ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಳಕಟ್ಟಿ, ಪಿ ಜಿ

ಹಳಕಟ್ಟಿ, ಪಿ ಜಿ 1880-1964. ವೀರಶೈವ ಸಾಹಿತ್ಯ ಮತ್ತು ಸಂಸ್ಕøತಿಗಳ ಏಳಿಗೆಗಾಗಿ ಸಂಶೋಧಕರಾಗಿ ಸಂಪಾದಕರಾಗಿ ಪ್ರಕಟಣಕಾರರಾಗಿ ಸಾಹಿತ್ಯಪ್ರಚಾರಕರಾಗಿ ದುಡಿದವರು. ಹಳಕಟ್ಟಿ ಫಕೀರಪ್ಪ ಗುರುಬಸಪ್ಪ ಇವರ ಪೂರ್ಣ ಹೆಸರು. 1880 ಜುಲೈ 2ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪನವರಿಂದ ಇವರಿಗೆ ವಚನಸಾಹಿತ್ಯದ ಬಗ್ಗೆ ವಿಶೇಷ ಅಭಿರುಚಿ ಹುಟ್ಟಿತು. ಬಿ.ಎ. ಮತ್ತು ಎಲ್‍ಎಲ್.ಬಿ. ಪದವಿಗಳನ್ನು ಪಡೆದು ಬಿಜಾಪುರದಲ್ಲಿ ನೆಲೆನಿಂತು ವಕೀಲಿ ವೃತ್ತಿಯನ್ನು ಆರಂಭಿಸಿದರು. ಶಿಕ್ಷಣ ಸಂಸ್ಥೆ, ಸಹಕಾರಿ ಸಂಸ್ಥೆಗಳ ಏಳ್ಗೆಗಾಗಿ ದುಡಿದರು. ಸಾಮಾಜಿಕ ಸೇವೆಯ ಜೊತೆಗೆ ಸಾಹಿತ್ಯದ ಸೇವೆಗೂ ತೊಡಗಿದರು. ವಚನಸಾಹಿತ್ಯವನ್ನು ಸಂಶೋಧಿಸಿ ಬೆಳಕಿಗೆ ತರುವ ಉದ್ದೇಶದಿಂದ ಶಿವಾನುಭವ ಎಂಬ ಪತ್ರಿಕೆಯನ್ನು ಆರಂಭಿಸಿದರು (1926). ನವ ಕರ್ನಾಟಕ ವಾರಪತ್ರಿಕೆಯೊಂದನ್ನೂ ಆರಂಭಿಸಿದರು (1928).

ಬಿಜಾಪುರದ ವೀರಶೈವ ಶಿಕ್ಷಣ ಫಂಡ್, ಸಿದ್ಧೇಶ್ವರ ಧರ್ಮಾದಾಯ ಶಿಕ್ಷಣ ಫಂಡ್, ಜಿಲ್ಲಾ ವೀರಶೈವ ವಿದ್ಯಾವರ್ಧಕ ಸಂಘ, ಸಿದ್ಧೇಶ್ವರ ಮಾಧ್ಯಮಿಕ ಶಾಲೆ ಮುಂತಾದುವುಗಳ ಸ್ಥಾಪನೆಗೆ ಇವರು ಕಾರಣರಾದರು. ಬಿಜಾಪುರ ನಗರಸಭೆಯ ಸ್ಕೂಲ್ ಬೋರ್ಡಿನ ಅಧ್ಯಕ್ಷರೂ ಮುಂಬಯಿ ಸರ್ಕಾರದ ಪ್ರಾಥಮಿಕ ಶಿಕ್ಷಣ ಸಮಿತಿ, ಕನ್ನಡ ಪಠ್ಯಪುಸ್ತಕ ಸಮಿತಿ, ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್, ಧಾರವಾಡದ ಕನ್ನಡ ಸಂಶೋಧನ ಮಂಡಲಿಗಳಲ್ಲಿಯೂ ಸದಸ್ಯರಾಗಿದ್ದರು.

`ಶಿವಾನುಭವ ಧಾರ್ಮಿಕ ವಿಚಾರ ವೇದಿಕೆಯಾಗಿ ಸು. 40 ವರ್ಷಗಳ ಕಾಲ ನಡೆಯಿತು. ಎಂಥ ತೊಡಕು, ಕಷ್ಟನಷ್ಟ ಬಂದರೂ ಸಂಪಾದಕತ್ವ ವಹಿಸಿದ ಇವರು ಪತ್ರಿಕೆಯನ್ನು ನಡೆಸಿಕೊಂಡು ಹೋದರು. ಮೊದಲು ತ್ರೈಮಾಸಿಕವಾಗಿದ್ದ ಪತ್ರಿಕೆ ಅನಂತರ ಕಾಲದಲ್ಲಿ ಮಾಸಿಕವಾಗಿ ಮಾರ್ಪಟ್ಟಿತು. ಧರ್ಮಕ್ಕೆ ಸಂಬಂಧಿಸಿದ ಹಲವು ಲೇಖನಗಳು ಶಿವಾನುಭವದಲ್ಲಿ ಬೆಳಕು ಕಂಡುವು. ಬಿಜಾಪುರ ಜಿಲ್ಲೆ ಹಾಗೂ ಇನ್ನಿತರ ಕಡೆಗಳ ಹಲವು ಅಪ್ರಕಟಿತ ತಾಡವೋಲೆಗರಿಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಿ ವಚನಗಳನ್ನು ಸಾಮಾನ್ಯರಿಗೆ ತಿಳಿಯುವ ಹಾಗೆ ಟೀಕೆ-ಟಿಪ್ಪಣಿ ಸಹಿತ ಇವರು ಪ್ರಕಟಿಸಿದರು. ಮೂಲಗ್ರಂಥ, ಟೀಕಾ ಗ್ರಂಥ, ಸ್ವತಂತ್ರ ಗ್ರಂಥ, ಪಠ್ಯ ಪುಸ್ತಕ, ಗದ್ಯಗ್ರಂಥ, ಐತಿಹಾಸಿಕ ಗ್ರಂಥ, ಪದ್ಯಗ್ರಂಥ, ಧಾರ್ಮಿಕ ಪುರುಷರ ಚರಿತ್ರೆ-ಹೀಗೆ 165 ಗ್ರಂಥಗಳನ್ನು ಬೆಳಕಿಗೆ ತಂದರು. ದೇವರ ದಾಸಿಮಯ್ಯ, ಪ್ರಭುದೇವ, ಬಸವಣ್ಣ, ಮಹಾದೇವಿಯಕ್ಕ ಈ ಮುಂತಾದವರ ವಚನಗಳನ್ನಲ್ಲದೆ ಅಂಬಿಗರ ಚೌಡಯ್ಯ, ಉರಿಲಿಂಗಪೆದ್ದಿ, ಗೋರಕ್ಷ, ಮಾಚಿದೇವ, ಮಾದಾರ ಚೆನ್ನಯ್ಯ, ತಿಮ್ಮಬ್ಬೆ, ಲಿಂಗಮ್ಮ, ಸತ್ಯಕ್ಕ ಮುಂತಾದ ಹಲವು ವಚನಕಾರರ ವಚನಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಇವರದು. ವಿಷಯಗಳನ್ನು ವಿಂಗಡಿಸಿ ಸುಸಂಬದ್ಧ ರೀತಿಯಲ್ಲಿ ಸಂಗ್ರಹಿಸಿ ಪ್ರಕಟಿಸುವ ಜಾಣ್ಮೆ ಇವರಿಗಿತ್ತು. ಸಟೀಕಾತ್ಮಕವಾಗಿ ಶೂನ್ಯಸಂಪಾದನೆಯ ಪೂರ್ಣ ಪ್ರತಿಯನ್ನು ಇವರು ಪ್ರಕಟಿಸಿದರು. ಎಂಟು ಭಾಗಗಳಲ್ಲಿ ಹರಿಹರದೇವನ ನೂರಿಪ್ಪತ್ತು ನಾಲ್ಕು ರಗಳೆಗಳನ್ನೂ ಷಟ್‍ಸ್ಥಳಸಿದ್ಧಾಂತ ಸೂತ್ರ, ಶಿವಾನುಭವ ಶಬ್ದಕೋಶದಂಥ ಪುಸ್ತಕಗಳನ್ನೂ ಪ್ರಕಟಿಸಿದರು. ವೀರಶೈವರ ಇತಿಹಾಸ ರಚನೆಗೆ ಉಪಯುಕ್ತವಾಗುವ ಸಾಮಗ್ರಿಯನ್ನು ಸಂಗ್ರಹಿಸುವುದರಲ್ಲಿ ಇವರಿಗೆ ವಿಶೇಷ ಆಸಕ್ತಿಯಿತ್ತು. ಹಲವು ಶಿವಶರಣರು ಹಾಗೂ ಮಠಾಧೀಶರು ಮುಂತಾದವರ ಚರಿತ್ರೆಗಳನ್ನೂ ಇವರು ಹೊರತಂದರು. ಇವರು ಪ್ರಕಟಿಸಿದ ವಚನಶಾಸ್ತ್ರಸಾರ ಸು. 60 ವರ್ಷಗಳ ಸಾರಸ್ವತ ದಾಸೋಹದ ಫಲ.

ಇವರು ಬಳ್ಳಾರಿಯಲ್ಲಿ ನಡೆದ 12ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು (1926). 1928 ಜೂನ್ ತಿಂಗಳಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ 3ನೆಯ ಅಧ್ಯಕ್ಷರಾಗಿದ್ದರು. ಇವರ ಸಾಹಿತ್ಯ ಸೇವೆಯನ್ನು ಮೆಚ್ಚಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಸನ್ಮಾನಿಸಿದೆ. ಬ್ರಿಟಿಷ್ ಸರ್ಕಾರದಿಂದ ಇವರಿಗೆ ರಾವ್‍ಬಹದ್ದೂರ್ ಹಾಗೂ ರಾವ್‍ಸಾಹೇಬ್ ಪ್ರಶಸ್ತಿ ದೊರಕಿದ್ದುವು. ವಚನಶಾಸ್ತ್ರಪ್ರವೀಣ, ವಚನಶಾಸ್ತ್ರ ಪಿತಾಮಹ ಎಂಬ ಗೌರವಗಳಿಗೂ ಇವರು ಪಾತ್ರರಾಗಿದ್ದರು. ಇವರು 1964 ಜೂನ್ 29ರಂದು ನಿಧನಹೊಂದಿದರು. (ಬಿ.ಬಿ.ಎಚ್.)