ಹರಿಹರ 1

	ಭಾರತದ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ದಾವಣಗೆರೆ ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕನ್ನು ಪೂರ್ವದಲ್ಲಿ ದಾವಣಗೆರೆ ತಾಲ್ಲೂಕೂ ದಕ್ಷಿಣದಲ್ಲಿ ಇದೇ ಜಿಲ್ಲೆಯ ಹೊನ್ನಾಳಿ ತಾಲ್ಲೂಕೂ ಪಶ್ಚಿಮದಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ತಾಲ್ಲೂಕುಗಳೂ ಉತ್ತರದಲ್ಲಿ ಹರಪನಹಳ್ಳಿ ತಾಲ್ಲೂಕೂ ಸುತ್ತುವರಿದಿವೆ. ಮಲೆಬೆನ್ನೂರು ಮತ್ತು ಹರಿಹರ ಹೋಬಳಿಗಳೂ ಜಿಲ್ಲೆಯಲ್ಲೇ ಚಿಕ್ಕದಾದ ಈ ತಾಲ್ಲೂಕಿನಲ್ಲಿ 86 ಗ್ರಾಮಗಳಿವೆ. ವಿಸ್ತೀರ್ಣ 486.8 ಚ.ಕಿಮೀ. ಜನಸಂಖ್ಯೆ 2,45,627.

ಜಿಲ್ಲೆಯ ಪಶ್ಚಿಮದಂಚಿನಲ್ಲಿರುವ ಈ ತಾಲ್ಲೂಕು ಹೆಚ್ಚು ಮೈದಾನ ಪ್ರದೇಶದಿಂದ ಕೂಡಿದೆ. ತುಂಗಭದ್ರಾ ಈ ತಾಲ್ಲೂಕಿನ ಪಶ್ಚಿಮದ ಎಲ್ಲೆಯಾಗಿ ಉತ್ತರಾಭಿಮುಖವಾಗಿ ಹರಿದು ಹಾವೇರಿ ಜಿಲ್ಲೆಯನ್ನು ಈ ತಾಲ್ಲೂಕಿನಿಂದ ವಿಂಗಡಿಸಿದೆ. ನದಿಯ ಬಲದಂಡೆ ಈ ತಾಲ್ಲೂಕಿಗೆ ಸೇರಿದ್ದು ವ್ಯವಸಾಯಕ್ಕೆ ಅನುಕೂಲವಾಗಿದೆ. ಹರಿದ್ರಾ ನದಿ ಹೊಳಲ್ಕೆರೆ ತಾಲ್ಲೂಕಿನ ಪಶ್ಚಿಮ ಬೆಟ್ಟಗಳಲ್ಲಿ ಹುಟ್ಟಿ ದಾವಣಗೆರೆ ತಾಲ್ಲೂಕಿನ ಮುಂಖಾಂತರ ಹರಿದು ಈ ತಾಲ್ಲೂಕನ್ನು ಪೂರ್ವದಲ್ಲಿ ಪ್ರವೇಶಿಸಿ ಸ್ವಲ್ಪದೂರ ವಾಯವ್ಯಾಭಿಮುಖವಾಗಿ ಹರಿದು ಅನಂತರ ಉತ್ತರಾಭಿಮುಖ ವಾಗಿ ಪ್ರವಹಿಸಿ ಹರಿಹರದ ಬಳಿ ತುಂಗಭದ್ರಾ ನದಿಯನ್ನು ಸೇರುವುದು. ಈ ನದಿಯನ್ನು ಸ್ಯಾಗಲಹಳ್ಳ ಮತ್ತು ಸೂಳೆಕೆರೆ ಹಳ್ಳ ಎಂದೂ ಕರೆಯುತ್ತಾರೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 634.6 ಮಿಮೀ. ಲಕ್ಕವಳ್ಳಿಯ ಭದ್ರಾಜಲಾಶಯದ ನಾಲೆಯಿಂದಲೂ ಈ ತಾಲ್ಲೂಕಿಗೆ ನೀರೊದಗುತ್ತದೆ. ಕಪ್ಪು ಮತ್ತು ಕೆಂಪು ಮಿಶ್ರಿತ ಮಣ್ಣಿನ ಭೂಮಿಯಿರುವ ಈ ತಾಲ್ಲೂಕಿನಲ್ಲಿ ಜೋಳ, ರಾಗಿ, ತೊಗರಿ, ಹತ್ತಿ, ಸೇಂಗಾ, ಮೆಣಸಿನಕಾಯಿ ಮತ್ತು ದ್ವಿದಳ ಧಾನ್ಯಗಳನ್ನೂ ಸ್ವಲ್ಪ ಬತ್ತವನ್ನೂ ಬೆಳೆಯುತ್ತಾರೆ.

ಈ ತಾಲ್ಲೂಕಿನಲ್ಲಿ ಹಿಂದೆ ಇದ್ದ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಕಡೆತದ ಯಂತ್ರಗಳೇ ಮೊದಲಾದ ಯಂತ್ರೋಪಕರಣ ಗಳನ್ನು ತಯಾರಿಸಲಾಗುತ್ತಿತ್ತು. ಇಲ್ಲಿ ಪಾಲಿಫೈಬರ್ ಕಾರ್ಖಾನೆಯಿದೆ. ಈ ಬಗೆಯ ಕಾರ್ಖಾನೆ ಇಡೀ ರಾಜ್ಯದಲ್ಲಿರುವುದು ಇದೊಂದೇ. ಎಣ್ಣೆಗಿರಣಿಗಳೂ ಇವೆ. ಒಂದು ಔದ್ಯೋಗಿಕ ತರಬೇತಿ ಕೇಂದ್ರವಿದೆ. ಬೆಂಗಳೂರು-ಧಾರವಾಡ ರೈಲುಮಾರ್ಗ ಈ ತಾಲ್ಲೂಕಿನ ಕೈಗಾರಿಕೆ ಮತ್ತು ವಾಣಿಜ್ಯಾಭಿವೃದ್ಧಿಗೆ ನೆರವಾಗಿದೆ.

ಮಲೆಬೆನ್ನೂರಿನ ಆಗ್ನೇಯಕ್ಕೆ, ಕುಮಾರನಹಳ್ಳಿಗೆ ಸು. 3 ಕಿಮೀ ದೂರದಲ್ಲಿರಿವ ಹಳ್ಳಿವನ ಗ್ರಾಮದಲ್ಲಿ ಒಂದು ಚಾಳುಕ್ಯ ದೇವಾಲಯದ ಅವಶೇಷವಿದ್ದು ಅದರ ಎದುರು ಚಾಳುಕ್ಯರ ಕಾಲದ ವೀರಗಲ್ಲುಗಳಿವೆ. ಹರಿಹರದ ದಕ್ಷಿಣಕ್ಕೆ 12 ಕಿಮೀ ದೂರದಲ್ಲಿರುವ ನಂದಿತಾವರೆಯಲ್ಲಿ ಪ್ರಸಿದ್ಧ ಈಶ್ವರ ದೇವಾಲಯವಿದೆ. ಇದನ್ನು ಅಮೃತಲಿಂಗ ಮಾಣಿಕೇಶ್ವರ ದೇವಾಲಯವೆಂದೂ ಕರೆಯುತ್ತಾರೆ. 1220ರಲ್ಲಿ ಹೊಯ್ಸಳ ಅಧಿಕಾರಿ ಮಾಣಿಕಣ್ಣ ಎಂಬವನು ಇದನ್ನು ಕಟ್ಟಿಸಿದ್ದೆಂದು ತಿಳಿದುಬರುತ್ತದೆ.

ಹರಿಹರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಚಿತ್ರದುರ್ಗಕ್ಕೆ ವಾಯವ್ಯದಲ್ಲಿ 78 ಕಿಮೀ ದೂರದಲ್ಲೂ ಬೆಂಗಳೂರು-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ದಾವಣಗೆರೆಗೆ ವಾಯವ್ಯದಲ್ಲಿ 14 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 87,749.

ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಈ ಪಟ್ಟಣ ಒಂದು ಕೈಗಾರಿಕಾ ಕೇಂದ್ರ. ಈ ಪಟ್ಟಣದ ಆರ್ಥಿಕ ಚಟುವಟಿಕೆಗಳಿಗೆ ಮತ್ತು ಔದ್ಯೋಗಿಕ ಅವಕಾಶಗಳಿಗೆ ಇಲ್ಲಿರುವ ಪಾಲಿಫೈಬರ್ ಕಾರ್ಖಾನೆ ಮತ್ತು ಇತರೇ ಸಣ್ಣ ಕೈಗಾರಿಕೆಗಳ ಘಟಕಗಳು ಮುಖ್ಯವಾದವುಗಳೆನ್ನ ಬಹುದು.

ಇಲ್ಲಿಯ ಸ್ಥಳಪುರಾಣದ ಪ್ರಕಾರ ಹಿಂದೆ ಇದು ಗುಹಾಸುರ ಎಂಬ ರಾಕ್ಷಸನ ರಾಜಧಾನಿಯಾಗಿತ್ತು. ಈತ ಬ್ರಹ್ಮನನ್ನು ಕುರಿತು ತಪಸ್ಸುಮಾಡಿ, ತನಗೆ ಹರಿಯಿಂದಾಗಲಿ, ಹರನಿಂದಾಗಲಿ ಸಾವು ಬರದಂತೆ ವರ ಪಡೆದುಕೊಂಡ. ಈ ವರದ ಬಲದಿಂದ ಮದೋನ್ಮತ್ತನಾಗಿ ಮಾನವರನ್ನೂ ದೇವತೆಗಳನ್ನೂ ಕಾಡತೊಡಗಿದ. ಆಗ ಶಿವ ಮತ್ತು ವಿಷ್ಣು ಒಂದುಗೂಡಿ ಹರಿಹರರೂಪಿನಿಂದ ಈ ರಾಕ್ಷಸನನ್ನು ಕೊಂದು ಹಾಕಿದರು. ಈ ಕಾರಣದಿಂದಾಗಿ ಇದಕ್ಕೆ ಹರಿ-ಹರವೆಂಬ ಹೆಸರು ಬಂದಿತೆನ್ನುವರು. ಸಾಯುವ ಮೊದಲು ಈ ರಾಕ್ಷಸ ಈ ಕ್ಷೇತ್ರಕ್ಕೆ ತನ್ನ ಹೆಸರನ್ನು ಇಡಬೇಕೆಂದು ಕೇಳಿಕೊಂಡದ್ದರಿಂದ ಇದಕ್ಕೆ ಗುಹಾರಣ್ಯಕ್ಷೇತ್ರ ವೆಂಬ ಹೆಸರು ಬಂತೆಂದು ಪ್ರತೀತಿ. ಹರಿದ್ರಾನದಿ ತುಂಗಭದ್ರಾನದಿಯನ್ನು ಕೂಡುವ ಸಂಗಮಸ್ಥಳದಲ್ಲಿರುವ ಈ ಪಟ್ಟಣಕ್ಕೆ ಕೂಡಲೂರು ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಹರಿಹರೇಶ್ವರ ಅಥವಾ ಶಂಕರನಾರಾಯಣ ದೇವಾಲಯ ಬಹು ಪ್ರಸಿದ್ಧವಾದದ್ದು. ಈ ದೇವಾಲಯದಲ್ಲಿ ಅನೇಕ ಶಾಸನಗಳಿವೆ. ಚಾಳುಕ್ಯರ ಕಾಲದಲ್ಲಿ ಈ ಊರು ಒಂದು ಅಗ್ರಹಾರವಾ ಗಿದ್ದು ನೊಳಂಬವಾಡಿಗೆ ಸೇರಿತ್ತೆಂದು ತಿಳಿದುಬರುವುದು. ಹರಿಹರೇಶ್ವರ ದೇವಾಲಯಕ್ಕೆ ಹೊಯ್ಸಳರೂ ವಿಜಯನಗರದ ರಾಜರೂ ಸೇವುಣರೂ ದತ್ತಿಗಳನ್ನು ಬಿಟ್ಟಿದ್ದಾರೆ. ವಿಜಯನಗರದ ಅನಂತರ ತರೀಕೆರೆ ಪಾಳೆಯಗಾರರಿಗೆ ಈ ಊರು ಸೇರಿತು. ಇಲ್ಲಿ ಅವರು ಒಂದು ಕೋಟೆ ಕಟ್ಟಿದರು. ಮುಂದೆ ಈ ಊರು ಸವಣೂರು ನವಾಬನಿಗೆ ಸೇರಿ ಆತ ಶೇರ್‍ಖಾನ್ ಎಂಬವನಿಗೆ ಜಹಗೀರಿಯಾಗಿ ಕೊಟ್ಟ. ಮುಂದೆ ಬಿದನೂರಿನ ಅರಸರಿಗೆ ಸೇರಿತು. ಸ್ವಲ್ಪಕಾಲ ಮರಾಠರಿಗೆ ಸೇರಿದ್ದು ಬಳಿಕ ಹೈದರನ ವಶವಾಯಿತು. 1865ರಲ್ಲಿ ಬ್ರಿಟಿಷರು ಇಲ್ಲಿ ತಮ್ಮ ಸೈನ್ಯವನ್ನಿಟ್ಟಿದ್ದರು. 1868ರಲ್ಲಿ ತುಂಗಭದ್ರಾನದಿಗೆ ಇಲ್ಲಿ ಸೇತುವೆ ಕಟ್ಟಿದ್ದರಿಂದ ಬೆಂಗಳೂರು-ಧಾರವಾಡ ಮಾರ್ಗಸಂಪರ್ಕ ಸುಲಭವಾಯಿತು. (ಪಿ.ಜಿ.ಡಿ.; ಡಿ.ಸಿ.ಜೆ.)