ಹರಿಹರ 4

	ವಿಜಯನಗರದ ಇತಿಹಾಸದಲ್ಲಿ ಚಕ್ರವರ್ತಿ ಎಂದು ಕರೆಸಿಕೊಂಡ ಪ್ರಥಮ ರಾಜ (1377-1404). ಒಂದನೆಯ ಬುಕ್ಕನ ಮಗ. ಬುಕ್ಕ ಕಾಲವಾಗುವ ಮುನ್ನವೇ ಇವನನ್ನು ಯುವರಾಜನನ್ನಾಗಿ ನಾಮಕರಣ ಮಾಡಿದ್ದರಿಂದ ಇವನ ಪಟ್ಟಾಭಿಷೇಕ ಶಾಂತಿಯುತವಾಗಿ ನೆರವೇರಿತು. ಆದರೆ ಬುಕ್ಕನ ಮರಣ ವ್ಯಾಪಕವಾದ ದಂಗೆಗೆ ಎಡೆಮಾಡಿ ಕೊಟ್ಟಿತು. ತಮಿಳುನಾಡಿನಲ್ಲಿ ತುಂಡೀರ, ಚೋಳ ಮತ್ತು ಪಾಂಡ್ಯದೇಶಗಳ ನಾಯಕರು ಹಾಗೂ ಕೊಂಕಣ ಮತ್ತಿತರ ಪ್ರಾಂತಗಳ ಅರಸರು ದಂಗೆ ಎದ್ದರು. ಹರಿಹರನ ಮಗ ವಿರೂಪಣ್ಣ ಒಡೆಯ ತಮಿಳುನಾಡಿನ ದಂಗೆಯನ್ನು ಹತ್ತಿಕ್ಕಿ, ಸಿಂಹಳ ದ್ವೀಪದವರೆಗೂ ಮುಂದುವರಿದು ಅಲ್ಲಿನ ಅರಸನಿಂದ ಕಪ್ಪಕಾಣಿಕೆಗಳನ್ನು ವಸೂಲು ಮಾಡಿಕೊಂಡು ಹಿಂತಿರುಗಿದ.

ಇವನ ಕಾಲದಲ್ಲಿ ಬಹಮನೀ ಸುಲ್ತಾನ ಮಹಮದ್ ಷಾ ಕಾಲವಾದ ಅನಂತರ ಯುದ್ಧಾಕಾಂಕ್ಷಿಯಾದ ಅವನ ಮಗ ಮುಜಾಹಿದ್ ಷಾ ಕದನ ಮಾಡಲು ಕಾತುರನಾಗಿದ್ದ. ಒಂದನೆಯ ಬುಕ್ಕನ ಕಾಲದಲ್ಲಿ ಮಾಡಿಕೊಂಡ ಕೌಲನ್ನು ರದ್ದುಪಡಿಸಿ ತುಂಗಭದ್ರಾನದಿಯನ್ನು ತನ್ನ ರಾಜ್ಯದ ದಕ್ಷಿಣದ ಗಡಿಯನ್ನಾಗಿ ಪರಿಗಣಿಸುವಂತೆ ತಿಳಿಸಿ ಆತ ಹರಿಹರನ ಆಸ್ಥಾನಕ್ಕೆ ರಾಯಸವನ್ನು ಕಳಿಸಿದ. ಹರಿಹರ ಈ ಸಲಹೆಯನ್ನು ತಳ್ಳಿಹಾಕಿದ್ದರಿಂದ ಮುಜಾಹಿದ್ 1377ರಲ್ಲಿ ವಿಜಯನಗರದ ಮೇಲೆ ದಾಳಿ ಮಾಡಿದ. ಹರಿಹರ ತನ್ನ ಸೇನೆಯೊಂದಿಗೆ ಅವನನ್ನು ಎದುರಿಸಿ, ಆದವಾನಿಯ ಹತ್ತಿರ ಸೋಲಿಸಿ ಆತ ತನ್ನ ರಾಜ್ಯಕ್ಕೆ ಹಿಮ್ಮೆಟ್ಟುವಂತೆ ಮಾಡಿದ. ಆದರೆ ಮಾರ್ಗದಲ್ಲಿ ಸುಲ್ತಾನನ ಹತ್ಯೆಯಾಗಿ ಬಹಮನೀ ರಾಜ್ಯದಲ್ಲಿ ಅರಾಜಕತೆ ಉಂಟಾಯಿತು. ಇದನ್ನು ಸದುಪಯೋಗ ಪಡಿಸಿಕೊಂಡ ಹರಿಹರ ಕೊಂಕಣ ಮತ್ತು ಉತ್ತರ ಕರ್ನಾಟಕದ ಮೇಲೆ ದಾಳಿ ನಡೆಸಿದ. ಇದರ ಪರಿಣಾಮವಾಗಿ ಚೌಲ್ ಮತ್ತು ದಾಬೋಲ್ ಖಾರ್ ಪಟನ್ ಬಂದರುಗಳು ಈತನ ಕೈವಶವಾದವು (1391). ಪಾನಗಲ್ ಪ್ರಾಂತ (ಮಹಬೂಬ್‍ನಗರ ಜಿಲ್ಲೆ, ಆಂಧ್ರಪ್ರದೇಶ) 1398ರಲ್ಲಿ ಇವನ ವಶವಾಗಿ ಅದು ಇವನ ಮುಂದಿನ ಕಾರ್ಯಾಚರಣೆಯ ಮುಖ್ಯ ಕೇಂದ್ರವಾಯಿತು.

ಹರಿಹರನ ಆಳಿಕೆಯ ಕೊನೆಯ ವರ್ಷಗಳು ಹೊರಗಿನ ದಾಳಿಗಳು ಅಥವಾ ಆಂತರಿಕ ಕ್ಷೋಭೆಗಳಿಗೆ ತುತ್ತಾಗದೆ ಶಾಂತವಾಗಿತ್ತು. ಸುಮಾರು ಇಪ್ಪತ್ತೆಂಟು ವರ್ಷಗಳ ಆಳಿಕೆಯಲ್ಲಿ ವಿಜಯನಗರದ ಎಲ್ಲೆಯನ್ನು ಎಲ್ಲ ದಿಕ್ಕುಗಳಲ್ಲಿಯೂ ವಿಸ್ತರಿಸಿ ಅದನ್ನು ಮಹಾಸಾಮ್ರಾಜ್ಯದ ಶ್ರೇಣಿಗೆ ಸೇರಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ವೇದವಿದ್ಯೆಯಲ್ಲಿ ಆಸ್ಥೆವಹಿಸಿದ ಇವನು ಪಂಡಿತರಿಂದ ವೇದಮಾರ್ಗ ಸ್ಥಾಪನಾಚಾರ್ಯ ಎಂಬ ಬಿರುದನ್ನು ಪಡೆದ. ಅನೇಕ ಪ್ರಜೋಪಕಾರಿ ಕಾರ್ಯಗಳನ್ನು ಮಾಡಿ ಸರ್ವಧರ್ಮಾ ವಲಂಬಿಗಳ ಮನ್ನಣೆ ಗಳಿಸಿದ.

ಈತನಿಗೆ ಪಂಪಾದೇವಿ ಮತ್ತು ಮಲ್ಲಾದೇವಿ ಎಂಬ ಇಬ್ಬರು ಪತ್ನಿಯರೂ ಬುಕ್ಕ (II), ವಿರೂಪಾಕ್ಷ (II), ದೇವರಾಯ (I) ಮತ್ತು ಚಿಕ್ಕರಾಯ ಎಂಬ ಮಕ್ಕಳೂ ಇದ್ದರು. ಮುದ್ದ, ಗುಂಡ, ವಸಂತಮಾಧವ ಮತ್ತು ಇರುಗಪ್ಪ ಇವನ ಮುಖ್ಯ ದಂಡನಾಯಕರು. (ಎಚ್.ವಿ.ಎಸ್.)