ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರ್ಮನ್ ಮೋಗ್ಲಿಂಗ್

ಹರ್ಮನ್ ಮೋಗ್ಲಿಂಗ್ : (1811-81) ಕನ್ನಡ ಭಾಷೆ ಸಾಹಿತ್ಯಗಳ ಅಭಿವೃದ್ಧಿಗಾಗಿ ದುಡಿದ ಪಾಶ್ಚಾತ್ಯ ವಿದ್ವಾಂಸ. ಜರ್ಮನಿಯ ಫ್ರಾಕನ್ ಹೈಮ್‍ನಲ್ಲಿ ಜನಿಸಿದ ಈತ ತನ್ನ ಎಳವೆಯಲ್ಲಿಯೇ ತಾಯಿಯನ್ನು ಕಳೆದುಕೊಂಡ. ತನ್ನ 18ನೆಯ ವರ್ಷದಲ್ಲಿ, 1829ರಲ್ಲಿ ಟ್ಯೂಬಿಂಗೆನ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷ ವ್ಯಾಸಂಗ ಮಾಡಿ ಡಾಕ್ಟೊರೇಟ್ ಪದವಿ ಪಡೆದ. 1836ರಲ್ಲಿ ಭಾರತಕ್ಕೆ ಬಂದ.

ಮೊದಲಿಗೆ ಈತ ಧಾರವಾಡ, ಮಂಗಳೂರು, ಕೊಡಗು ಪ್ರದೇಶಗಳಲ್ಲಿ ಕ್ರೈಸ್ತ ಧರ್ಮ ಪ್ರಸಾರ, ಶಿಕ್ಷಣಾಭಿವೃದ್ಧಿ ಮತ್ತು ಕನ್ನಡ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡತೊಡಗಿದ. ಈ ಸಂಬಂಧದಲ್ಲಿ ಈತ ರಚಿಸಿದ ಜಾತಿ (ಮತ) ವಿಚಾರಣೆ (1845), ದೇವ ವಿಚಾರಣೆ (1852) ಎಂಬ ಪುಸ್ತಕಗಳು ಹೊಸಗನ್ನಡದ ಆದ್ಯಪ್ರಬಂಧಗಳೆಂದು ಹೆಸರು ಪಡೆದಿವೆ. ಹೆಬಿಕ್ ಎಂಬುವನ ಜೊತೆಗೂಡಿ 1842ರಲ್ಲಿ ಹೃದಯದರ್ಪಣ ವೆಂಬ ಧಾರ್ಮಿಕ ಕೃತಿಯನ್ನು ರಚಿಸಿದ. ಈತನ ಈರಾರು ಪತ್ರಿಕೆ 12 ಪತ್ರಗಳ ಪುಟ್ಟಪುಸ್ತಕ ಆ ಕಾಲದಲ್ಲಿ ಆನಂದರಾಯ ಕೌಂಡಿನ್ಯನೆಂಬಾತ ಮತಾಂತರ ಹೊಂದಿದ್ದನ್ನು ಕಥನರೀತಿಯಲ್ಲಿ ನಿರೂಪಿಸುತ್ತದೆ. ರೆ.ವೈಗಲ್ ಎಂಬುವನೊಡನೆ ಕೆಲವೊಂದು ಕ್ರೈಸ್ತಗೀತೆಗ ಳನ್ನು ರಚಿಸಿದ್ದಲ್ಲದೆ, ಪಿಲ್‍ಗ್ರಿಮ್ಸ್ ಪ್ರೋಗ್ರೆಸ್ ಗ್ರಂಥವನ್ನು ಯಾತ್ರಿಕನ ಸಂಚಾರ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ. ಚಿಕ್ಕವನಾದ ಹೆನ್ರಿಯೂ ಅವನ ಬೋಯಿಯೂ (1849), ದೇವವಾಕ್ಯ ವ್ಯಾಖ್ಯಾನ, ಬಾಸೆಲ್ ಮಿಶನ್ನಿನ ಸಭಾಕ್ರಮ-ಈತನ ಇತರ ಕೃತಿಗಳು. ಇವುಗಳಲ್ಲಿ ಕೆಲವು ಕೃತಿಗಳು ಪುನರ್‍ಮುದ್ರಣಗೊಂಡಿವೆ.

ಈತ ಹಳಗನ್ನಡ ಸಾಹಿತ್ಯಕ್ಕೆ ಗ್ರಂಥಸಂಪಾದನೆಯ ಮೂಲಕ ಸೇವೆಸಲ್ಲಿಸಿದ್ದು ಗಮನೀಯ. ಬಿ.ಎಲ್.ರೈಸ್ ಅವರಿಗಿಂತಲೂ ಮೊದಲೇ ಬಿಬ್ಲಿಯೋಥಿಕ ಕರ್ಣಾಟಿಕ ಮಾಲೆಯನ್ನಾರಂಭಿಸಿ 1848ರಲ್ಲಿ ಜೈಮಿನಿ ಭಾರತವನ್ನೂ (ಅಪೂರ್ಣ) 1849ರಲ್ಲಿ ತೊರವೆರಾಮಾಯಣವನ್ನೂ ಅಚ್ಚುಮಾಡಿದ. 1850ರಲ್ಲಿ ನೂರು ಹಾಡುಗಳುಳ್ಳ ದಾಸರ ಪದಗಳು ಎಂಬ ಕೃತಿಯನ್ನು ತಂದ. ಅನಂತರ ಕನಕದಾಸರ ಹರಿಭಕ್ತಿಸಾರ, ಕುಮಾರವ್ಯಾಸಭಾರತ, ಬಸವಪುರಾಣ, ಚೆನ್ನಬಸವಪುರಾಣ ಈ ಕಾವ್ಯಗಳನ್ನು ಅಚ್ಚುಮಾಡಿದ.

1847ರ ವೇಳೆಗೆ ಕನ್ನಡ ಗಾದೆಗಳು ಎಂಬ ಪುಸ್ತಕವನ್ನು ಇವನು ಪ್ರಕಟಿಸಿದ. ಒಂದು ಹೇಳಿಕೆಯಂತೆ ಇದರಲ್ಲಿ 3,547 ಗಾದೆಗಳಿದ್ದುವೆಂದು ತಿಳಿದುಬರುತ್ತದೆ. ಈ ದೃಷ್ಟಿಯಿಂದ ಕನ್ನಡ ಜಾನಪದ ಕ್ಷೇತ್ರದಲ್ಲಿ ಇವನ ಹೆಸರು ಸ್ಮರಣೀಯವಾದದ್ದು. 1843ರಲ್ಲಿ (1843 ಜುಲೈ 1) ಈತ ಪ್ರಕಟಿಸಲಾರಂಭಿಸಿದ ಮಂಗಳೂರು ಸಮಾಚಾರ ಎಂಬ ಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿತು. ಇದರಿಂದಾಗಿ ಈತ ಕನ್ನಡ ಪತ್ರಿಕೋದ್ಯಮರಂಗದ ಜನಕನೆಂಬ ಖ್ಯಾತಿಗೆ ಪಾತ್ರನಾದ. 8 ತಿಂಗಳ ಅನಂತರ ಮಂಗಳೂರು ಸಮಾಚಾರವೇ ಕನ್ನಡ ಸಮಾಚಾರವೆಂಬ ಹೆಸರಿನಿಂದ ಬಳ್ಳಾರಿಯಿಂದ ಹೊರಡಲಾರಂಭಿಸಿತು. ಅನಂತರ 1857ರಲ್ಲಿ ಕನ್ನಡ ಸುವಾರ್ತಿಕ ಎಂಬ ಪತ್ರಿಕೆಯನ್ನು ಹೊರಡಿಸಲಾರಂಭಿಸಿದ. ಇದು ಕನ್ನಡದ ಎರಡನೆಯ ಪತ್ರಿಕೆ. ಮೈಸೂರಿನಿಂದ ಬರುತ್ತಿದ್ದ ಕರ್ನಾಟಕ ವಾಗ್ವಿಧಾಯಿನಿ, ಉಡುಪಿಯಿಂದ ಬರುತ್ತಿದ್ದ ಕ್ರೈಸ್ತ ಸಭಾಪತ್ರ ಪತ್ರಿಕೆಗಳಲ್ಲೂ ಇವನ ಪಾತ್ರವಿತ್ತು. 1854ರಲ್ಲಿ ಈತ ರಾಜೇಂದ್ರನಾಮೆ ಎಂಬ ಗ್ರಂಥವನ್ನು ಪ್ರಕಟಿಸಿದ. ಇದು ಕೊಡಗಿನ ಇತಿಹಾಸದಲ್ಲಿ ಈತನಿಗಿದ್ದ ಆಸಕ್ತಿಯ ಕುರುಹಾಗಿದೆ. 1852ರಲ್ಲಿ ಕೂರ್ಗ್ ಮೆಮೊರೀಸ್ ಎಂಬ ಪುಸ್ತಕವನ್ನು ಈತ ಪ್ರಕಟಿಸಿದ್ದು ಈ ಹಿನ್ನೆಲೆಯಲ್ಲಿ ಸ್ಮರಣೀಯ. ಈತ 1860ರಲ್ಲಿ ತನ್ನ ಸ್ವದೇಶವಾದ ವರ್ಟಿಂಬರ್ಗ್‍ಗೆ ಹಿಂದಿರುಗಿದನಾದರೂ ಕನ್ನಡದ ಕೆಲಸವನ್ನು ಅವ್ಯಾಹತವಾಗಿ ಕೈಗೊಂಡ. ದಾಸರ ಪದಗಳು ಎಂಬ ಪುಸ್ತಕದಿಂದ 24 ಪದಗಳನ್ನಾಯ್ದುಕೊಂಡು ಅವುಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿ ಪೀಠಿಕೆಯೊಂದಿಗೆ (ಜಡ್‍ಡಿಎಂಜಿ) ಪತ್ರಿಕೆಯಲ್ಲಿ ಪ್ರಕಟಿಸಿದ್ದು ಈತನ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ. ತುಳು ಪಾಡ್ದನಗಳನ್ನೂ ಸಂಗ್ರಹಿಸಿದ್ದ. ಕನ್ನಡ ಲಿಪಿ ಸುಧಾರಣೆಯ ಬಗ್ಗೆ ಇವನಿಗೆ ತೀವ್ರವಾದ ಕಾಳಜಿ ಇತ್ತು. ಕನ್ನಡ ಲಿಪಿ ಸುಧಾರಕರಲ್ಲಿ ಈತನಿಗೆ ಗಣ್ಯಸ್ಥಾನವಿದೆ ಎಂಬುದು ಹೊಸಗನ್ನಡ ಸಾಹಿತ್ಯ ಚರಿತ್ರಕಾರರ ಅಭಿಪ್ರಾಯ. (ಎನ್.ಎಸ್.ಟಿ.)