ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಮ್ಮಿಗಿ ಮುದಿಮಲ್ಲಪ್ಪ

ಹಮ್ಮಿಗಿ ಮುದಿಮಲ್ಲಪ್ಪ (1917-2002). ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದ ಮುದಿಮಲ್ಲಪ್ಪ ಡೊಳ್ಳುವಾದನ ಕಲೆಯಲ್ಲಿ ಪರಿಣತರಾಗಿದ್ದರು. ಹಾಲುಮತ ಕುರುಬ ಜನಾಂಗದ ರಾಮಪ್ಪ ಮಾಳಪ್ಪ ದಂಪತಿಗಳ ಮಗನಾಗಿ ಹುಟ್ಟಿದ ಮುದಿಮಲ್ಲಪ್ಪನವರಿಗೆ ಬಾಲ್ಯದಿಂದಲೂ ಡೊಳ್ಳಿನ ಆಕರ್ಷಣೆ ಬೆಳೆದು ಬಂದಿತು. ಅವರ ಅಜ್ಜ ಸಕ್ರಜ್ಜ ಡೊಳ್ಳುವಾದನ ಕಲೆಯಲ್ಲಿ ಹೆಸರು ಮಾಡಿದ್ದವರು. ಅವರ ಕಲೆಗೆ ಮೆಚ್ಚಿ ಉಜ್ಜಿನಿ ಜಗದ್ಗುರುಗಳು ಅವರಿಗೆ ಬೆಳ್ಳಿಯ ಪದಕ ಬಹುಮಾನವಾಗಿ ನೀಡಿದ್ದರು. ಅಜ್ಜನ ಶಿಸ್ತಿನ ತರಬೇತಿ ಮುದಿಮಲ್ಲಪ್ಪನವರನ್ನು ಶ್ರೇಷ್ಠ ಕಲಾವಿದನನ್ನಾಗಿ ರೂಪಿಸಿತು. ತರುಣ ಮುದಿಮಲ್ಲಪ್ಪ ತಮ್ಮೂರಿನ ಡೊಳ್ಳಿನ ಮೇಳಕ್ಕೆ ಮುಖ್ಯಸ್ಥರಾದ ಮೇಲೆ ಅವರ ಮೇಳ ನಾಡಿನ ತುಂಬ ಹೆಸರು ಮಾಡಿತು. ಕರ್ನಾಟಕ ಸರಕಾರದ ದಸರಾ ಉತ್ಸವ, ಹಂಪಿ ಉತ್ಸವ, ವಿಶ್ವಕನ್ನಡ ಸಮ್ಮೇಳನ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ. ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳು ಏರ್ಪಡಿಸಿದ ಅನೇಕ ಕಲಾಮೇಳಗಳಲ್ಲಿ ಪಾಲ್ಗೊಂಡು ಮುದಿಮಲ್ಲಪ್ಪನವರು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಕರ್ನಾಟಕದ ನಗರ ಪಟ್ಟಣಗಳಲ್ಲಿ ಅವರು ನೀಡಿದ ಪ್ರದರ್ಶನಗಳಿಗೆ ಲೆಕ್ಕವಿಲ್ಲ. ಕರ್ನಾಟಕದ ಹೊರಗೆ ದಿಲ್ಲಿ, ಮುಂಬೈ. ಚೆನ್ನೈ, ತಂಜಾವೂರ, ಕಲ್ಕತ್ತಾ, ಭೂಪಾಲ ಮುಂತಾದ ಮಹಾನಗರಗಳಲ್ಲಿ ತಮ್ಮ ಡೊಳ್ಳುವಾದನ ಕಲೆಯ ಕಂಪನ್ನು ಪಸರಿಸಿದ ಮುದಿಮಲ್ಲಪ್ಪನವರು ರಾಷ್ಟ್ರಮಟ್ಟದ ಕಲಾವಿದರು. ಅವರ ಕಲಾಪ್ರತಿಭೆ ಮತ್ತು ಕಲಾಸೇವೆಗಳನ್ನು ಪರಿಗಣಿಸಿದ ಕರ್ನಾಟಕ ಸರಕಾರ ಮುದಿಮಲ್ಲಪ್ಪನವರಿಗೆ 2001ನೇ ಸಾಲಿನ ಪ್ರತಿಷ್ಠಿತ ಜಾನಪದಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಅವರಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (1980), ರಾಜ್ಯೋತ್ಸವ ಪ್ರಶಸ್ತಿ (1990) ಗಳೂ ಸಂದಿವೆ.

(ಬಸವರಾಜು ಮಲಶೆಟ್ಟಿ)