ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರಿಪ್ರಸಾದ್ ಚೌರಾಸಿಯ

ಹರಿಪ್ರಸಾದ್ ಚೌರಾಸಿಯ 1938-. ಪ್ರಸಿದ್ಧ ಹಿಂದುಸ್ಥಾನಿ ಬಾನ್ಸುರಿ ವಾದಕರು. 1938 ಜುಲೈ 1 ರಂದು ಅಲಹಾಬಾದ್‍ನಲ್ಲಿ ಜನಿಸಿದರು. ಮೊದಲಿಗೆ ರಾಜಾರಾಮ್ ಅವರಲ್ಲಿ ಗಾಯನ ತರಬೇತಿ ಪಡೆದರು. ಇವರ ತಂದೆ ಕುಸ್ತಿ ಪಟು, ತಾಯಿ ಇವರು ಸಣ್ಣಂದಿನಲ್ಲೇ ನಿಧನರಾಗಿದ್ದು, ಸಂಗೀತದ ಗಂಧಗಾಳಿ ಗೊತ್ತಿಲ್ಲದ ಕೌಟುಂಬಿಕ ಪರಿಸರದಲ್ಲಿ ತಂದೆಯ ಆಸೆಗೆ ವಿರುದ್ಧವಾಗಿ ಕದ್ದು ಸಂಗೀತ ಕಲಿತು, 15ನೆಯ ವಯಸ್ಸಿನಲ್ಲಿ ತಮ್ಮ ಮೊದಲ ಸಂಗೀತ ಕಚೇರಿಯನ್ನು ರಾಜಾರಾಮ್ ಅವರೊಂದಿಗೆ ಆರಂಭಿಸಿದರು. ಅನಂತರ ಪ್ರಖ್ಯಾತ ಬಾನ್ಸುರಿ ವಾದಕ ಬೋಲಾನಾಥರ ವಾದನ ಶೈಲಿಗೆ ಮರುಳಾಗಿ ವಾರಾಣಸಿಯಲ್ಲಿ 1957 ರಿಂದ ಸತತವಾಗಿ 8 ವರ್ಷ ಬಾನ್ಸುರಿ ವಾದನ ಕಲಿತರು. ಅಲ್ಲಿಂದ ಮುಂದೆ ಒರಿಸ್ಸದ ಕಟಕ್ ಆಕಾಶವಾಣಿ ಕೇಂದ್ರದಲ್ಲಿ ಕೇಂದ್ರ ಕಲಾಕಾರರಾಗಿ, ಪ್ರಖ್ಯಾತ ಸಂಗೀತ ರಚನಕಾರರಾಗಿ ಪರಿಚಿತರು. ಹಿಂದುಸ್ಥಾನಿ ಶೈಲಿಯ ಮಹಾನ್ ತಾರೆಯರಾದ ಅಲ್ಲಾದೀನ್‍ಖಾನರ ಮಗಳೂ ಅಲಿ ಅಕ್ಬರ್‍ಖಾನರ ತಂಗಿಯೂ ಆದ ಅನ್ನಪೂರ್ಣಾದೇವಿಯಂಥವರ ಸುರ್‍ಬಹಾರ್‍ದಿಂದ ಪ್ರಭಾವಿತರಾಗಿ ತಮ್ಮದೇ ಆದ ಭಿನ್ನ ಛಾಪನ್ನು ಬಾನ್ಸುರಿ ವಾದನ ಕ್ಷೇತ್ರಕ್ಕೆ ನೀಡಿದರು. ಪ್ರಗತಿಪರತೆ, ಸಾಂಪ್ರದಾಯಿಕ ಶಾಸ್ತ್ರೀಯ ಶೈಲಿಗಳ ಹದವಾದ ಮೇಳೈಕೆ, ಆಲಾಪ್ ಮತ್ತು ಜೋಡ್ ಮಟ್ಟುಗಳನ್ನು ಬಾನ್ಸುರಿ ವಾದನಕ್ಕೆ ಒದಗಿಸಿದ ರೀತಿ ಇವರ ಶೈಲಿಯ ವೈಶಿಷ್ಟ್ಯ.

ಆಧುನಿಕ ಸಂಗೀತ ಕ್ಷೇತ್ರದಲ್ಲಿ ಬಾನ್ಸುರಿ ವಾದನದ ರುಚಿಯನ್ನು ಅಂತಾರಾಷ್ಟ್ರೀಯ ನೆಲೆಗೆ ಒಯ್ದ ಕೀರ್ತಿ ಇವರದ್ದು. ಎರಡೂ ಕೈಗಳನ್ನು ಚಾತುರ್ಯಪೂರ್ಣವಾಗಿ ಕುಣಿಸುವ ತಂತ್ರಗಾರಿಕೆ, ಊದುವ ಶೈಲಿ, ಗಾನ ಕ್ಷೇತ್ರದ ಗಾಯಕಿ ಹಾಗೂ ತಂತ್ರಕಾರಿ ಅಂಗ್ ಗಳ ವಿಶಿಷ್ಟ ಬಳಕೆ, ಸಿತಾರ್ ಹಾಗೂ ಸರೋದ್ ವಾದನ ಶೈಲಿಯನ್ನು ಬಾನ್ಸುರಿ ವಾದನ ತಂತ್ರಗಾರಿಕೆಯಲ್ಲಿ ಬಳಸಿಕೊಂಡ ರೀತಿಗಳು ಇವರ ಶೈಲಿಗೆ ಭಿನ್ನ ಮಾದರಿಯ ಸೌಂದರ್ಯಾಂಶವನ್ನು ಕೂಡಿಸಲು ಕಾರಣವಾಗಿವೆ. ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರೀಯ ಪುರಸ್ಕಾರ (1984), ಪದ್ಮಭೂಷಣ ಹಾಗೂ ಕೊನಾರ್ಕ್ ಸಮ್ಮಾನ್ (1992), ಯಶ್ ಭಾರತಿ ಸಮ್ಮಾನ್ (1994), ಪದ್ಮ ವಿಭೂಷಣ (2000) ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹಲವಾರು ಸನ್ಮಾನಗಳು ಸಂದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾನ್ ಮ್ಯಾಕ್ಲಲಿನ್ ಹಾಗೂ ಜಾನ್ ಗ್ಯಾರ್ಬರೆಕ್ ಅವರಂಥ ವಿದ್ವಾಂಸರೊಂದಿಗೆ ಧ್ವನಿ ಮುದ್ರಣಗಳನ್ನು ಹೊರತಂದದ್ದು ಇವರ ಖ್ಯಾತಿಯ ಮತ್ತೊಂದು ಮಜಲು. ಶಿವಕುಮಾರ್ ಶರ್ಮಾ ಅವರ ಸಹಯೋಗದೊಂದಿಗೆ ಸಿಲ್‍ಸಿಲಾ, ಚಾಂದನಿ ಮುಂತಾದ ಹಿಂದಿ ಚಿತ್ರಗಳಿಗೆ ಇವರು ಸಂಗೀತ ಸಂಯೋಜಿಸಿದ್ದಾರೆ. (ಜಿ.ಎನ್.ಎಸ್.)