ಹರಪ್ಪ ಸಿಂಧೂ ನಾಗರಿಕತೆಯ ಪ್ರಮುಖ ನೆಲೆ. ಇದು ಪಾಕಿಸ್ತಾನದ ಪಂಜಾಬಿನ ಮಾಂಟೆಗೊಮರಿ ಜಿಲ್ಲಾ ಕೇಂದ್ರದಿಂದ ವಾಯವ್ಯಕ್ಕೆ ಸು. 25 ಕಿಮೀ ಹಾಗೂ ಲಾಹೋರ್‍ನಿಂದ 187 ಕಿಮೀ ದೂರದಲ್ಲಿ ರಾವಿನದಿ ಎಡದಂಡೆಯ ಮೇಲಿದೆ. ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯದ ಅಧಿಕಾರಿ ದಯಾರಾಮ್ ಸಹಾನಿ ಇದನ್ನು ಮೊದಲು ಉತ್ಖನನ ಮಾಡಿದರು(1921). ಭಾರತ ಉಪಖಂಡದಲ್ಲಿ ಕಣ್ಮರೆಯಾಗಿದ್ದ ಸಿಂಧೂ ಕಣಿವೆ ನಾಗರಿಕತೆ ಬಗ್ಗೆ ವರದಿ ಮಾಡಿ ಪ್ರಪಂಚದ ಗಮನ ಸೆಳೆದರು. ಈ ನೆಲೆ ಮೊದಲು ಸಂಶೋಧನೆಗೊಂಡಿದ್ದರಿಂದ ಕೆಲವು ವಿದ್ವಾಂಸರು ಹರಪ್ಪ ಸಂಸ್ಕøತಿ ಎಂದು ಕರೆಯುತ್ತಾರೆ. 1826 ರಲ್ಲಿ ಅಮೆರಿಕದ ಎಂಜಿನಿಯರ್ ಚಾಲ್ರ್ಸ್ ಮಾಸನ್ ಈ ನೆಲೆಯಲ್ಲಿ ಎರಡು ದಿಬ್ಬ ಇರುವುದಾಗಿ ವರದಿ ಮಾಡಿದ್ದ. 1862 ರಲ್ಲಿ ಪ್ರಾಚ್ಯವಸ್ತು ಸಂಶೋಧನಾಧಿಕಾರಿ ಅಲೆಕ್ಸಾಂಡರ್ ಕನಿಂಗ್‍ಹ್ಯಾಮ್ ಪ್ರಾಥಮಿಕ ಶೋಧನೆ ಕೈಗೊಂಡು ಕೆಲವು ಮುದ್ರಿಕೆ ಹಾಗೂ ಚಿತ್ರಲಿಪಿ ಪತ್ತೆಹಚ್ಚಿ 1875 ರಲ್ಲಿ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯದಲ್ಲಿ ವರದಿ ಮಾಡಿದ. ಅನಂತರ ಜಾನ್ ಮಾರ್ಷಲ್ 1924 ಸೆಪ್ಟಂಬರ್ 20 ರಂದು ಇಲಸ್ಟ್ರೇಟೆಡ್, ಲಂಡನ್ ನ್ಯೂಸ್ ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿ ಜಾಹಿರುಗೊಳಿಸಿದ. ಇಲ್ಲಿ ಕೋಟೆ ಗೋಡೆ, ಕಟ್ಟಡ, ಉಗ್ರಾಣ, ಸಮಾಧಿಗಳು ಹಾಗೂ ಇತರ ವಸ್ತುಗಳು ದೊರೆತಿವೆ. ಇಲ್ಲಿಯ ದಕ್ಷಿಣ ದಿಬ್ಬ ಚಿಕ್ಕದಿದ್ದು ಉತ್ತರ-ದಕ್ಷಿಣವಾಗಿ 450 ಮೀ, ಪೂರ್ವ ಪಶ್ಚಿಮವಾಗಿ 196 ಮೀ ಉದ್ದದ ಕೋಟೆಗೋಡೆ ನಾಶವಾಗಿದೆ. ಇದರಲ್ಲಿ ಪ್ರವೇಶದ್ವಾರ, ಪಹರೆ ಕೋಣೆ, ಕಾವಲುಗಾರರ ವಸತಿಗಳಿವೆ. ಇಲ್ಲಿನ ಕಟ್ಟಡಗಳನ್ನು ಸುಟ್ಟ ದಪ್ಪ ಇಟ್ಟಿಗೆಯಿಂದ 6 ಬಾರಿ ನಿರ್ಮಿಸಲಾಗಿದೆ. ಚರಂಡಿ ವ್ಯವಸ್ಥೆ ಎರಡು ಅಥವಾ ಹೆಚ್ಚು ಅಂತಸ್ತುಳ್ಳ ಮನೆ, ಮೆಟ್ಟಿಲು ವ್ಯವಸ್ಥೆಗಳಿವೆ. ಕೋಟೆಯ ಹೊರಗೆ ಕೂಲಿಮನೆಗಳು ಮತ್ತು 275 ಚ.ಮೀ ಉಗ್ರಾಣ ದೊರೆತಿದೆ. ಉಗ್ರಾಣ ಕೋಟೆಗೋಡೆಯ ಹೊರಭಾಗದಲ್ಲಿದೆ. ಆದರೆ ಮೊಹೆಂಜೊದಾರೊದಲ್ಲಿ ಉಗ್ರಾಣ ಕೋಟೆಯ ಒಳಗಿದೆ. ಉಗ್ರಾಣದಲ್ಲಿ 15.24x6.10 ಮೀ. ಅಳತೆಯ ಒಂದೊಂದು ಸಾಲಿನಲ್ಲಿ 6ರಂತೆ 2 ಸಾಲುಗಳ 12 ಉಗ್ರಾಣಗಳಿವೆ. ಈ ಉಗ್ರಾಣಗಳ ಮಧ್ಯದ ದಾರಿ 7.01 ಮೀ ನಷ್ಟಿದ್ದು, ಸುಟ್ಟ ಇಟ್ಟಿಗೆ ಹಾಗೂ ಮಣ್ಣಿನಿಂದ ಗಟ್ಟಣೆ ಮಾಡಿದ 1.22 ಮೀ ಎತ್ತರದ ವೇದಿಕೆಯ ಮೇಲೆ ನಿಂತಿದೆ. ಉಗ್ರಾಣಕ್ಕೆ ನದಿಯ ಉತ್ತರದ ಕಡೆ ಪ್ರವೇಶದ್ವಾರವಿದ್ದು ಧಾನ್ಯ ಸಾಗಿಸಲು ದೋಣಿಗಳನ್ನು ಬಳಸಿದಂತಿದೆ. ಉಗ್ರಾಣದ ಒಟ್ಟು ಜಾಗ 838 ಚ.ಮೀ.

ಕಾರ್ಮಿಕರ ಮನೆಗಳು ಬಿಡಿ ಬಿಡಿಯಾಗಿ ಎರಡು ಸಾಲುಗಳಲ್ಲಿದ್ದು ಪ್ರತಿ ಮನೆಯೂ 18x8 ಮೀ ಗಳಷ್ಟಿದೆ. ಪ್ರತಿ ಮನೆಯನ್ನು ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಪ್ರತ್ಯೇಕವಾದ 2 ಕೋಣೆಗಳು ಹಾಗೂ ವಿಶಾಲವಾದ ಅಂಗಳಗಳಿವೆ. ಈ ಮನೆಗಳ ಪಕ್ಕದಲ್ಲಿಯೇ ಕಣಜವಿದ್ದು ಧಾನ್ಯಗಳ ಹೊಟ್ಟನ್ನು ತೆಗೆಯಲು ಬಳಸುತ್ತಿದ್ದ ವೃತ್ತಾಕಾರ ಸಾಮಗ್ರಿಗಳು ಕಂಡುಬಂದಿವೆ. 16 ಕುಲುಮೆಗಳು ದೊರೆತಿದ್ದು, ಕಂಚು ಮತ್ತಿತರ ಲೋಹಗಳನ್ನು ಸಿದ್ಧ ವಸ್ತುಗಳಾಗಿ ಇಲ್ಲಿಯ ಜನರು ತಯಾರಿಸುತ್ತಿದ್ದರು.

ಹರಪ್ಪದಲ್ಲಿ ಮಡಕೆ, ಚರ್ಟ್ ಕಲ್ಲು, ತಾಮ್ರ ಮತ್ತು ಕಂಚಿನ ಸಲಕರಣೆ, ಟೆರ್ರಕೋಟ ಚಿತ್ರ ಮತ್ತು ಮುದ್ರೆಗಳು ದೊರಕಿದ್ದು, ಸಿಂಧೂ ನಾಗರಿಕತೆಯ ವೈಶಿಷ್ಟ್ಯಗಳಾಗಿವೆ. ಇಲ್ಲಿ 891 ಮುದ್ರೆಗಳು ಸಿಂಧೂ ನಾಗರಿಕತೆಯ ಸೇ. 36.12 ರಷ್ಟು ದೊರೆತಿವೆ. ಜಿನ ಅಥವಾ ಯಕ್ಷನ ನಗ್ನ ಪುರುಷನ ಕೆಂಪು ಕಲ್ಲಿನ ವಿಗ್ರಹ, ನೃತ್ಯಭಂಗಿಯಲ್ಲಿರುವ ಚಿತ್ರ, ಪಶುಪತಿ ಶಿವನ ಯೋಗ ಮುದ್ರಾ ವಿಗ್ರಹಗಳು ದೊರೆತಿವೆ. ಒಂದು ಮುದ್ರೆಯಲ್ಲಿ ನಗ್ನ ಸ್ತ್ರೀಯ ಗರ್ಭದಿಂದ ಸಸ್ಯವೊಂದು ಬರುತ್ತಿರುವುದು ಹಾಗೂ ಜೋಡಿ ಪ್ರಾಣಿ ಕಾಣಿಸುತ್ತದೆ. ಇದರಿಂದ ಸಿಂಧೂ ಜನರು ಮಾತೃದೇವತೆಯನ್ನು ಪೂಜಿಸುತ್ತಿದ್ದರೆಂದು ಹಾಗೂ ಬಲಿ ನೀಡುತ್ತಿದ್ದ ರೆಂದು ಭಾವಿಸಲಾಗಿದೆ.

ಹರಪ್ಪದ ಕೋಟೆಗೋಡೆಯ ಪ್ರದೇಶದಲ್ಲಿ ವಿವಿಧ ರೀತಿಯ 67 ಸಮಾಧಿಗಳನ್ನು ಮಾರ್ಟಿಮರ್ ವ್ಹೀಲರ್ ಪತ್ತೆ ಹಚ್ಚಿದ. ಸತ್ತ ದೇಹವನ್ನು ಉತ್ತರಕ್ಕೆ ತಲೆಮಾಡಿ ಸಮಾಧಿಯಲ್ಲಿಟ್ಟು ವ್ಯಕ್ತಿಯ ಅವಶ್ಯ ವಸ್ತುಗಳನ್ನು ಜೊತೆಯಲ್ಲಿ ಮಡಕೆಯಲ್ಲಿಟ್ಟು (ಆಭರಣ, ಚಮಚ, ಪ್ರಾಣಿಮಾಂಸ ಇತ್ಯಾದಿ) ಹೂಳುತ್ತಿದ್ದರು. ಸಮಾಧಿ ಗುಂಡಿಯನ್ನು 15ರಿಂದ 120 ಮಡಕೆಗಳನ್ನಿಡುವಷ್ಟು ವಿಶಾಲವಾಗಿ ಇಟ್ಟಿಗೆಯಿಂದ ಕಟ್ಟುತ್ತಿದ್ದರು. ಅಲ್ಲದೆ 12 ಸಮಾಧಿಗಳಲ್ಲಿ ಕಂಚಿನ ಕನ್ನಡಿಗಳು ದೊರೆತಿವೆ. ಇಲ್ಲಿ ಸ್ಫಟಿಕಾ ಕೃತಿಯ ಮೂಲ ಲೋಹದ ಕಡ್ಡಿ, ಮುತ್ತಿನ ಚಿಪ್ಪು, ತಾಮ್ರದ ಕನ್ನಡಿ, ಕತ್ತಿನ ಸರ, ಬೆರಳುಂಗುರ, ಪಾತ್ರೆ, ಮಣಿ, ಬಳೆ ಇತ್ಯಾದಿ ವಸ್ತುಗಳು ದೊರೆತಿವೆ. ಸ್ತ್ರೀ ಅಸ್ಥಿಪಂಜರದಲ್ಲಿ ಆಭರಣ ದೊರೆತಿದೆ. ಇಲ್ಲಿ ಒಂದು ಜೋಡಿನ ಹೊದಿಕೆಯಲ್ಲಿ ಮುಚ್ಚಲ್ಪಟ್ಟ ದೇಹ, ಮರದ ಸಂಪುಟದಲ್ಲಿ ದೊರೆತಿದ್ದು ಇದು ಹರಪ್ಪ ಸಂಸ್ಕøತಿಗೆ ಸಾಮಾನ್ಯವಲ್ಲದಿದ್ದರೂ ಸಮಕಾಲೀನ ಮೆಸಪೊಟೇಮಿಯದ ಸಾಮಾನ್ಯ ಪದ್ಧತಿಯಾಗಿದ್ದು ಪಾಶ್ಚಾತ್ಯ ದೇಶದ ಒಬ್ಬ ಮನುಷ್ಯ ಇಲ್ಲಿ ಸಮಾಧಿ ಮಾಡಲ್ಪಟ್ಟಿರುವ ಸಾಧ್ಯತೆ ಇದೆ. ಇಲ್ಲಿಯ ಮೇಲಂತರದ ಪದರದಲ್ಲಿ ದೊರೆತ ಸಮಾಧಿಯಲ್ಲಿನ ಅರ್ಮೆನಾಯ್ಡ್ ಜನಾಂಗಕ್ಕೆ ಸೇರಿದ ತಲೆ ಬುರುಡೆ, ಹರಪ್ಪ ನಗರದ ಮೇಲೆ ದಾಳಿ ಮಾಡಿದ ದಾಳಿಕಾರನದು ಎಂದು ನಂಬಲಾಗಿದೆ. ಅಲ್ಲದೆ ಇಲ್ಲಿ ಕಲ್ಲಂಗಡಿ ಬೀಜ, ಸುಟ್ಟ ಬಟಾಣಿ, ಎಳ್ಳು, ಗೋದಿ, ಬಾರ್ಲಿ ಧಾನ್ಯಗಳೂ ದೊರೆತಿವೆ.

ಹರಪ್ಪದ ಹೆಚ್ಚಿನ ಸಂಶೋಧನೆಯನ್ನು ಮಾಧವ ಸ್ವರೂಪ್ ವತ್ಸ ಮತ್ತು ಕೆ.ಎನ್.ದೀಕ್ಷಿತ್ ನಡೆಸಿ 1923—34 ರ ಅವಧಿಯಲ್ಲಿ ಉಗ್ರಾಣವನ್ನು ಪತ್ತೆ ಹಚ್ಚಿದರು. 1940 ರಲ್ಲಿ ವ್ಯಾಟ್ಸ್, 1962 ರಲ್ಲಿ ಮಾರ್ಟಿಮರ್ ವ್ಹೀಲರ್, 1966 ರಲ್ಲಿ ಪಾಕಿಸ್ತಾನದ ಪುರಾತತ್ತ್ವ ಇಲಾಖೆಯ ಮಹಮದ್ ರಫಿûಕ್ ಮೊಗಲ್ ಕೈಗೊಂಡರು. ಇದರ ಕ್ರಮಬದ್ಧ ಬಹು ಶಿಸ್ತಿನ ಮೊದಲ ಉತ್ಖನನ 1986-90ರ ಅವಧಿಯಲ್ಲಿ ಹರಪ್ಪ ಆರ್ಕಿಯಲಾಜಿಕಲ್ ಪ್ರಾಜೆಕ್ಟ್, ಜಾರ್ಜ್ ಎಫ್ ಡೇಲ್ಸ್ ಮತ್ತು ಜೆ. ಮಾರ್ಕ್ ಕಿನೊಯರ್ ಮಾರ್ಗದರ್ಶನದಲ್ಲಿ ನಡೆಯಿತು. ಇದಕ್ಕೆ ರಿಚರ್ಡ್ ಎಚ್. ಮಿಡೊಲ್ ಸಹ-ನಿರ್ದೇಶಕನಾಗಿದ್ದ. ಇದನ್ನು ಪಾಕಿಸ್ತಾನದ ಪುರಾತತ್ತ್ವ ಇಲಾಖೆ ಮತ್ತು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಬರ್ಕ್‍ಲಿ ತಂಡ ಜಂಟಿಯಾಗಿ ನಡೆಸಿತು. ಹರಪ್ಪದಲ್ಲಿ ಸಿಕ್ಕಿದ ಹೊಸ ಶೋಧನೆಗಳು (1995-98) ಎಂಬ ವರದಿಯನ್ನು ಫೆಬ್ರವರಿ 1999 ರಲ್ಲಿ ಬಿ.ಬಿ.ಸಿ. ವಾರ್ತೆ ಬಿತ್ತರಿಸಿತು. ಸೀತಾ ಎನ್. ರೆಡ್ಡಿ, ಎಂ.ಎಲ್.ಮಿಲ್ಲರ್, ರೊನಾಲ್ಡ್ ಅಮುಂಡ್‍ಸನ್, ಇಲಿಸೆ ಪೆಂಡಲ್, ಬ್ರೈನ್.ಇಹೆಮ್‍ಪಿಲ್, ಜಾನ್.ಆರ್.ಲೂಕಾಕ್ಸ್, ಕೆ.ಎ.ಕೆನಡಿ ಇಲ್ಲಿ ಸಂಶೋಧನೆ ಮಾಡಿ ಹಲವಾರು ವಿಚಾರಗಳನ್ನು ಹೊರಗೆಡವಿದರು. ಕ್ರಿ.ಪೂ. 3500ರ ಅತ್ಯಂತ ಪ್ರಾಚೀನ ಬರೆವಣಿಗೆಯನ್ನು ಮಡಕೆಯ ಚೂರೊಂದರಲ್ಲಿ ಪತ್ತೆ ಹಚ್ಚಿದರು. ಇಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯವಿರುವ ಹಲವಾರು ವಿಷಯಗಳಿವೆ. ಬಹುಪಾಲು ಪ್ರಾಚ್ಯ ಸಂಶೋಧಕರು ಪ್ರಾಚೀನ ಹರಪ್ಪ, ಮೇಲಣ ಸಿಂಧೂ ಪ್ರದೇಶದ ನಗರ ಕೇಂದ್ರವಾಗಿತ್ತೆಂದೂ ಸಿಂಧೂ ನಾಗರಿಕತೆಯ ಪ್ರಮುಖ ಕೇಂದ್ರವಾಗಿತ್ತೆಂದೂ ಭಾವಿಸಿದ್ದಾರೆ. (ಆರ್.ಕೆ.)