ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರಪನಹಳ್ಳಿ

ಹರಪನಹಳ್ಳಿ ಭಾರತದ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಹೊಸಪೇಟೆ ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕನ್ನು ಉತ್ತರ ಮತ್ತು ಪೂರ್ವದಲ್ಲಿ ಬಳ್ಳಾರಿ ಜಿಲ್ಲೆಯ ಹಡಗಲಿ ಮತ್ತು ಕೂಡ್ಲಿಗಿ ತಾಲ್ಲೂಕುಗಳೂ ದಕ್ಷಿಣದಲ್ಲಿ ಹರಿಹರ ಮತ್ತು ದಾವಣಗೆರೆ ತಾಲ್ಲೂಕುಗಳೂ ದಕ್ಷಿಣದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕುಗಳೂ ಸುತ್ತುವರಿದಿವೆ. ಚಿಗಟೇರಿ, ಅರಸೀಕೆರೆ, ಹರಪನಹಳ್ಳಿ ಮತ್ತು ತೆಲಿಗಿ ಹೋಬಳಿಗಳು. 75 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 1,422.3 ಚ.ಕಿಮೀ. ಜನಸಂಖ್ಯೆ 2,68,720.

ಈ ತಾಲ್ಲೂಕು ಜಿಲ್ಲೆಯ ಇತರ ಕಡೆಗಳಿಗಿಂತ ಹೆಚ್ಚು ಮಳೆ ಬೀಳುವ ಎತ್ತರ ಪ್ರದೇಶಕ್ಕೆ ಸೇರಿದೆ. ಉತ್ತರಕ್ಕೆ ಇಳಿಜಾರಾಗಿರುವ ಈ ತಾಲ್ಲೂಕಿನ ಕಲ್ಲಹಳ್ಳಿ ಗುಡ್ಡ ಶ್ರೇಣಿಯಿದೆ. ಈ ಶ್ರೇಣಿಯ ಕಲ್ಲಹಳ್ಳಿ ಶಿಖರ 853 ಮೀ ಎತ್ತರವಿದೆ. ಮುಂದೆ ಈ ಶ್ರೇಣಿಯೇ ಕವಲೊಡೆದು ತೆಲಿಗಿ ಗುಡ್ಡ ಸಮೂಹ ಮತ್ತು ಹರಪನಹಳ್ಳಿಯ ದಕ್ಷಿಣದ ಗುಡ್ಡ ಸಮೂಹವಾಗಿದೆ. ಈ ಗುಡ್ಡಗಳಲ್ಲಿ ನರಸಿಂಹದೇವರ ಗುಡ್ಡ 775 ಮೀ ಎತ್ತರವಿದೆ. ಈ ಶ್ರೇಣಿ ತಾಲ್ಲೂಕಿನ ದಕ್ಷಿಣಭಾಗದಲ್ಲಿ ಉಚ್ಚಂಗಿ ದುರ್ಗದವರೆಗೂ ಮುಂದುವರಿದಿದೆ. ತಾಲ್ಲೂಕಿನ ಪಶ್ಚಿಮದ ಎಲ್ಲೆಯಲ್ಲಿ ತುಂಗಭದ್ರಾನದಿ ಗಡಿಯಾಗಿ ಸ್ವಲ್ಪದೂರ ಹರಿದು ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕನ್ನು ಬೇರ್ಪಡಿಸಿದೆ. ತಾಲ್ಲೂಕಿನ ಪೂರ್ವದಲ್ಲಿ ಚಿಕ್ಕಹಗರಿ ನದಿ ಉತ್ತರಾಭಿಮುಖವಾಗಿ ಹರಿಯುವುದು. ಸಹ್ಯವೆನಿಸುವ ಉತ್ತಮ ಹವಾಗುಣವಿದೆ. ವಾರ್ಷಿಕ ಸರಾಸರಿ ಮಳೆ 730.29 ಮಿಮೀ.

ತಾಲ್ಲೂಕಿನಲ್ಲಿ ಮರಳು ಮತ್ತು ಕೆಂಪು ಜೇಡಿ ಮತ್ತು ಕಪ್ಪು ಜೇಡಿಮಣ್ಣಿನ ಭೂಮಿಯಿದೆ. ಜೋಳ, ಬತ್ತ, ಕಬ್ಬು ಮತ್ತು ಹತ್ತಿ ಬೆಳೆಯುವುದರ ಜೊತೆಗೆ ಕಡಲೆ ಮತ್ತು ಸೇಂಗಾವನ್ನು ಹೆಚ್ಚು ಬೆಳೆಯುತ್ತಾರೆ. ಪಶುಪಾಲನೆಯುಂಟು.

ಈ ತಾಲ್ಲೂಕಿನಲ್ಲಿ ಮ್ಯಾಂಗನೀಸ್ ಅದುರು ಹೆಚ್ಚಾಗಿ ದೊರೆಯುತ್ತದೆ. ಚಿಗಟೇರಿ, ಕೊನಗನಹೊಸೂರು ಮತ್ತು ಕಲ್ಲಹಳ್ಳಿ ಬಳಿಯ ಮೆಕ್ಕಲು ಮಣ್ಣಿನಲ್ಲಿ ಚಿನ್ನದ ಅದುರು ಕಂಡುಬರುತ್ತದೆ. ಹರಪನಹಳ್ಳಿ ಬಳಿ ತಾಮ್ರದ ಅದುರು ದೊರೆಯುತ್ತದೆ. ಹತ್ತಿಬಟ್ಟೆತಯಾರಿಕೆ, ಹೊಗೆಸೊಪ್ಪು, ಬೀಡಿ, ಕಂಬಳಿ ಮತ್ತು ಚರ್ಮ ವಸ್ತುಗಳ ಜೊತೆಗೆ ಸೇಂಗಾ ಎಣ್ಣೆ ತಯಾರಿಕೆಯುಂಟು.

ಹರಪನಹಳ್ಳಿಯ ಉತ್ತರಕ್ಕೆ ಸು. 8 ಕಿಮೀ ದೂರದಲ್ಲಿರುವ ಬಗಲಿ ಗ್ರಾಮದಲ್ಲಿ ಚಾಳುಕ್ಯರ ಕಾಲದ ಕಲ್ಲೇಶ್ವರ ದೇವಾಲಯವಿದೆ. ಕೆರೆಯ ಏರಿಯ ಮೇಲಿರುವ ಈ ದೇವಾಲಯದಲ್ಲಿ 59 ಕಂಬಗಳಿದ್ದು ಒಂದೊಂದೂ ವೈವಿಧ್ಯಮಯ ಕೆತ್ತನೆಯಿಂದ ಕೂಡಿವೆ. ಈ ದೇವಸ್ಥಾನಕ್ಕೆ 1018ರ ಶಾಸನದಲ್ಲಿ ದತ್ತಿ ಬಿಟ್ಟ ವಿಚಾರ ಇರುವುದರಿಂದ ಇದಕ್ಕೂ ಮುಂದೆ ಈ ದೇವಸ್ಥಾನದ ನಿರ್ಮಾಣವಾಗಿರಬೇಕೆಂದು ತಿಳಿದುಬರುವುದು. ಈ ದೇವಸ್ಥಾನದಲ್ಲಿ 36 ಶಾಸನಗಳು ಇವೆ. ಇವುಗಳಲ್ಲಿ 12 ಶಾಸನಗಳು ಪಶ್ಚಿಮ ಚಾಳುಕ್ಯ ಚಕ್ರವರ್ತಿ 6ನೆಯ ವಿಕ್ರಮಾದಿತ್ಯನ ಕಾಲದವು. ಈ ಗ್ರಾಮಕ್ಕೆ ಹಿಂದೆ ಬಳ್ಗುಲಿ ಎಂಬ ಹೆಸರಿತ್ತೆಂದೂ ಹೊಯ್ಸಳ 2ನೆಯ ಬಲ್ಲಾಳನ ರಾಜಧಾನಿಗಳಲ್ಲಿ ಒಂದಾಗಿತ್ತೆಂದೂ ತಿಳಿದುಬರುವುದು. ಹರಪನಹಳ್ಳಿಯ ಈಶಾನ್ಯಕ್ಕೆ 13 ಕಿಮೀ ದೂರದಲ್ಲಿರುವ ಚಿಗಟೇರಿ ಹೋಬಳಿ ಕೇಂದ್ರ. ಇಲ್ಲಿನ ಜಾಜಿಕಲ್ಲು ಗುಡ್ಡದ ಬಳಿ ಚಿನ್ನ ತೆಗೆಯಲಾಗು ತ್ತಿತ್ತೆಂದು ತಿಳಿದುಬರುತ್ತದೆ. ಇಲ್ಲಿ ಪ್ರತಿ ಏಪ್ರಿಲ್ ತಿಂಗಳಲ್ಲಿ ನಡೆಯುವ ಶ್ರೀಕರ್ಣಿಕೋಟಸ್ವಾಮಿ ರಥೋತ್ಸವ ಪ್ರಸಿದ್ಧವಾದದ್ದು. ಹರಪನಹಳ್ಳಿ-ಅರಸೀಕೆರೆ ಮಾರ್ಗದಲ್ಲಿ ಹರಪನಹಳ್ಳಿಗೆ ಸು. 3 ಕಿಮೀ ದೂರದಲ್ಲಿರುವ ದೇವರ ತಿಮ್ಮಲಾಪುರ ಎಂಬಲ್ಲಿ ಹರಪನಹಳ್ಳಿ ಪಾಳೆಯಗಾರ ದಾದಯ್ಯ ನಾಯಕ ಮತ್ತು ಅವನ ಮಗ ರಂಗನಾಯಕ ಕಟ್ಟಿಸಿರುವ ವೆಂಕಟೇಶ್ವರನ ದೊಡ್ಡ ದೇವಾಲಯವಿದೆ. ಈ ದೇವಾಲಯದ ಪ್ರಾಕಾರದ ಒಳಗೆ ಕಣ್ಣುಕೊಟ್ಟಪ್ಪನ ದೇವಾಲಯವಿದೆ. ಪ್ರತಿವರ್ಷ ಇಲ್ಲಿ ರಥೋತ್ಸವ ಜರುಗುವುದು. ಹರಪನಹಳ್ಳಿಯ ನೈಋತ್ಯದಲ್ಲಿ ಸು. 13 ಕಿಮೀ ದೂರದಲ್ಲಿರುವ ಹಳವಗಲು ಗ್ರಾಮದಲ್ಲಿ ಕಪ್ಪುಶಿಲೆಯ ಒಂದು ಚಾಳುಕ್ಯ ದೇವಾಲಯವಿದೆ. ಹರಪನಹಳ್ಳಿಗೆ ವಾಯವ್ಯದಲ್ಲಿ ಸು. 10 ಕಿಮೀ ದೂರದಲ್ಲಿರುವ ಕುಲಹಳ್ಳಿಯಲ್ಲಿ ಗೋಣಿಬಸಪ್ಪ ದೇವಾಲಯ ವಿದ್ದು ಮಾರ್ಚ್ ತಿಂಗಳಲ್ಲಿ ಜಾತ್ರೆ ನಡೆಯುವುದು. ಹರಪನಹಳ್ಳಿಯ ನೈಋತ್ಯಕ್ಕೆ 13 ಕಿಮೀ ದೂರದಲ್ಲಿರುವ ನೀಲಗುಂದ ಗ್ರಾಮದಲ್ಲಿ ಚಾಳುಕ್ಯ ಶೈಲಿಯ ಭೀಮೇಶ್ವರ ದೇವಾಲಯವಿದೆ. ಹರಪನಹಳ್ಳಿಯ ಆಗ್ನೇಯಕ್ಕೆ 35 ಕಿಮೀ ದೂರದಲ್ಲಿರುವ ರಾಮಘಟ್ಟ ಗ್ರಾಮದ ಕಂಬಳಿಗಳು ಉತ್ತಮ ದರ್ಜೆಯವೆಂದು ಪ್ರಸಿದ್ಧವಾಗಿವೆ. ಹರಪನ ಹಳ್ಳಿಯ ಆಗ್ನೇಯಕ್ಕೆ 28 ಕಿಮೀ ದೂರದಲ್ಲಿರುವ ಉಚ್ಚಂಗಿದುರ್ಗ ಒಂದು ಗಿರಿದುರ್ಗ. ಇದು ಕದಂಬರ ಒಂದು ಮುಖ್ಯ ಪಟ್ಟಣವಾಗಿತ್ತು. ಅನಂತರ ನೊಳಂಬರ ವಶಕ್ಕೆ ಬಂದು ಇದನ್ನು ಗಂಗದೊರೆ ಎರಡನೆಯ ಮಾರಸಿಂಹ ಸು. 970ರಲ್ಲಿ ವಶಪಡಿಸಿಕೊಂಡ. ಈ ದುರ್ಗದ ಮೇಲಿನ ಕೋಟೆ ಅಭೇದ್ಯವೆನಿಸಿಕೊಂಡಿತ್ತು. ಕೋಟೆಯೊಳಗೆ ಉಚ್ಚಂಗಿಯಮ್ಮನ ದೇವಾಲಯವಿದೆ. ಇಲ್ಲಿ ದಸರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಬೆಟ್ಟದ ಪಾದದಲ್ಲಿ ಉಚ್ಚಂಗಿಗ್ರಾಮವಿದೆ.

ಹರಪನಹಳ್ಳಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಜಿಲ್ಲಾಕೇಂದ್ರ ದಾವಣಗೆರೆಯ ಉತ್ತರದಲ್ಲಿರುವ ಪಟ್ಟಣ. ಬಳ್ಳಾರಿಯ ನೈಋತ್ಯದಲ್ಲಿ ಹರಿಹರ-ಹೊಸಪೇಟೆ ಮಾರ್ಗದಲ್ಲಿ ಬಳ್ಳಾರಿಗೆ 124 ಕಿಮೀ ದೂರದಲ್ಲೂ ಹೊಸಪೇಟೆಗೆ 77 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 41,889.

ಇದು ಈ ಸುತ್ತಲ ವ್ಯಾಪಾರ ಕೇಂದ್ರ. ಸೇಂಗಾ ಎಣ್ಣೆ, ಬೀಡಿ, ಜೋಳ ಇಲ್ಲಿಂದ ಹೆಚ್ಚಾಗಿ ಹೊರಪ್ರದೇಶಗಳಿಗೆ ಹೋಗುವ ವಸ್ತುಗಳು. ಈ ಪಟ್ಟಣ ಸಣ್ಣಪುಟ್ಟ ಗುಡ್ಡಗಳಿಂದ ಸುತ್ತುವರಿದಿದೆ. ಇವುಗಳಲ್ಲಿ ಗೋಸಾಯಿಯ ಸಮಾಧಿ ಇರುವ ಗೋಸಾಯಿ ಗುಡ್ಡ ಒಂದು. ಈ ಪಟ್ಟಣದಲ್ಲಿ ಎರಡು ಸುತ್ತಿನ ಒಂದು ಕೋಟೆ ಇದೆ. ಕೋಟೆಯ ಎರಡು ಪಕ್ಕಗಳಲ್ಲೂ ಎರಡು ಕೆರೆಗಳಿದ್ದು ಇವು ಕೋಟೆಗೆ ರಕ್ಷಣೆಯಂತಿವೆ. ಕೋಟೆಯ ಸುತ್ತಲೂ ಕಂದಕವಿದೆ. ಕೋಟೆಯೊಳಗೆ ಹನುಮಂತನ ಗುಡಿ ಹಾಗೂ ಜೈನ ದೇವಾಲಯವಿದೆ. ಬೋಗಾರ ಬಸದಿಯೆಂಬ ಈ ಜೈನ ದೇವಾಲಯದ ಧ್ವಜಸ್ತಂಭ ಸುಂದರ ಕಲಾಕೃತಿ. ತೀರ್ಥಂಕರರ ಮೂರ್ತಿಗಳನ್ನು ಇದರ ಮೇಲೆ ಕೆತ್ತಲಾಗಿದೆ. ಹರಪನಹಳ್ಳಿಯ ಬೇಡರ ದಾದಯ್ಯನಾಯಕನ ಮನೆತನವೇ ಈ ಜಿಲ್ಲೆಯ ಪಾಳೆಯಗಾರರಲ್ಲೆಲ್ಲ ಪ್ರಸಿದ್ಧವಾದದ್ದು.

ಆಗಿನಕಾಲದಲ್ಲಿ ಇವರಿಗೆ ಒಟ್ಟು 460 ಹಳ್ಳಿಗಳು ಸೇರಿದ್ದು, ಎಂಟು ಲಕ್ಷ ರೂಪಾಯಿಗಳ ವಾರ್ಷಿಕ ವರಮಾನವಿತ್ತು. ದಾದಯ್ಯನ ಅನಂತರ ಅನೇಕ ಪಾಳೆಯಗಾರರು ಆಳಿದರು.

(ಜೆ.ಆರ್.ಪಿ.)

ರಂಗನಾಯಕ (ಸು. 1592-1616); ಬರ್ಮಣ್ಣನಾಯಕ (ಸು. 1616-50); ಓಬಣ್ಣನಾಯಕ (ಸು. 1650-55); ವೀರ ಮುಮ್ಮಡಿ ನಾಯಕ (ಸು. 1655-67); ಮುಮ್ಮಡಿ ನಾಯಕ (ಸು. 1667-87); ಬಸವಂತ ನಾಯಕ (ಕೊಟ್ರಪ್ಪನಾಯಕ, ಸು. 1687-1705); ಮರಿಕೊಟ್ರಪ್ಪ ನಾಯಕ (ಸು. 1705-15); ಈತನ ಮಗ ಬಸವಂತ ನಾಯಕ. ಇವನು 1715 -21ರ ವರೆಗೆ ಆಳಿದ. ಇವನಿಗೆ ಮಕ್ಕಳಿರಲಿಲ್ಲ. ಇವನ ಅನಂತರ ಈ ವಂಶಕ್ಕೆ ದತ್ತುಮಗನಾಗಿ ಬಂದ ಇವನ ಸಂಬಂಧಿಯೊಬ್ಬ ಮುದಿಬಸಪ್ಪನಾಯಕ ಎಂಬ ಹೆಸರಿನಿಂದ ರಾಜ್ಯವಾಳಿದ (1741-42). ಇವರಲ್ಲಿ ಸೋಮಶೇಖರ ನಾಯಕ (ಸು. 1742-66) ಪ್ರಸಿದ್ಧನಾದವನು. ಈತ ಪರಾಕ್ರಮಿ ಮತ್ತು ದಕ್ಷ ಆಡಳಿತಗಾರನಾಗಿದ್ದ. ಈತನ ಆಡಳಿತಾವಧಿಯಲ್ಲಿ ಹರಪನಹಳ್ಳಿ ವೈಭವದ ಸ್ಥಿತಿಯಲ್ಲಿತ್ತು ಎಂದು ತಿಳಿದುಬರುತ್ತದೆ. *