ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರ್ಡೇಕರ್ ಮಂಜಪ್ಪ

ಹರ್ಡೇಕರ್ ಮಂಜಪ್ಪ 1886-1947. ಖ್ಯಾತ ಸಮಾಜಕಾರ್ಯಕರ್ತ, ಚಿಂತಕ, ಪತ್ರಿಕೋದ್ಯಮಿ, ಲೇಖಕ. 1886 ಫೆಬ್ರವರಿ 18ರಂದು ಬನವಾಸಿಯಲ್ಲಿ ಜನಿಸಿದರು. ಶಿರಸಿಯಲ್ಲಿ ಶಿಕ್ಷಣ ಪಡೆದು, ಶಿಕ್ಷಕ ವೃತ್ತಿಯನ್ನು ಕೈಕೊಂಡರು (1903). ಸಾರ್ವಜನಿಕ ರಂಗದಲ್ಲಿ ಆಸಕ್ತಿ ವಹಿಸಿದ ಇವರು ವಂಗಭಂಗ ಚಳವಳಿ ದೇಶದ ಮೂಲೆಮೂಲೆಗೂ ಪಸರಿಸಿದ್ದ ಸಮಯದಲ್ಲಿ 1906ರಲ್ಲಿ ಶಿಕ್ಷಕ ವೃತ್ತಿಯನ್ನು ತೊರೆದು ಸಕ್ರಿಯವಾಗಿ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದರು. ಆ ವರ್ಷ ಶಿರಸಿಯಿಂದ ದಾವಣಗೆರೆಗೆ ಬಂದು ಧನುರ್ಧಾರಿ ಪತ್ರಿಕೆ ಹೊರಡಿಸತೊಡಗಿದರು. ಈ ಪತ್ರಿಕೆ ತಿಲಕರ ಕೇಸರಿ ಪತ್ರಿಕೆಯ ಅಭಿಪ್ರಾಯವನ್ನು ಕರ್ನಾಟಕದಲ್ಲಿ ಪ್ರಸಾರ ಮಾಡುತ್ತಿತ್ತು. ಮೊದಲು ತಿಲಕರು ಇವರಿಗೆ ಸ್ಫೂರ್ತಿಯ ನೆಲೆಯಾಗಿದ್ದರೂ ಆಮೇಲೆ ಗಾಂಧೀಜಿಯವರ ಜೀವನ ಮತ್ತು ರಾಜಕೀಯ ಚಟುವಟಿಕೆಗಳು ಇವರ ಮೇಲೆ ಹೆಚ್ಚಿನ ಪರಿಣಾಮವನ್ನುಂಟುಮಾಡಿದವು. ಗಾಂಧೀಜಿಯವರ ಸತ್ಯಾಗ್ರಹಧರ್ಮದ ತತ್ತ್ವಗಳನ್ನು ಕೃತಿಗಿಳಿಸಲು ಬ್ರಹ್ಮಚರ್ಯವ್ರತ ವನ್ನು ಕೈಕೊಂಡುದಲ್ಲದೆ ಖಾದಿ ವ್ರತವನ್ನು ಕೊನೆಯವರೆಗೂ ಪರಿಪಾಲಿಸಿಕೊಂಡು ಬಂದರು. ಸತ್ಯಾಗ್ರಹ ತತ್ತ್ವಗಳನ್ನು ಪ್ರಚಾರಮಾಡಲು ಹುಬ್ಬಳ್ಳಿಯಲ್ಲಿ ಸತ್ಯಾಗ್ರಹ ಸಮಾಜವನ್ನೂ (1922) ಹರಿಹರದಲ್ಲಿ ಸತ್ಯಾಗ್ರಹ ಆಶ್ರಮವನ್ನೂ (1924) ಸ್ಥಾಪಿಸಿದರು. ಮೊಟ್ಟಮೊದಲ ಬಾರಿಗೆ ಗಾಂಧೀಚರಿತ್ರೆಯನ್ನು ಕನ್ನಡದಲ್ಲಿ ಬರೆದರು. ಖಾದೀಶಾಸ್ತ್ರ ಎಂಬ ಗ್ರಂಥ ಬರೆದು, ಸರ್ವಜನರು ಖಾದೀಧಾರಿಗಳಾಗಿರೆಂದು ಉಪದೇಶಿಸಿದರು. ಸತ್ಯಾಗ್ರಹಧರ್ಮವನ್ನು ಚಾಚೂ ತಪ್ಪದೆ ನಿಷ್ಠೆಯಿಂದ ಪರಿಪಾಲಿಸಿಕೊಂಡು ಬಂದಿದ್ದರಿಂದ ಜನರು ಇವರನ್ನು ಕರ್ನಾಟಕದ ಗಾಂಧಿ ಎಂದು ಕರೆದು ಗೌರವಿಸಿದರು. ದೇಶಭಕ್ತಿಯನ್ನು ಬೆಳೆಸಲೋಸುಗ 1921ರಲ್ಲಿ ಭಾರತೀಯರ ದೇಶ ಭಕ್ತಿ ಎಂಬ ವಿಚಾರಪೂರಿತ ಗ್ರಂಥವನ್ನು ಬರೆದರು.

ಗಾಂಧೀಜಿಯವರಂತೆ ಸಮಾಜ ಸುಧಾರಣೆಗೂ ಯತ್ನಿಸಿದರು. ಅಸ್ಪøಶ್ಯರ ಸಂಕಷ್ಟಗಳನ್ನು ಮನವರಿತು ಆದಿಜನ ಸುಧಾರಣೆ ಎಂಬ ಹೊತ್ತಗೆಯನ್ನು ಪ್ರಕಟಿಸಿ, ತನ್ಮೂಲಕ ಸಮಾಜದ ಪ್ರತಿಯೊಬ್ಬನೂ ಅಸ್ಪøಶ್ಯರ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಬೇಕೆಂದು ಕಳಕಳಿಯಿಂದ ಬಿನ್ನವಿಸಿಕೊಂಡರು. ಸಮಾಜದಲ್ಲಿಯ ಮಹಿಳೆಯರ ಉದ್ಧಾರಕ್ಕೆ ಸರ್ವವಿಧದಿಂದಲೂ ಪುರುಷರು ಸಹಾಯ ನೀಡಬೇಕೆಂದು ಒತ್ತಾಯಪಡಿಸಿದರು. ಸ್ತ್ರೀನೀತಿ ಎಂಬ ಕಿರುಹೊತ್ತೆಗೆಯನ್ನು ಪ್ರಕಟಿಸಿ, ಸ್ತ್ರೀಯರೇ ಜನಾಂಗದ ಜನನಿಯರು, ಅವರು ನೀತಿಪರರಾಗಿದ್ದರೇನೆ ಸಮಾಜದ ಜನಾಂಗ ಸುಖಶಾಂತಿಗಳಿಂದ ಜೀವಿಸುವುದು. ಸ್ತ್ರೀಯರಿಗೆ ವಿದ್ಯಾಬುದ್ಧಿಗಳನ್ನು ಕಲಿಸಿ, ಅವರು ನೀತಿಪರರಾಗುವಂತೆ ಮಾಡುವುದೇ ಜನಾಂಗದ ಸುಖಾಪೇಕ್ಷೆಗಳ ಕರ್ತವ್ಯವೆಂದು ಪ್ರತಿಪಾದಿಸಿದರು. ಪ್ರಚಲಿತ ಶಿಕ್ಷಣಕ್ರಮ ಸರಿಯಾದುದಲ್ಲವೆಂದು ವಾದಿಸಿದ ಇವರು ನೈತಿಕ, ಧಾರ್ಮಿಕ ಶಿಕ್ಷಣವನ್ನು ಮತ್ತು ಹಳ್ಳಿಗರಿಗೆ ಉಪಯೋಗವಾಗುವಂಥ ಉದ್ಯೋಗ ಶಿಕ್ಷಣವನ್ನು ಕೊಟ್ಟರೆ ಭವಿಷ್ಯತ್ತಿನಲ್ಲಿ ಮಕ್ಕಳು ಸುರಕ್ಷಿತರಾಗಬಹುದೆಂದು ಅಭಿಪ್ರಾಯಪಟ್ಟರು. ಅಲ್ಲದೆ ಈ ಮಾದರಿಯ ಶಿಕ್ಷಣವನ್ನು ಆಲಮಟ್ಟಿಯ ತಮ್ಮ ವಿದ್ಯಾಲಯದಲ್ಲಿ ಕೊಡಲು ಪ್ರಾರಂಭಿಸಿದರು. ದೇಶದಲ್ಲಿ ಹಿಂದು ಮುಸಲ್ಮಾನರಲ್ಲಿ ಬೆಳೆಯುತ್ತಿದ್ದ ವೈಷಮ್ಯದ ದೃಷ್ಟಿಯಿಂದ, ಕೊನೆಕೊನೆಗೆ ಹಿಂದು ಸಂಘಟನೆಯ ಕಡೆಗೆ ಆಸ್ಥೆವಹಿಸಿದರು. ಹಿಂದು ಸಮಾಜದಲ್ಲಿರುವ ವರ್ಣಕಲ್ಪನೆ ಮತ್ತು ಜಾತಿ ವ್ಯವಸ್ಥೆಯನ್ನು ಅಳಿಸಲು ಕರೆಯಿತ್ತರು. ಸಮಾಜದ ಏಳಿಗೆಗೆ ಕಡೆಯವರೆಗೂ ಹೋರಾಡಿದ ಇವರು 1947 ಜನವರಿ 3ರಂದು ನಿಧನರಾದರು.

ಇವರು ಒಳ್ಳೆಯ ಬರೆಹಗಾರರು. ಅನೇಕ ವಿಷಯಗಳನ್ನು ಕುರಿತು ಗ್ರಂಥಗಳನ್ನು ರಚಿಸಿದ್ದಾರೆ. ಕರ್ತವ್ಯಸಿದ್ಧಾಂತ, ಮಹಾತ್ಮಾ ಗಾಂಧಿಯವರ ಈವರೆಗಿನ ಚರಿತ್ರೆ, ಆರೋಗ್ಯ ಜೀವನ, ಪತಿತೋದ್ಧಾರ, ಪಾರದ ಮಲ್ಲಪ್ಪನವರ ಚರಿತ್ರೆ, ಭಾರತೀಯರ ದೇಶಭಕ್ತಿ, ಶ್ರೀಬಸವಚರಿತ್ರೆ, ಬುದ್ಧಚರಿತ್ರೆ, ಖಾದೀಶಾಸ್ತ್ರ, ಬಸವಬೋಧಾಮೃತ, ಶುದ್ಧಿ ಮತ್ತು ಸಂಘಟನೆ, ದಾಂಪತ್ಯಧರ್ಮ, ಲಜಪತರಾಯರ ಚರಿತ್ರೆ, ಕಾಯಕವೇ ಕೈಲಾಸ, ಜಾತೀಯವಾದ ವಿಮರ್ಶೆ, ವಚನಕಾರರ ಸಮಾಜರಚನೆ (ಸಂಪಾದಿತ), ಸ್ವಾಮಿ ವಿವೇಕಾನಂದರ ಚರಿತ್ರೆ, ತರುಣರ ಕೈಗನ್ನಡಿ; ಗಾಂಧಿಯವರ ಗೋಸೇವೆ, ತೇರ ಹಾರ್ಡಿಯವರ ಭಾರತ ಪರ್ಯಟನೆ, ಸತ್ಯಾಗ್ರಹ, ಬ್ರಹ್ಮಚರ್ಯ, ಖಾದಿ, ಅಹಿಂಸೆ, ಸತ್ಯಾಗ್ರಹ ಪದ್ಯಾವಳಿ, ಸುಬೋಧಸಾರ (ಸಂಪಾದಿತ), ಎಚ್ಚೆತ್ತ ಹಿಂದೂಸ್ಥಾನ, ಶ್ರೀಗುರು ಸಂಗನಬಸವ ಸ್ತುತಿ (ಹಾಡುಗಬ್ಬ) ಮೊದಲಾದ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.

(ಜಿ.ಎಸ್.ಎಸ್.)