ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹನುಮಂತಯ್ಯ, ಕೆಂಗಲ್

ಹನುಮಂತಯ್ಯ, ಕೆಂಗಲ್ 1908-80. ಪ್ರಸಿದ್ಧ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ರಾಜ್ಯದ ಮಾಜಿ ಮುಖ್ಯಮಂತ್ರಿ (1952-56). ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರ ತಾಲ್ಲೂಕಿನ ಲಕ್ಕಪ್ಪನಹಳ್ಳಿಯಲ್ಲಿ 1908ರಲ್ಲಿ ಜನಿಸಿದರು. ವೆಂಕಟೇಗೌಡ ಮತ್ತು ನಂಜಮ್ಮ ಇವರ ತಂದೆತಾಯಿಗಳು. ಪ್ರೌಢಶಾಲಾಭ್ಯಾಸವನ್ನು ಮುಗಿಸಿದ ಅನಂತರ ಇವರು ಮೈಸೂರು ಮಹಾರಾಜ ಕಾಲೇಜು ಸೇರಿ 1930ರಲ್ಲಿ ಬಿ.ಎ. ಪದವಿಗಳಿಸಿದರು. ಪುಣೆಯ ಕಾನೂನು ಕಾಲೇಜಿನಲ್ಲಿ 1932ರಲ್ಲಿ ಎಲ್‍ಎಲ್.ಬಿ ಪದವಿಯನ್ನು ಗಳಿಸಿದ ಅನಂತರ ಬೆಂಗಳೂರಿನಲ್ಲಿ ವಕೀಲವೃತ್ತಿಯಲ್ಲಿ ತೊಡಗಿದರು (1933).

ಇವರು ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಚಟುವಟಿಕೆಗಳಲ್ಲಿ ಆಸಕ್ತಿವಹಿಸಿದ್ದರು. 1925ರಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ದ್ದುದಲ್ಲದೆ 1927ರಲ್ಲಿ ಮದರಾಸಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ವಿದ್ಯಾರ್ಥಿಪ್ರತಿನಿಧಿಯಾಗಿ ಭಾಗವಹಿಸಿದರು. 1928ರಲ್ಲಿ ಸೈಮನ್ ಸಮಿತಿ ಬಂದಾಗ ವಿದ್ಯಾರ್ಥಿಗಳನ್ನು ಸಂಘಟಿಸಿ ಪ್ರತಿಭಟಿಸಿದರು. 1933ರಲ್ಲಿ ಬೆಂಗಳೂರು ಜಿಲ್ಲೆ ಹರಿಜನ ಸೇವಕ ಸಂಘದ ಕಾರ್ಯದರ್ಶಿಯಾಗಿಯೂ 1934ರಲ್ಲಿ ಬೆಂಗಳೂರು ಹಿಂದೀ ಪ್ರಚಾರ ಸಭೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. ಈ ಸಾಮಾಜಿಕ, ರಾಜನೈತಿಕ ಚಟುವಟಿಕೆಗಳ ಜೊತೆಗೆ ತಮ್ಮ ವಕೀಲವೃತ್ತಿಯನ್ನು ಚೆನ್ನಾಗಿ ಕರಗತಮಾಡಿಕೊಂಡು ಕಾನೂನುಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದರು.

1936ರಲ್ಲಿ ವಕೀಲವೃತ್ತಿಯನ್ನು ಬಿಟ್ಟು, ದೇಶಸೇವೆಗಾಗಿ ತಮ್ಮ ಇಡೀ ವೇಳೆಯನ್ನೆಲ್ಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರತವಾಗಿದ್ದ ಕಾಂಗ್ರೆಸ್‍ನ ದುಡಿತಕ್ಕೆ ಮೀಸಲಾಗಿಟ್ಟರು. ಆಗ ಬೆಂಗಳೂರು ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಚುನಾಯಿತರಾಗಿ ಮುಂದೆ ಹತ್ತುವರ್ಷಗಳ ಕಾಲ ಆ ಸ್ಥಾನದಲ್ಲಿ ದುಡಿದರು. ಮೈಸೂರು ರಾಜ್ಯ ಕಾಂಗ್ರೆಸ್‍ನ ಕಾರ್ಯಕಾರಿ ಸಮಿತಿ (ಸಂಸತ್), ಉಪಸಮಿತಿಗಳಲ್ಲಿ ಕೆಲಸಮಾಡಿದರು.

1940ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಸದಸ್ಯರಾಗಿ ಆರಿಸಿಬಂದರಲ್ಲದೆ ಆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ 1944ರ ವರೆಗೆ ಸೇವೆ ಸಲ್ಲಿಸಿದರು. ಈ ಮಧ್ಯೆ 1942ರಲ್ಲಿ ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿದ್ದರು. 1944-49ರಲ್ಲಿ ಕಾಂಗ್ರೆಸ್‍ನ ಉಪನಾಯಕ ರಾಗಿ ಮೈಸೂರು ಪ್ರತಿನಿಧಿಸಭೆಯಲ್ಲಿ ಕೆಲಸ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುತ್ತಿದ್ದುದರಿಂದ ಹಲವು ಬಾರಿ ಜೈಲುವಾಸ ವನ್ನು ಅನುಭವಿಸಿದರು. ಪ್ರಜಾಸರ್ಕಾರಕ್ಕಾಗಿ 1947ರಲ್ಲಿ ಅರಮನೆ ಸತ್ಯಾಗ್ರಹವನ್ನು ಆರಂಭಿಸಿದರು. 1948ರಲ್ಲಿ ಸಂವಿಧಾನ ರಚನಾ ಸಮಿತಿಗೆ ಚುನಾಯಿಸಲ್ಪಟ್ಟು ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದರು. ಸಂವಿಧಾನದ ಕರಡುಪ್ರತಿಯ ಸಿದ್ಧತೆಗಳಲ್ಲಿ ಇವರ ಪಾತ್ರ ಸಾಕಷ್ಟು ಮಹತ್ತ್ವಪೂರ್ಣವಾದುದು. ಇಂಟರ್ ಪಾರ್ಲಿಮೆಂಟರಿ ಯೂನಿಯನ್ನಿನ (ಸಂಸತ್ ಸಂಘದ) ಸಮ್ಮೇಳನಗಳಿಗೆ ಭಾರತ ಸರ್ಕಾರದ ಪ್ರತಿನಿಧಿಯಾಗಿ 1949ರಲ್ಲಿ ಸ್ಟಾಕ್‍ಹೋಮ್, 1950ರಲ್ಲಿ ಡಬ್ಲಿನ್ ಮತ್ತು 1962ರಲ್ಲಿ ಬ್ರಜಿಲ್‍ಗೆ ತೆರಳಿದ್ದರು. 1958ರಲ್ಲಿ ರಷ್ಯಕ್ಕೆ ಹೋಗಿ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 1966ರಲ್ಲಿ ಇವರು ಯುರೋಪ್, ಇಂಗ್ಲೆಂಡ್, ಕೆನಡ, ಅಮೆರಿಕ ದೇಶಗಳಲ್ಲಿ ಪ್ರವಾಸ ಮಾಡಿದರು.

1950-52ರಲ್ಲಿ ಮೈಸೂರು ಕಾಂಗ್ರೆಸ್‍ನ ಪ್ರದೇಶ ಸಮಿತಿಯ ಅಧ್ಯಕ್ಷರಾದರು. 1952ರಲ್ಲಿ ಮೈಸೂರು ವಿಧಾನಸಭೆಗೆ ಆಯ್ಕೆಯಾಗಿ, ಅಲ್ಲಿನ ಕಾಂಗ್ರೆಸ್ ಪಕ್ಷದ ನಾಯಕರಾಗಿ ಚುನಾಯಿತರಾದರು. ಮೊಟ್ಟಮೊದಲಿನ ಚುನಾಯಿತ ಮುಖ್ಯಮಂತ್ರಿಯಾಗಿ 1952 ಮಾರ್ಚ್ 30ರಿಂದ 1956 ಆಗಸ್ಟ್ 19ರವರೆಗೆ ಆಡಳಿತ ನಡೆಸಿದರು. ತಮ್ಮ ಆಡಳಿತ ಕಾಲದಲ್ಲಿ ಮೈಸೂರು ರಾಜ್ಯದ ಆರ್ಥಿಕ ಸಾಂಸ್ಕøತಿಕ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಕಿದ್ದಲ್ಲದೆ ಹಲವನ್ನು ಕಾರ್ಯಗತಮಾಡಿದರು. ಕೋಲಾರ ಚಿನ್ನದ ಗಣಿಗಳ ರಾಷ್ಟ್ರೀಕರಣ ಮತ್ತು ಪ್ರಾಥಮಿಕ ಶಾಲಾ ಹಂತದಿಂದ ಕಾಲೇಜು ಮಟ್ಟದವರೆಗೂ ವಿದ್ಯಾಸುಧಾರಣೆಗೆ ಪ್ರಯತ್ನಿಸಿದ್ದು ಇವರ ಮುಖ್ಯ ಸಾಧನೆಗಳು. ರಾಜ್ಯಾಂಗದ 40ನೆಯ ಅನುಚ್ಛೇದದ ಪ್ರಕಾರ ಎಲ್ಲ ಮಕ್ಕಳಿಗೂ 14 ವರ್ಷದ ತನಕ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತರಲು ವಿದ್ಯಾದಾನ, ಭೂದಾನ ಎಂಬ ಎರಡು ಚಟುವಟಿಕೆಗಳನ್ನು ಆರಂಭಿಸಿದರು. ಈ ಕಾರ್ಯಗಳು ಮೈಸೂರು ರಾಜ್ಯದಲ್ಲೇ ಅಲ್ಲದೆ ಕೇಂದ್ರದಿಂದಲೂ ಮೆಚ್ಚುಗೆಯನ್ನು ಪಡೆದುವು. ಕನ್ನಡ ವಿಶ್ವಕೋಶದ ಯೋಜನೆ ರೂಪಗೊಂಡಿದ್ದು ಇವರು ಮುಖ್ಯಮಂತ್ರಿಯಾಗಿದ್ದಾಗಲೇ. ಇವರು ಸ್ಥಾಪಿಸಿದ ಸಂಸ್ಕøತಿ ಪ್ರಚಾರ ವಿಭಾಗ ದೇಶದಲ್ಲೇ ಹೊಸ ರೀತಿಯದು. ಕನ್ನಡದ ಪ್ರಸಿದ್ಧ ಕೃತಿಗಳನ್ನು ಅಗ್ಗದ ಬೆಲೆಗೆ ಜನಸಾಮಾನ್ಯರಿಗೆ ದೊರಕುವಂತೆ ಸರ್ಕಾರದಿಂದ ಸಹಾಯಧನ ದೊರಕಿಸಿಕೊಟ್ಟು ಕನ್ನಡ ಸಾಹಿತ್ಯ ಪ್ರಚಾರಕ್ಕೂ ನೆರವಾದರು. ಈ ಯೋಜನೆಯಲ್ಲಿ ಪ್ರಕಟವಾದ ಜೈಮಿನಿಭಾರತ, ಗದುಗಿನ ಭಾರತ ಮತ್ತು ಹರಿಶ್ಚಂದ್ರಕಾವ್ಯಗಳ ಲಕ್ಷಗಟ್ಟಲೆ ಪ್ರತಿಗಳು ಮಾರಾಟವಾದುವು. ಮೈಸೂರು ರಾಜ್ಯದ ವಿಧಾನಸಭೆಯ ಅಧಿವೇಶನಗಳಿಗೆ ಯೋಗ್ಯವಾದ ಕಟ್ಟಡವಿಲ್ಲದುದನ್ನು ಮನಗಂಡು ಪ್ರಸಿದ್ಧವಾದ ವಿಧಾನಸೌಧವನ್ನು ಬಹಳ ಆಸಕ್ತಿವಹಿಸಿ ಬೆಂಗಳೂರಿನಲ್ಲಿ ನಿರ್ಮಿಸಿದವರೂ ಇವರೇ.

1955 ನವೆಂಬರ್-ಡಿಸೆಂಬರ್, 1956 ಮಾರ್ಚ್-ಏಪ್ರಿಲ್‍ನಲ್ಲಿ ಮೈಸೂರು ವಿಧಾನಸಭೆಗಳಲ್ಲಿ ಮತ್ತು ಪ್ರಾಂತ ಪುನರ್‍ವಿಂಗಡಣಾ ಸಮಿತಿಯಲ್ಲಿ ಚರ್ಚಿಸಿ ಒಮ್ಮತವನ್ನು ಸಂಗ್ರಹಿಸಿ, ಮೈಸೂರು ಕರ್ನಾಟಕ ವಾಗಲು ತಳಹದಿ ಹಾಕಿದರು. 1957ರಲ್ಲಿ ಮತ್ತೆ ಮೈಸೂರು ವಿಧಾನ ಸಭೆಯ ಸದಸ್ಯರಾದರು. 1962ರಲ್ಲಿ ಲೋಕಸಭೆಗೆ ಚುನಾಯಿತರಾದರು. 1966ರಲ್ಲಿ ಒಟ್ಟಾವದಲ್ಲಿ ನಡೆದ ಕಾಮನ್‍ವೆಲ್ತ್ ಸಂಸತ್ ಸಮ್ಮೇಳನದಲ್ಲಿ ಭಾರತ ತಂಡದ ನಾಯಕರಾಗಿ ಭಾಗವಹಿಸಿದ್ದರು. 1967-68ರಲ್ಲಿ ಪಾರ್ಲಿಮೆಂಟಿನ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿ ಕೆಲಸ ಮಾಡಿದರು. ಇದೇ ಅವಧಿಯಲ್ಲಿ ಪಂಜಾಬ್ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ಅಮೋಘ ಸೇವೆಸಲ್ಲಿಸಿದರು. ಇದಾದಮೇಲೆ ಅಖಿಲ ಭಾರತ ಆಡಳಿತ ಸುಧಾರಣಾ ಸಮಿತಿಯ ಉಪಾಧ್ಯಕ್ಷರಾಗಿದ್ದು ಅನಂತರ ಅಧ್ಯಕ್ಷರಾಗಿ (1969) ಭಾರತ ಸಂವಿಧಾನದಷ್ಟೇ ಮುಖ್ಯವಾದ ಸುಧಾರಣೆ ಗಳನ್ನು ಬೃಹತ್ ವರದಿಯ ಮೂಲಕ ಒಪ್ಪಿಸಿದರು. ಇವರು ಮಾಡಿದ ಶಿಫಾರಸುಗಳು ಅನೇಕ ಕ್ಷೇತ್ರಗಳಲ್ಲಿ ಅನುಷ್ಠಾನಕ್ಕೆ ಬಂದಿವೆ.

ಕಾಂಗ್ರೆಸ್ ಪಕ್ಷ ಎರಡಾದ ಮೇಲೆ ಇವರು ಇಂದಿರಾಗಾಂಧಿಯವರ ನೇತೃತ್ವದ ಆಡಳಿತ ಪಕ್ಷದಲ್ಲಿ ನಿಂತು ಅವರ ಸಂಪುಟದಲ್ಲಿ ಕಾನೂನು ಮತ್ತು ಸಮಾಜಕಲ್ಯಾಣ ಮಂತ್ರಿಯಾಗಿ ಕೆಲಸಮಾಡಿದರು (1970-71). 1971ರ ಚುನಾವಣೆಯಲ್ಲಿ ಮತ್ತೆ ಲೋಕಸಭೆಗೆ ಆರಿಸಿ ಬಂದು ಕೇಂದ್ರ ರೈಲ್ವೆಮಂತ್ರಿಯಾಗಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿದರು. ಅನಂತರ ರಾಜೀನಾಮೆ ನೀಡಿ ಹೊರಬಂದರು.

ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣ ಮುಕ್ತರಾಗಿ ಕೆಲಕಾಲವಿದ್ದ ಇವರು 1977ರಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಜಿತರಾದರು. ಅನಂತರ ಕಾಂಗ್ರೆಸ್ ಪಕ್ಷದಿಂದ ಹೊರಬಂದು ತಮ್ಮದೇ ಆದ ಸುರಾಜ್ಯಪಕ್ಷ ಎಂಬ ಹೊಸ ಪಕ್ಷವೊಂದನ್ನು ಕಟ್ಟಿದರು, ರಾಜಕೀಯ ಹೊಲಸನ್ನು ನಿರ್ಮೂಲನಮಾಡುವ ಧ್ಯೇಯವಿಟ್ಟುಕೊಂಡು ಸ್ಥಾಪಿತವಾದ ಈ ಪಕ್ಷದ ಅಧ್ಯಕ್ಷರೂ ಆಗಿದ್ದರು.

ಉತ್ತಮವಾಗ್ಮಿ, ದಕ್ಷ ಆಡಳಿತಗಾರ ಎಂದು ಹೆಸರುಗಳಿಸಿದ್ದ ಇವರು ಅನೇಕ ಸರ್ಕಾರಿ ಹಾಗೂ ಖಾಸಗಿ ಸಂಘ, ಸಂಸ್ಥೆಗಳೊಡನೆ ಸಂಪರ್ಕವಿಟ್ಟುಕೊಂಡಿದ್ದರು. ಇವರು 1980 ಡಿಸೆಂಬರ್ 1ರಂದು ನಿಧನರಾದರು.

(ಎಚ್.ಎಚ್.ಎ.)