ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರದನಹಳ್ಳಿ

ಹರದನಹಳ್ಳಿ

	ಭಾರತದ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಅದೇ ತಾಲ್ಲೂಕಿನ ಒಂದು ಗ್ರಾಮ ಹಾಗೂ ಹೋಬಳಿ ಕೇಂದ್ರ. ಚಾಮರಾಜನಗರದ ದಕ್ಷಿಣಕ್ಕೆ 5 ಕಿಮೀ ದೂರದಲ್ಲಿದೆ. ವಾಣಿಜ್ಯಪುರ ಇದರ ಪ್ರಾಚೀನ ಹೆಸರು. ಈ ಊರಿನಲ್ಲಿ ಪಾಳುಬಿದ್ದ ಕೋಟೆಯ ಅವಶೇಷಗಳು ಕಂಡುಬರುತ್ತಿದ್ದು ಹಿಂದೆ ಇದು ಪಾಳೆಯ ಪಟ್ಟಿನ ಕೇಂದ್ರವಾಗಿದ್ದಿತೆಂದು ತೋರುತ್ತದೆ. ನಂಜರಾಜ ಒಡೆಯನಿಗೆ ಸೇರಿದ್ದ ಈ ಊರನ್ನು ರಾಜ ಒಡೆಯ 1614ರಲ್ಲಿ ವಶಪಡಿಸಿಕೊಂಡ.

ಈ ಊರಿನಲ್ಲಿ ದಿವ್ಯಲಿಂಗೇಶ್ವರ ಎಂಬ ಪ್ರಸಿದ್ಧ ದೇವಾಲಯವಿದೆ. ಇದಕ್ಕೆ ಅಮೃತೇಶ್ವರ ಎಂಬ ಹೆಸರೂ ಇದೆ. ಈ ದೇವಾಲಯದ ಮೂಲ ಹೆಸರು ಅಳಿಲೇಶ್ವರ. 1317ರ ಶಾಸನವೊಂದರಲ್ಲಿ ಅಳಿಲೇಶ್ವರ ದೇವಾಲಯದ ಉಲ್ಲೇಖ ಕಂಡುಬರುತ್ತದೆ. ಈ ದೇವಾಲಯಕ್ಕೆ ವಿಜಯನಗರ ಶೈಲಿಯ ಗೋಪುರವಿದೆ. ದೇವಸ್ಥಾನದ ನವರಂಗದ ಎಡಭಾಗದಲ್ಲಿ ವೀರಭದ್ರನ ಗುಡಿ, ಪ್ರಾಕಾರದಲ್ಲಿ ಸರಸ್ವತಿ ಗುಡಿ ಇವೆ. ಸರಸ್ವತಿ ಗುಡಿಯ ಪಕ್ಕದಲ್ಲಿ ಕಾಮಾಕ್ಷಿ ಗುಡಿ ಇದೆ. ಲಿಂಗಗಳಿರುವ ಪೂಜಾಮಂದಿರಗಳ ಸಾಲಿನ ಛಾವಣಿಯಲ್ಲಿ ಶೈವಪುರಾಣದ ಘಟನೆಗಳಿಗೆ ಸಂಬಂಧಿಸಿದ ಸುಮಾರು ಒಂದೂವರೆ ಶತಮಾನದ ಹಿಂದಿನ ಚಿತ್ರಗಳಿವೆ. ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ದೀಪಸ್ತಂಭವಿದೆ. ದೇವಸ್ಥಾನ ಪ್ರಾಕಾರದ ಮಂಟಪಗಳ ಪೈಕಿ ಒಂದು ಮಂಟಪವನ್ನು ಒಡೆದು ಅದರ ಶಿಲೆಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ ತಂದೆ ಚಾಮರಾಜ ಒಡೆಯರ ಜನನದ ಸ್ಮಾರಕವಾಗಿ ಚಾಮರಾಜನಗರದಲ್ಲಿ ಕಟ್ಟಿದ ಜನನಮಂಟಪಕ್ಕೆ ಉಪಯೋಗಿಸಲಾಯಿತೆಂದು ತಿಳಿದುಬರುತ್ತದೆ. ಈ ದೇವಸ್ಥಾನ ಹಿಂದೆ ಅಮೂಲ್ಯ ಆಭರಣಗಳನ್ನು ಹೊಂದಿದ್ದು ಅವುಗಳನ್ನು 1787ರಲ್ಲಿ ಟಿಪ್ಪುಸುಲ್ತಾನನ ಆದೇಶದ ಪ್ರಕಾರ ಶ್ರೀರಂಗಪಟ್ಟಣದ ಖಜಾನೆಗೆ ಸೇರಿಸಲಾಯಿತೆಂದು ದೇವಸ್ಥಾನದ ಕಡತದಿಂದ ತಿಳಿದುಬರುತ್ತದೆ.

ಈ ಊರಿನಲ್ಲಿ ವೀರಶೈವಗುರು ಗೋಸಲ ಚೆನ್ನಬಸವರ ಮಠವಿತ್ತು. 15ನೆಯ ಶತಮಾನದಲ್ಲಿ ಪಂಡಿತ ತೋಂಟದ ಸಿದ್ಧಲಿಂಗಯತಿ ಈ ಮಠದಲ್ಲಿ ದೀಕ್ಷೆ ವಹಿಸಿದ್ದ. ಚಿಕ್ಕದೇವರಾಯ ಒಡೆಯರು ಈ ಮಠವನ್ನು ನಾಶಪಡಿಸಿ ಅದೇ ಸ್ಥಳದಲ್ಲಿ ಆ ಕಟ್ಟಡದ ಭಾಗಗಳನ್ನೇ ಉಪಯೋಗಿಸಿ ಗೋಪಾಲಕೃಷ್ಣ ದೇವಾಲಯವನ್ನು ಕಟ್ಟಿಸಿದರಂತೆ. ಈ ದೇವಾಲಯದ ಕೆಲವು ಸ್ತಂಭಗಳಲ್ಲಿ ಶಿವನ ವಿಗ್ರಹಗಳಿವೆ; ನವರಂಗದಲ್ಲಿ ವರದರಾಜ, ಶ್ರೀನಿವಾಸ, ರಾಮಾನುಜಾಚಾರ್ಯರ ವಿಗ್ರಹಗಳು ಮತ್ತು ಎರಡು ಪ್ರತ್ಯೇಕ ಮಾಡಗಳಲ್ಲಿ ಲಕ್ಷ್ಮೀ ವಿಗ್ರಹಗಳು ಇವೆ. ಪ್ರಾಕಾರದ ಕಡೆಯ ಪೂಜಾಗೃಹವೊಂದರಲ್ಲಿ ಶ್ರೀವೈಷ್ಣವ ಆಳ್ವಾರರ ವಿಗ್ರಹಗಳಿವೆ. (ಪಿ.ಬಿ.; ಎಚ್.ಎಮ್.ಎನ್.)