ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರ್ಷವರ್ಧನ

ಹರ್ಷವರ್ಧನ ವರ್ಧನ ವಂಶದ ಪ್ರಸಿದ್ಧ ದೊರೆ(606-47). ಇವನು 590 ರಲ್ಲಿ ಜನಿಸಿದ. ತಂದೆ ಪ್ರಭಾಕರ ವರ್ಧನ, ತಾಯಿ ಯಶೋಮತಿದೇವಿ, ಇವನ ಅಣ್ಣ ರಾಜ್ಯವರ್ಧನ, ತಂಗಿ ರಾಜ್ಯಶ್ರೀ. ಇವರ ಸೋದರಮಾವ (ಯಶೋಮತಿದೇವಿಯ ಸಹೋದರ) ಭಂಡಿ ಇವರ ಒಡನಾಡಿಯಾಗಿದ್ದ. ಇವನ ತಂಗಿ ರಾಜ್ಯಶ್ರೀಯನ್ನು ಕನೂಜ್‍ನ ದೊರೆ ಗೃಹವರ್ಮನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಇವನು 606-47 ರವರೆಗೆ ಆಳ್ವಿಕೆ ನಡೆಸಿದ. ಈತ ಮಹಾ ದಿಗ್ವಿಜಯಿಯಾಗಿ, ಧರ್ಮ, ಸಾಹಿತ್ಯ ಪೋಷಕನಾಗಿ, ಉತ್ತಮ ಆಡಳಿತಗಾರನಾಗಿ, ಸಾಹಿತಿಯಾಗಿ, ವಿದ್ಯಾಭಿಮಾನಿಯಾಗಿ ಯಾತ್ರಾರ್ಥಿಗಳ ಉದಾರ ಆಶ್ರಯದಾತನಾಗಿ, ನಾಲಂದ ವಿಶ್ವವಿದ್ಯಾಲಯದ ಮಹಾ ಪೋಷಕನಾಗಿ ಸಾಧನೆ ಮಾಡಿದ್ದಾನೆ.

ಈತನ ಆಸ್ಥಾನ ಕವಿ ಬಾಣಭಟ್ಟನ ಹರ್ಷಚರಿತೆ, ಚೀನಿ ಯಾತ್ರಿಕ ಯುವಾನ್‍ಚಾಂಗ್‍ನ ಸಿ-ಯು-ಕಿ, ಮಧುಬನ್ ತಾಮ್ರ ಶಾಸನ, ಸೋನೆಪತ್ ತಾಮ್ರ ಶಾಸನ ಹಾಗೂ ಬನ್ಸ್‍ಖೇರ್ ತಾಮ್ರಪಟ ಇವು ಇವನ ಕಾಲದ ಬರೆವಣಿಗೆಗಳು. ನಾಣ್ಯಗಳು, ನಾಲಂದದಲ್ಲಿ ದೊರೆತ ಮುದ್ರೆ ಇತ್ಯಾದಿಗಳು ಇವನ ಇತಿವೃತ್ತಗಳ ಅಧ್ಯಯನಕ್ಕೆ ಉಪಯುಕ್ತವಾಗಿವೆ.

ಇವನು 604ರಲ್ಲಿ ರಾಜ್ಯವರ್ಧನನೊಡನೆ ಹೂಣರ ವಿರುದ್ಧ ದಂಡೆತ್ತಿ ಹೋಗಿ, ರಾಜಧಾನಿ ಥಾನೇಶ್ವರ (ಸ್ಥಾನೀಶ್ವರ)ಕ್ಕೆ ಹಿಂತಿರುಗುವ ಮೊದಲೇ ತಂದೆ ಪ್ರಭಾಕರವರ್ಧನ 605 ರಲ್ಲಿ ನಿಧನ ಹೊಂದಿದ. ಈ ದಾರುಣ ವಾರ್ತೆ ತಿಳಿದ ರಾಜ್ಯವರ್ಧನನೊಡನೆ ತ್ವರಿತವಾಗಿ ಹಿಂತಿರುಗಿದ. ಈ ವೇಳೆಗೆ ತಾಯಿ ಯಶೋಮತಿ ಸಹಗಮನ ಮಾಡಿದ್ದಳು.

ತಂದೆಯ ನಿಧನದಿಂದ ತೆರವಾದ ಸಿಂಹಾಸನಕ್ಕೆ ರಾಜ್ಯವರ್ಧನ ದೊರೆಯಾಗಿ ಪಟ್ಟಾಭಿಷಿಕ್ತನಾದ (605). ಸಹೋದರರು ಮಾತಾಪಿತೃಗಳ ವಿಯೋಗದ ದುಃಖದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ಆಘಾತದ ವಾರ್ತೆ ಇವರನ್ನು ಅಪ್ಪಳಿಸಿತು. ಕನೂಜದ (ಕನ್ಯಾಕುಬ್ಜ) ಮೌಖರಿ ದೊರೆ ಗೃಹವರ್ಮನನ್ನು ಮಾಳವದ ದೊರೆ (ದೇವಗುಪ್ತ) ಕೊಂದು ಆತನ ಪತ್ನಿಯಾದ ರಾಜ್ಯಶ್ರೀಯನ್ನು ಬಂಧಿಸಿದ. ಮಾಳವದ ದೊರೆ ಥಾನೇಶ್ವರದ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದ. ಈತ ಈ ವಿಷಮ ಪರಿಸ್ಥಿತಿಯಲ್ಲಿ ರಾಜ್ಯಶ್ರೀಯನ್ನು ರಕ್ಷಿಸಿದ. ಕನೂಜ್ ಅನ್ನು ತನ್ನ ವಶಕ್ಕೆ (ಇವನ 2ನೆಯ ರಾಜಧಾನಿ) ತೆಗೆದುಕೊಂಡ. ಬಂಗಾಲದ ಗೌಡಪಾದ ವಂಶದ ಶೈವದೊರೆಯೂ ಬೋಧಿವೃಕ್ಷವನ್ನು ಕಡಿಸಿದವನೂ ತನ್ನ ಅಣ್ಣನ ಸಾವಿಗೆ ಕಾರಣನಾದ ವನೂ ಆದ ಶಶಾಂಕನ ವಿರುದ್ಧ ದಾಳಿ ನಡೆಸಿದ. ಬಾಣ ತನ್ನ ಹರ್ಷಚರಿತೆಯಲ್ಲಿ, ಹರ್ಷವರ್ಧನ ಸಕಲ ಸಿದ್ಧತೆಗಳನ್ನು ಮಾಡಿಕೊಂಡೇ ಬಂಗಾಲದ ಮೇಲೆ ದಾಳಿ ಮಾಡಿದನೆಂದು ತಿಳಿಸಿದ್ದಾನೆ. ಆದರೆ ಶಶಾಂಕ ಬದುಕಿದ್ದವರೆಗೂ ಬಂಗಾಲವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದೇ, ಶಶಾಂಕ ನಿಧನ ಹೊಂದಿದ ಅನಂತರ ಬಂಗಾಲವನ್ನು ಮುತ್ತಿ ಸಮತಟ, ತಾಮ್ರಲಿಪಿ ಮತ್ತು ಕರ್ಣಸುವರ್ಣಗಳೂ ಸೇರಿದಂತೆ ಬಂಗಾಲವನ್ನು ವಶಪಡಿಸಿಕೊಂಡ (619).

ಪಶ್ಚಿಮ ಭಾರತದ ವಲ್ಲಭಿಯನ್ನು (ಗುಜರಾತ್) ಆಳುತ್ತಿದ್ದ ಮೈತ್ರಿಯ ರಾಜವಂಶದ 2ನೆಯ ಧೃವಸೇನನ ಮೇಲೆ ದಾಳಿ ಮಾಡಿ (630) ಮೊದಲಿಗೆ ಜಯ ಪಡೆದನಾದರೂ ಬ್ರೋಚ್ ಅರಸ ದದ್ದ ಮತ್ತು ಇತರ ಮಿತ್ರರಾಜರು ಧೃವಸೇನನ ಸಹಾಯಕ್ಕೆ ಬರಲಾಗಿ ಶಾಂತಿ ಒಪ್ಪಂದ ಮಾಡಿಕೊಂಡು ಹರ್ಷ ತನ್ನ ಮಗಳನ್ನು ಧೃವಸೇನನಿಗೆ ವಿವಾಹ ಮಾಡಿದ. ತರುವಾಯ ಧೃವಸೇನ ಹರ್ಷನ ಆಶ್ರಿತ ಅರಸನಾದ.

ಉತ್ತರಪಥೇಶ್ವರನಾದ ಈತ ದಖ್ಖನ್‍ನಲ್ಲಿ ರಾಜ್ಯ ವಿಸ್ತರಣೆ ಬಯಸಿ ದಕ್ಷಿಣ ಪಥೇಶ್ವರನಾದ ಬಾದಾಮಿ ಚಳುಕ್ಯ ಅರಸ ಇಮ್ಮಡಿ ಪುಲಕೇಶಿಯ ವಿರುದ್ಧ ದಂಡೆತ್ತಿ ಬಂದ. ನರ್ಮದಾ ತೀರದಲ್ಲಿ ಯುದ್ಧ ನಡೆಯಿತೆಂದೂ ಹರ್ಷ ಸೋತು ಇಮ್ಮಡಿ ಪುಲಕೇಶಿ ಪರಮೇಶ್ವರ ಎಂಬ ಬಿರುದು ಧರಿಸಿದನೆಂದೂ ರವಿಕೀರ್ತಿ ಹಾಗೂ ಯುವಾನ್ ಚಾಂಗ್ ತಿಳಿಸಿದ್ದಾರೆ. ಐಹೊಳೆ ಶಾಸನ ಹರ್ಷನನ್ನು ಸಕಲೋತ್ತರ ಪಥನಾಥ ಎಂದು ವರ್ಣಿಸಿದೆ. ತರುವಾಯ ನರ್ಮದಾ ನದಿ ಇವರೀರ್ವರ ಗಡಿಯಾಯಿತು. ಈ ಯುದ್ಧ 630-34 ರ ಅವಧಿಯಲ್ಲಿ ನಡೆಯಿತೆಂದು ತಿಳಿದುಬರುತ್ತದೆ.

ಈತ ಅಪಾರ ಸೈನ್ಯದೊಡನೆ ಸಿಂಧ್ ಪ್ರದೇಶದ ಮೇಲೆ ದಾಳಿ ಮಾಡಿದನೆಂದು ಬಾಣಭಟ್ಟ ಹರ್ಷಚರಿತೆಯಲ್ಲಿ ತಿಳಿಸಿದ್ದಾನೆ. ಮಗಧ ದೊರೆ ಪೂರ್ಣವರ್ಮನ ಮೇಲಿನ ಹರ್ಷನ ವಿಜಯವನ್ನು ಸಮರ್ಥಿಸಿ ಚೀನದ ಜ್ಞಾನಕೋಶದ ಕರ್ತೃ ಮಾ-ತ್ವಾನ್-ಲಿನ್ 641 ರಲ್ಲಿ ಶಿಲಾದಿತ್ಯ (ಹರ್ಷ) ಮಗಧಾಧಿಪತಿ ಎಂಬ ಬಿರುದು ಧರಿಸಿದ ನೆಂದು ಹೇಳಿದ್ದಾನೆ. 642-43 ರಲ್ಲಿ ಇವನು ಒರಿಸ್ಸದ ಗಂಜಾಮ್ ಪ್ರದೇಶದ ಮೇಲೆ ದಾಳಿ ಮಾಡಿದನೆಂದು ಯುವಾನ್‍ಚಾಂಗ್ ತಿಳಿಸಿದ್ದಾನೆ.

ಇವನು ಯುವಾನ್‍ಚಾಂಗ್‍ನ ಪ್ರಭಾವದಿಂದ ತನ್ನ ಸಮಕಾಲೀನ ಚೀನಿ ದೊರೆ ತೈತ್ಸುಂಗ್‍ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿ 641 ರಲ್ಲಿ ಒಬ್ಬ ಬ್ರಾಹ್ಮಣ ರಾಯಭಾರಿಯನ್ನು ಕಳುಹಿಸಿದ. ಪ್ರತಿಯಾಗಿ ತೈತ್ಸುಂಗ್ ಲಿ-ಯು-ಪಿಯೊ ಮತ್ತು ವಾಂಗ್ ಯಾನತ್ಸ್‍ರವರು ಇವನ ಆಸ್ಥಾನಕ್ಕೆ ಬಂದರು.

ಧರ್ಮದ ಮಹಾ ಪೋಷಕನಾದ ಇವನು ಮಹಾಯಾನ ಬೌದ್ಧ ಪಂಥದಲ್ಲಿ ವಿಶೇಷ ಒಲವುಳ್ಳವನಾಗಿದ್ದ. ಇವನು ಬೌದ್ಧಧರ್ಮದ ಏಳಿಗೆಗೆ ಹಲವು ಕ್ರಮ ಕೈಗೊಂಡ. ಕನೂಜ್‍ನಲ್ಲಿ ಮಹಾಯಾನ ಪಂಥದ ಪ್ರಚಾರಕ್ಕಾಗಿ ಹಾಗೂ ಯುವಾನ್‍ಚಾಂಗ್‍ನನ್ನು ವೈಭವದಿಂದ ಸನ್ಮಾನಿಸುವ ಸಲುವಾಗಿ ಆತನ ಅಧ್ಯಕ್ಷತೆಯಲ್ಲಿ ಮಹಾಸಭೆಯೊಂದನ್ನು ನಡೆಸಿದ. ಗಂಗಾ ನದಿಯ ದಡದಲ್ಲಿ ವಿಶೇಷ ಸಭಾಂಗಣಗಳಿಂದ ಕಂಗೊಳಿಸುತ್ತಿದ್ದ ಈ ಸಮಾರಂಭದಲ್ಲಿ 18 ಮಂದಿ ಸಾಮಂತರಾಜರು, 4000 ಬೌದ್ಧ ಭಿಕ್ಷುಗಳು, 3000 ಹಿಂದು ಮತ್ತು ಜೈನ ವಿದ್ವಾಂಸರು ಹಾಗೂ ನಾಲಂದದ 1000 ಪಂಡಿತರು ಭಾಗವಹಿಸಿದರು. ಕನೂಜ್ ಸಮ್ಮೇಳನ ಇವನ ಮತ್ತು ಯುವಾನ್‍ಚಾಂಗ್‍ನ ಸ್ನೇಹವನ್ನು ವೃದ್ಧಿಸಿತು. ಪ್ರಯಾಗದಲ್ಲಿ ಮಹಾಮೋಕ್ಷ ಪರಿಷತ್ತನ್ನು 643 ರಲ್ಲಿ ಯುವಾನ್‍ಚಾಂಗ್‍ನ ಸಮ್ಮುಖದಲ್ಲಿ ಹಮ್ಮಿಕೊಂಡ. 75 ದಿನ ಕಾಲ ನಡೆದ ಈ ಸಮಾರಂಭದಲ್ಲಿ ದಕ್ಷಿಣದ ಅರಸ ಧ್ರುವಭಟ್ಟ, ಭಾಸ್ಕರವರ್ಮ ಸೇರಿದಂತೆ ಹಲವು ಅರಸರು, ಧರ್ಮಶಾಸ್ತ್ರಜ್ಞರು, ಬ್ರಾಹ್ಮಣಪಂಡಿತರು, ಬೌದ್ಧಭಿಕ್ಷು ಗಳು, ನಿಗ್ರ್ರಂಥಿಕರು, ಬಡಜನರು ಸೇರಿದಂತೆ ಸು. 5 ಲಕ್ಷ ಜನ ಸಮಾವೇಶಗೊಂಡಿದ್ದರು. ಈ ಸಮಾರಂಭದಲ್ಲಿ ಉದಾರ ದಾನ ಧರ್ಮ ನಡೆಯಿತು. ಆರ್.ಎಸ್. ತ್ರಿಪಾಠಿಯವರು ದಾನ-ಧರ್ಮಾಧಿಕಾರ್ಯಗಳಲ್ಲಿ ಹರ್ಷ ಮತ್ತಾರೂ ಮೀರಿಸಲಾಗದ ದಾಖಲೆ ನಿರ್ಮಿಸಿದ ಎಂದಿದ್ದಾರೆ.

ಸಾಹಿತ್ಯಾಭಿಮಾನಿಯಾದ ಇವನು ಸ್ವತಃ ಕವಿಯೂ ನಾಟಕಕಾರನೂ ಆಗಿದ್ದ. ರತ್ನಾವಳಿ, ನಾಗಾನಂದ ಎಂಬ ಸಂಸ್ಕøತ ನಾಟಕಗಳನ್ನು ರಚಿಸಿದನಲ್ಲದೆ, ಆಸ್ಥಾನದಲ್ಲಿ ಕವಿವರ್ಯರಿಗೆ ಆಶ್ರಯ ನೀಡಿದ. ಇವರಲ್ಲಿ ಜಯದೇವ, ಬಾಣಭಟ್ಟ, ಮಯೂರ ಮುಖ್ಯರು. ಉತ್ತಮ ಆಡಳಿತಗಾರನಾಗಿದ್ದ ಇವನು ನಾಲಂದ ವಿಶ್ವವಿದ್ಯಾಲಯದ ಮಹಾಪೋಷಕನಾಗಿದ್ದ, ಹರ್ಷವರ್ಧನ ತನ್ನ ಭೂಕಂದಾಯದ ¼ ಭಾಗವನ್ನು ಬೌದ್ಧಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಏಳಿಗೆಗಾಗಿ ಮೀಸಲಾಗಿಟ್ಟಿದ್ದನಲ್ಲದೆ, ಒರಿಸ್ಸದ 80 ದೊಡ್ಡ ನಗರಗಳ ಆದಾಯವನ್ನು ಸುಪ್ರಸಿದ್ಧ ಬೌದ್ಧವಿದ್ವಾಂಸ ಜಯಸೇನನಿಗೆ ನೀಡಲು ಇಚ್ಛಿಸಿದ ಎಂದು ಯುವಾನ್‍ಚಾಂಗ್ ಹೇಳಿದ್ದಾನೆ.

ಇವನು ವಿದೇಶೀ ಯಾತ್ರಾರ್ಥಿಗಳ ಆಶ್ರಯದಾತನಾಗಿಯೂ ಹೆಸರಾಗಿದ್ದಾನೆ. ಪ್ರಾಚೀನ ಭಾರತದ ಸಾಮ್ರಾಟರಲ್ಲಿ ಇವನದು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ. *