ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರಿದಾಸಭಟ್ಟ, ಕು ಶಿ

ಹರಿದಾಸಭಟ್ಟ, ಕು ಶಿ 1924-2000. ಪ್ರಸಿದ್ಧ ಜಾನಪದ ತಜ್ಞ. ಶಿಕ್ಷಣ, ಅರ್ಥಶಾಸ್ತ್ರ, ಪತ್ರಿಕಾರಂಗ, ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಕು.ಶಿ. ಎಂದು ಹೆಸರಾದ ವಿದ್ವಾಂಸರು. ಕುಂಜಿಬೆಟ್ಟು ಶಿವ ಹರಿದಾಸ ಭಟ್ಟ ಇವರ ಪೂರ್ಣ ಹೆಸರು. 1924ರಲ್ಲಿ ಉಡುಪಿ ಜಿಲ್ಲೆಯ ಕುಂಜಿಬೆಟ್ಟುವಿನಲ್ಲಿ ಇವರು ಜನಿಸಿದರು. ಇವರ ತಂದೆ ಶಿವಗೋಪಾಲ ಭಟ್ಟ, ತಾಯಿ ಕಮಲಮ್ಮ. ಪ್ರಾಥಮಿಕ ಶಿಕ್ಷಣವನ್ನು ಕಡಿಯಾಳಿ ಶಾಲೆಯಲ್ಲಿ ಮುಗಿಸಿ(1929-37), ಮದರಾಸಿನ ಕನ್ನಡ ವಿದ್ವಾನ್ ಪರೀಕ್ಷೆ, ಕನ್ನಡ ಜಾಣ ಪರೀಕ್ಷೆಗಳಲ್ಲಿ ತೇರ್ಗಡೆಯಾದರು(1940). ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇರಿದರು(1944). ಹಿಂದಿ ರಾಷ್ಟ್ರಭಾಷಾ ವಿಶಾರದ ಪರೀಕ್ಷೆ ಪಾಸು ಮಾಡಿ ಮದರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿ ಅರ್ಥಶಾಸ್ತ್ರವನ್ನು ಐಚ್ಛಿಕವಾಗಿ ಓದಿದರು(1946). ಇಟಲಿಯಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಉನ್ನತ ವ್ಯಾಸಂಗ ಕೈಗೊಂಡರು(1963). ಉಡುಪಿಗೆ ಹಿಂದಿರುಗಿದ ಇವರು ಮಹಾತ್ಮಗಾಂಧೀ ಮೆಮೋರಿಯಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, ಪ್ರಾಂಶುಪಾಲರಾಗಿ ನಿವೃತ್ತರಾದರು(1964-80).

ವಿಭಿನ್ನ ಕ್ಷೇತ್ರಗಳಲ್ಲಿ ಇವರು ಮಾಡಿದ ಸಾಧನೆ ಗಮನಾರ್ಹವಾದ್ದು. ಅಂಕಣಕಾರರಾಗಿ ಲೋಕಾಭಿರಾಮ ಶೀರ್ಷಿಕೆಯಡಿ ಇವರು ಬರೆದ ಲೇಖನಗಳು ಇದೇ ಹೆಸರಿನ ಮೂರು ಸಂಪುಟಗಳಲ್ಲಿ (1971, 73 ಹಾಗೂ 77) ಪ್ರಕಟವಾಗಿವೆ. ವಿಚಾರ, ವಿಮರ್ಶೆಗಳನ್ನೊಳಗೊಂಡ ಇಲ್ಲಿನ ಬರೆಹಗಳು ಲಘು ಪ್ರಬಂಧ ರೂಪದಲ್ಲಿವೆ. ಸದಭಿರುಚಿಯ ಹಾಸ್ಯ ಇಲ್ಲಿ ಕಾಣುವ ಮತ್ತೊಂದು ಗುಣ. ಇವರ ಸಾಹಿತ್ಯ ಕೃಷಿ ಆರಂಭವಾದುದು ಪ್ರೇಮ್‍ಚಂದರ ಗಬನ್ ಕಾದಂಬರಿಯ ಅನುವಾದದಿಂದ (ರಮಾನಾಥ,1943). ತರುವಾಯ ಯುಗವಾಣಿ ಕವನ ಸಂಕಲನ ಪ್ರಕಟಿಸಿದರು (1949). ಪುಸ್ತಕ ಪುರಾಣ - ಪ್ರಬಂಧ ಸಂಕಲನ (1950). ಅವರು ಯುದ್ಧಕ್ಕೆ ಹೋಗಲಿಲ್ಲ(1953) ಸಣ್ಣಕಥೆ, ಕಾಲವು ಬದಲಾಗಿದೆ(1954) ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಏಶಿಯಾದ ಸಂಪತ್ತು(1954) ಇವರ ಪ್ರಮುಖ ಅರ್ಥಶಾಸ್ತ್ರೀಯ ಕೃತಿ. ಇತಾಲಿಯಾ ನಾನು ಕಂಡಂತೆ(1971), ಜಗದಗಲ (1981), ಒಮ್ಮೆ ರಶಿಯಾ ಇನ್ನೊಮ್ಮೆ ಇತಾಲಿಯಾ (1983) - ಇವರ ಪ್ರಸಿದ್ಧ ಪ್ರವಾಸ ಕಥನಗಳು. ರಂಗಾಯನ(1987) ಯಕ್ಷಗಾನ ತಂಡದೊಂದಿಗೆ ಇವರು ಪ್ರವಾಸ ಮಾಡಿದ ಅನುಭವ ಕಥನ. ತುಳು, ಇಂಗ್ಲಿಷ್ ಭಾಷೆಗಳಲ್ಲಿಯೂ ಇವರು ಕೃತಿರಚನೆ ಮಾಡಿದ್ದಾರೆ. ಇವರು ಸಂಪಾದಿಸಿದ ಗ್ರಂಥ ಹಾಗೂ ನಿಯತಕಾಲಿಕ ಸಂಚಿಕೆಗಳು ಪ್ರಸಿದ್ಧವಾಗಿವೆ. ಕಲಾವಿದ ಕಟ್ಟಂಗೇರಿ ಕೃಷ್ಣ ಹೆಬ್ಬಾರ - ಕಲೆ ಮತ್ತು ಬದುಕು (1988) ಇವರು ರಚಿಸಿದ ಜೀವನ ಚರಿತ್ರೆ. ನವೋದಯ ಪ್ರಕಾಶನ, ಗೋವಿಂದ ಪೈ ಸಂಶೋಧನಾ ಕೇಂದ್ರ, ಜಾನಪದ ರಂಗಕಲೆಗಳ ಕೇಂದ್ರದ ಪ್ರಕಾಶನದ ಮೂಲಕ ಅಸಂಖ್ಯ ಬರೆಹಗಾರರ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.

ಯಕ್ಷಗಾನ ಕಲೆಗೆ ವಿಶೇಷ ಪ್ರಾಶಸ್ತ್ಯ ನೀಡಿದ ಇವರು ಈ ಕಲೆಯನ್ನು ಹೊರದೇಶಕ್ಕೆ ಕೊಂಡೊಯ್ದು ಪ್ರದರ್ಶಿಸಿದ ಮೊದಲಿಗರು. ಇವರು ಲಂಡನ್, ರಷ್ಯ, ಬಲ್ಗೇರಿಯ, ಯೂಗೋಸ್ಲಾವಿಯ, ಹಾಂಕಾಂಗ್, ಹಂಗರಿ, ಇಟಲಿ, ಅಬುದಾಭಿ, ಸಿಂಗಪುರ, ಹಾಲೆಂಡ್, ಬೆಲ್ಜಿಯಮ್, ಫಿನ್ಲೆಂಡ್ ಮುಂತಾದ ದೇಶಗಳಲ್ಲಿ ಯಕ್ಷಗಾನ ಪ್ರವಾಸ ಮಾಡಿದ್ದಾರೆ. ಇವರು ಕರ್ನಾಟಕದ ಡೊಳ್ಳುಕುಣಿತ, ಕಂಸಾಳೆ, ತೊಗಲುಬೊಂಬೆಯಾಟ ಹಾಗೂ ಸೂತ್ರದ ಬೊಂಬೆಯಾಟಗಳು ವಿದೇಶಗಳಲ್ಲಿ ಮೊದಲಬಾರಿ ಪ್ರದರ್ಶನ ಕಾಣಲು ಕಾರಣರಾದರು.

ಇವರು ಆರಂಭಿಸಿದ ತುಳು ನಿಘಂಟು ಯೋಜನೆಯಿಂದ (1979) ತುಳು ಭಾಷೆಗೆ ವಿಶೇಷ ಮನ್ನಣೆ ಪ್ರಾಪ್ತವಾಯಿತು. ಇವರು ಕಟ್ಟಿ ಬೆಳೆಸಿದ ಸಂಸ್ಥೆಗಳಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಕರ್ನಾಟಕ ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್.ಆರ್.ಸಿ,1983) ಮುಖ್ಯವಾದುವು. ಇವು ನಿರಂತರ ಸಂಶೋಧನೆ, ಪ್ರಕಟಣೆ ಮೊದಲಾದುವುಗಳಲ್ಲಿ ನಿರತವಾಗಿವೆ. ಆರ್.ಆರ್.ಸಿ. ಕೇಂದ್ರ ಕ್ಷೇತ್ರಕಾರ್ಯ, ಬಹುಮಾಧ್ಯಮ ದಾಖಲಾತಿ, ಮಾಹಿತಿಗಳ ಕಂಪ್ಯೂಟರೀಕರಣ, ರಕ್ಷಣೆ, ಪ್ರಚಾರ ಮುಂತಾದುವನ್ನು ನಡೆಸುತ್ತಿದೆ.

ಇವರು ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್‍ಗಳ ಸದಸ್ಯರಾಗಿದ್ದರು. ಇವರಿಗೆ ದೊರೆತ ಪ್ರಶಸ್ತಿ, ಗೌರವಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1982), ಕರ್ನಾಟಕ ರಾಜ್ಯ ಪ್ರಶಸ್ತಿ(1985), ಫಿನ್ಲೆಂಡ್‍ನ ಗೌರವ(1986) ಮುಖ್ಯವಾದುವು. ಇವರಿಗೆ 1989ರಲ್ಲಿ ಲೋಕಮಿತ್ರ ಅಭಿನಂದನ ಗ್ರಂಥವನ್ನು ಅರ್ಪಿಸಲಾಗಿದೆ. ಇವರು 2000 ಆಗಸ್ಟ್ 20ರಂದು ನಿಧನರಾದರು. *