ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹನುಮನಮಟ್ಟಿ ಗ್ರಾಮೀಣ ವಿಶ್ವವಿದ್ಯಾಲಯ

ಹನುಮನಮಟ್ಟಿ ಗ್ರಾಮೀಣ ವಿಶ್ವವಿದ್ಯಾಲಯ

ಗ್ರಾಮೀಣಾಭಿವೃದ್ಧಿಗೆ ಅನುಕೂಲವಾಗುವ ಶಿಕ್ಷಣ ನೀಡುವ ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯಲ್ಲಿರುವ ಒಂದು ಸಂಸ್ಥೆ. ವ್ಯವಸಾಯವೇ ಮುಖ್ಯ ಕಸುಬಾಗುಳ್ಳ ಭಾರತದ ಗ್ರಾಮಜೀವನ ಆಕರ್ಷಣೀಯವೆನಿಸಲಾರದೆ ಗ್ರಾಮೀಣರು ಕ್ರಮಕ್ರಮವಾಗಿ ನಗರಗಳಿಗೆ ಬಂದು ನೆಲಸುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆದ ಅಲ್ಲಿನ ಯುವಕರು ಮರಳಿ ಗ್ರಾಮಜೀವನದಲ್ಲಿ ಉದ್ಯೋಗ ನಿರತರಾಗಲಾರದೆ ನಗರಗಳಲ್ಲಿ ಕೆಲಸ ಹುಡುಕುತ್ತಾರೆ. ಗ್ರಾಮಗಳಲ್ಲೂ ಆಗಬೇಕಾದ ಕೆಲಸ ಬಹಳಷ್ಟು ಇದೆ. ಕಟ್ಟಡ ಮತ್ತು ರಸ್ತೆಗಳ ಕೆಲಸ, ಸೇತುವೆಗಳ ನಿರ್ಮಾಣ, ವ್ಯವಸಾಯೋಪಕರಣಗಳ ದುರಸ್ತು, ಹೊಲಗದ್ದೆಗಳ ಮಣ್ಣಿನ ರಕ್ಷಣೆ, ಕಾಲುವೆಗಳ ನಿರ್ಮಾಣ, ಬಾವಿ ತೋಡುವುದು, ಮರಗೆಲಸ, ಕಬ್ಬಿಣದ ಕೆಲಸ, ರೇಡಿಯೊ ದುರಸ್ತು, ಬೀಸುವ ಯಂತ್ರ, ವಿದ್ಯುಚ್ಛಕ್ತಿಯ ತಂತಿಯನ್ನು ಅಳವಡಿಸುವುದು-ಇವೇ ಮುಂತಾದ ಉದ್ಯೋಗಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯಲು ಅವಕಾಶವಿರುವುದರಿಂದ ಅಲ್ಲಿನ ಯುವಕರಿಗೆ ಆ ಮುಖವಾದ ಶಿಕ್ಷಣವಿತ್ತು, ಅವರು ಅಲ್ಲೇ ಉದ್ಯೋಗನಿರತರಾಗುವಂತೆ ಮಾಡುವುದು ಅಗತ್ಯ. ಆಗ ಅಲ್ಲಿನ ಜೀವನ ಆಕರ್ಷಣೀಯವಾಗಿ ಗ್ರಾಮಗಳ ಪುನರುಜ್ಜೀವನವಾದೀತು. ಅಂಥ ಶಿಕ್ಷಣವೀಯಲು ಮುಖ್ಯ ವ್ಯವಸಾಯೋದ್ಯಮಗಳ ಪಾಲಿಟೆಕ್ನಿಕ್‍ಗಳನ್ನೇ ಅಂಗಸಂಸ್ಥೆಗಳನ್ನಾಗಿ ಹೊಂದಿರುವ ಗ್ರಾಮೀಣ ವಿಶ್ವವಿದ್ಯಾಲಯಗಳ ಸ್ಥಾಪನೆಯ ಅಗತ್ಯವನ್ನು ಕುರಿತು 1949ರಲ್ಲಿ ರಾಧಾಕೃಷ್ಣನ್ ಶಿಕ್ಷಣ ಆಯೋಗ ಸಲಹೆ ನೀಡಿತು. ಆ ಸಲಹೆಗಳನ್ನು ಆಧರಿಸಿ ಭಾರತ ಸರ್ಕಾರ ಬೇರೆ ಬೇರೆ ರಾಜ್ಯಗಳಲ್ಲಿ ಅಂಥ ವಿಶ್ವವಿದ್ಯಾಲಯಗಳ ಸ್ಥಾಪನೆಯ ಪೂರ್ವಭಾವಿಯಾಗಿ ಹದಿನೈದು ಗ್ರಾಮೀಣ ವಿದ್ಯಾಸಂಸ್ಥೆಗಳನ್ನು (ರೂರಲ್ ಇನ್‍ಸ್ಟಿಟ್ಯೂಟ್) ಆರಂಭಿಸಿತು. ಅವುಗಳಲ್ಲಿ ಇದೂ ಒಂದು.

ಹನುಮನಮಟ್ಟಿಯ ಗ್ರಾಮೀಣ ವಿದ್ಯಾಸಂಸ್ಥೆ ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿದ್ದರೂ ಅದು ಇಲ್ಲಿರುವ ಯಾವ ವಿಶ್ವವಿದ್ಯಾಲಯಕ್ಕೂ ಅಂಗೀಕೃತ ಸಂಸ್ಥೆಯಾಗಿಲ್ಲ. ವಿಶ್ವವಿದ್ಯಾಲಯದ ಅಂತಸ್ತನ್ನು ಹೊಂದಿದ್ದು ತನ್ನದೇ ಆದ ಡಿಪ್ಲೊಮ, ಸರ್ಟಿಫಿಕೇಟ್ ಮುಂತಾದ ಪದವಿಗಳನ್ನು ನೀಡುವ ಅಧಿಕಾರ ಹೊಂದಿದೆ. ಅಲ್ಲಿ ಗ್ರಾಮಸೇವೆಯ ಮೂರು ವರ್ಷದ ಡಿಪ್ಲೊಮ ಪಠ್ಯಕ್ರಮ, ವಾಸ್ತು ಮತ್ತು ಗ್ರಾಮೀಣ ಶಿಲ್ಪಗಳಲ್ಲಿ ಮೂರು ವರ್ಷದ ಡಿಪ್ಲೊಮ ಪಠ್ಯಕ್ರಮ, ಕೃಷಿ ವಿಜ್ಞಾನದ ಎರಡು ವರ್ಷದ ಸರ್ಟಿಫಿಕೇಟ್ ಪಠ್ಯಕ್ರಮ, ಗ್ರಾಮನೈರ್ಮಲ್ಯ ತನಿಖಾಧಿಕಾರಿಗಳ (ಸ್ಯಾನಿಟರಿ ಇನ್ಸ್‍ಪೆಕ್ಟರ್) ಒಂದು ವರ್ಷ ಅವಧಿಯ ತರಗತಿ, ಗ್ರಾಮೀಣ ಸಾಮಾಜಿಕ ವಿಜ್ಞಾನ ಮತ್ತು ಸಮುದಾಯಾಭಿವೃದ್ಧಿಯ ಎರಡು ವರ್ಷಗಳ ಸ್ನಾತಕೋತ್ತರ ತರಗತಿ, ಗ್ರಾಮೀಣ ಅರ್ಥಶಾಸ್ತ್ರ ಮತ್ತು ಸಹಕಾರಗಳಲ್ಲಿ ಎರಡು ವರ್ಷದ ಸ್ನಾತಕೋತ್ತರ ತರಗತಿ, ಮೂರು ವರ್ಷದ ಡಿಪ್ಲೊಮ ತರಗತಿಗೆ ಸೇರಲು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಒಂದು ವರ್ಷದ ಸಿದ್ಧತಾ ತರಗತಿ-ಇವೇ ಮುಂತಾದ ತರಗತಿಗಳನ್ನು ನಡೆಸಲು ಆಲೋಚಿಸಲಾಗಿದ್ದರೂ ಸದ್ಯದಲ್ಲಿ ಇಲ್ಲಿ ಕೆಲವು ಸ್ನಾತಕೋತ್ತರ ಡಿಪ್ಲೊಮ ಮತ್ತು ಸರ್ಟಿಫಿಕೇಟ್ ತರಗತಿಗಳೂ ಕೆಲವು ಸಾಧಾರಣ ಡಿಪ್ಲೊಮ ತರಗತಿಗಳೂ ಆರಂಭವಾಗಿವೆ. ಸಿದ್ಧತಾ ತರಗತಿಯೊಂದನ್ನು ಬಿಟ್ಟರೆ ಮಿಕ್ಕ ಎಲ್ಲ ತರಗತಿಗಳಿಗೂ ಪಿ.ಯು.ಸಿ. ಮುಗಿಸಿದವರಿಗೆ ಪ್ರವೇಶಾವಕಾಶ ದೊರೆಯುವುದು. ಇಲ್ಲಿ ಏರ್ಪಡಿಸಿರುವ ಮೂರು ವರ್ಷದ ಡಿಪ್ಲೊಮ ಪದವಿಯನ್ನು ಕೆಲವು ವಿಶ್ವವಿದ್ಯಾಲಯಗಳೂ ಕೇಂದ್ರ ಸರ್ಕಾರವೂ (ಕೆಲಸ ನೀಡುವ ಉದ್ದೇಶಗಳಿಗಾಗಿ) ಬಿ.ಎ., ಬಿ.ಎಸ್‍ಸಿ. ಮುಂತಾದ ಪದವಿಗಳಿಗೆ ಸಮವೆಂದು ಅಂಗೀಕರಿಸಿವೆ. ಅಲ್ಲಿ 1961ರಲ್ಲಿ ಆರಂಭವಾದ ಗ್ರಾಮೀಣ ಸಹಕಾರ ಮತ್ತು ಸಾಮಾಜಿಕ ವಿಜ್ಞಾನದ ಸ್ನಾತಕೋತ್ತರ ಡಿಪ್ಲೊಮವನ್ನು ಎಂ.ಎ., ಎಂ.ಎಸ್‍ಸಿ. ಮುಂತಾದ ಸ್ನಾತಕೋತ್ತರ ಪದವಿಗಳಿಗೆ ಸಮವೆಂದು ಅಂಗೀಕರಿಸಿವೆ.

ಇಲ್ಲಿನ ಎಲ್ಲ ತರಗತಿಗಳಲ್ಲೂ ಸಾಂಸ್ಕøತಿಕ ವಿಷಯಗಳ ಅಧ್ಯಯ ನಕ್ಕೂ ಅವಕಾಶ ಕಲ್ಪಿಸಿದೆ. ಗ್ರಾಮಜೀವನದ ಸಮಸ್ಯೆಗಳು, ಭಾಷೆ ಮತ್ತು ಸಂಸ್ಕøತಿ ಇತಿಹಾಸ ಮುಂತಾದ ವಿಷಯಗಳನ್ನು ಬೋಧಿಸುವುದರ ಜೊತೆಗೆ ಗ್ರಾಮಜೀವನಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವುದಕ್ಕೂ ಜ್ಞಾನಪ್ರಸಾರಕಾರ್ಯಕ್ಕೂ ಅವಕಾಶ ಕಲ್ಪಿಸಿದೆ.

ಗ್ರಾಮೀಣ ಜನತೆಯ ಸರ್ವತೋಮುಖದ ಅಭಿವೃದ್ಧಿಗಾಗಿ ಆರಂಭವಾದ ಈ ವಿದ್ಯಾಲಯ ಅಷ್ಟಾಗಿ ಜನಪ್ರಿಯತೆ ಗಳಿಸಿಲ್ಲ. ಈ ಮಾತು ಭಾರತದಲ್ಲಿರುವ ಇತರ ಗ್ರಾಮೀಣ ವಿದ್ಯಾಲಯಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಕಾರಣಗಳು ಇಲ್ಲದೇ ಇಲ್ಲ. ಉದ್ದೇಶಿಸಿದ ಎಲ್ಲ ತರಗತಿಗಳೂ ಇಲ್ಲಿ ಇನ್ನೂ ಆರಂಭವಾಗಿಲ್ಲ; ಅಲ್ಲಿಂದ ಹೊರಬಂದ ವಿದ್ಯಾರ್ಥಿಗಳು ತಮ್ಮ ಕಾರ್ಯದಕ್ಷತೆಯನ್ನು ಇನ್ನೂ ಅಷ್ಟಾಗಿ ಪ್ರದರ್ಶಿಸಿಲ್ಲ; ಅದರ ಫಲವಾಗಿ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳೂ ರಾಜ್ಯ ಸರ್ಕಾರವೂ ಅದು ನೀಡುವ ಡಿಪ್ಲೊಮ, ಸರ್ಟಿಫಿಕೇಟ್ ಮುಂತಾದ ಪದವಿಗಳಿಗೆ ಉದ್ದೇಶಿಸಿದ ಸ್ಥಾನವನ್ನು ನೀಡುತ್ತಿಲ್ಲ. ಈ ವಿಶ್ವವಿದ್ಯಾಲಯಕ್ಕೆ ಭಾರತ ಸರ್ಕಾರದಂತೆ ರಾಜ್ಯ ಸರ್ಕಾರವೂ ಹಣ ಒದಗಿಸುತ್ತಿದೆ. ಆದರೆ ಅಲ್ಲಿ ಉದ್ದೇಶಿಸಲಾಗಿರುವ ಕಾರ್ಯಗಳನ್ನು ಆರಂಭಿಸಲು ನೆರವಾಗುವಷ್ಟು ಹಣ ಒದಗುತ್ತಿಲ್ಲ. ಇದೆಲ್ಲದರ ಫಲವಾಗಿ ಮೂಲ ಶಿಕ್ಷಣಕ್ಕೊದಗಿದ ಗತಿಯೇ ಇದಕ್ಕೂ ಒದಗೀತೊ ಏನೊ ಎಂಬ ಶಂಕೆ ಕೆಲವರಲ್ಲಿ ಅಂಕುರಿಸಿದೆ. ಗ್ರಾಮಾಭಿವೃದ್ಧಿಯ ಕಡೆ ನೂತನವಾಗಿ ಆರಂಭವಾಗಿರುವ ರಾಷ್ಟ್ರದ ಆಸಕ್ತಿಯ ಫಲವಾಗಿ ಈ ಸಂಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗ ಬಹುದೆಂದು ಆಶಿಸಲಾಗಿದೆ. (ಎನ್.ಎಸ್.ವಿ.)