ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಬ್ಲ್‌ ದೂರದರ್ಶಕ

ಹಬ್ಲ್ ದೂರದರ್ಶಕ

ಹಬ್ಲ್ ದೂರದರ್ಶಕ - ಅಂಕೆಅಂಶಗಳು

  • ಉಡಾವಣೆ : ಏಪ್ರಿಲ್ 24, 1990 (ಸ್ಪೇಸ್ ಶೆಟ್ಲ್ ಡಿಸ್ಕವರಿಯಿಂದ)
  • ಕಾರ್ಯನಿರ್ವಹಣೆ : ಏಪ್ರಿಲ್ 25, 1990 ರಿಂದ
  • ಉದ್ದ : 43.5 ಅಡಿ (13.2 ಮೀ.)
  • ತೂಕ : 24,500 ಪೌಂಡ್ (11,110 ಕಿ.ಗ್ರಾಂ.)
  • ಗರಿಷ್ಠ ವ್ಯಾಸ : 14 ಅಡಿ (4.2 ಮೀ.)
  • ಕಕ್ಷೆ : 353 ಮೈಲಿ ಎತ್ತರದಲ್ಲಿ (569 ಕಿ.ಮೀ.)
  • ಬಾಗು : 28.5ಲಿ (ಸಮಭಾಜಕ ವೃತ್ತಕ್ಕೆ)
  • ಒಂದು ಸುತ್ತು ಮುಗಿಸಲು : 97 ಮಿನಿಟು
  • ವೇಗ : 17,500 ಮೈಲಿ ಗಂಟೆಗೆ (28,000 ಕಿ.ಮೀ. ಗಂಟೆಗೆ)
  • ಹಬ್ಲ್ : ಸೂರ್ಯನಿಗೆ ಸಮೀಪವಿರುವ ಬುಧಗ್ರಹವನ್ನು ವೀಕ್ಷಿಸಲಾರದು. ಅತಿನೀಲಕಿರಣಗಳಿಂದ-ಅವಕೆಂಪುಕಿರಣಗಳ ವ್ಯಾಪ್ತಿಯಲ್ಲಿ ದೃಷ್ಟಿಸಬಲ್ಲದು(1115-2500 ನ್ಯಾನೋಮೀಟರ್)
  • ಮೊದಲ ಬಿಂಬ : ತಾರಾಗುಚ್ಛ ಎನ್.ಜಿ.ಸಿ. 3532, ಮೇ 20, 1990.

ಪ್ರತಿವಾರ ಹಬ್ಲ್ ರವಾನೆಮಡುವ ಮಾಹಿತಿ 120 ಗಿಗಾಬೈಟ್. ಇದು 3,600 ಅಡಿ ದಪ್ಪದ ಪುಸ್ತಕದಲ್ಲಿ ಸಂಚಯಿಸಬಹುದಾದ ಮಾಹಿತಿಗೆ ಸಮ. ಈ ಮಾಹಿತಿಯನ್ನು ಕಾಂತೀಯ ದೃಕ್ ಅಡಕಮುದ್ರಿಯಲ್ಲಿ ಸಂಗ್ರಹಿಸಲಾಗುತ್ತದೆ.

ದೂರದರ್ಶಕಗಳನ್ನು ನೆಲದ ಮೇಲೆ ಸ್ಥಾಪಿಸಿ ಆಕಾಶದ ವಿದ್ಯಮಾನಗಳನ್ನು ವೀಕ್ಷಿಸುವಾಗ, ಭೂಮಿಯ ವಾತಾವರಣ ಅನೇಕ ತಡೆಗಳನ್ನು ಒಡ್ಡುತ್ತದೆ. ಕಾಣುವ ಬಿಂಬ ಅಸ್ಪಷ್ಟವಾಗುತ್ತದೆ. ನಕ್ಷತ್ರಗಳು ಮಿನುಗಿದಂತೆ ಕಾಣುವುದು ಕೂಡ ಭೂವಾತಾವರಣ ಅಸ್ಥಿರತೆಯ ವಿದ್ಯಮಾನವೇ. ಇವಕ್ಕೆಲ್ಲ ಪರಿಹಾರವೆಂದರೆ ಭೂವಾತಾವರಣವನ್ನು ದಾಟಿ ಆಕಾಶದಲ್ಲೇ ದೂರದರ್ಶಕವನ್ನು ತೇಲಿ ಬಿಡುವುದು. ಹಬ್ಲ್ ದೂರದರ್ಶಕ ಜನ್ಮ ತಳೆದದ್ದು ಒಂದು ವಿಶಿಷ್ಟ ಸಂದರ್ಭದಲ್ಲಿ.

1920ರ ದಶಕ. ಅಮೆರಿಕದ ಖಗೋಳ ವಿಜ್ಞಾನಿ ಎಡ್ವಿನ್ ಹಬ್ಲ್ (1889-1953) ಖಗೋಳ ವಿಜ್ಞಾದಲ್ಲೇ ಕ್ರಾಂತಿಕಾರಕ ಎನ್ನಬಹುದಾದ ಹೊಸ ಪರಿಕಲ್ಪನೆಯನ್ನು ಮುಂದಿಟ್ಟ. ಬ್ರಹ್ಮಾಂಡದ ಬಗ್ಗೆ ಅದು ಬರೀ ದೂಳಿನ ಮೋಡ ಎಂಬ ಕಲ್ಪನೆಗಳು ಆಗ ಇದ್ದವು. ಅದು ದೂಳಲ್ಲವೆಂದೂ ತಾರೆಗಳ ಗುಂಪೆಂದೂ ಕ್ಯಾಲಿಫೋರ್ನಿಯದ ವಿಲ್ಸನ್ ವೀಕ್ಷಣಾಲಯದಲ್ಲಿ ಎರಡೂವರೆ ಮೀಟರು ಉದ್ದದ ದೂರದರ್ಶಕದಲ್ಲಿ ಬ್ರಹ್ಮಾಂಡಗಳತ್ತ ಕಣ್ಣಿಟ್ಟು ಹಬ್ಲ್ ಹೇಳಿದಾಗ ಅದು ಖಗೋಳ ವಿಜ್ಞಾನದ ಹೊಸ ಅಧ್ಯಾಯವನ್ನು ತೆರೆಯಿತು. ಆತ ಓದಿದ್ದು ಷಿಕಾಗೋ ಮತ್ತು ಇಂಗ್ಲೆಂಡಿನಲ್ಲಿ ಕಾನೂನು ಶಾಸ್ತ್ರ. ಬೆಂಬತ್ತಿದ್ದು ವಿಶ್ವ ಸೃಷ್ಟಿಯ ಕಾನೂನುಗಳನ್ನು! ಆತ ಅಷ್ಟಕ್ಕೇ ನಿಲ್ಲಿಸಿದ್ದರೆ ಸಂಶೋಧನೆಯಲ್ಲಿ ಅದೂ ಒಂದು ಅಧ್ಯಾಯವಾಗಷ್ಟೇ ಉಳಿಯುತ್ತಿತ್ತೋ ಏನೋ. ಬ್ರಹ್ಮಾಂಡ ಮಸುಕು ಮಸುಕಾಗಿದ್ದರೆ ಅದು ದೂರ ದೂರ ಸರಿಯುತ್ತಿದೆ ಎಂದು ವ್ಯಾಖ್ಯಾನಿಸಿದ. ಬಲೂನಿನ ಮೇಲೆ ಚುಕ್ಕಿ ಇಟ್ಟು ಬಲೂನನ್ನು ಊದುತ್ತ ಹೋದರೆ, ಅದು ಹಿಗ್ಗುತ್ತ ಹಿಗ್ಗುತ್ತ ಅದರ ಮೇಲಿನ ಚುಕ್ಕೆಗಳು ಒಂದಕ್ಕೊಂದು ದೂರ ಸರಿಯುವಂತೆ ಇಡೀ ವಿಶ್ವವೇ ವ್ಯಾಕೋಚಿಸುತ್ತದೆ ಎಂದು ಹೇಳಿದ. 1923ರ ಸುಮಾರಿನಲ್ಲಿ ಜರ್ಮನಿಯ ಹರ್ಮನ್ ಒಬೆರ್ಥ್ ಎಂಬ ಖಗೋಳ ವಿಜ್ಞಾನಿ `ಗ್ರಹಗಳ ತಾಣಕ್ಕೆ ರಾಕೆಟ್‍ಗಳು ಎಂಬ ಪುಸ್ತಕ ಪ್ರಕಟಿಸಿ, ಅದರಲ್ಲಿ ದೂರದರ್ಶಕವನ್ನು ಅಳವಡಿಸಿದ ವ್ಯೋಮನಿಲ್ದಾಣಗಳ ಬಗ್ಗೆ ಕಾಲ್ಪನಿಕ ಚಿತ್ರಣವನ್ನು ನೀಡಿದ್ದ. ಕ್ಷುದ್ರ ಗ್ರಹಗಳನ್ನೇ ವ್ಯೋಮನಿಲ್ದಾಣವಾಗಿ ಬಳಸಿ, ಅದರ ಮೇಲೆ ದೂರದರ್ಶಕವನ್ನು ಸ್ಥಾಪಿಸಬಹುದೆಂಬ ಸೂಚನೆಯನ್ನೂ ಕೊಟ್ಟಿದ್ದ. ನಾಸಾ ಸಂಸ್ಥೆಗೆ ಈ ಪರಿಕಲ್ಪನೆಯ ಬಗ್ಗೆ ಸ್ಪಷ್ಟ ತಿಳಿವಿತ್ತು. ಆದರೆ 1970ರವರೆಗೂ ಆ ಕಲ್ಪನೆಯನ್ನು ಸಾಕಾರಗೊಳಿಸಲಾಗಲಿಲ್ಲ. ಆದರೂ ಎರಡು ಪುಟ್ಟ ದೂರದರ್ಶಕಗಳನ್ನು ತೇಲಿಬಿಟ್ಟು ಈ ಪರಿಕಲ್ಪನೆಯ ಸಾಧ್ಯಾಸಾಧ್ಯತೆಯನ್ನು ನಾಸಾ ಸಂಸ್ಥೆ ಪರೀಕ್ಷಿಸಿತ್ತು. ಹಬ್ಲ್ ದೂರದರ್ಶಕ ನಿರ್ಮಾಣಕ್ಕೆ ಇದೇ ಬೀಜವಾಯಿತು. ದಶಕಗಳ ಕಾಲ ಸಿದ್ಧಪಡಿಸುತ್ತ, ಸಂಕಲನ, ವ್ಯವಕಲನ ಮಾಡುತ್ತ ಕೊನೆಗೂ 1979ರಲ್ಲಿ ಹಬ್ಲ್ ದೂರದರ್ಶಕ ಹೇಗಿರಬೇಕೆಂಬ ಬಗ್ಗೆ ನಾಸಾ ಸಂಸ್ಥೆ ಸ್ಪಷ್ಟ ರೂಪುರೇಖೆ ತಯಾರಿಸಿತ್ತು. 2.4 ಮೀಟರ್ ಉದ್ದದ ಪ್ರಾಥಮಿಕ ಕನ್ನಡಿಗಳನ್ನು ಬಳಸಿ 1986ರಲ್ಲಿ ಅದನ್ನು ಆಗಸಕ್ಕೇರಿಸಬೇಕೆಂಬ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ಅಹಿತಕರ ಘಟನೆ ಎದುರಾಯಿತು. 1986ರ ಜನವರಿ 28ರಂದು ಛಾಲೆಂಜರ್ ನೌಕೆ ಗಗನದಲ್ಲಿ ಸ್ಫೋಟಿಸಿ ಏಳು ಮಂದಿ ಗಗನಯಾತ್ರಿಗಳನ್ನು ಬೂದಿಮಾಡಿದಾಗ, ಅಮೆರಿಕ ಕೆಲವು ವರ್ಷಗಳು ಅಧೀರವಾಗಿದ್ದೂ ನಿಜ. ಹಬ್ಲ್ ದೂರದರ್ಶಕವನ್ನು ಮೇಲೇರಿಸುವ ಯೋಜನೆಗೆ ಇದು ಅಡ್ಡಿಬಂತು. ಎಲ್ಲ ವಿಘ್ನಗಳನ್ನೂ ದಾಟಿ ಏಪ್ರಿಲ್ 24, 1990ರಂದು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ `ದಿವ್ಯನೇತ್ರ ಡಿಸ್ಕವರಿ ನೌಕೆಯಲ್ಲಿ ಕೂತು ಕಕ್ಷೆಗೆ ತಲಪಿದ ಮರುಘಳಿಗೆಯೇ ಬಾಗಿಲು ತೆಗೆದು ದೂರದರ್ಶಕದ ಕಣ್ಣು ವಿಶ್ವ ವಿದ್ಯಮಾನಗಳತ್ತ ನೆಟ್ಟಿತು. ಅನಂತರ ಅದು ಕಂಡದ್ದೆಲ್ಲ ಇತಿಹಾಸ ಸೃಷ್ಟಿಸುತ್ತಲೇ ಬಂತು. ಅದರ ಒಂದೊಂದು ನೋಟಗಳೂ ಖಗೋಳ ಚರಿತ್ರೆಗೆ ಹೊಸ ಅಧ್ಯಾಯಗಳನ್ನು ಸೇರಿಸುತ್ತ ಹೋದವು.

ನಮ್ಮ ಶಾಲಾ ಮಕ್ಕಳನ್ನು ಕರೆದೊಯ್ಯುವ ಮಿನಿ ಬಸ್ ಗಾತ್ರದ ದೂರದರ್ಶಕ ಇದು; ಟ್ರಾಕ್ಟರಿನ ಟ್ರೇಲರ್‍ನಲ್ಲಿ ತುಂಬಬಹುದಾದಷ್ಟು ಇದರ ತೂಕ 11,100 ಕಿ.ಗ್ರಾಂ. ನೆಟ್ಟಗೆ ನಿಲ್ಲಿಸಿದರೆ ಬಾಹುಬಲಿಯ ಎದೆಮಟ್ಟಕ್ಕೆ ಬರಬಹುದು(43.5 ಅಡಿ). ಅದರ ಎರಡೂ ಬದಿಯ ಸೌರ ಫಲಕಗಳನ್ನು ಲೆಕ್ಕ ಹಾಕಿದರೆ ಅದರ ಒಟ್ಟು ಅಗಲ 4.2 ಮೀಟರ್. ನೆಲದ ಮೇಲೆ ಸ್ಥಾಪಿಸಿದ ದೂರದರ್ಶಕಕ್ಕೂ ಇದಕ್ಕೂ ರಚನೆಯ ದೃಷ್ಟಿಯಿಂದ ಅಂಥ ವ್ಯಾತ್ಯಾಸವೇನಿಲ್ಲ. ಇದೂ ಕೂಡ ಬೆಳಕನ್ನು ಪ್ರತಿಫಲಿಸಲು, ಬಿಂಬಗಳನ್ನು ಪಡೆಯಲು ದರ್ಪಣಗಳನ್ನು ಬಳಸುತ್ತದೆ. ಇದರ ಐದು ಉಪಕರಣಗಳ ಪೈಕಿ ಎರಡು ಉತ್ಕøಷ್ಟ ದರ್ಜೆಯ ಕ್ಯಾಮೆರಗಳಿವೆ. ಮಸುಕಾಗಿ ಕಾಣುವ ಆಕಾಶಕಾಯಗಳ ವಿವರಗಳನ್ನು ಗ್ರಹಿಸಲು ಒಂದು ಕ್ಯಾಮೆರ, ದೊಡ್ಡ ಕಾಯಗಳನ್ನು ಅಧ್ಯಯನ ಮಾಡಲೆಂದು ಇನ್ನೊಂದು, ಎರಡು ರೋಹಿತ ಮಾಪಕಗಳಿವೆ. ಇವು ಆಕಾಶಕಾಯಗಳ ರಾಸಾಯನಿಕ ಸಂಯೋಜನೆಗಳನ್ನು ವಿಶ್ಲೇಷಿಸುತ್ತವೆ. ಇನ್ನೊಂದು ಸಾಧನ ಅತಿ ವೇಗದ ಫೋಟೋಮೀಟರ್. ಆಕಾಶಕಾಯಗಳ ಉಜ್ವಲತೆಯನ್ನು ಇದು ಅಳೆಯುತ್ತದೆ. ಪ್ರತಿ 97 ನಿಮಿಷಗಳಿಗೊಮ್ಮೆ ಭೂಪ್ರದಕ್ಷಿಣೆಯನ್ನು ಮುಗಿಸುವ ಇದು ನಿಯಂತ್ರಣ ಕಚೇರಿಯ ಜೊತೆ ನೇರ ಸಂಪರ್ಕಕ್ಕೆ ಬರುವುದು ಕೇವಲ 20 ನಿಮಿಷಗಳ ಕಾಲ ಅಷ್ಟೇ. ನಿರಂತರ ಮಾಹಿತಿಗಳನ್ನು ಅಲ್ಲಿಗೆ ಪಡೆದುಕೊಳ್ಳಬೇಕೆಂದರೆ ದೂರದರ್ಶಕದೊಡನೆ ನಿರಂತರ ಸಂಪರ್ಕವೂ ಬೇಕು. ಅದಕ್ಕಾಗಿ ಏನು ಮಾಡಿದ್ದಾರೆಂದರೆ ಭೂಸ್ಥಿರಕಕ್ಷೆಯಲ್ಲಿ 35,400 ಕಿ.ಮೀ. ಎತ್ತರದಲ್ಲಿ ಎರಡು ಉಪಗ್ರಹಗಳನ್ನು ಇರಿಸಿ, ಹಬ್ಲ್ ಮಾಹಿತಿಗಳನ್ನು ಅಲ್ಲಿಗೆ ರವಾನಿಸುವಂತೆ ವ್ಯವಸ್ಥೆ ಮಾಡಿದ್ದಾರೆ. ಆ ಉಪಗ್ರಹಗಳು ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್‍ನ ಮೂಲಕ ಮಾಹಿತಿ ಗ್ರಹಣ ಕೇಂದ್ರಕ್ಕೆ ರವಾನಿಸುತ್ತದೆ. ಅಲ್ಲಿಂದ ಸಂಪರ್ಕ ಉಪಗ್ರಹಗಳ ನೆರವಿನಿಂದ ವಾಷಿಂಗ್‍ಟನ್‍ನ ಗೊಡಾರ್ಡ್ ಕೇಂದ್ರಕ್ಕೆ ಮರುಪ್ರಸಾರ ಮಾಡಲಾಗುತ್ತದೆ. ಅಲ್ಲಿ ಪರಿಷ್ಕರಿಸಿದ ಮಾಹಿತಿಗಳು ಇಲ್ಲಿಂದ ಬಾಲ್ಟಿಮೋರ್‍ನಲ್ಲಿರುವ ವಿಜ್ಞಾನ ಸಂಸ್ಥೆಗೆ ಬರುತ್ತವೆ.

ಹಬ್ಲ್‍ನ ಎಲ್ಲ ಸಾಧನಗಳೂ ಕಾರ್ಯಶೀಲವಾಗಿದ್ದಾಗ ಕಳಿಸುವ ಬಿಂಬಗಳು ಅವೆಷ್ಟು ನಿಚ್ಚಳವಾಗಿರುತ್ತವೆಂದರೆ, ದೆಹಲಿಯ ಪಾರ್ಲಿಮೆಂಟರಿ ಭವನದ ಮೇಲೆ ಕತ್ತಲಲ್ಲಿ ಎರಡು ಮಿಂಚುಹುಳುಗಳು ಬಂದು ಕೂತು ಅವುಗಳ ಮದ್ಯೆ ಹತ್ತಡಿ ಜಾಗ ಬಿಟ್ಟಿದ್ದರೆ ಅದನ್ನೂ ಕೂಡ ಹಬ್ಲ್ ವರದಿ ಮಾಡಬಲ್ಲದು. ಹಬ್ಲ್‍ನ ಪ್ರಾರಂಭೋತ್ಸವವಾದ್ದು ಮೇ 20, 1990ರಲ್ಲಿ. ಇದನ್ನು ಸಾಮನ್ಯವಾಗಿ `ಮೊದಲ ಬೆಳಕು ಎಂದು ಹೇಳುವುದು ರೂಢಿ. ಸಹಸ್ರಾರು ಮಾಧ್ಯಮ ಪ್ರತಿನಿಧಿಗಳು ಟಿ.ವಿ. ಪರದೆಯನ್ನು ನೋಡಿ ಪುಳಕಿತಗೊಂಡಿದ್ದರು. ಮೊದಲ ದಿವ್ಯದರ್ಶನವಾದದ್ದು ಹಬ್ಲ್ ಬಿಂಬಿಸಿದ ಓ.ಉ.ಅ-3532- ತಾರಾಗುಚ್ಛ ಪರದೆಯ ಮೇಲೆ ಮೂಡಿದಾಗ, (ಅನಿಲ ಮೋಡ, ಬ್ರಹ್ಮಾಂಡ, ತಾರಾಗುಚ್ಛ ಮುಂತಾದವನ್ನು ಪಟ್ಟಿ ಮಾಡುವಾಗ ಅವುಗಳಿಗೆ ನಿರ್ದಿಷ್ಟ ಸಂಖ್ಯೆಗಳನ್ನು ನೀಡುವ ಪರಿಪಾಠವಿದೆ. 1880ರ ದಶಕದಲ್ಲಿ ಜಾನ್ ಡ್ರೇನ್ ಎಂಬ ಖಗೋಳ ವಿಜ್ಞಾನಿ ಈ ಪದ್ಧತಿಯನ್ನು ಇನ್ನಷ್ಟು ಸುಧಾರಿಸಿ ಎನ್.ಜಿ.ಸಿ. ಎಂದರೆ ನ್ಯೂ ಜನರಲ್ ಕ್ಯಾಟಲಾಗ್ ಎಂದು ಪಟ್ಟಿ ಮಾಡಿದ. 3532 ಎಂಬುದು ಹೀಗೆ ಪಟ್ಟಿಮಾಡಿದ ಒಂದು ತಾರಾಗುಚ್ಛ.) ದಕ್ಷಿಣಾಕಾಶದಲ್ಲಿರುವ ದಕ್ಷಿಣ ಶಿಲುಬೆಯ(ಅಖUಘಿ) ಬಳಿ ಇದರ ನೆಲೆ. ಹಬ್ಲ್ ಇದರ ಬಿಂಬವನ್ನು ರವಾನಿಸಿ ಎಲ್ಲರಿಗೂ ಉದ್ವೇಗಮೂಡಿಸಿತ್ತು. ಆದರೆ ಸದ್ದಿಲ್ಲದೆ ಪರದೆಯ ಹಿಂದೆ ಸರಿದ ಖಗೋಳ ವಿಜ್ಞಾನಿಗಳು ತುರ್ತುಸಭೆ ಸೇರಿದ್ದರು. ಹಬ್ಲ್‍ಗೆ ಬಳಸಿದ್ದ ಪ್ರಧಾನ ಕನ್ನಡಿಯ ಆಕಾರದಲ್ಲಿ ವ್ಯತ್ಯಯವಾಗಿತ್ತು. ಕನ್ನಡಿಯನ್ನು ಉಜ್ಜುವಾಗ ಅದು ರೂಪಗೆಟ್ಟಿತ್ತು. ಹೇಗೋ ಇದು ಮಾಧ್ಯಮಗಳ ಕಿವಿಗೂ ಬಿದ್ದು `ಒಂದೂವರೆ ಬಿಲಿಯನ್ ಬ್ಲಂಡರ್ ಎಂದು ಬಣ್ಣಿಸಿದ್ದವು. ಕನ್ನಡಿಯಲ್ಲಿ ಏನು ಲೋಪವಾಗುತ್ತೆಂದರೆ ಅದರ ಕೇಂದ್ರ ಭಾಗದಿಂದ ಪ್ರತಿಫಲನವಾಗುತ್ತಿದ್ದ ಬೆಳಕಿನ ಕಿರಣಗಳು ಬೇರೆ ಕೋನದಲ್ಲಿ ನಾಭಿಗೊಳ್ಳುತ್ತಿದ್ದವು. ಹೀಗಾಗಿ ಅದರಿಂದ ಪಡೆಯುತ್ತಿದ್ದ ಬಿಂಬ ಸ್ಪಷ್ಟವಾಗಿರುತ್ತಿರಲಿಲ್ಲ. ಹಬ್ಲ್‍ಗೆ ಮೆಳ್ಳೆಗಣ್ಣಾಗಿತ್ತು. ಇದನ್ನು ಸರಿಪಡಿಸಲು ಎಂಥೆಂಥವೋ ಸಲಹೆಗಳು ಬಂದವು. ಹಬ್ಲ್ ದೂರದರ್ಶಕವನ್ನು ಕೆಳಗಿಳಿಸಿ ದುರಸ್ಥಿ ಮಾಡಿ ಮತ್ತೆ ಮೇಲೇರಿಸಬೇಕೆಂದು ಒಂದು ತಂಡ ವಾದಿಸಿತು. ದುರಸ್ಥಿಗಾಗಿ ಒಂದು ನೌಕೆಯನ್ನೇ ಕಳಿಸಬಾರದೇಕೆ? ಎಂಬಂಥ ಸಲಹೆಗಳೂ ಬಂದವು. ಆದರೆ ಅದು ಒಂದೆರಡು ತಾಸಿನ ಕೆಲಸವೂ ಅಲ್ಲ, ತಂತ್ರಜ್ಞಾನದ ಜೊತೆಗೆ ಹಲವು ಕೋಟಿ ಡಾಲರ್‍ಗಳ ವ್ಯಯವೂ ಆಗುತ್ತಿತ್ತು. ಶೂನ್ಯ ಗುರುತ್ವದಲ್ಲಿ ತೇಲಾಡುತ್ತ ಅತಿ ಹೆಚ್ಚಿನ ಸಮಯ ವಿನಿಯೋಗ ಮಾಡುವ ಅನಿವಾರ್ಯತೆಯೇ ಮುಂದಿದ್ದ ಪರಿಹಾರ. ರಸ್ತೆಯಲ್ಲಿ ಕೆಟ್ಟು ನಿಂತ ಕಾರನ್ನು ರಿಪೇರಿ ಮಾಡಲು ಮೆಕಾನಿಕ್ ಕಳಿಸಿದಂತಲ್ಲ. ಬಾಹ್ಯಾಕಾಶದಲ್ಲಿ ತೂಕರಹಿತ ಸ್ಥಿತಿಯಲ್ಲಿ ಇಂಥ ನಾಜೂಕು ಕೆಲಸವನ್ನು ಮಾಡಬೇಕಾಗುತ್ತದೆ. ಒಂದು ವರ್ಷಕಾಲ ದೊಡ್ಡ ಈಜುಕೊಳದಲ್ಲಿ ಆಕಾಶದ ಸ್ಥಿತಿಯನ್ನೇ ಬಿಂಬಿಸುವಂತೆ ಶೂನ್ಯ ಗುರುತ್ವವನ್ನು ಸೃಷ್ಟಿಸಿ, ಏನೆಲ್ಲ ತಾಲೀಮು ನಡೆಸಿ ವೃತ್ತಿಪರ ಈಜುಗಾರರನ್ನು ಪಹರೆ ನಿಲ್ಲಿಸಿ ತರಪೇತು ಕೊಡಿಸಬೇಕಾಗಿತ್ತು. ಅಂತೂ 1993ರ ಡಿಸೆಂಬರ್ 2ರಂದು 11 ದಿನದ ರಿಪೇರಿಗೆಂದು ಏಳು ಖೇಚರರು ಎಂಡೆವರ್ ವ್ಯೋಮನೌಕೆಯಲ್ಲಿ ಹಬ್ಲ್ ರಿಪೇರಿಗೆ ತೆರಳಿದರು. ಹಬ್ಲ್‍ನ ಕಣ್ಣು ಮೊದಲ ಸ್ಥಿತಿಗೆ ಬಂತು. ಈಗ ಅದರ ದೃಷ್ಟಿ ಇನ್ನೂ ಚುರುಕಾಗಿತ್ತು. 21ನೇ ಶತಮಾನದ ವಿಜ್ಞಾನವನ್ನು ಅಧ್ಯಯನ ಮಾಡಲು ಹಬ್ಲ್ ನಿರಂತರ ಅವಕಾಶ ಕಲ್ಪಿಸಿದೆ ಎಂಬ ಪ್ರಶಂಸೆಗೂ ಪಾತ್ರವಾಯಿತು. ಅದು ತೆಗೆದ ಬ್ರಹ್ಮಾಂಡದ, ಅನಿಲ ಮೋಡಗಳ ಚಿತ್ರಗಳನ್ನು ಅನೇಕ ಗೋಷ್ಠಿಯಲ್ಲಿ ಉಡುಗೊರೆಯಾಗಿಯೂ ಹಂಚಲಾಯಿತು.

1990ರಲ್ಲಿ ಅದು ಕಕ್ಷೆ ಸೇರಿದಾಗಿನಿಂದ ಈವರೆಗೆ 3,30,000 ಪ್ರತ್ಯೇಕ ಅವಲೋಕನಗಳನ್ನು ಧರೆಗೆ ಕಳುಹಿಸಿಕೊಟ್ಟಿದೆ. ಬ್ರಹ್ಮಾಂಡಗಳನ್ನು ಕುರಿತಂತೆ 25,000 ಗುರಿಗಳತ್ತ ತನ್ನ ದಿವ್ಯ ದೃಷ್ಟಿಯನ್ನು ಹರಿಸಿ, ನಿರಂತರವಾಗಿ ವರದಿ ಮಾಡುತ್ತಲೇ ಬಂದಿದೆ. ಈವರೆಗೆ 7.3 ಟಿಟ್ರಾ ಬೈಟ್‍ಗಳಷ್ಟು ಮಾಹಿತಿಗಳನ್ನು ಅದು ಸಂಗ್ರಹಿಸಿಕೊಟ್ಟಿದೆ. ಈ ಮಾಹಿತಿಯನ್ನು 10 ವರ್ಷಗಳ ಕಾಲ ನಿರಂತರವಾಗಿ ಪ್ರತಿದಿನ ಪಿ.ಸಿ.ಗಳಲ್ಲಿ ತುಂಬಬಹುದು. ಹಬ್ಲ್ ದೂರದರ್ಶಕ ಕಳಿಸಿರುವ ಮಾಹಿತಿ ಆಧರಿಸಿ 2,663 ಸಂಶೋಧನಾ ಲೇಖನಗಳನ್ನು ವಿಜ್ಞಾನಿಗಳು ಬರೆದಿದ್ದಾರೆ. ಪ್ರತಿ 97 ನಿಮಿಷಕ್ಕೊಮ್ಮೆ ಭೂಮಿಯನ್ನು ಒಂದು ಬಾರಿ ಸುತ್ತುತ್ತಿರುವ ಈ ದೂರದರ್ಶಕ ಈಗಾಗಲೇ 1.489 ಶತಕೋಟಿ ಮೈಲಿ ಪ್ರಯಾಣ ಮಾಡಿದೆ. ಇಷ್ಟು ದೂರವನ್ನು ಭೂಮಿಯಿಂದ ಕ್ರಮಿಸಿದ್ದರೆ ಯುರೇನಸ್ ಗ್ರಹವನ್ನೇ ತಲಪಬಹುದಾಗಿತ್ತು. ಈ ದೂರದರ್ಶಕದ ಆಯುಷ್ಯ ವೃದ್ಧಿಸಲು, ಅಶಕ್ತ ಸಾಧನಗಳನ್ನು ರಿಪೇರಿ ಮಾಡಲೆಂದೇ ಸೇವಾ ನೌಕೆಯಲ್ಲಿ ಅಲ್ಲಿಗೆ ಹೋಗಿ ಖಗೋಳ ವಿಜ್ಞಾನಿಗಳು 93 ಗಂಟೆ ಅದಕ್ಕಾಗಿ ವಿನಿಯೋಗಿಸಿದ್ದಾರೆ.

ಒಂದೂವರೆ ಶತಕೋಟಿ ಡಾಲರ್ ವೆಚ್ಚದಲ್ಲಿ ಗಗನಕ್ಕೇರಿ ಅಷ್ಟೇ ಕೋಟಿ ಮೈಲಿ ದೂರ ಕ್ರಮಿಸಿ ಕಳೆದ ಹದಿಮೂರು ಈತನಕ ಹಬ್ಲ್ ಕಂಡಿರುವ ದೃಶ್ಯಾವಳಿಗಳನ್ನು ಪಟ್ಟಿಮಾಡುತ್ತ ಹೊದರೆ ಹಲವು ನೂರು ಮಂದಿಗೆ ಡಾಕ್ಟರೇಟ್ ದೊರೆಯುತ್ತದೋ ಏನೋ. ಅದರ ಸಾಧನೆಗೆ ಆಕಾಶವೇ ಮಿತಿ. ಅದು ತಾರೆಗಳ ಪ್ರಸೂತಿ ಗೃಹಗಳನ್ನು ನೋಡಿದೆ; ಸುರುಳಿ ಬ್ರಹ್ಮಾಂಡಗಳತ್ತ ದೃಷ್ಟಿ ಚೆಲ್ಲಿದೆ. ಧೂಮಕೇತುಗಳ ಹೊರ ಒಳಗುಗಳನ್ನು ಬಿಂಬಿಸಿದೆ. ನಕ್ಷತ್ರಗಳು ರೂಪುಗೊಳ್ಳುವುದೇ ಸುರುಳಿ ಬ್ರಹ್ಮಾಂಡಗಳ ಬಾಹುಗಳಲ್ಲಿ. ಎಂದೇ ಇಂಥ ಬಾಹುಗಳು ನೀಲಿಯಾಗಿ ಕಾಣುತ್ತವೆ. ಅವು ಪ್ರಜ್ವಲಿಸುವುದೂ ನಿಜ. ಮುಂದೆ ಇವೇ ಬೃಹನ್ನಕ್ಷತ್ರಗಳಾಗಿ ವಿಕಾಸ ತೋರುತ್ತ, ಅಂತಿಮ ಸ್ಥಿತಿ ತಲಪುವ ಮುನ್ನ ಸೂಪರ್‍ನೋವಾಗಳಾಗಿ ಸ್ಫೋಟಿಸುವುದರಿಂದ ಅವು ಇಡೀ ಬ್ರಹ್ಮಾಂಡವನ್ನೇ ಬೆಳಗುವ ಕ್ರಿಯೆಗೆ ತೊಡಗುವುದಿಲ್ಲ. ಹಬ್ಲ್ ದೂರದರ್ಶಕ ಭೂಮಿಯಿಂದ 27 ಲಕ್ಷ ಜ್ಯೋತಿರ್ವರ್ಷ ದೂರದಲ್ಲಿರುವ ಒ-33 ಎಂಬ ಸುರುಳಿ ಬ್ರಹ್ಮಾಂಡದ ಒಂದು ಭಾಗದಲ್ಲಿ ಹೊಸತಾಗಿ ಹುಟ್ಟಿದ 200 ನಕ್ಷತ್ರಗಳನ್ನು ಗುರುತಿಸಿದೆ. ಅದನ್ನು ತಾರೆಯ ತೊಟ್ಟಿಲು ಎನ್ನುತ್ತಾರೆ. ಈ ತಾರೆಗಳು ಹೊಮ್ಮಿಸುವ ಅತಿನೇರಿಳೆ ಕಿರಣಗಳು ಸುತ್ತಲಿನ ಅನಿಲವನ್ನು ಪ್ರಜ್ವಲಿಸುವುದನ್ನು ಹಬ್ಲ್ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ನಕ್ಷತ್ರಗಳ ವಿಕಾಸ ಅಧ್ಯಯನ ಮಾಡಲು ಹಬ್ಲ್‍ನ ಈ ವಿವರಗಳು ಅತ್ಯಮೂಲ್ಯವೆಂದು ಪರಿಗಣಿತವಾಗಿದೆ.

ಯುರೇನಸ್ ಗ್ರಹಕ್ಕೆ ಎಷ್ಟು ಉಪಗ್ರಹಗಳಿವೆ? ಯಾವುದೇ ಖಗೋಳ ವಿಜ್ಞಾನದ ಪಠ್ಯ ತೆಗೆದರೂ ಖಚಿತ ಉತ್ತರ ಸಿಕ್ಕುತ್ತದೆ ನಿಜ. ಅಂಥ ಪಠ್ಯ ಕೃತಿಗಳನ್ನು ರಚಿಸಿದ ಮೇಲೂ ಯುರೇನಸ್ ಗ್ರಹದ ಇನ್ನಷ್ಟು ಉಪಗ್ರಹಗಳು ಪತ್ತೆಯಾಗಿರಬಹುದು. ಹಬ್ಲ್ ಕೂಡ ಯುರೇನಸ್‍ನ ಎರಡು ಉಪಗ್ರಹಗಳನ್ನು ಪತ್ತೆಮಾಡಿದೆ. ಇವುಗಳ ವ್ಯಾಸ 12 ರಿಂದ 16 ಕಿಲೋಮೀಟರ್. 1986ರಲ್ಲಿ ವಾಯೇಜರ್ ನೌಕೆ ಗುರು, ಶನಿ ಗ್ರಹಗಳನ್ನು ಹಾಯುವ ಮಾರ್ಗದಲ್ಲಿ ಶನಿಯ ಉಂಗುರಗಳನ್ನು, ಗುರುವಿನ ಹತ್ತು ಮಂದಿ ಉಪಗ್ರಹಗಳನ್ನು ಪತ್ತೆ ಹಚ್ಚಿತ್ತು. ಆದರೆ ಯುರೇನಸ್‍ನ ಈ ಉಪಗ್ರಹಗಳು ಹೇಗೋ ವಾಯೇಜರ್ ಕಣ್ಣಿನಿಂದ ಪಾರಾಗಿದ್ದವು. ಹಬ್ಲ್ ಇತ್ತೀಚೆಗಷ್ಟೇ ಆ ಎರಡು ಉಪಗ್ರಹಗಳ ಚಿತ್ರಗಳನ್ನು ಸ್ಪಷ್ಟವಾಗಿ ಬಿಂಬಿಸಿ ಕಳಿಸಿದೆ; ಈಗ ಯುರೇನಸ್‍ನ ಉಪಗ್ರಹಗಳ ಸಂಖ್ಯೆ : 21.

ಅನಿಲ ದೈತ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗುರು ಗ್ರಹದ ಹತ್ತಿರ ಸುಳಿಯುವ ಯಾವ ಕಾಯಗಳಿಗೂ `ಆಘಾತ ತಪ್ಪಿದ್ದಲ್ಲ. ಅದರ ಗುರುತ್ವಕ್ಕೆ ಸಿಕ್ಕ ಎಲ್ಲ ಕಾಯಗಳನ್ನು ಭರಸೆಳೆದು ಅವುಗಳ ಅಸ್ತಿತ್ವವನ್ನೇ ಇಲ್ಲವಾಗಿಸುವ ಗುರು ಬಲಾಢ್ಯ ಗ್ರಹ. 1993ರಲ್ಲಿ ಗುರು ಗ್ರಹದ ಬಳಿ ಕಾಣಿಸಿಕೊಳ್ಳುವ ಹೊತ್ತಿಗೆ ಷೂ ಮಾಕರ್ ಲೆವಿ ಎಂಬುವ ಧೂಮಕೇತು 21 ತುಣಕುಗಳಾಗಿ ಸಿಡಿದಿತ್ತು. ಈ ಎಲ್ಲ ತುಣುಕುಗಳು ಒಟ್ಟು 11,000,00 ಕಿ.ಮೀ. ಉದ್ದಕ್ಕೂ ಹಬ್ಬಿದವು. ಅದೇ ವರ್ಷ ಒಂದರ ಹಿಂದೆ ಒಂದರಂತೆ ಗುರುವಿಗೆ ಡಿಕ್ಕಿ ಹೊಡೆದಾಗ ಭೂಮಿಯಲ್ಲಿ ನೆಟ್ಟಿದ್ದ ಯಾವ ದೂರದರ್ಶಕಗಳೂ ಆ ಭೀಬತ್ಸ ದೃಶ್ಯವನ್ನು ಸೆರೆಹಿಡಿಯಲಿಲ್ಲ. ಏಕೆಂದರೆ ಈ ಪ್ರಳಯ ಸ್ವರೂಪಿ ಘಟನೆಯಾಗಿದ್ದು ಗುರುಗ್ರಹದ ಆಚೆಯ ಮಗ್ಗುಲಲ್ಲಿ. ಆದರೆ ಹಬ್ಲ್ ಮಾತ್ರ ತನ್ನ ಬಿಟ್ಟ ಕಣ್ಣನ್ನು ಬಿಟ್ಟು ಈ ಒಂದೊಂದೂ ತುಂಡುಗಳ ಆತ್ಮಹತ್ಯಾ ಪ್ರಸಂಗಗಳ ಎಲ್ಲ ಹಂತಗಳನ್ನೂ ಚಾಚೂ ತಪ್ಪದೆ ವರದಿ ಮಾಡಿತ್ತು. ಈ ಡಿಕ್ಕಿಯಿಂದಾಗಿ ಗುರುಗ್ರಹದ ವಾತಾವರಣದಲ್ಲಿ 1000 ಡಿಗ್ರಿ ಸೆಂ. ಉಷ್ಣತೆ ಹೆಚ್ಚಿ, ಬೆಂಕಿ ಭುಗಿಲೆದ್ದು ನೂರಾರು ಕಿ.ಮೀ. ವ್ಯಾಪಿಸಿತ್ತು. ಅದರ ವಾತಾವರಣದಲ್ಲಿ ಕುದುರೆಯ ಲಾಳಾಕಾರದ ಆಕೃತಿಗಳು ಗಾಯದಂತೆ ಮೂಡಿದ್ದವು. ಹಬ್ಲ್ ಅದನ್ನೂ ವರದಿ ಮಾಡಿದೆ.

ಹಬ್ಲ್ ದೂರದರ್ಶಕ ಇನ್ನೊಂದು ಭಯಾನಕ ಜಾಗವನ್ನು ಬೊಟ್ಟು ಮಾಡಿ ತೋರಿಸಿದೆ. ಅದು ದೃಷ್ಟಿ ನೆಟ್ಟ ಎಷ್ಟೋ ಬ್ರಹ್ಮಾಂಡಗಳಲ್ಲಿ ಕಪ್ಪುಕುಳಿಗಳ ಅಸ್ತಿತ್ವವನ್ನು ರುಜುವಾತು ಪಡಿಸಿದೆ. ನಕ್ಷತ್ರ ತನ್ನ ವಿಕಾಸದ ಹಂತದಲ್ಲಿ ಸೂಪರ್‍ನೋವಾ ಸ್ಫೋಟವಾಗಿ ಅದರ ಗರ್ಭ ನ್ಯೂಟ್ರಾನ್ ನಕ್ಷತ್ರವಾಗುತ್ತದೆ. ಆದರೆ ಸದಾ ಹೀಗಾಗಬೇಕೆಂದಿಲ್ಲ. ಅದರ ಗರ್ಭ ಸೌರರಾಶಿಯ ಮೂರು ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿದ್ದರೆ ಆ ಸ್ಥಿತಿಯಲ್ಲಿ ನ್ಯೂಟ್ರಾನುಗಳು ಕೂಡಾ ದಟ್ಟಣೆಗೊಳ್ಳುವುದು ಸಾಧ್ಯವಿಲ್ಲ. ಆ ಮೀರಿದ ಗುರುತ್ವದಲ್ಲಿ ಕಪ್ಪುಕುಳಿ ಹುಟ್ಟುತ್ತದೆ. ಬೆಳಕಿಗೂ ಅಲ್ಲಿ ವಿಮೋಚನೆ ಇಲ್ಲ. ಬ್ರಹ್ಮಾಂಡದ ಕೇಂದ್ರಭಾಗದಲ್ಲಿ ಕೆಲವೆಡೆ ಅನಿಲ ಮೇಘಗಳ ಕುಸಿತದಿಂದಲೂ ಕಪ್ಪುಕುಳಿ ಹುಟ್ಟಬಹುದು. ಕೋಟಿ ಸೂರ್ಯರೂ ಅದರ ರಾಶಿಗೆ ಸಮವಾಗಲಾರವು. ಕಪ್ಪು ಆಗಸದಲ್ಲಿ ಈ ಕಪ್ಪುಕುಳಿಗಳನ್ನು ಗುರುತಿಸುವುದು ಸುಲಭ ಸಾಧ್ಯವಲ್ಲ. ಹಾಗಿದ್ದಲ್ಲಿ ಹಬ್ಲ್ ಬ್ರಹ್ಮಾಂಡಗಳಲ್ಲಿ 15 ರಿಂದ 20 ಕಪ್ಪುಕುಳಿಗಳನ್ನು ಗುರುತಿಸಿದ್ದಾದರೂ ಹೇಗೆ? ಅವುಗಳನ್ನು ನೇರವಾಗಿ ವೀಕ್ಷಿಸಲು ಸಾಧ್ಯವಿಲ್ಲ. ಅವುಗಳ ಸನಿಹದಲ್ಲಿ ನಕ್ಷತ್ರಗಳಿದ್ದರೆ ಪತ್ತೆ ಹಚ್ಚುವುದು ಸುಲಭ. ಅದೂ ಕೂಡ ಪರೋಕ್ಷವಾಗಿ. ಕಪ್ಪುಕುಳಿಗಳು ಅತಿ ವೇಗವಾಗಿ ಸನಿಹದ ಅನಿಲವನ್ನು ಸೆಳೆಯುವುದರಿಂದ ನೀರಿನಲ್ಲಿ ಸುಳಿಗಳೇಳುವಂತೆ ಅಲ್ಲಿ ಧಗಧಗಿಸುವ ಅನಿಲದ ಸುಳಿಗಳೇಳುತ್ತವೆ. ಆ ಸ್ಥಿತಿಯಲ್ಲಿ 100 ದಶಲಕ್ಷ ಸೆಂ.ಗಳಷ್ಟು ಉಷ್ಣತೆ ಏರಬಹುದು. ಎಕ್ಸ್-ಕಿರಣಗಳು ವಿಸರ್ಜನೆಯಾಗಬಹುದು. ಹಬ್ಲ್ ದೂರದರ್ಶಕ ಎಕ್ಸ್-ಕಿರಣಗಳನ್ನು ಗುರುತಿಸುವ ಸಾಧನಗಳಿಂದ ಸಜ್ಜಿತವಾಗಿಲ್ಲ. ಆದರೆ ಕಪ್ಪುಕುಳಿಯ ಆಜೂಬಾಜೂ ಆಗುವ ಬದಲಾವಣೆಗಳನ್ನು ಸೆರೆಹಿಡಿಯಬಲ್ಲದು.

ಹಬ್ಲ್ ದೂರದರ್ಶಕ ಅತ್ಯುತ್ಕøಷ್ಟ ಮಾದರಿ ಎಂಬುದನ್ನು ಕುರಿತು ಎರಡು ಅಭಿಪ್ರಾಯಗಳಿಲ್ಲ. ಅದು ಖಗೋಳ ವಿಜ್ಞಾನದ ಇತಿಹಾಸವನ್ನೇ ತಿರುಗು ಮರುಗು ಮಾಡಿದೆ. ಹಾಗೆಂದ ಮಾತ್ರಕ್ಕೆ ಭೂಮೇಲ್ಮೈಯಲ್ಲಿ ಸ್ಥಾಪಿಸಿರುವ ದೂರದರ್ಶಕಗಳು ಅಪ್ರಯೋಜಕವೆಂದೇನೂ ಅಲ್ಲ. ಈಗಲೂ ಅಂಥ ದೂರದರ್ಶಕಗಳು ಸಮರ್ಪಕವಾಗಿಯೇ ಕೆಲಸಮಾಡುತ್ತಿವೆ. ಅವುಗಳ ಅವಶ್ಯಕತೆಯೂ ಇದೆ. ಎಂದೇ ನಿರ್ಮಾಣವೂ ನಡೆದಿದೆ. ಹಬ್ಲ್ ದೂರದರ್ಶಕ ರೇಡಿಯೋ ತರಂಗಗಳನ್ನಾಗಲೀ, ಸೂಕ್ಷ್ಮ ತರಂಗಗಳನ್ನಾಗಲೀ, ಎಕ್ಸ್-ಕಿರಣಗಳಂಥ ಅಧಿಕ ತರಂಗಗಳನ್ನಾಗಲೀ, ಗಾಮಾಕಿರಣಗಳನ್ನಾಗಲೀ ಗುರುತಿಸಲಾರದು. ನಮ್ಮ ನಿತ್ಯ ಅನುಭವಕ್ಕೆ ಬರುವ ಬೆಳಕನ್ನು ವಿಜ್ಞಾನಿಗಳು ವಿದ್ಯುತ್ಕಾಂತೀಯ ರೋಹಿತದ ಒಂದು ಭಾಗ ಎನ್ನತ್ತಾರೆ. ಇದರ ಅರ್ಥ ಆಕಾಶಕಾಯಗಳು ಗೋಚರ ಬೆಳಕನ್ನಷ್ಟೇ ಅಲ್ಲದೆ ವಿದ್ಯುತ್ಕಾಂತೀಯ ರೋಹಿತದ ಇತರ ವ್ಯಾಪ್ತಿಯ ಕಿರಣಗಳನ್ನೂ ಹೊರಸೂಸುತ್ತವೆ. ಪ್ರತಿಫಲನ ದೂರದರ್ಶಕಗಳಾಗಲೀ, ವಕ್ರೀಭವನ ದೂರದರ್ಶಕಗಳಾಗಲೀ, ಗೋಚರ ಬೆಳಕಿನಲ್ಲಿ ಕಾಯಗಳ ಬಿಂಬವನ್ನು ನೀಡುತ್ತವೆ. ಆದರೆ ಅದರ ವ್ಯಾಪ್ತಿಗೆ ಹೊರತಾದ ಇತರ ವಿಕಿರಣಗಳೂ ನೀಡುವ ಬಿಂಬಗಳನ್ನು ಅವುಗಳಿಂದ ಪಡೆಯಲಾಗದು. ಭೂವಾತಾವರಣದಲ್ಲಿ ತೂರಿಬರುವ ಗೋಚರ ಬೆಳಕು ಮತ್ತು ರೇಡಿಯೋ ತರಂಗಗಳನ್ನು ಭೂಮಿಯ ಮೇಲೆ ಸ್ಥಾಪಿಸಿರುವ ದೂರದರ್ಶಕಗಳು ಗ್ರಹಿಸಬಹುದು. ಎಕ್ಸ್-ಕಿರಣಗಳು ಭೂವಾತಾವರಣದಲ್ಲಿ ತೂರಿಬರದ ಕಾರಣ ಅವನ್ನು ಗ್ರಹಿಸಲು ಭೂವಾತಾವರಣವನ್ನು ದಾಟಿ ಅಲ್ಲಿ ಸ್ಥಾಪಿಸಿದ ದೂರದರ್ಶಕವನ್ನು ಬಳಸಬೇಕಾಗುತ್ತದೆ.

ಹಬ್ಲ್ ದೂರದರ್ಶಕದ ಆಯುಷ್ಯವನ್ನು ಕಡಿತಗೊಳಿಸಿದರೆ ಖಗೋಳ ವಿಜ್ಞಾನಿಗಳಿಗೆ ಅಷ್ಟೇ ಸಾಮಥ್ರ್ಯದ ಬೇರಾವ ದೂರದರ್ಶಕವನ್ನು ಕೊಡಬೇಕು ಎನ್ನುವುದನ್ನು ಕುರಿತು ಈಗಾಗಲೇ `ನಾಸಾ ಸಂಸ್ಥೆ ಯೋಚಿಸಿದೆ. ಅದು ಸಾಧ್ಯವಾಗುವುದು 2011ರಲ್ಲಿ, ಜೇಮ್ಸ್ ವೆಬ್ ದೂರದರ್ಶಕವನ್ನು ಕಕ್ಷೆಗೆ ಸೇರಿಸಿದಾಗ, (ಜೇಮ್ಸ್ ವೆಬ್, ಅಪೊಲೋ ಚಂದ್ರಯಾತ್ರೆಯ ರೂವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಖಗೋಳ ವಿಜ್ಞಾನಿ.) ಹಬ್ಲ್ ಕಂಡ ವಿಶ್ವರೂಪದ ಇನ್ನಷ್ಟು ಆಳಕ್ಕೆ ಇಳಿಯುತ್ತದೆಂದು ನಾಸಾ ಘೋಷಿಸಿದೆ. ಅಂದರೆ ವಿಶ್ವದ ಉಗಮದ ನೂರು ಪುಟಗಳ ಚರಿತ್ರೆಯಲ್ಲಿ ಹಬ್ಲ್ ಹಿಂದಕ್ಕೆ 90 ಪುಟಗಳಷ್ಟನ್ನು ಬೆದಕಿ ತೆಗೆದಿದೆ. ವೆಬ್ ದೂರದರ್ಶಕ ವಿಶ್ವದ ಅದಿಮ ಸ್ಥಿತಿಯ ಮೊದಲ ಹತ್ತು ಪುಟಗಳತ್ತ ಸರಿಯುತ್ತದೆಂದು ಈಗಾಗಲೇ ಆಶಾಭಾವನೆ ತಳೆಯಲಾಗಿದೆ. ವ್ಯತ್ಯಾಸವಷ್ಟೇ ಹಬ್ಲ್ ವಿಶ್ವವನ್ನು ಕಂಡದ್ದು ಗೋಚರ ಬೆಳಕಿನಲ್ಲಿ. ವೆಬ್ ದೂರದರ್ಶಕ ಕಾಣುವುದು ವಿದ್ಯುತ್ ಕಾಂತೀಯ ರೋಹಿತದ ಅವಕೆಂಪು ವ್ಯಾಪ್ತಿಯಲ್ಲಿ(ಒಂದು ಮಿಲಿ ಮೀಟರ್‍ನಿಂದ ಹಿಡಿದು 700 ನ್ಯಾನೋಮೀಟರ್ ವ್ಯಾಪ್ತಿಯಲ್ಲಿ). ವಿಶ್ವದಲ್ಲಿ ಕಾಲದ ಪರಿಕಲ್ಪನೆಯನ್ನು ಮೊತ್ತಮೊದಲು ಮೂಡಿಸಿದ ಮಹಾಬಾಜಣೆಯೆಂಬ ಆಸ್ಫೋಟದ ನಂತರ ಆದ ಘಟನೆಗಳನ್ನು ವೆಬ್ ದೂರದರ್ಶಕ ಖುದ್ದಾಗಿ ನೋಡಲಿದೆ). ಇದರ ಉಸ್ತುವಾರಿ ಕೂಡ ಗೋಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ವಹಿಸಿಕೊಂಡಿದೆ. ಆದರೆ ಹಬ್ಲ್, ಗೋಚರ ಬೆಳಕಿನಲ್ಲಿ ಬಿಂಬಿಸುವ ಚಿತ್ರಗಳಿಗೆ ವೆಬ್ ದೂರದರ್ಶಕ ಕಳಿಸಲಿರುವ ಚಿತ್ರಗಳು ಎಂದೂ ಸರಿಗಟ್ಟಲಾರವು ಎಂದು ಖಗೋಳ ವಿಜ್ಞಾನಿಗಳು ಈಗಾಗಲೇ ಮುನ್ನುಡಿದಿದ್ದಾರೆ. `ವೆಬ್ ದೂರದರ್ಶಕ ಹಬ್ಲ್‍ನ್ನು ಸ್ಥಳಾಂತರಿಸುತ್ತದೆಂದು ಭಾವಿಸಬೇಡಿ' ಎಂದು ನಾಸಾ ಸಂಸ್ಥೆ ಹೇಳಿದೆ.

ಹಬ್ಲ್ ಸಮಸ್ಯೆಯೇನು? 1990ರಿಂದ ಈವರೆಗೆ ಹಬ್ಲ್ ದೂರದರ್ಶಕ ಮೂರು ಬಾರಿ ದುರಸ್ತಿಗೊಳಗಾಗಿದೆ. 1993ರಲ್ಲಿ ಅದರ ಮುಖ್ಯ ಕನ್ನಡಿ ದುರಸ್ತಿಯಾಯಿತು. ಅನಂತರ ಅದರ ಸಾಮಥ್ರ್ಯ ಹೆಚ್ಚಿ, ವಿಶ್ವದ ಅಪರೂಪದ ಚಿತ್ರಗಳನ್ನು ಸೆರೆಹಿಡಿದು ಖಗೋಳ ವಿಜ್ಞಾನಿಗಳಿಗೆ ಹೊಸಬಾಗಿಲು ತೆರೆಯಿತು.


1997ರಲ್ಲಿ ಈ ದೂರದರ್ಶಕದ ಹೊರಕವಚಕ್ಕೆ ಧಕ್ಕೆಯಾಗಿ ಅದನ್ನು ಸರಿಪಡಿಸಬೇಕಾಯಿತು. ಅದರಲ್ಲಿನ ಎಲೆಕ್ಟ್ರಾನಿಕ್ ಸಾಧನಗಳಿಗೆ ಬಿಸಿ ತಾಕುವುದನ್ನು ತಪ್ಪಿಸಲು ದುರಸ್ತಿ ಮಾಡಬೇಕಾಯಿತು.

ಹಬ್ಲ್‍ಗೆ ಶಕ್ತಿ ಒದಗಿಸುವ ಬ್ಯಾಟರಿಗಳಲ್ಲಿ ನಿಕಲ್-ಹೈಡ್ರೋಜನ್ ಬಳಸಿದ್ದಾರೆ. ದೂರದರ್ಶಕದ ಸೌರಫಲಕಗಳು ಶಕ್ತಿ ಸಂಗ್ರಹಿಸಿ ದಿನಕ್ಕೆ 15 ಬಾರಿ ಬ್ಯಾಟರಿಗಳಿಗೆ ಪೂರೈಸುತ್ತದೆ. ಒಂದು ವೇಳೆ ಬ್ಯಾಟರಿಗಳು ನಿಷ್ಕ್ರಿಯವಾದರೆ ಹಬ್ಲ್ ತನ್ನ ನಿರ್ದಿಷ್ಟ ಗುರಿಯೆಡೆಗೆ ಮುಖ ಮಾಡುವುದು ಸಾಧ್ಯವಿಲ್ಲ. ಅವು ನಮ್ಮ ಮನೆಯಲ್ಲಿ ಬಳಸುವ ಬ್ಯಾಟರಿಗಳಂತಲ್ಲ. ಬಹುಬೇಗ ಅವುಗಳ ಶಕ್ತಿ ವ್ಯಯವಾಗುತ್ತದೆ.

ಹಬ್ಲ್ ಗುರಿಯತ್ತ ನಿರ್ದೇಶನವಾಗಲು ಗೈರೋಸ್ಕೋಪ್‍ಗಳ ನೆರವು ಬೇಕು. ಇದು ಗಾಲಿಕುರ್ಚಿಯ ತರಹ. ಬೇಕೆಂದೆಡೆಗೆ ಅದು ಮುಖ ತಿರುಗಿಸುವಂತೆ ಚೌಕಟ್ಟು ಮತ್ತು ಗಾಲಿಯನ್ನು ಇದರಲ್ಲಿ ಅಳವಡಿಸಿರುತ್ತದೆ. ಹಬ್ಲ್ ದೂರದರ್ಶಕಕ್ಕೆ ಇಂಥ ಆರು ಗೈರೋಸ್ಕೋಪ್‍ಗಳಿವೆ. ಇವುಗಳಲ್ಲಿ ಎರಡು ಈಗಾಗಲೇ ಜಖಂ ಆಗಿ ನಿಷ್ಕ್ರಿಯವಾಗಿವೆ. ಇವುಗಳ ದುರಸ್ತಿಯಾಗಬೇಕು. ಇನ್ನು ಮೂರು ಕೆಲಸ ಮಾಡುತ್ತಿವೆ. ಅದರಲ್ಲಿ ಒಂದನ್ನು ಆಪತ್ಕಾಲಕ್ಕೆಂದೇ ಇಡಲಾಗಿದೆ. ಕ್ರಿ.ಶ. 2006ರ ಹೊತ್ತಿಗೆ ಎರಡು ಗೈರೋಸ್ಕೋಪ್‍ಗಳು ಮಾತ್ರ ಸುಸ್ಥಿತಿಯಲ್ಲಿರುತ್ತವೆ. ಇವುಗಳ ದುರಸ್ತಿಯನ್ನು ಮಾಡದೆ `ಇದ್ದಷ್ಟೇ ದಿನ ಲಾಭ ಎಂದುಕೊಳ್ಳುವುದಾದರೆ ಬಹುಶಃ 2010ನ್ನು ಕೂಡ ಈ ದೂರದರ್ಶಕ ದಾಟಲಾರದು.

(ಟಿ.ಆರ್.ಅನಂತರಾಮು)