ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರಿಶ್ಚಂದ್ರ

ಹರಿಶ್ಚಂದ್ರ

	ಸೂರ್ಯವಂಶದ ಅರಸು. ತ್ರಿಶಂಕು ರಾಜನಿಂದ ಸತ್ಯವ್ರತೆಯಲ್ಲಿ ಜನಿಸಿದವ. ಈತನಿಗೆ ಚಂದ್ರಮತಿ ಮುಂತಾದ ನೂರುಜನ ಪತ್ನಿಯರಿದ್ದರು. ಯಾರಿಗೂ ಮಕ್ಕಳಿರಲಿಲ್ಲ. ಆದ್ದರಿಂದ ವರುಣನನ್ನು ಪ್ರಾರ್ಥಿಸಿ ತನಗೆ ಪುತ್ರನಾದರೆ ವರುಣನಿಗೆ ಅವನನ್ನೇ ಬಲಿಕೊಡುವುದಾಗಿ ಹರಕೆ ಮಾಡಿಕೊಂಡ. ರೋಹಿತನೆಂಬ ಮಗ ಜನಿಸಿದ. ಮಗನನ್ನು ತನಗೆ ಬಲಿಕೊಡುವಂತೆ ವರುಣ ಕೇಳಿದ. ಆಗ ಹರಿಶ್ಚಂದ್ರ ಕ್ಷತ್ರಿಯನಾದ ಇವನು ಸ್ವಜಾತಿಗೆ ತಕ್ಕಂತೆ ಧನಸ್ಸು, ಬಾಣ, ಕವಚಗಳನ್ನು ಧರಿಸುವ ಸಾಮಥ್ರ್ಯ ಬಂದಮೇಲೆ ಯಾಗಕ್ಕೆ ಯೋಗ್ಯನಾದ ಪಶುವಾಗಬಲ್ಲ. ಆಗ ಬಂದರೆ ಯಾಗಮಾಡುವೆ ಎಂದ. ಈ ಪೂರ್ವ ವೃತ್ತಾಂತವನ್ನೆಲ್ಲ ಹರಿಶ್ಚಂದ್ರ ತನ್ನ ಮಗನಿಗೆ ಹೇಳಿದ. ಇದಕ್ಕೆ ರೋಹಿತ ಒಪ್ಪದೆ ಶರೀರ ರಕ್ಷಣೆಗೋಸ್ಕರ ಧನುರ್ಧಾರಿಯಾಗಿ ಕಾಡಿಗೆ ಹೋಗಿ ಒಂದು ವರ್ಷದ ತನಕ ಸಂಚಾರಮಾಡಿಬಂದ. ವರುಣ ಹರಿಶ್ಚಂದ್ರನಿಗೆ ಜಲೋದರರೋಗವನ್ನುಂಟುಮಾಡಿದ. ಇದನ್ನು ತಿಳಿದ ರೋಹಿತ ಊರಿಗೆ ಹೊರಟಾಗ ಇಂದ್ರನು ಹೋಗದಂತೆ ತಡೆದ. ಹೀಗೆ ಐದು ಸಲ ಆಯಿತು. ಆರನೆಯ ವರ್ಷ ರೋಹಿತ ಕಾಡಿನಲ್ಲಿ ಅಲೆಯುತ್ತಿದ್ದಾಗ ಅಜೀಗರ್ತನೆಂಬ ಋಷಿಯನ್ನು ಕಂಡ. ಆ ಋಷಿಯ ಮೂವರು ಮಕ್ಕಳ ಪೈಕಿ ಮಧ್ಯಮನಾದ ಶುನಶ್ಶೇಫನನ್ನು ತನಗೆ ಮಾರಬೇಕೆಂದೂ ಪ್ರತಿಯಾಗಿ ತಾನು ನೂರು ಹಸುಗಳನ್ನು ಕೊಡುವೆನೆಂದೂ ಹೇಳಿ ಶುನಶ್ಶೇಫನನ್ನು ಕೊಂಡುತಂದು ತಂದೆಗೆ ಕೊಟ್ಟ. ಹರಿಶ್ಚಂದ್ರ ರಾಜಸೂಯಯಾಗವನ್ನು ಆರಂಭಿಸಿ ಶುನಶ್ಶೇಫನನ್ನು ಯಜ್ಞಪಶುವನ್ನಾಗಿ ಮಾಡಲು ನಿಶ್ಚಯಿಸಿದ. ಶುನಶ್ಶೇಫ ದೇವತೆಗಳನ್ನು ಪ್ರಾರ್ಥಿಸಿದಾಗ ಅವನ ಕಟ್ಟುಗಳು ಬಿಚ್ಚಿಹೋದುವು. ಹರಿಶ್ಚಂದ್ರನ ಜಲೋದರರೋಗ ನಿವಾರಣೆಯಾಯಿತು. ಈ ವೃತ್ತಾಂತ ಐತರೇಯ ಬ್ರಾಹ್ಮಣದಲ್ಲಿ ಬಂದಿದೆ. 

ತ್ರಿಶಂಕುವಿನ ಮಗ ಹರಿಶ್ಚಂದ್ರ ಅಯೋಧ್ಯೆಯನ್ನು ಆಳುತ್ತಿದ್ದ. ಈತನಿಗೆ ಮಕ್ಕಳಿಲ್ಲದುದರಿಂದ ಮಗನನ್ನು ಪಡೆಯಲು ಚಮತ್ಕಾರಪುರ ವೆಂಬ ಕ್ಷೇತ್ರದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ತಪಸನ್ನಾಚ ರಿಸಿದ. ತಪಸ್ಸಿಗೆ ಮೆಚ್ಚಿದ ಶಿವ ಗೌರಿ ಗಣಗಳೊಡನೆ ಪ್ರತ್ಯಕ್ಷನಾಗಿ `ಬೇಕಾದ ವರವನ್ನು ಕೇಳಿಕೋ ಎಂದ. ಆಗ ಹರಿಶ್ಚಂದ್ರ ಒಬ್ಬ ಮಗನನ್ನು ಬೇಡಿದ. ಶಿವ ತಥಾಸ್ತು ಎಂದ. ಹರಿಶ್ಚಂದ್ರ ತನಗೆ ನಮಸ್ಕಾರ ಮಾಡಲಿಲ್ಲವೆಂದು ಕೋಪಸಿಕೊಂಡ ಗೌರಿ ಹುಟ್ಟಿದ ಮಗು ಅಲ್ಪಾಯುವಾಗಲಿ ಎಂದಳು. ಹರಿಶ್ಚಂದ್ರ ಮತ್ತೆ ಗೌರೀಮಹೇಶ್ವರರನ್ನು ಒಂದೇ ಆಸನದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಿದ. ಹರಿಶ್ಚಂದ್ರ ದೀರ್ಘಾಯು ಮಗನನ್ನು ಬೇಡಿದ. ಸುಪ್ರೀತಳಾದ ಗೌರಿ `ಅಲ್ಪಾಯುವಾದರೂ ನನ್ನ ಪ್ರಸಾದಾನುಗ್ರಹದಿಂದ ದೀರ್ಘಾಯುವಾಗುವನು ಎಂದಳು. ಈ ವೃತ್ತಾಂತ ಸ್ಕಾಂದಪುರಾಣದಲ್ಲಿ ಬಂದಿದೆ.

ಹರಿಶ್ಚಂದ್ರ ವಿಶ್ವಾಮಿತ್ರನ ಮೂಲಕ ರಾಜ್ಯಭ್ರಷ್ಟನಾಗಿ ಪತ್ನೀಪುತ್ರ ರೊಂದಿಗೆ ಕಾಶೀಪಟ್ಟಣವನ್ನು ಸೇರಿ ಹೆಂಡತಿಯಾದ ಚಂದ್ರಮತಿಯನ್ನು ಕಾಲಕೌಶಿಕನೆಂಬ ಬ್ರಾಹ್ಮಣನಿಗೆ ಮಾರಿ, ತನ್ನನ್ನೂ ವೀರಬಾಹುವೆಂಬ ಚಂಡಾಲನಿಗೆ ವಿಕ್ರಯಿಸಿಕೊಂಡು ಅನೇಕ ಕಷ್ಟಗಳನ್ನು ಅನುಭವಿಸಿ ಕೊನೆಗೆ ಈಶ್ವರನ ಅನುಗ್ರಹದಿಂದ ವಿಶ್ವಾಮಿತ್ರನ ಮೂಲಕ ತನ್ನ ರಾಜ್ಯವನ್ನು ಹಿಂದಕ್ಕೆ ಪಡೆದು ಪತ್ನೀಪುತ್ರರೊಂದಿಗೆ ಸುಖದಿಂದಿದ್ದ. ಇಲ್ಲಿ ಅಗ್ನಿಯೇ ಕಾಲಕೌಶಿಕನಾಗಿ, ಯಮನೇ ವೀರಬಾಹುಕನಾಗಿ ಮಾರುವೇಷದಿಂದಿದ್ದು ಹರಿಶ್ಚಂದ್ರನನ್ನು ಸತ್ಯ ಹಾಗೂ ಸತ್ವ ಪರೀಕ್ಷೆಗೆ ಒಳಪಡಿಸುತ್ತಾರೆ. ಇದಾವುದಕ್ಕೂ ಬಗ್ಗದ ಹರಿಶ್ಚಂದ್ರ ಸತ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಿಶ್ವಾಮಿತ್ರನಿಂದ ಅರ್ಧ ತಪೋಬಲವನ್ನು ಪಡೆಯುತ್ತಾನೆ. ಪುರಾಣಗಳಲ್ಲಿ ಬರುವ ಈ ವೃತ್ತಾಂತವನ್ನೇ ತನ್ನ ಕಾವ್ಯವಸ್ತುವನ್ನಾಗಿ ಮಾಡಿಕೊಂಡ ರಾಘವಾಂಕ ಸೊಗಸಾದ ಹರಿಶ್ಚಂದ್ರ ಕಾವ್ಯವನ್ನು ರಚಿಸಿದ್ದಾನೆ. (ಕೆ.ವೈ.ಎಸ್.)