ಹಲಸು

	ಮೊರೇಸೀ ಕುಟುಂಬದ ಆರ್ಟೊಕಾರ್ಪಸ್ ಹೆಟರೊಫಿಲ್ಲಸ್ ಪ್ರಭೇದಕ್ಕೆ ಸೇರಿದ ನಿತ್ಯಹರಿದ್ವರ್ಣದ ಮರ. ಒತ್ತಾದ ಹಸುರೆಲೆಗಳಿಂದ ಕೂಡಿದ ದುಂಡನೆಯ ಹಂದರದ್ದು. ಮರದಕಾಂಡ ಕುಳ್ಳಾಗಿ ದಪ್ಪಗಿರುವುದು. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ 1,000ಮೀ ಎತ್ತರದ ಪ್ರದೇಶಗಳಲ್ಲೂ ಮೈದಾನ ಸೀಮೆಗಳಲ್ಲೂ ಕಾಣದೊರೆಯುತ್ತದೆ. ಬೆಳೆಯಲು ನೆರಳು ಆವಶ್ಯಕ. ಕತ್ತರಿಸಿದಾಗ ಚಿಗುರುವುದು. ತೊಗಟೆ ಮತ್ತು ಎಲೆಗಳು ಆನೆಗಳಿಗೆ ಮೆಚ್ಚು. ಹಣ್ಣಿಗೋಸ್ಕರ ಇದನ್ನು ಸಾಗುವಳಿ ಮಾಡುವುದು ಸರ್ವವಿದಿತ. ಬೀಜಬಿತ್ತಿ ಇಲ್ಲವೇ ಕುಂಡಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬಹುದು. 

ಕತ್ತರಿಸಿದ ಹೊಸದರಲ್ಲಿ ಚೌಬೀನೆ ಅಚ್ಚಹಳದಿ ಬಣ್ಣದಿಂದಿದ್ದು ಕ್ರಮೇಣ ಎಳೆಯ ಕಂದು ಬಣ್ಣಕ್ಕೆ ತಿರುಗುವುದು. ಹದಮಾಡಲು ಸುಲಭ; ಬಾಳಿಕೆಯುತ. ಕೊಯ್ತಕ್ಕೆ, ಕೆತ್ತನೆ ಕೆಲಸಗಳಿಗೆ ಸುಲಭ. ಬ್ರಷ್ ಹಿಡಿಗಳು, ಕಡೆತದ ಕೆಲಸ, ಸಾಮಾನ್ಯ ಪೀಠೋಪಕರಣ, ವೀಣೆ ತಯಾರಿಕೆ ಇತ್ಯಾದಿಗಳಿಗೆ ಉಪಯುಕ್ತವಾಗಿದೆ. (ಎ.ಕೆ.ಎಸ್.)