಅಥವಾ ಅದು ಮಗುಚಿ ಬೀಳದಂತೆ ವಿನ್ಯಾಸಗೊಳಿಸುವುದು ಅಸಾಧ್ಯ. ಆದರೆ ಸಾಮಾನ್ಯ ಹಾನಿ ಉಂಟಾದರೂ ಅಪಾಯದಿಂದ ಪಾರಾಗಲು ಸಾಧ್ಯವಾಗುವಂತೆ ಅಥವಾ ಮಗುಚುವ ಸಂದರ್ಭದಲ್ಲೂ ಹಡಗಿನಲ್ಲಿರುವ ಜನರು ಹಡಗನ್ನು ತ್ಯಜಿಸಿ ಹೋಗಲು ಸಾಧ್ಯವಾಗುವಂತೆ ಬಲು ಮೆಲ್ಲನೆ ಮಗುಚಿ ಮುಳುಗುವ ರೀತಿಯಲ್ಲಿ ವಿನ್ಯಾಸಗೊಳಿಸಬಹುದು. ಅದರ ಒಡಲಿನ ಕವಚ ಒಡೆದು ಒಳಗೆ ನೀರು ತುಂಬಿಕೊಳ್ಳುವುದೇ ಹಡಗು ಮುಳುಗಲು ಪ್ರಮುಖಕಾರಣ. ಇಂಥ ಸಾಧ್ಯತೆಯನ್ನು ಕಡಿಮೆಮಾಡಲು ಒಡಲಿನ ಸುತ್ತಲೂ ಒಳಭಾಗದಲ್ಲಿ ಜಲನಿರೋಧಕ ಕೋಣೆಗಳನ್ನು ನಿರ್ಮಿಸುತ್ತಾರೆ. ಪ್ರಯಾಣಿಕರ ಹಡಗುಗಳಿಗೆ ಇಂಥ ಜಲ ನಿರೋಧಕ ಕೋಣೆಗಳ ಎರಡು ಸಾಲು ಇರಬೇಕೆಂಬ ನಿಯಮವಿದೆ. ಸುಪ್ರಸಿದ್ಧ ಟೈಟಾನಿಕ್ ಹಡಗನ್ನು ಈ ನಿಯಮದಂತೆಯೇ ಕಟ್ಟಲಾಗಿತ್ತು. 1912 ಏಪ್ರಿಲ್ 14ರ ರಾತ್ರಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೊಡ್ಡ ನೀರ್ಗಲ್ಲು ಈ ಹಡಗಿಗೆ ಬಡಿದಾಗ ಇದರ ಒಡಲಿನ ಜಲನಿರೋಧಕ ಕೋಣೆಗಳು ಒಡೆದು ನೀರು ತುಂಬಿಕೊಂಡಿತು. ಇಂಥ ಹಾನಿಯನ್ನು ತಡೆದುಕೊಳ್ಳುವುದು ಟೈಟಾನಿಕ್ ಹಡಗಿಗೆ ಸಾಧ್ಯವಾಗಲಿಲ್ಲ. ಆದರೆ ಅದರ ಜಲನಿರೋಧಕ ಕೋಣೆಗಳಿಂದಾಗಿ ಹಡಗು ಮುಳುಗಲು 2 ಗಂಟೆ 40 ಮಿನಿಟು ಕಾಲ ಬೇಕಾಯಿತು. ಆದರೆ ಟೈಟಾನಿಕ್ ನೌಕೆಯಷ್ಟೇ ದೊಡ್ಡಗಾತ್ರದ ಲೂಸಿಟಾನಿಯ ಎಂಬ  ಇನ್ನೊಂದು ಹಡಗಿಗೆ  1915 ಮೇ 7ರಂದು ಎರಡು ಟಾರ್ಪೆಡೊಗಳು ಬಡಿದು ಕೇವಲ 20 ಮಿನಿಟುಗಳಲ್ಲಿ ಅದು ಮುಳಗಿಹೋಯಿತು.

       ಸಮುದ್ರದಲ್ಲಿ ಹಡಗಿನ ಚಲನೆಗಳು: ಸಮುದ್ರದಲ್ಲಿ ಹಡಗು ಚಲಿಸುವಾಗ ಅದು ಎಲ್ಲ 6 ಸ್ವಾತಂತ್ರ್ಯಾಂಕಗಳಲ್ಲೂ (ಡಿಗ್ರೀಸ್ ಆಫ್ ಫ್ರೀಡಮ್) ಮುಕ್ತವಾಗಿರಬೇಕು. ಆದ್ದರಿಂದ ವಿನ್ಯಾಸಕಾರರು ಇವನ್ನು ಲಕ್ಷ್ಯದಲ್ಲಿಡಬೇಕಾಗುತ್ತದೆ: ಯೂ, ಸ್ವೇ, ರೋಲ್, ಪಿಚ್, ಹೀವ್ ಮತ್ತು ಸರ್ಜ್. ಈ ಪಾರಿಭಾಷಿಕ ಪದಗಳಿಗೆ ವಿವರಣೆ: ಯೂ - ಊಧ್ರ್ವಾಕ್ಷ ಕುರಿತಂತೆ ನೌಕೆಯ ಕೋನೀಯ ಚಲನೆ. ಸ್ವೇ - ಉದ್ದೇಶಿತ ಪಥದಿಂದ ವಿಚಲನೆ ಅಥವಾ ಓಲಾಟ. ರೋಲ್ - ಉರುಳುವಿಕೆ. ಪಿಚ್ - ಆವೃತ್ತಿಮಟ್ಟ ಅಥವಾ ಸೂತ್ರಾಂತರ ಅಂತರ. ಹೀವ್ - ಅಂಚು ಅಥವಾ ಮಡಿಕೆಯಲ್ಲಿ ಕೊರೆ ಕಂಡುಬಂದಾಗ ದೋಷಯುಕ್ತ ಭಾಗಗಳ ನಡುವಿನ ಕ್ಷಿತಿಜೀಯ ಅಂತರ. ಸರ್ಜ್ - ಹಠಾತ್ತನೆ ಉಕ್ಕೇರುವುದು (ಪ್ರೋತ್ಕರ್ಷ).
    ಹಡಗಿನ ದ್ರವಗತಿವಿಜ್ಞಾನ: ಹಡಗಿನ ಒಡಲನ್ನು ವಿನ್ಯಸಿಸುವಾಗ ದ್ರವಗತಿವಿಜ್ಞಾನದ ದೃಷ್ಟಿಯಿಂದಲೂ ಪರಿಶೀಲಿಸುವ ಅಗತ್ಯವಿದೆ. ಗತಿಶೀಲ ನೌಕೆಗೆ ಕಡಲ ನೀರು ಒಡ್ಡುವ ರೋಧ ಇಲ್ಲಿ ಮುಖ್ಯವಾದದ್ದು. ಇದರಲ್ಲಿ 4 ಘಟಕಗಳಿವೆ: 1. ಕಡಲ ನೀರು ಮತ್ತು ಹಡಗಿನ ಒಡಲ ಮೇಲ್ಮೈ - ಇವುಗಳ ನಡುವಿನ ಘರ್ಷಣೆ, 2. ಚಲಿಸುವಾಗ ಒಡಲು ಉಂಟುಮಾಡುವ ಅಲೆಗಳು, 3. ಒಡಲು ಮತ್ತು ಚುಕ್ಕಾಣಿಗಳು ಉಂಟುಮಾಡುವ ಸುಳಿಗಳು, 4. ನೀರಿನ ಮೇಲ್ಭಾಗದಲ್ಲಿರುವ ಹಡಗಿನ ಮೇಲೆ ಗಾಳಿಯಿಂದುಂಟಾಗುವ ರೋಧ.
   ನೂಕು ಬಲ ಮತ್ತು ಪೂರಕ ಯಂತ್ರೋಪಕರಣ: ಇಷ್ಟೆಲ್ಲ ವಿನ್ಯಾಸದ ಹಂತಗಳನ್ನು ದಾಟಿದ ಮೇಲೆ ಹಡಗು ಕಟ್ಟಡದ ಸಮಗ್ರ ವಿನ್ಯಾಸವನ್ನು ಪೂರ್ಣಗೊಳಿಸಬೇಕು. ಆಗ ಹಡಗಿನ ಸಂಪೂರ್ಣ ರೂಪ ದೊರೆತು ಅದರ ಜಡತೂಕ ಮತ್ತು ಲಘುತೂಕದ ಅರಿವು ಉಂಟಾಗುತ್ತದೆ. ಈ ಹಂತದಲ್ಲಿ ಇಷ್ಟು ತೂಕದ ಹಡಗನ್ನು ವಿನ್ಯಾಸದಲ್ಲಿ ಪರಿಗಣಿಸಲಾದ ವೇಗದಲ್ಲಿ ಚಲಿಸುವಂತೆ ಮಾಡಲುಬೇಕಾದ ಯುಕ್ತ ಎಂಜಿನ್ ಹಾಗೂ ಇತರ ಯಂತ್ರೋಪಕರಣಗಳ ಬಗ್ಗೆ ಗಮನ ನೀಡಬೇಕು. 20ನೆಯ ಶತಮಾನದ ಪ್ರಾರಂಭದಲ್ಲಿ ಹಡಗುಗಳಿಗೆ ಉಗಿ (ಸ್ಟೀಮ್) ಎಂಜಿನ್ ಅಳವಡಿಸಲಾಯಿತು. 20ನೆಯ ಶತಮಾನದ ಮಧ್ಯಭಾಗದಿಂದ ಡೀಸಲ್ ಎಂಜಿನ್ ಬಳಕೆಗೆ ಬಂತು. ಅನಂತರ ಅನಿಲ ಎಂಜಿನ್‍ಗಳು ಬಳಕೆಗೆ ಬಂದುವು.

ಯುಕ್ತ ಎಂಜಿನ್ನಿನ ಅಳವಡಿಕೆಯ ಬಳಿಕ ಆ ಹಡಗನ್ನು ಸಮುದ್ರಕ್ಕೆ ಇಳಿಸಿ ವಿನ್ಯಾಸ ಹಂತದಲ್ಲಿ ಪರಿಗಣಿಸಲಾದ ಎಲ್ಲ ಅಂಶಗಳನ್ನೂ ಪರೀಕ್ಷೆಗೆ ಒಳಪಡಿಸಬೇಕು. ಹೀಗೆ ಪರೀಕ್ಷಾರ್ಥ ಅಗತ್ಯವಿರುವಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ಬಳಕೆಗೆ ಯೋಗ್ಯವೆಂದು ಬಿಡುಗಡೆ ಮಾಡಲಾಗುವುದು. (ಜಿ.ಆರ್.)