ಹರಿಸೇವೆ ದೇವರಿಗೆ ಹೊತ್ತ ಹರಕೆ ತೀರಿಕೆಯ ಒಂದು ವಿಶಿಷ್ಟ ಬಗೆಯ ಜನಪದ ಆಚರಣೆ. ಹರಿಸೇವೆ ಎಂದರೆ ವಿಷ್ಣುವಿನ ಸೇವೆ ಎಂದರ್ಥ. ಆದರೆ ಯಾವುದೇ ದೈವವನ್ನು ಪೂಜಿಸಿ ಅನ್ನದಾನ ಮಾಡುವುದಕ್ಕೂ ಹರಿಸೇವೆ ಎನ್ನುವುದುಂಟು. ಇದರಲ್ಲಿ ಸೌಮ್ಯ ಹರಿಸೇವೆ ಮತ್ತು ಬಲಿ ಹರಿಸೇವೆ ಎಂದು ಎರಡು ವಿಧ. ಹರಿಯ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡುವುದು, ಹರಿಯ ಉತ್ಸವ ಏರ್ಪಡಿಸುವುದು, ಅಭಿಷೇಕ ಮಾಡಿಸುವುದು-ಇವು ಸೌಮ್ಯ ಹರಿಸೇವೆ. ಹರಿಯ ಹೆಸರಿನಲ್ಲಿ ಕುರಿ ಇಲ್ಲವೆ ಕೋಳಿಯನ್ನು ಬಲಿಕೊಟ್ಟು ಅನ್ನದಾನ ಮಾಡುವುದು-ಬಲಿ ಹರಿಸೇವೆ. ಬಲಿಕೊಡುವುದಾಗಿ ಹರಕೆ ಹೊತ್ತವರು ತಮ್ಮ ಮನೆಯಲ್ಲಿಯೇ ಕುರಿಗಳಿದ್ದರೆ ತಮಗೆ ಇಷ್ಟಬಂದಷ್ಟು ಕುರಿಗಳನ್ನು ಪೂಜಿಸಿ ದೇವರಿಗೆ ಬಿಟ್ಟ ಕುರಿ ಎಂಬ ಗುರುತಿಗಾಗಿ ಕುರಿಗಳ ಕಿವಿಯ ತುದಿಯನ್ನು ಕತ್ತರಿಸಿ, ಕೋಳಿಗಳಾಗಿದ್ದರೆ ಅವುಗಳ ತಲೆಯ ಮೇಲಿನ ಸ್ವಲ್ಪ ಪುಕ್ಕ ತರಿದು ಬೋಳುಮಾಡಿಬಿಡುತ್ತಾರೆ. ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಿಡುವುದಕ್ಕೆ ದೇವರಿಗೆ ಬಿಡುವುದು ಎನ್ನುತ್ತಾರೆ. ಹೀಗೆ ದೇವರಿಗೆ ಬಿಟ್ಟ ಪ್ರಾಣಿಗಳನ್ನು ಯಾವ ಕಾರಣದಿಂದಲೂ ಮಾರುವಂತಿಲ್ಲ ಹಾಗೂ ಬೇರೆ ಸಂದರ್ಭದಲ್ಲಿ ಕೊಲ್ಲುವಂತಿಲ್ಲ.

ಹರಿಸೇವೆಯನ್ನು ಹೆಚ್ಚಾಗಿ ಆಚರಿಸುವವರು ದಾಸಮತದವರು ಮತ್ತು ದಾಸಮತಾಭಿಮಾನಿಗಳು. ಈ ಸೇವೆಯನ್ನು ಕ್ರಮಬದ್ಧವಾಗಿ ಆಚರಿಸಲು ದಾಸಯ್ಯಗಳಿರುತ್ತಾರೆ. ಇವರಿಂದಲೇ ಶೂದ್ರರು ಹರಿಸೇವೆ ಮಾಡಿಸುವುದು ಪರಂಪರಾಗತವಾಗಿ ಬಂದಿದೆ. ದಾಸಯ್ಯಗಳ ಹತ್ತಿರ ಹರಿಸೇವೆಗಾಗಿ ವಿಶೇಷವಾಗಿ ಬಳಸುವ ಆಂಜನೇಯನ ಲೋಹದ ಮೂರ್ತಿ, ತಿರುಪತಿ ತಿಮ್ಮಪ್ಪನ ಹರಿಗೆ, ನರಸಿಂಹಸ್ವಾಮಿಯ ಲೋಹದ ಮೂರ್ತಿ ಇಲ್ಲವೆ ಹರಿಗೆ, ರಾಮಬಾಣ (ಬಿಲ್ಬಾಣ), ಬಾಂಕಿ, ಶಂಖ, ಜಾಗಟೆ, ಬವನಾಸಿ, ಗರುಡಗಂಬ ಮೊದಲಾದ ಪೂಜಾಸಾಧನಗಳಿರುತ್ತವೆ.

ಹಿಂದೆ ತಿರುಪತಿಗೆ ವಿಶೇಷವಾಗಿ ಹಳ್ಳಿಯ ಜನ ಸಾಮೂಹಿಕವಾಗಿ ಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಆಗ ತಿರುಪತಿ ತಿಮ್ಮಪ್ಪನ ಬಂಟನೆಂದು ದಾಸಯ್ಯನನ್ನು ಕರೆದುಕೊಂಡು ಹೋಗುತ್ತಿದ್ದುದು ವಾಡಿಕೆಯಾಗಿತ್ತು. ದಾಸಯ್ಯ ಅವರಿಗೆ ಯಾತ್ರಾಸ್ಥಳಗಳಲ್ಲಿ ಮಾರ್ಗದರ್ಶಕನಾಗುತ್ತಿದ್ದ. ಯಾತ್ರೆ ಹೊರಡುವ ಹಿಂದಿನ ದಿನ ಯಾತ್ರಿಕರೂ ದಾಸಯ್ಯಗಳೂ ಸೇರಿ ಹರಿಸೇವೆ ನೆರವೇರಿಸುತ್ತಿದ್ದರು.

ಯಾತ್ರೆ ಹೊರಡುವ ಹಿಂದಿನ ದಿನ ಸಾಯಂಕಾಲ ಯಾತ್ರಿಕರು ದಾಸಯ್ಯನ ಮನೆಯಲ್ಲಿಯೇ ಸ್ನಾನಮಾಡಿ ಅವನ ಕೈಯಿಂದಲೇ ತೀರ್ಥ ಹಾಕಿಸಿಕೊಳ್ಳಬೇಕು. ದಾಸಯ್ಯ ಹರಿಯ ಸ್ತುತಿಮಾಡಿ ತಿರುಮಂತ್ರ ಹೇಳಿ ಯಾತ್ರಾರ್ಥಿಗೆ ಸೀಗೆಕಾಯಿ ನುಂಗಿಸಿ, ತಲೆ ಹಾಗೂ ಮೈಗೆ ಅರಿಶಿನ ಹಾಕಿ ಶುದ್ಧಿ ಮಾಡುತ್ತಾನೆ. ಹೀಗೆ ಶುದ್ಧರಾದ ಯಾತ್ರಾರ್ಥಿಗಳೆ ಲ್ಲರೂ ದಾಸಯ್ಯನ ದೇವರ ಮನೆಯ ಮುಂದೆ ನಿಂತು, ಓಜೆಯಿಂದ ಒಡ್ಡಿರುವ ದೇವರನ್ನು ಅನನ್ಯಭಕ್ತಿಯಿಂದ ಪೂಜಿಸಿ ತೀರ್ಥ ತೆಗೆದುಕೊಳ್ಳುತ್ತಾರೆ. ಆ ದಿನ ರಾತ್ರಿ ದಾಸಯ್ಯಗಳ ಮನೆಯಲ್ಲಿ ಹರಿಸೇವೆ ನಡೆಯುತ್ತದೆ. ಅಂದು ದಾಸಯ್ಯಗಳೇ ಅವರೆಕಾಳಿನ ಸಾರು, ಹಿಟ್ಟು, ಅನ್ನ, ತಾಳದ, ಪಾಯಸಗಳ ಅಡುಗೆ ಮಾಡಿದ್ದು ಊರಿನ ಎಲ್ಲ ಶೂದಸಮುದಾಯಗಳ ಪ್ರಮುಖರನ್ನೂ ಪ್ರತಿಯೊಂದು ಮನೆಯಿಂದಲೂ ಒಬ್ಬ ಪ್ರತಿನಿಧಿಯನ್ನು ಹರಿಸೇವೆ ಪ್ರಸಾದ ಸ್ವೀಕರಿಸಲು ಆಹ್ವಾನಿಸಿರುತ್ತಾರೆ. ಅನ್ನಸಂತರ್ಪಣೆಯಾದ ಅನಂತರ ಅದೇ ರಾತ್ರಿ ಯಾತ್ರಾರ್ಥಿಗಳೆಲ್ಲರೂ ದಾಸಯ್ಯಗಳ ಜೊತೆ ಹರಿಯ ಹೆಸರು ಹೇಳಿ ಜೈಕಾರ ಹಾಕುತ್ತ ನಡೆಮಡಿ (ನಡೆಯುವ ದಾರಿಯಲ್ಲಿ ಹಾಕಿದ ಶುಭ್ರವಾದ ಪಂಚೆ ಅಥವಾ ದುಪ್ಪಟಿ ಮೇಲೆ ನಡೆದುಕೊಂಡು ಹೋಗುವುದು) ಮೇಲೆ ಊರುಸುತ್ತ ಪ್ರದಕ್ಷಿಣೆ ಹೊರಡುತ್ತಾರೆ. ದಾಸಯ್ಯಗಳಲ್ಲಿ ಪ್ರಮುಖರಾದವರು ಬಿಲ್ಬಾಣ ಹೊತ್ತು, ಶಂಖ, ಜಾಗಟೆ, ಬವನಾಸಿ ಧರಿಸಿ, ತಲೆಗೆ ವರ್ಣರಂಜಿತ ಬಟ್ಟೆಯ ಪೇಟ ಸುತ್ತಿ, ಪೇಟದ ಮುಂಭಾಗದಲ್ಲಿ ದೇವರ ಸಣ್ಣ ಮೂರ್ತಿಯನ್ನು ಕಟ್ಟಿಕೊಳ್ಳುತ್ತಾರೆ. ಆಗ ದಾಸಯ್ಯಗಳಿಂದ ಮಣೇವು ಹಾಕಿಸುವ ಕಾರ್ಯ ನಡೆಯುತ್ತದೆ. ಮೆರವಣಿಗೆ ಮುಗಿದಮೇಲೆ ಯಾತ್ರಾರ್ಥಿಗಳು ಅಂದು ಊರ ಮುಂದಿನ ದೇವಾಲಯದಲ್ಲಿ ತಂಗಿದ್ದು ಮಾರನೆಯ ದಿನ ಯಾತ್ರೆ ಹೊರಡುತ್ತಾರೆ.

ಊರ ಹರಕೆಯಿದ್ದರೆ ಹಳ್ಳಿಯ ಪ್ರತಿಮನೆಯಲ್ಲಿಯೂ ಬತ್ತ, ರಾಗಿ, ಅಕ್ಕಿ, ಹಸಿಟ್ಟು, ಕಾಳು, ಉಪ್ಪು, ಖಾರದ ಪುಡಿ, ಹುಣಿಸೆಹಣ್ಣು ಮೊದಲಾದ ಅಡುಗೆ ಪದಾರ್ಥಗಳನ್ನೆಲ್ಲ ಸಂಗ್ರಹಿಸಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಮೂರು ಹಳ್ಳಿ, ಐದು ಹಳ್ಳಿ, ಏಳು ಹಳ್ಳಿಗಳು ಒಟ್ಟಾಗಿ ಸೇರಿ ಹರಿಸೇವೆ ಮಾಡುತ್ತಾರೆ.

ಕೆಲವರು ಮದುವೆಯಲ್ಲಿಯೂ ಹರಿಸೇವೆ ಮಾಡಿಸುತ್ತಾರೆ (ಇದು ವೈಯಕ್ತಿಕ ಹರಿಸೇವೆ). ಚಪ್ಪರದ ದಿನ ಗಂಗೆಪೂಜೆಯಾದಮೇಲೆ ಹರಿಯ ಹೆಸರೆತ್ತಿ ಬಿಟ್ಟಿದ್ದ ಟಗರು ಅಥವಾ ಕುರಿಯನ್ನು ಪೂಜೆಮಾಡಿ ಬಲಿಕೊಟ್ಟು, ಅಡುಗೆ ಮಾಡಿ ದಾಸಯ್ಯಗಳನ್ನು ಕರೆದು ತಿರುಪತಿ ತಿಮ್ಮಪ್ಪನ ಹರಿಗೆ ತಂದಿಟ್ಟು, ಎಡೆಯಿಟ್ಟು ಪೂಜಿಸಿ ಹರಕೆ ಒಪ್ಪಿಸಿ ಅನ್ನಸಂತರ್ಪಣೆ ನಡೆಸುತ್ತಾರೆ. ಬಿಡಿದಿನಗಳಲ್ಲೂ ಹರಿಸೇವೆ ಮಾಡುವು ದಂಟು. ನರಸಿಂಹಸ್ವಾಮಿಗೆ ಹರಕೆ ಹೊತ್ತವರು ನರಸಿಂಹಸ್ವಾಮಿಯ ಬೆಟ್ಟಕ್ಕೆ ಹೋಗಿ ಕುರಿ ಕೊಯ್ದು ಅಡುಗೆಮಾಡಿ ದಾಸಯ್ಯಗಳಿಂದ ಧೂಪ ಹಾಕಿಸಿ, ಬಂದವರೆಲ್ಲರಿಗೂ ಹರಿಯ ಹೆಸರಿನಲ್ಲಿ ದಾಸೋಹ (ಅನ್ನದಾನ) ನಡೆಸಿ, ಬಲಿಯ ಹರಿಸೇವೆ ನಡೆಸುತ್ತಾರೆ.

ವೈದಿಕರೂ ಹರಿಸೇವೆ ಮಾಡುತ್ತಾರೆ. ಇವರಲ್ಲಿ ಇದು ಪ್ರತಿ ಏಕಾದಶಿಯ ದಿನ ನಡೆಯುತ್ತದೆ. ಆ ದಿನ ಮನೆಯವರೆಲ್ಲ ಉಪವಾಸ ವಿದ್ದು ಹರಿನಾಮಸ್ಮರಣೆ ಮಾಡಿ ಹರಿಯನ್ನು ಅನನ್ಯಭಕ್ತಿಯಿಂದ ಪೂಜಿಸುತ್ತಾರೆ. ದ್ವಾದಶಿಯ ದಿನ ಸೂರ್ಯೋದಯಕ್ಕೆ ಮೊದಲು ಹರಿಯ ಹೆಸರಿನಲ್ಲಿ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ಮಾಡುತ್ತಾರೆ. ಇವರಲ್ಲಿ ಬಲಿ ಹರಿಸೇವೆ ಇಲ್ಲ. (ಜಿ.ವಿ.ಡಿ.)