ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಡ್ಸನ್, ವಿಲಿಯಮ್ ಹೆನ್ರಿ

ಹಡ್ಸನ್, ವಿಲಿಯಮ್ ಹೆನ್ರಿ 1841-1922. ಇಂಗ್ಲೆಂಡಿನ ಗದ್ಯ ಬರೆಹಗಾರ; ಪ್ರಕೃತಿ ವಿಜ್ಞಾನಿ. ಆರ್ಜೆಂಟಿನದ ಕ್ವಿಲಮ್ಸ್‍ನಲ್ಲಿ ಅಮೆರಿಕನ್ ದಂಪತಿಗಳ ಮಗನಾಗಿ ಜನಿಸಿದ. ಅನಾರೋಗ್ಯದಿಂದ ರೈತ ಜೀವನಕ್ಕೆ ಹೊಂದಿಕೊಳ್ಳಲಾಗದೆ ಹಲವು ವರ್ಷಗಳನ್ನು ನಿಸರ್ಗದ, ಅದರಲ್ಲಿಯೂ ಪಕ್ಷಿಗಳ ಜೀವನದ ಅಧ್ಯಯನದಲ್ಲಿ ಕಳೆದ. ಈ ವಿಷಯದ ಬಗ್ಗೆ ಅನೇಕ ಲೇಖನಗಳನ್ನು, ಗ್ರಂಥಗಳನ್ನು ಈತ ಬರೆದಿದ್ದಾನೆ. 1874ರಲ್ಲಿ ಇಂಗ್ಲೆಂಡಿಗೆ ಹೋದ ಈತ 1880ರಲ್ಲಿ ಬ್ರಿಟಿಷ್ ಪೌರತ್ವ ಪಡೆದುಕೊಂಡ. ಐಡ್ಲ್ ಡೇಸ್ ಇನ್ ಪಟಗೋನಿಯ(1893), ಬ್ರಿಟಿಷ್ ಬಡ್ರ್ಸ್(1895), ಬಡ್ರ್ಸ್ ಇನ್ ಲಂಡನ್(1898), ನೇಚರ್ ಇನ್ ಡೌನ್‍ಲೆಂಡ್ ಪಾರ್ಕ್(1922) - ಇವು ಇವನ ಕೆಲವು ಮುಖ್ಯ ಕೃತಿಗಳು. ಫಾರವೇ ಅಂಡ್ ಲಾಂಗೆಗೋ(1918) ಎಂಬುದು ಇವನ ಆತ್ಮಕಥೆ. ಇವನ ಬರೆವಣಿಗೆಯಲ್ಲಿ ಹೆಚ್ಚಿನ ಗಹನತೆ ಇಲ್ಲ; ಆದರೆ ಸುಂದರ, ವಿಚಾರಾತ್ಮಕ ಮತ್ತು ಭಾವಸೂಕ್ಷ್ಮವಾದ ಗದ್ಯ ಇವನ ವೈಶಿಷ್ಟ್ಯ. (ಎಲ್.ಎಸ್.ಎಸ್.)