ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಡಪದ, ಆರ್ ಎಮ್

ಹಡಪದ, ಆರ್ ಎಮ್ (1936-2003). ರುದ್ರಪ್ಪ-ಮಲ್ಲಪ್ಪ ಹಡಪದ್ ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 1936ರಲ್ಲಿ ಜನಿಸಿದರು. (ಕೆಲವು ದಾಖಲೆಗಳಲ್ಲಿ 1932 ಎಂದಿದೆ) ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಎಲಿಮೆಂಟರಿ ಚಿತ್ರಕಲೆಯ ಪರೀಕ್ಷೆ ಮಾಡಿ ಹುಬ್ಬಳ್ಳಿಯಲ್ಲಿ ಎಂ.ವಿ.ಮಿಣಜಿಗಿ ಅವರು ಆರಂಭಿಸಿದ್ದ ಕಲಾಶಾಲೆಯಲ್ಲಿ ಅಭ್ಯಸಿಸಿ, ಮುಂಬಯಿಯ ಜೆ.ಜೆ.ಕಲಾಶಾಲೆಯ ಮೂಲಕ ಕಲಾ ಡಿಪ್ಲೊಮಾ ಹಾಗೂ ಆರ್ಟ್ ಮಾಸ್ಟರ್ ಪದವಿಯನ್ನು ಪಡೆದರು. ಮತ್ತೆ ಹುಬ್ಬಳ್ಳಿಯ ಕಲಾಶಾಲೆಯಲ್ಲಿ ಶಿಕ್ಷಕರಾಗಿದ್ದು ಮಿಣಜಿಗಿಯವರು 1961ರಲ್ಲಿ ಬೆಂಗಳೂರಿನಲ್ಲಿ `ಡ್ರಾಯಿಂಗ್ ಟೀಚರ್ಸ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ತೆಗೆದಿದ್ದು ಹಡಪದ್ ಅವರು ಬೆಂಗಳೂರಿಗೆ ಉಪನ್ಯಾಸಕರಾಗಿ ಬಂದರು. ಆದರೆ ಬೆಂಗಳೂರಿನ ಶಿಕ್ಷಕರ ತರಬೇತಿ ಶಾಲೆ ಹೆಚ್ಚುಕಾಲ ನಡೆಯಲಿಲ್ಲವಾಗಿ ಇಲ್ಲಿಯೇ ನೆಲೆನಿಂತ ಹಡಪದ್ ಅವರು 1968ರಲ್ಲಿ ಚಿತ್ರಕಲೆಗಳ ಡಿಪ್ಲೊಮಾ ಹಾಗೂ ಕಲಾಶಿಕ್ಷಕರ ತರಬೇತಿ ನೀಡುವಂತೆ `ಕೆನ್ ಕಲಾ ಶಾಲೆ ಆರಂಭಿಸಿದರು. ಶಾಲೆ ಹಲವಾರು ಕಡೆ ಬದಲಾಗಿ ಇಂದು ಇರುವ ಶೇಷಾದ್ರಿಪುರಂ ಬಡಾವಣೆಯಲ್ಲಿ ಎಪ್ಪತ್ತರ ದಶಕದ ಆರಂಭದಲ್ಲಿ ನೆಲೆಕಂಡಿತು.

ಬೆಂಗಳೂರಿನಲ್ಲಿ ಪ್ರಥಮಬಾರಿಗೆ 1963ರಲ್ಲಿ ಏಕವ್ಯಕ್ತಿ ಪ್ರದರ್ಶನ ಮಾಡಿದ್ದು ಮುಂದೆಯೂ ಹಲವಾರು ಪ್ರದರ್ಶನಗಳನ್ನು ವೆಂಕಟಪ್ಪ ಚಿತ್ರಶಾಲೆ ಹಾಗೂ ಕೆನ್ ಕಲಾಶಾಲೆಯಲ್ಲಿ ನೀಡಿದ್ದರು. 1972ರಿಂದ 79ರ ಅವಧಿ ಯಲ್ಲಿ ಅಮೆರಿಕೆಯ ಟೆಕ್ಸಾಸ್‍ನಲ್ಲಿ ಸುಮಾರು ಹತ್ತೊಂಬತ್ತು ಏಕವ್ಯಕ್ತಿ ಹಾಗೂ ಸಮೂಹ ಕಲಾಪ್ರದರ್ಶನಗಳಲ್ಲಿ ಭಾಗ ವಹಿಸಿದ್ದರು. 1964ರಲ್ಲಿ ಆರಂಭಿಸಿದ `ವಿ ಫೋರ್ ಗುಂಪು ಒಂದು ಅರ್ಥದಲ್ಲಿ ಕರ್ನಾಟಕದ ಕಲಾ ಇತಿಹಾಸ ದಲ್ಲಿ ಕ್ರಾಂತಿಯನ್ನೇ ಮಾಡಿತು. ಕೃತಿಗಳಲ್ಲಿಯ ಅಂತರ್ಗತ ವಿಷಯಗಳಿಂದ ಹಿಡಿದು ಚಿತ್ರಗಳಿಗೆ ಕಟ್ಟು ಹಾಕಿಸುವಿಕೆ, ಕ್ರಮಬದ್ಧವಾಗಿ ತೂಗು ಹಾಕುವಿಕೆ. ಕರಪತ್ರ ಪ್ರಕಟಿಸುವಿಕೆ ಇತ್ಯಾದಿಗಳಲ್ಲದೆ ಅದೀಗ ತಾನೇ ಕಾಲಿಡುತ್ತಿದ್ದ ನವ್ಯ, ಅಮೂರ್ತ ಕೃತಿಗಳ ಬಗ್ಗೆ ಆಸಕ್ತರಿಗೆ ತಿಳಿಯ ಹೇಳುತ್ತಿದ್ದುದೂ ನಿಧಾನವಾಗಿ ಹೊಸದೊಂದು ಶೈಲಿ ತೆರೆದುಕೊಳ್ಳು ವಂತಾಯಿತು. ಮುಂದೆ 1968ರಲ್ಲಿ `ಕೆನ್ ಕಲಾಶಾಲೆ ಆರಂಭಿಸುವ ವೇಳೆಗೆ ಮಾಸ್ತರರಿಗೆ ಒಂದು ನಿಶ್ಚಿತವಾದ ಹಾದಿ ಗೋಚರವಾಗಿತ್ತು. ರಾಷ್ಟ್ರೀಯ ವಾಹಿನಿಯಲ್ಲಿ ಕರ್ನಾಟಕದ ಕಲಾವಿದರು ಹಿಂದುಳಿದಿರುವ ಬಗ್ಗೆ ಹಾಗೂ ಆಗ ಚಲಾವಣೆಯಲ್ಲಿದ್ದ ರವಿವರ್ಮ ಪ್ರೇರಿತ ನೈಜ ಶೈಲಿಯಿಂದ ಹೊರತಾದ ಸಮಕಾಲೀನ ಕಲೆಯ ಅಸ್ತಿತ್ವ ಮನದಟ್ಟು ಮಾಡಬೇಕಿತ್ತು. ಅದಕ್ಕಾಗಿ ಮೊದಲಿಗೆ ವಿದ್ಯಾರ್ಥಿಗಳ ಪಡೆಯೊಂದನ್ನು ತಯಾರುಮಾಡಿ, ನಿರಂತರವಾಗಿ ಜೀವಿತದ ಅಂತಿಮ ದಿನದವರೆಗೂ ಕಲೆಯ ಸಮಕಾಲೀನ ಸಂದರ್ಭಗಳ ಬಗ್ಗೆ ಓದುತ್ತಾ, ಅನ್ವೇಶಿಸುತ್ತಾ, ಕಲಿಸುತ್ತಾ, ಬೆಳೆಯುತ್ತಾ ಬದಲಾಗುತ್ತಾ ಹೋದರು. ಕಲಾ ಸಾಹಿತ್ಯವೂ ಸೇರಿದಂತೆ ಕಲೆಯ ಎಲ್ಲ ಮಗ್ಗಲುಗಳನ್ನೂ ಪ್ರೋತ್ಸಾಹಿಸಿದರು. ಒಮ್ಮೆ ವಿದೇಶಕ್ಕೂ ಹೋಗಿಬಂದರು. 1979ರಿಂದ 92ರ ಅವಧಿಯಲ್ಲಿ ಜರ್ಮನಿಯ ಕಲಾ ಮಹೋತ್ಸವಕ್ಕೆ ಕೃತಿಗಳನ್ನು ಕಳಿಸುತ್ತಿದ್ದು 1992ರಲ್ಲಿ ಜರ್ಮನಿಯ ಹೈಡಲ್‍ಬರ್ಗ್‍ಗೆ ಹೋಗಿ ತಿಂಗಳಕಾಲ ಅನುಭವ ಪಡೆದು ಬಂದರು. ಕಲಾವಿಕಾಸ ಕತೆಗೆ ಸಂಬಂಧ ಪಟ್ಟ ಮಾಸ ಪತ್ರಿಕೆಯನ್ನು ಪಡೆದರು. ಇವರು ಪ್ರಕಟಿಸಿದ ನಾಲ್ಕು ಸ್ಕೆಚ್ ಬುಕ್‍ಗಳು, ಕಲಾ ವಿದ್ಯಾರ್ಥಿಗಳಿಗೆ ಉಪಯುಕ್ತವೆನಿಸಿವೆ. ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರೀಯ ಪ್ರಶಸ್ತಿಗಳಿಸಿದ ಕಂಕಣ ಚಿತ್ರದ ಕಲಾನಿರ್ದೇಶಕರಾಗಿ ದುಡಿದಿದ್ದಾರೆ.

ಹಲವಾರು ಅವಧಿಗಳಿಗೆ ಕೇಂದ್ರ ಹಾಗೂ ರಾಜ್ಯ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದ ಹಡಪದ್ ಅವರು ಒಂದು ಅವಧಿಗೆ (1987-90) ಅದರ ಅಧ್ಯಕ್ಷರಾಗಿದ್ದರು. 1982ರಲ್ಲಿ ಅಕಾಡೆಮಿಯಿಂದ ಪ್ರಶಸ್ತಿ, 1998ರಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ರಾಜ್ಯ, ಕೇಂದ್ರ ಹಾಗೂ ದಸರಾ ಕಲಾ ಪ್ರದರ್ಶನಗಳಲ್ಲಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಇತ್ಯಾದಿಗಳು ಬಂದಿದ್ದವು. ಕೇಂದ್ರ, ದಕ್ಷಿಣ ವಲಯ, ದಕ್ಷಿಣ-ಮಧ್ಯವಲಯಗಳ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದರು. ರಾಜ್ಯ ಲಲಿತಕಲಾ ಅಕಾಡೆಮಿಯಿಂದ ಫೆಲೋಷಿಪ್ ದೊರೆತಿದ್ದು ಕೃತಿ ರಚಿಸಿ ನೀಡಿದರು. ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಹಡಪದ್ ಅವರಿಗೆ 60 ವರ್ಷ ಗಳಾದಾಗ 1996ರಲ್ಲಿ `ಸಂಯೋಜಿತ ಸಮಕಾಲೀನ ಕಲಾವಿದರ ತಂಡದಿಂದ ಸನ್ಮಾನಿತರಾದರು. ಆ ಸಮಯದಲ್ಲಿ ಗೌರವಗ್ರಂಥವೊಂದನ್ನು ಹೊರತರಲಾಯಿತು. 1998ರಲ್ಲಿ ಕರ್ನಾಟಕ ಸರಕಾರದ ಪ್ರತಿಷ್ಠಿತ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯಾದ `ನಾಡೋಜ' ಪದವಿ ನೀಡಿ ಗೌರವಿಸಿತು. 22.11.03ರಂದು ಹಡಪದ್ ಅವರು ನಿಧನರಾಗಿದ್ದು ಅನಂತರ ಅವರ ಕೃತಿಗಳಿಗೆ ಬಾದಾಮಿಯಲ್ಲಿ ಶಾಶ್ವತ ಪ್ರದರ್ಶನಾಲಯವೊಂದನ್ನು ರೂಪಿಸಲಾಯಿತು. ಕೆನ್ ಕಲಾಶಾಲೆಯಲ್ಲಿ ಅಭ್ಯಸಿಸಿದ ಅವರ ಅಪಾರ ಶಿಷ್ಯವೃಂದ ಮಾಸ್ತರರ ನೆನಪಿಗಾಗಿ ಪ್ರತಿವರ್ಷ ಕಾರ್ಯಕ್ರಮ ರೂಪಿಸಿ, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ತೀರ್ಮಾನಿಸಿದ್ದು ಪ್ರಥಮವಾಗಿ 2004ರ ನೆನಪಿನ ಪ್ರಶಸ್ತಿಯನ್ನು ಚಂದ್ರನಾಥ ಆಚಾರ್ಯರಿಗೆ ನೀಡಲಾಯಿತು. (ಎ.ಎಲ್.ಎನ್.; ಟಿ.ಜಿ.ಆರ್.)