ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರ್ಡೀಕರ್, ಎನ್ ಎಸ್

ಹರ್ಡೀಕರ್, ಎನ್ ಎಸ್ 1889-1975. ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು, ಸಮಾಜಸೇವಕರು. ಹಿಂದಿನ ಹಿಂದುಸ್ಥಾನಿ ಸೇವಾದಳದ ಸೇನಾಪತಿಗಳು. ಘಟಪ್ರಭಾ ಆರೋಗ್ಯಧಾಮದ ಸೇವಾನಿರತ ಸಾಧುಗಳಾಗಿದ್ದರು. ಇವರು 1889 ಮೇ 7ರಂದು ಧಾರವಾಡದಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಮುಂದಿನ ಅಧ್ಯಯನಕ್ಕೆ ಪುಣೆಗೆ ತೆರಳಿದರು. ಅಲ್ಲಿನ ವಿದ್ಯಾರ್ಥಿದೆಸೆ ಯಲ್ಲೇ ತಿಲಕರ ಪ್ರಭಾವಕ್ಕೆ ಸಿಕ್ಕಿದರು. ಎಲ್ಲೆಡೆ ವಂಗವಿಭಜನೆಯ ಕಾಲದಲ್ಲಿ ಆಂದೋಲನವಾಗುತ್ತಿದ್ದಾಗ, ಕರ್ನಾಟಕ ಸುಪ್ತವಾಗಿದ್ದುದನ್ನು ಕಂಡು ಹುಬ್ಬಳ್ಳಿಗೆ ಬಂದು ಆರ್ಯಬಾಲಸಭಾ ಸಂಸ್ಥೆಯನ್ನು ಸ್ಥಾಪಿಸಿದರು. ಸ್ವದೇಶಿ ಅಂಗಡಿಯನ್ನು ತೆರೆದು ಹೊರನಾಡಿನ ಪದಾರ್ಥಗಳನ್ನು ಬಹಿಷ್ಕರಿಸುವ ಕರೆಯಿತ್ತರು. ಪ್ರಸಿದ್ಧ ಕೇಸರಿ ಪತ್ರಿಕೆಯ ಕನ್ನಡ ಆವೃತ್ತಿಯನ್ನು ಹೊರತರಲಾರಂಭಿಸಿದರು. ಇಂಟರ್‍ಮೀಡಿಯೆಟ್ ಪರೀಕ್ಷೆಯನ್ನು ಮುಗಿಸಿ ಕಲ್ಕತ್ತೆಗೆ ಹೋಗಿ ವೈದ್ಯಶಾಸ್ತ್ರಾಭ್ಯಾಸ ಮಾಡಿದರು. ಸ್ನೇಹಿತರಿಂದ ಸಾಕಷ್ಟು ಹಣ ಸಂಗ್ರಹಮಾಡಿ ಅಮೆರಿಕಕ್ಕೆ ಹೋಗಿ (1913) ಮಿಶಿಗನ್ ವಿಶ್ವವಿದ್ಯಾಲಯ ಸೇರಿ, ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಎಂ.ಎಸ್. ಪದವಿಯನ್ನು ಪಡೆದರು(1916). ಮುಂದೆ ಅದೇ ವಿಷಯದಲ್ಲಿ ಪಿಎಚ್.ಡಿ. ಪಡೆಯಲು ಅರ್ಬಾನದಲ್ಲಿನ ಇಲಿನಾಯ್ ವಿಶ್ವವಿದ್ಯಾಲಯ ಸೇರಿದರು. ಈ ಸಂದರ್ಭದಲ್ಲಿ ಭಾರತದ ಪ್ರಾಚೀನ ಇತಿಹಾಸ ಮತ್ತು ಸಂಸ್ಕøತಿಯ ವಿಷಯದಲ್ಲಿ ಅಧ್ಯಯನ ಮಾಡಿದ್ದಲ್ಲದೆ, ಅಮೆರಿಕದ ಹಿಂದುಸ್ಥಾನ್ ಅಸೋಸಿಯೇಷನ್ ಆಫ್ ಅಮೆರಿಕ ಸಂಸ್ಥೆಯ ಚಟುವಟಿಕೆಗಳಲ್ಲಿ ಆಸ್ಥೆವಹಿಸಿ ಒಮ್ಮೆ ಅದರ ಅಧ್ಯಕ್ಷರೂ ಆದರು (1916). 1916ರಲ್ಲಿ ಲಾಲಾ ಲಜಪತ್‍ರಾಯರ ಅಧ್ಯಕ್ಷತೆಯಲ್ಲಿ ದಿ ಇಂಡಿಯನ್ ಹೋಮ್ ರೂಲ್ ಲೀಗ್ ಆಫ್ ಅಮೆರಿಕ ಸಂಸ್ಥೆ ಪ್ರಾರಂಭವಾದಾಗ ಇವರು ಅದರ ಕಾರ್ಯದರ್ಶಿಯಾಗಿ (1916-1921) ಕೆಲಸ ನಿರ್ವಹಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಅಮೆರಿಕದಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿದರು.

ಭಾರತಕ್ಕೆ ಹಿಂತಿರುಗಿದ ಮೇಲೆ (1921 ಸೆಪ್ಟೆಂಬರ್) ಕರ್ನಾಟಕ ಇವರ ಕಾರ್ಯಕ್ಷೇತ್ರವಾಯಿತು. ಇವರನ್ನು ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಲ್ಲೊಬ್ಬರಾಗಿ ನೇಮಿಸಲಾಯಿತು. ತರುಣತರುಣಿಯರಲ್ಲಿ ರಾಷ್ಟ್ರಪ್ರಜ್ಞೆ ಬೆಳೆಯಬೇಕು ಎಂಬ ಉದ್ದಿಶ್ಯದಿಂದ, ಗಣೇಶಮಂಡಳ, ಪ್ರಬುದ್ಧವರ್ಗ, ವಾರ್ತಾ ಪ್ರಸಾರಕ ಸಂಘ, ಭಗಿನೀ ಮಂಡಲ, ತಿಲಕ ಕನ್ಯಾಶಾಲಾ, ತಿಲಕ ಗ್ರಂಥ ಸಂಗ್ರಹ ಮುಂತಾದ ಸಂಸ್ಥೆಗಳನ್ನೂ ಒಂದು ದೇಶೀ ಶಾಲೆ ಮತ್ತು ವಾಣಿಜ್ಯ ಶಾಲೆಯನ್ನೂ ಸ್ಥಾಪಿಸಿದರು. ಇವರು 1923ರಲ್ಲಿ ಸ್ಥಾಪಿಸಿದ ಹಿಂದುಸ್ಥಾನಿ ಸೇವಾದಳ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇವರಿತ್ತ ಮಹತ್ ಕಾಣಿಕೆ. ಈ ಸಂಸ್ಥೆಯ ಶಾಖೆಗಳು ದೇಶದಲ್ಲೆಲ್ಲ ಹಬ್ಬಿದುವು. ಅದರ ಮೊದಲನೆಯ ಸಮ್ಮೇಳನದ ಅಧ್ಯಕ್ಷರು ಜವಾಹರಲಾಲ್ ನೆಹರೂ. ಸೇವಾದಳದ ಉದ್ದಿಶ್ಯಗಳನ್ನು ವಿವರಿಸುವುದಕ್ಕಾಗಿ ವಾಲಂಟೀರ್ ಎಂಬ ಪತ್ರಿಕೆಯನ್ನು ಹೊರಡಿಸಿದರು. ಅಖಿಲ ಭಾರತ ಮಟ್ಟದಲ್ಲಿ ಜನಸೇವಕರ ತರಬೇತಿಗೆ ಬಾಗಲಕೋಟೆಯಲ್ಲಿ ಒಂದು ಶಾಲೆಯನ್ನು ತೆರೆದರು. ಹಿಂದುಸ್ಥಾನಿ ಸೇವಾದಳದ ಪ್ರಭಾವ ವರ್ಧಿಸಿ ನಿಂತಾಗ ಬ್ರಿಟಿಷರು ಈ ಸಂಸ್ಥೆಯನ್ನು ಬಹಿಷ್ಕರಿಸಿ ಇರನ್ನು ಸೆರೆಗೆ ದೂಡಿದರು (1930). ಅನಂತರವೂ ಕಾಂಗ್ರೆಸ್‍ನ ಅನೇಕ ಆಂದೋಲನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಸ್ವಾತಂತ್ರ್ಯಾನಂತರ ಇವರು ರಾಜ್ಯ ಸಭೆಯ ಸದಸ್ಯರಾಗಿದ್ದರು (1952-62).

ರೋಗಿಗಳ ಸೇವೆ ಇವರಿಗೆ ಪ್ರಿಯವಾದ ಕೆಲಸವಾಗಿತ್ತು. ಅದಕ್ಕಾಗಿ ಘಟಪ್ರಭಾದಲ್ಲಿ ಆರೋಗ್ಯಧಾಮವನ್ನು ಸ್ಥಾಪಿಸಿದರು (1935). ಅನಂತರ ಇವರು ಅಲ್ಲೇ ಇದ್ದುಕೊಂಡು ಅದರ ಸರ್ವತೋಮುಖ ಬೆಳೆವಣಿಗೆಯ ಕಾರ್ಯದಲ್ಲಿ ನಿರತರಾಗಿದ್ದರು. ಇವರ ರಾಷ್ಟ್ರಸೇವೆಯನ್ನು ಗಮನಿಸಿದ ಭಾರತ ಸರ್ಕಾರ 1958ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1975ರಲ್ಲಿ ಇವರು ನಿಧನರಾದರು.

(ಟಿ.ಟಿ.ಎಸ್.)