ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಬ್ಬಲ್, ಎಡ್ವಿನ್ ಪವೆಲ್

ಹಬ್ಬಲ್, ಎಡ್ವಿನ್ ಪವೆಲ್ 1889-1953. ಆಕಾಶಗಂಗೆಯಿಂದಾಚೆ ಬಹುದೂರದಲ್ಲಿ ಅನೇಕ ಗೆಲಕ್ಸಿಗಳಿವೆ ಹಾಗೂ ಅವುಗಳನ್ನೊಳಗೊಂಡ ವಿಶ್ವ ವ್ಯಾಕೋಚಿಸುತ್ತಿದೆ ಎಂದು ಸಿದ್ಧಪಡಿಸಿದ ಅಮೆರಿಕನ್ ಖಗೋಲವಿಜ್ಞಾನಿ.

ಮಾರ್ಶ್‍ಫೀಲ್ಡ್, ಮಿಸೌರಿಯಲ್ಲಿ 1889 ನವೆಂಬರ್ 20ರಂದು ಜನಿಸಿದ. ಶಿಕಾಗೊನಲ್ಲಿ ಪ್ರೌಢಶಾಲಾ ಶಿಕ್ಷಣ. ಉತ್ತಮ ವಿದ್ಯಾರ್ಥಿ ಮತ್ತು ಕ್ರೀಡಾಪಟುವಾಗಿದ್ದ. ಶಿಕಾಗೊ ವಿಶ್ವವಿದ್ಯಾಲಯದಿಂದ ಗಣಿತ ಮತ್ತು ಖಗೋಲವಿಜ್ಞಾನಗಳಲ್ಲಿ ಬಿ.ಎಸ್ ಸ್ನಾತಕ ಪದವಿ ಗಳಿಸಿದ(1910). ರ್ಹೊಡ್ಸ್ ವಿದ್ಯಾರ್ಥಿವೇತನ ಪಡೆದು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರಾಧ್ಯಯನ, ಬಿ.ಎ ಪದವಿ ಪಡೆದ (1912). ಕೆಂಟಕಿಯಲ್ಲಿ ವಕೀಲ ವೃತ್ತಿ ನಡೆಸಿದ. ವೃತ್ತಿಯಲ್ಲಿ ತೃಪ್ತಿ ದೊರೆಯದ್ದರಿಂದ ಖಗೋಲ ವಿಜ್ಞಾನ ಅಧ್ಯಯಿಸಲು ನಿರ್ಧಾರ ಮಾಡಿದ(1914). ವಿದ್ಯಾರ್ಥಿಯಾಗಿ ಶಿಕಾಗೊ ವಿಶ್ವವಿದ್ಯಾಲಯ ಹಾಗೂ ವಿಸ್‍ಕಾನ್‍ಸಿನ್‍ನ ಯೆರ್ಕೀಸ್ ವೀಕ್ಷಣಾಲಯಕ್ಕೆ ಸೇರಿದ. ಖಗೋಲವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಗಳಿಸಿದ (1917). ಒಂದನೆಯ ಮಹಾಯುದ್ಧಾವಧಿಯಲ್ಲಿ ಮೊದಲು ಕ್ಯಾಪ್ಟನ್ ತದನಂತರ ಮೇಜರ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ. ಕ್ಯಾಲಿಫೋರ್ನಿಯ, ಪ್ಯಾಸಡೀನದಲ್ಲಿರುವ ಮೌಂಟ್ ವಿಲ್ಸನ್ ವೀಕ್ಷಣಾಲಯದ ಸಿಬ್ಬಂದಿ ವರ್ಗಕ್ಕೆ ಸೇರ್ಪಡೆಯಾದ (1919). ಈ ವೀಕ್ಷಣಾಲಯದ ಸೇವಾವಧಿಯಲ್ಲಿ (1919-42) ಅನೇಕ ಆವಿಷ್ಕಾರಗಳನ್ನು ಮಾಡಿದ್ದಲ್ಲದೆ ಅದರ ನಿರ್ದೇಶಕನೂ ಆದ. ನಾಝಿಗಳ ವಿರುದ್ಧದ ಹೋರಾಟದಲ್ಲಿ ಸೇವೆ ಸಲ್ಲಿಸಲೋಸುಗ ಎರಡನೆಯ ಮಹಾಯುದ್ಧಾವಧಿಯಲ್ಲಿ ಸೇನೆಗೆ ಸ್ವಇಚ್ಛೆಯಿಂದ ಸೇರ್ಪಡೆಗೊಂಡ (1942). ಸೈನಿಕನಾಗಿ ಸಲ್ಲಿಸಬಹುದಾದ ಸೇವೆಗಿಂತ ವಿಜ್ಞಾನಿಯಾಗಿ ದೇಶಕ್ಕೆ ತಾನು ಹೆಚ್ಚಿನ ಸೇವೆಸಲ್ಲಿಸಬಲ್ಲೆನೆಂದು ತಿಳಿದ. ನಾಗರಿಕರಿಗೆ ಸಲ್ಲಿಸಿದ ಅದ್ವಿತೀಯ ಸೇವೆಗಾಗಿ ಮೆಡಲ್ ಆಫ್ ಮೆರಿಟ್‍ನ ಗೌರವ ಪ್ರಾಪ್ತಿಯಾಯಿತು (1946). ಮೌಂಟ್ ವಿಲ್ಸನ್ ವೀಕ್ಷಣಾಲಯದ 254 ಸೆಂಮೀ ದೂರದರ್ಶಕದ ಬದಲಿಗೆ 508 ಸೆಂಮೀ ದೂರದರ್ಶಕವಿರುವ ಮೌಂಟ್ ಪ್ಯಾಲೊಮಾರ್ ವೀಕ್ಷಣಾಲಯ ಸ್ಥಾಪಿಸಿ ಅಲ್ಲಿ ಸಂಶೋಧನಾ ತಂಡದ ಉಸ್ತುವಾರಿಯ ಜವಾಬ್ದಾರಿ ಮತ್ತು ಆಕ್ಸ್‍ಫರ್ಡ್‍ನ ಕ್ವೀನ್ಸ್ ಕಾಲೇಜಿನ ಗೌರವ ಫೆಲೋ ಆಗಿ ಆಯ್ಕೆಯಾದ (1948). ಸೆರಿಬ್ರಲ್ ತ್ರಾಂಬೊಸಿಸ್‍ನಿಂದ ಕ್ಯಾಲಿಫೋರ್ನಿಯದ ಸಾನ್ ಮರೀನೊದಲ್ಲಿ 1953 ಸೆಪ್ಟೆಂಬರ್ 28ರಂದು ನಿಧನನಾದ.

ಖಗೋಲವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯುಂಟು ಮಾಡಿ ಮಹಾಬಾಜಣೆ ಸಿದ್ಧಾಂತಕ್ಕೆ ತಳಹದಿ ಹಾಕಿದ ಈತನ ಕೊಡುಗೆಗಳು: ಮೌಂಟ್ ವಿಲ್ಸನ್‍ನ ದೂರದರ್ಶಕದ ನೆರವಿನಿಂದ ಸಿಫೈಡ್ ಚಂಚಲತಾರೆಗಳನ್ನು ಅಧ್ಯಯಿಸಿ ಅವು ಆಕಾಶಗಂಗೆಯಿಂದಾಚೆ ಇವೆ ಎಂದು ಸಾಧಿಸುವುದರ (1923) ಮುಖೇನ ನಮ್ಮ ಗೆಲಕ್ಸಿಯಿಂದಾಚೆ ಅನೇಕ ಗೆಲಕ್ಸಿಗಳಿರುವುದನ್ನು ಸಾಬೀತು ಪಡಿಸಿದ್ದು; ಅಂತರ್ಗತ ದ್ರವ್ಯ, ದೂರ, ಆಕಾರ ಮತ್ತು ಉಜ್ಜ್ವಲತೆಯನ್ನಾಧರಿಸಿ ಗೆಲಕ್ಸಿಗಳನ್ನು ವರ್ಗೀಕರಿಸುವ ನೂತನ ಪದ್ಧತಿಯ ಉಪಜ್ಞೆ (1922, 26, 27, 36); ಗೆಲಕ್ಸಿಗಳು ಉತ್ಸರ್ಜಿಸುವ ಬೆಳಕಿನಲ್ಲಿ ಕೆಂಪು ಸರಿತವು (ರೆಡ್ ಶಿಫ್ಟ್) ಉಂಟಾಗುತ್ತಿರುವುದರ ವೀಕ್ಷಣೆ ಮತ್ತು ವಿಶ್ವ ವ್ಯಾಕೋಚಿಸುತ್ತಿದೆ ಎಂಬುದನ್ನು ಸಾಕ್ಷ್ಯಾಧಾರ ಸಹಿತ ಸಾಧಿಸಿ ಯಾವುದೇ ಎರಡು ಗೆಲಕ್ಸಿಗಳು ತಮ್ಮ ನಡುವಣ ಅಂತರಕ್ಕೆ ಅನುಪಾತೀಯವಾದ ಸ್ಥಿರ (ಹಬ್ಬಲ್ ಸ್ಥಿರ) ದರದಲ್ಲಿ ಪರಸ್ಪರ ದೂರ ಸರಿಯತ್ತವೆ ಎಂಬ ನಿಯಮದ ಆವಿಷ್ಕಾರ (1925, 26); ಸಾಂದ್ರತೆ, ವ್ಯಾಕೋಚನ ದರ ಮತ್ತು ವಿಶ್ವದ ಆಯುರ್ಮಾನಗಳ ನಡುವಣ ಸಂಬಂಧ ಸ್ಥಾಪಿಸುವ ಹಬ್ಬಲ್‍ನ ನಿಯಮದ ಆವಿಷ್ಕಾರ (1929); ವ್ಯೋಮದಲ್ಲಿ ಗೆಲಕ್ಸಿಗಳ ವಿತರಣೆ ಸಂಬಂಧಿತ ನಿಯಮದ ಆವಿಷ್ಕಾರ; ವಿಸರಿತ ನೀಹಾರಿಕೆಗಳ ರೋಹಿತಗಳ ಸ್ವರೂಪ ಮತ್ತು ಅವುಗಳ ವಿಕಿರಣನದ ಆಕರದ ಸಮಸ್ಯೆಯ ಪರಿಹಾರ (1922); ಇ ಗೆಲಕ್ಸಿಗಳ ಮೇಲ್ಮೈ ಉಜ್ಜ್ವಲತೆಯ ವೈಲಕ್ಷಣ್ಯಗಳನ್ನು ಅಳತೆ ಮಾಡಿದ್ದು (1930); ಒ31ರಲ್ಲಿ ಗೋಳೀಯ ಗುಚ್ಛಗಳನ್ನು ಗುರುತಿಸಿದ್ದು (1932); ನಿರ್ದಿಷ್ಟ ಗೆಲಕ್ಸಿಗಳ ಸುರುಳಿ ಕೈಗಳ ಆವರ್ತದ ಸಮಸ್ಯೆಯ ಅಧ್ಯಯನ (1935, 41, 43); ಸ್ಕಲ್‍ಪ್ಟರ್ ಮತ್ತು ಫಾರ್‍ನ್ಯಾಕ್ಸ್ ಕುಬ್ಜ ಇ ಗೆಲಕ್ಸಿಗಳ ಸ್ವರೂಪದ ಆವಿಷ್ಕಾರ (1939).

ಆಲ್ಬರ್ಟ್ ಐನ್‍ಸ್ಟೈನ್ ತಾನು ರೂಪಿಸಿದ್ದ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ವಿಶ್ವಕ್ಕೆ ಅನ್ವಯಿಸಿ 1917ರಲ್ಲಿಯೇ ಹಬ್ಬಲ್‍ನ ಆವಿಷ್ಕಾರವನ್ನು ಪೂರ್ವಭಾವಿಯಾಗಿಯೇ ಊಹಿಸಬಹುದಿತ್ತು. ಗುರುತ್ವದಿಂದಾಗಿ ಆಕಾಶ ಡೊಂಕಾಗಿದೆ ಎಂಬ ಅವನ ಸಿದ್ಧಾಂತ ವಿಶ್ವ ಸ್ತಿಮಿತ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ ಎಂದು ಸೂಚಿಸಿತ್ತು. ಇದು ಅಸಾಧ್ಯ ಎಂದು ನಂಬಿದ್ದ ಐನ್‍ಸ್ಟೈನ್ ಈ ಸಮಸ್ಯೆಯನ್ನು ಪರಿಹರಿಸಲೋಸುಗ ತನ್ನ ಸಿದ್ಧಾಂತವನ್ನೇ ಬದಲಿಸಿದ. ಹಬ್ಬಲ್‍ನ ಆವಿಷ್ಕಾರಗಳು ಪ್ರಕಟವಾದಾಗ ತನ್ನ ಸಿದ್ಧಾಂತವನ್ನು ಬದಲಿಸಿದ್ದು ನನ್ನ ಜೀವನದಲ್ಲಿ ಮಾಡಿದ ಹೆದ್ದಪ್ಪು ಎಂದು ಉದ್ಗರಿಸಿ ಹಬ್ಬಲ್‍ನನ್ನು ಭೇಟಿ ಮಾಡಿ (1931) ಅವನಿಗೆ ಧನ್ಯವಾದಗಳನ್ನು ಅರ್ಪಿಸಿದನಂತೆ.

ಖಗೋಲವಿಜ್ಞಾನದ ವಿಕಾಸಕ್ಕೆ ಅಸದೃಶ ಕೊಡುಗೆಗಳನ್ನಿತ್ತ 20ನೆಯ ಶತಮಾನದ ಈ ವಿಜ್ಞಾನಿಗೆ 1990 ಏಪ್ರಿಲ್ 25ರಂದು ಬಾನಗಾಡಿ (ಸ್ಪೇಸ್ ಷಟಲ್) ಡಿಸ್ಕವರಿಯ ನೆರವಿನಿಂದ ಆಕಾಶದಲ್ಲಿ ಸ್ಥಾಪಿಸಿದ ಅತಿದೊಡ್ಡ ಮತ್ತು ಸಂಕೀರ್ಣವಾದ ಉಪಗ್ರಹದಲ್ಲಿರುವ ದೂರದರ್ಶಕಕ್ಕೆ ಹಬ್ಬಲ್ಸ್ ದೂರದರ್ಶಕ ಎಂದು ನಾಮಕರಣ ಮಾಡುವುದರ ಮೂಲಕ ಪ್ರಪಂಚ ಸಮುದಾಯ ಗೌರವ ಸಲ್ಲಿಸಿದೆ.

(ಎಸ್.ಎಚ್.ಬಿ.ಎಸ್.)