ಹಲಗಲಿ ಭಾರತದ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಒಂದು ಗ್ರಾಮ. ಮುಧೋಳದ ಪೂರ್ವಕ್ಕೆ 29 ಕಿಮೀ ದೂರದ ಬೆಟ್ಟಗುಡ್ಡಗಳ ಮಧ್ಯದಲ್ಲಿದೆ. ಘಟಪ್ರಭಾ ಎಡದಂಡೆ ಕಾಲುವೆ ಈ ಗ್ರಾಮಕ್ಕೆ ನೀರಿನ ವ್ಯವಸ್ಥೆಯನ್ನು ಒದಗಿಸಿದೆ. ಈ ಗ್ರಾಮ ಇಂದಿಗೂ ಪೈಲವಾನರಿಗೆ ಪ್ರಸಿದ್ಧ. ಇಲ್ಲಿ ಪ್ರತಿವರ್ಷ ಹೊಸ್ತಲ ಹುಣ್ಣಿಮೆಗೆ ವೀರಭದ್ರದೇವರ ಜಾತ್ರೆನಡೆಯುತ್ತದೆ. ಗ್ರಾಮದಲ್ಲಿ ಪಂಚಾಯಿತಿ ಆಡಳಿತವಿದೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಗ್ರಾಮ ಹೆಸರಾಯಿತು. ಇಲ್ಲಿಯ ಹೆಚ್ಚು ಮಂದಿ ಬೇಡರು. ಬೇಟೆಯಾಡುವುದೇ ಇವರ ಉದ್ಯೋಗ. ಅದಕ್ಕಾಗಿ ಮತ್ತು ಆತ್ಮರಕ್ಷಣೆಗೆ ಇವರಲ್ಲಿ ಆಯುಧಗಳ ಸಂಗ್ರಹವಿತ್ತು. 1857ನೆಯ ನಿರಾಯುಧ ಕಾಯಿದೆಯಂತೆ ಪ್ರತಿಯೊಬ್ಬ ಭಾರತೀಯನೂ ತಮ್ಮ ಆಯುಧಗಳನ್ನು ಮೊದಲು ಸರ್ಕಾರಕ್ಕೆ ಒಪ್ಪಿಸಿ ಆವಶ್ಯಕತೆಯನ್ನು ವಿವರಿಸಿ ಅನಂತರ ಸರ್ಕಾರದ ಅಪ್ಪಣೆ ಪಡೆದುಕೊಂಡು ಆಯುಧಗಳನ್ನು ಪಡೆಯಬೇಕಿತ್ತು. ಇದು ಸ್ವಭಾವತಃ ಸಾಹಸಿಗಳೂ ಶೂರರೂ ಆತ್ಮಾಭಿಮಾನಿಗಳೂ ಆದ ಬೇಡರಿಗೆ ನುಂಗಲಾರದ ತುತ್ತಾಯಿತು. ತಮ್ಮ ಜೀವನಾಧಾರವಾದ ಆಯುಧಗಳನ್ನು ಒಪ್ಪಿಸುವುದಕ್ಕೆ ಇವರು ಒಪ್ಪಲಿಲ್ಲ. ಈ ಸಂದರ್ಭದಲ್ಲಿ ಬ್ರಿಟಿಷರಿಗೂ ಇವರಿಗೂ ಘರ್ಷಣೆ ಉಂಟಾಯಿತು. 1857ನೆಯ ನವೆಂಬರ್ 29ರಂದು ಬ್ರಿಟಿಷರು ಇವರ ಮೇಲೆ ದಾಳಿ ನಡೆಸಿದರು. ದಾಳಿಯಲ್ಲಿ ಅನೇಕ ವೀರರು ಮರಣಹೊಂದಿದರು. ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಮಾಲ್ಕಮ್ 290 ಜನರನ್ನು ಸೆರೆಹಿಡಿದ, 1857ನೆಯ ಡಿಸೆಂಬರ್ 11ರಂದು 13 ಜನರನ್ನು ಮುಧೋಳದಲ್ಲೂ 6 ಜನರನ್ನು ಮೂರು ದಿನಗಳ ತರುವಾಯ ಹಲಗಲಿಯಲ್ಲೂ ಗಲ್ಲಿಗೇರಿಸಿದ. ಕನ್ನಡಿಗರ ಉತ್ಕಟ ಆತ್ಮಾಭಿಮಾನಕ್ಕೆ ಉಜ್ಜ್ವಲ ನಿದರ್ಶನವಾಗಿ ಈ ದುರಂತದ ಕಥೆ ಕರ್ನಾಟಕದ ಸ್ವಾತಂತ್ರ್ಯಸಂಗ್ರಾಮ ಇತಿಹಾಸದಲ್ಲಿ ಅಮರವಾಗಿದೆ. ಅಂದಿನ ಘಟನೆಗಳಿಗೆ ಸಂಬಂಧಿಸಿದ ವಿವರಗಳು ಮತ್ತು ಶೂರ ಬೇಡರು ತಳೆದ ಧೀರನೀತಿ, ಇವರು ಎದುರಿಸಿದ ಕಷ್ಟಗಳನ್ನು ಫ್ಲೀಟರು ಸಂಗ್ರಹಿಸಿರುವ ಐದು ಐತಿಹಾಸಿಕ ಲಾವಣಿಗಳಲ್ಲಿ ಕಾಣಬಹುದು. (ಎಸ್.ಎಸ್.ಬಿ.)