ಹಳೇಬೀಡು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಒಂದು ಗ್ರಾಮ. ಹೋಬಳಿ ಕೇಂದ್ರ. ಇತಿಹಾಸಪ್ರಸಿದ್ಧ ಸ್ಥಳ. ಬೇಲೂರಿನ ಪೂರ್ವಕ್ಕೆ 16 ಕಿಮೀ ದೂರದಲ್ಲಿದೆ.

ಈಗ ಇದು ಸಾಮಾನ್ಯ ಹಳ್ಳಿಯಾಗಿದ್ದರೂ ಲೋಕಪ್ರಸಿದ್ಧವಾದ ಕಲಾಕ್ಷೇತ್ರವಾಗಿ ಉಳಿದುಬಂದಿದೆ. ಮಲೆನಾಡಿನ ಅಂಚಿನಲ್ಲಿದ್ದು ಮಲೆನಾಡಿಗೂ ಬಯಲುಸೀಮೆಗೂ ಸಂಬಂಧವನ್ನು ಕಲ್ಪಿಸುವ ಆಯಕಟ್ಟಿನ ಸ್ಥಳದಲ್ಲಿ ಸುತ್ತಲೂ ಬೆಟ್ಟ ಗುಡ್ಡಗಳಿಂದಾವರಿಸಿ, ನಡುವೆ ವಿಶಾಲವಾದ ಕಣಿವೆಯಿರುವ ಈ ಸ್ಥಳದಲ್ಲಿ ಹತ್ತನೆಯ ಶತಮಾನದ ಲ್ಲಿಯೇ ಒಂದು ಸಣ್ಣ ಊರು ಹುಟ್ಟಿಕೊಂಡಿದ್ದಿರಬೇಕು. ಇಲ್ಲಿ ಆಗ ನಿರ್ಮಿಸಿದ ದೊಡ್ಡ ಕೆರೆಯಿಂದ ಇದಕ್ಕೆ ದೋರಸಮುದ್ರವೆಂಬ ಹೆಸರು ಬಂತು. ಈ ದೋರಸಮುದ್ರವನ್ನು ಕಟ್ಟಿದುದು ಯಾವಾಗ ಎನ್ನುವುದು ಖಚಿತವಾಗಿಲ್ಲ. ರಾಷ್ಟ್ರಕೂಟ ಚಕ್ರವರ್ತಿ ಧ್ರುವ ಗಂಗವಾಡಿಯನ್ನು ಗೆದ್ದಾಗ ಈ ಕೆರೆ ನಿರ್ಮಾಣವಾಗಿ ಧ್ರುವನದೋರ ಎಂಬ ಹೆಸರಿನಿಂದ ಇದಕ್ಕೆ ದೋರಸಮುದ್ರ ಎಂಬ ಹೆಸರು ಬಂತೆಂದು ಒಂದು ಅಭಿಪ್ರಾಯವಿದೆ. ಆದರೆ ಅಷ್ಟು ಹಿಂದೆಯೇ ಇಲ್ಲಿ ಊರು ಹುಟ್ಟಿಕೊಂಡಿದ್ದುದಕ್ಕೆ ಆಧಾರವಿಲ್ಲ. ಹತ್ತನೆಯ ಶತಮಾನದಲ್ಲಿ ಈ ಪ್ರಾಂತ ಗಂಗಬೂತುಗನ ಆಳಿಕೆಗೆ ಒಳಪಟ್ಟು ಅವನ ಅಕ್ಕ ಪಾಂಬಬ್ಬೆ ಮತ್ತು ಭಾವ ದೋರ ಇಲ್ಲಿ ಇದ್ದಂತೆ ಶಾಸನಗಳಿಂದ ತಿಳಿದುಬರುವುದರಿಂದ 950ಕ್ಕೆ ಮುಂಚೆ ಈ ದೋರ ಇಲ್ಲಿ ಕೆರೆಯನ್ನು ಕಟ್ಟಿಸಿ ತನ್ನ ಹೆಸರಿನಲ್ಲಿ ದೋರಸಮುದ್ರ ವೆಂಬ ಊರನ್ನೂ ನಿರ್ಮಿಸಿ ಇಲ್ಲಿಂದ ರಾಜ್ಯಭಾರ ಮಾಡಿರುವುದು ಹೆಚ್ಚು ಸಂಭವನೀಯ. ಆಗ ಇದೊಂದು ಜೈನಯತಿಗಳ ವಾಸಸ್ಥಾನವೂ ಆಗಿತ್ತು. ಇಲ್ಲಿನ ಅತ್ಯಂತ ಪ್ರಾಚೀನ ಶಾಸನವೂ ಈ ಕಾಲಕ್ಕೆ ಸೇರಿದುದಾಗಿದ್ದು ಪಾಂಬಬ್ಬೆಯ ಗುರುಗಳ ಪರಂಪರೆಗೆ ಸೇರಿದ ಯತಿಯೊಬ್ಬರ ನಿಸಿದಿಯಾಗಿದೆ. ಈ ಊರಿಗೆ 950ರ ವೇಳೆಗಾಗಲೇ ದ್ವಾರಾವತಿ ಎಂಬ ಹೆಸರೂ ಬಳಕೆಗೆ ಬಂದಿದ್ದುದಾಗಿ ಮತ್ತೊಂದು ಶಾಸನದಿಂದ ನಿರ್ಧರಿಸಬಹುದು. ಕದಂಬರ ಶಾಸನಗಳಲ್ಲಿ ಕಂಡು ಬರುವ ತ್ರಿಪರ್ವತ ಹಳೇಬೀಡು ಆಗಿರಬೇಕೆಂಬ ವಿದ್ವಾಂಸ ಮೊರೇಸನ ಅಭಿಪ್ರಾಯಕ್ಕೆ ಆಧಾರವಿಲ್ಲ.

ಸೊಸೆವೂರಿನಲ್ಲಿದ್ದ ಹೊಯ್ಸಳರು ಚಾಳುಕ್ಯರ ಸಾಮಂತರಾಗಿ ರಾಜ್ಯ ವಿಸ್ತರಿಸುತ್ತ ಬಂದಂತೆ ಮಲೆನಾಡಿನಿಂದ ಬಯಲುಸೀಮೆಯ ಕಡೆಗೆ ತಮ್ಮ ನೆಲೆವೀಡನ್ನು ಬದಲಾಯಿಸಲು ಹವಣಿಸಿದಾಗ ವಿನಯಾದಿತ್ಯನಿಗೆ ದೋರಸಮುದ್ರ ಆಯಕಟ್ಟಿನ ನೆಲೆಯಾಗಿ ಕಂಡುದರಲ್ಲಿ ಆಶ್ಚರ್ಯವಿಲ್ಲ. ಆತ 1064ರಲ್ಲಿ ಕೆರೆಗೆ ತೂಬು ನಿರ್ಮಿಸಿ ಊರನ್ನು ಅಭಿವೃದ್ಧಿಪಡಿಸಿದ. ಮುಂದೆ ಹೆಚ್ಚು ವಿಸ್ತಾರವಾಗಿ ಬೆಳೆದಂತೆ ಕೆರೆಯನ್ನು ವಿಸ್ತರಿಸಿ ಮತ್ತೊಂದು ತೂಬನ್ನು 1092ರಲ್ಲಿ ವಿನಯಾದಿತ್ಯ ನಿರ್ಮಿಸಿದಂತೆ ತಿಳಿದುಬರುತ್ತದೆ. ಒಂದನೆಯ ಬಲ್ಲಾಳ ಬೇಲೂರನ್ನೂ ವಿಷ್ಣುವರ್ಧನ ವಿಷ್ಣುಸಮುದ್ರವನ್ನೂ ನೆಲೆವೀಡುಗಳನ್ನಾಗಿ ಕಟ್ಟಿಸಿದರೂ ಈ ದೋರಸಮುದ್ರ ಅಥವಾ ದ್ವಾರಾವತೀಪುರವೇ ಹೊಯ್ಸಳ ವಂಶದ ಮುಖ್ಯ ನೆಲೆವೀಡಾಗಿ ಮುಂದುವರಿಯಿತು.

ವಿಸ್ತಾರವಾಗಿದ್ದ ದೋರಸಮುದ್ರದ ನಗರವನ್ನು ಬಳಸಿಕೊಂಡು ನಿಂತಿದ್ದ ಕೋಟೆ ಭದ್ರವಾದುದಾಗಿತ್ತು. ದೊಡ್ಡ ದೊಡ್ಡ ಗುಂಡುಗಳನ್ನು ಒಂದರ ಮೇಲೊಂದು ಪೇರಿಸಿ ಒಳಭಾಗದಿಂದ ಮಣ್ಣಿನ ಒತ್ತು ಕೊಟ್ಟಿದ್ದುದಲ್ಲದೆ ಅಲ್ಲಲ್ಲಿ ಬತೇರಿಯಂತೆ ಗೋಡೆ ಮುಂಚಾಚಿಕೊಂಡಿತ್ತು. ಕೆಲವು ಕಡೆ ಆಳವಾದ ಅಗಳು ಕೋಟೆಯನ್ನು ರಕ್ಷಿಸಿಕೊಂಡಿತ್ತು. ಈ ಅಗಳಿನ ಆಳ ಕೆಲವು ಕಡೆ 50 ಅಡಿಗಳಷ್ಟಿದೆ. ದೋರಸಮುದ್ರವಲ್ಲದೆ ಇನ್ನೂ ಕೆಲವು ಸಣ್ಣಪುಟ್ಟ ಕೆರೆಗಳಿದ್ದರೂ ವಿಸ್ತಾರವಾಗಿ ಬೆಳೆದ ನಗರಕ್ಕೆ ನೀರು ಸಾಲದೆ ಹೋಗಿರಬೇಕು. ಆದ್ದರಿಂದಲೇ ಯಗಚಿ ನದಿಯಿಂದ ಕಾಲುವೆಯನ್ನು ತೋಡಿ ಊರಿಗೆ ನೀರನ್ನು ಒದಗಿಸುವ ಏರ್ಪಾಡು ಆಗಿತ್ತು. ಊರಿನ ನಡುವೆ ಇದ್ದು, ಬೆಣ್ಣೆಗುಡ್ಡಕ್ಕೆ ಹೊಂದಿಕೊಂಡಂತೆ ಪೂರ್ವದ ಕಡೆ ವಿಶಾಲವಾದ ಬಯಲಿನಲ್ಲಿ, ಹೊಯ್ಸಳರ ಅರಮನೆಯಿತ್ತು. ಈಗಲೂ ಆ ಸ್ಥಳಕ್ಕೆ ಅರಮನೆಯ ಹೊಲ ಎಂದೇ ಹೆಸರಿದೆ. ಈ ಹೊಲದ ಬೇರೆ ಬೇರೆ ಭಾಗಗಳನ್ನು ಹಜಾರದ ಗುಂಡ್ಲು, ಲಾಯದ ಸಲಿಗೆ, ಆನೆಗುಂಡಿ, ಟಂಕಸಾಲೆ ಹೊಲ ಎಂದು ಮುಂತಾಗಿ ಕರೆಯುತ್ತಾರೆ. ಅರಮನೆ ಮತ್ತು ಅದರ ಭಾಗಗಳನ್ನು ಕಲ್ಲಿನ ಅಡಿಪಾಯದ ಮೇಲೆ ಮರದ ಕಂಬಗಳು, ಇಟ್ಟಿಗೆ ತುಂಡು ಕಲ್ಲುಗಳಿಂದ ಕಟ್ಟಿದ್ದಂತೆ ತೋರುತ್ತದೆ. ಇದು ಸಂಪೂರ್ಣವಾಗಿ ನಾಶವಾಗಿರುವುದರಿಂದ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. 80 ಮೀಗೂ ಹೆಚ್ಚು ಉದ್ದವಾಗಿದ್ದ ಅಡುಗೆ ಶಾಲೆ, ಸ್ನಾನದ ಮನೆಗಳಿದ್ದ ಕುರುಹನ್ನು ನೋಡಿದರೆ ಅರಮನೆ ತುಂಬ ವಿಶಾಲವಾದುದಾಗಿಯೇ ಇದ್ದಿರಬೇಕು. ಈ ಅರಮನೆಯನ್ನು ಸುತ್ತುವರಿದ ಒಳಕೋಟೆ ದಪ್ಪ ಗುಂಡುಗಳಿಂದ ನಿರ್ಮಿತವಾಗಿದೆ. ಇದರ ಪೂರ್ವಕ್ಕೆ ಕೋಟೆಯ ಬಾಗಿಲು, ಈ ಬಾಗಿಲಿಗೆ ನೇರವಾಗಿ ಅನೇಕ ಜೈನಬಸದಿಗಳೂ ಈಶಾನ್ಯ ದಿಕ್ಕಿನಲ್ಲಿ ಪ್ರಸಿದ್ಧವಾದ ಹೊಯ್ಸಳೇಶ್ವರ ದೇವಾಲಯ, ಕೆರೆಗೆ ಸಮೀಪವಾಗಿ ಕೇದಾರೇಶ್ವರ ದೇವಾಲಯ, ಬೆಣ್ಣೆಗುಡ್ಡದ ಉತ್ತರಕ್ಕೆ ಈಗ ನಾಶವಾಗಿರುವ ಆದರೆ ಅತಿ ಶ್ರೇಷ್ಠವಾದ ಶಿಲ್ಪವನ್ನು ಹೊಂದಿದ್ದ ನಗರೇಶ್ವರ ಮತ್ತು ಇತರ ಪಂಚಲಿಂಗ ದೇವಾಲಯಗಳ ಸಮೂಹ, ಇವಲ್ಲದೆ ಶಾಸನಗಳಲ್ಲಿ ಹೆಸರಿಸಿರುವ ಆದರೆ ಈಗ ಇಲ್ಲವಾಗಿರುವ ಇನ್ನೂ ಅನೇಕ ದೇವಾಲಯಗಳು, ಬಸದಿಗಳಿಂದ ತುಂಬಿ ದ್ವಾರಾವತಿ ನಗರ ಹೊಯ್ಸಳರ ಕಾಲದಲ್ಲಿ ಅತಿವೈಭವದಿಂದ ವಿಜೃಂಭಿಸಿದ ನಗರವಾಗಿತ್ತು. ಕೋಟೆಯ ಒಳಭಾಗದಲ್ಲಿ ಮಾತ್ರವಲ್ಲದೆ ಅದರ ಸುತ್ತಲೂ ಊರು ಹಬ್ಬಿ ಈಗಿನ ನರಸೀಪುರ, ರಾಜನಸಿರಿಯೂರು, ಸಿದ್ಧಾಪುರ, ಹುಲಿಕೆರೆ ಮುಂತಾದ ಸುತ್ತು ಮುತ್ತಲ ಹಳ್ಳಿಗಳೆಲ್ಲ ಆ ದ್ವಾರಾವತಿಯ ಹರವುಗಳಾಗಿದ್ದುವು. ಪುಷ್ಪಗಿರಿಯ ಮೇಲೆ ಈಗ ಮಲ್ಲಿಕಾರ್ಜುನ ದೇವಾಲಯವೆನ್ನಿಸಿ ಕೊಂಡಿರುವ ಭವ್ಯವಾದ ಮಂದಿರ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಸುಂದರ ಜೈನಬಸದಿ. ಭೈರವನ ಗುಡ್ಡದಲ್ಲಿ ಇರುವ ವೀರಭದ್ರನ ದೇವಾಲಯ ಅದೇ ಕಾಲದ ದೇವಾಲಯ. ಹುಲಿಕೆರೆಯಲ್ಲಿರುವ ಕೊಳ ಸುಂದರವಾದ 27 ಕಿರುಮಂಟಪಗಳಿಂದ ಕೂಡಿ ಅಪರೂಪವಾದ ನಿರ್ಮಾಣವೆನ್ನಿಸಿದೆ.

ಮುಮ್ಮಡಿ ಬಲ್ಲಾಳನ ಕಾಲದಲ್ಲಿ ಈ ಊರು ಅತ್ಯಂತ ವಿಸ್ತಾರ ವಾಗಿದ್ದು, ಸಂಪದ್ಭರಿತವಾಗಿದ್ದು ವೈಭವದ ಪರಾಕಾಷ್ಠೆಯನ್ನು ಮುಟ್ಟಿತು. ಆದರೆ 1310ರಲ್ಲಿ ಅಲಾಉದ್ದೀನನ ದಂಡನಾಯಕ ಮಲ್ಲಿ ಕಾಫರ್ ಈ ನಗರವನ್ನು ಮುತ್ತಿ ಬಲ್ಲಾಳನನ್ನು ಸೋಲಿಸಿ ಕೊಳ್ಳೆ ಹೊಡೆದಾಗ ತತ್ತರಿಸಿಹೋದ ಈ ಊರು ಮತ್ತೆ ಚೇತರಿಸಿಕೊಳ್ಳಲಾಗಲಿಲ್ಲ. ಮುಂದೆ ಬಲ್ಲಾಳ ಹನ್ನೆರಡು ವರ್ಷಗಳ ಕಾಲ ರಾಜ್ಯವಾಳಿದರೂ ಅವನು ಬೇರೆ ಬೇರೆ ಬೀಡುಗಳಲ್ಲಿ ನೆಲೆಸುತ್ತಿದ್ದುದರಿಂದ ದೋರಸಮುದ್ರ ತನ್ನ ಪೂರ್ವಸ್ಥಿತಿಗೆ ಮರಳದೆ ಶಿಥಿಲವಾಗುತ್ತ ಹೋಯಿತು. ಬಲ್ಲಾಳನ ಕಾಲದಲ್ಲಿಯೇ ಇದನ್ನು ಹಳೇಬೀಡು-ಎಂದರೆ ಹಿಂದಿನ ರಾಜಧಾನಿ ಎಂದು ಕರೆಯಲಾರಂಭಿಸಿದುದರಿಂದ ಮುಂದೆ ಇದಕ್ಕೆ ಹಳೇಬೀಡು ಎಂಬ ಹೆಸರೇ ನಿಂತುಹೋಯಿತು. ಜನ ದಿಕ್ಕಾಪಾಲಾಗಿ, ಇಲ್ಲಿನ ಭವ್ಯವಾದ ಕಟ್ಟಡಗಳನ್ನು ನೋಡಿಕೊಳ್ಳುವವರಿಲ್ಲದೆ ಅವುಗಳನ್ನುಳಿಸಿ ಕೊಂಡು ಬರಲೂ ಸಾಧ್ಯವಾಗದೆ ನೂರಾರು ಬಸದಿ, ದೇವಾಲಯಗಳು ನೆಲಸಮವಾದವು. ವಿಜಯನಗರದ ಕಾಲದಲ್ಲಿ ಇಲ್ಲಿನ ದೇವಾಲಯಗಳ ಸೌಂದರ್ಯದಿಂದ ಆಕರ್ಷಿತರಾಗಿ ಮುರಿದು ಬಿದ್ದುಹೋಗುತ್ತಿದ್ದ ದೇವಾಲಯಗಳಿಗೆ ಊರೆಕೊಟ್ಟು ನಿಲ್ಲಿಸಲು ನಡೆದ ಪ್ರಯತ್ನವೂ ಹೆಚ್ಚು ಫಲಕಾರಿಯಾಗಲಿಲ್ಲ. ಹೊಯ್ಸಳೇಶ್ವರ ದೇವಾಲಯ, ಜೈನಬಸದಿಗಳು, ವೀರಭದ್ರ ದೇವಾಲಯ ಮತ್ತು ಬಿದ್ದುಹೋಗಿದ್ದು ಈಚೆಗೆ ಪುನರ್ನಿರ್ಮಾಣಗೊಂಡ ಕೇದಾರೇಶ್ವರ ದೇವಾಲಯಗಳನ್ನು ಬಿಟ್ಟರೆ ಹೊಯ್ಸಳರ ಕಾಲದ ಇದರ ವೈಭವ ವಿಸ್ತಾರಗಳನ್ನು ಇಲ್ಲಿ ಹರಡಿರುವ ಇದರ ಅಸಂಖ್ಯಾತ ಅವಶೇಷಗಳಿಂದ ಮಾತ್ರ ಗುರುತಿಸಬಹುದು.

ಹಳೇಬೀಡಿನಲ್ಲಿ ಈಗ ಉಳಿದುಬಂದಿರುವ ದೇವಾಲಯಗಳಲ್ಲೆಲ್ಲ ಅತ್ಯುತ್ತಮವಾದುದೆಂದರೆ ಹೊಯ್ಸಳೇಶ್ವರ ದೇವಾಲಯ. ಅಷ್ಟೇ ಅಲ್ಲ, ಹೊಯ್ಸಳ ದೇವಾಲಯಗಳಲ್ಲಿಯೇ ಅಗ್ರಪಂಕ್ತಿಯಲ್ಲಿ ನಿಲ್ಲುವ, ಈಗ ಉಳಿದಿರುವ ಹೊಯ್ಸಳ ದೇವಾಲಯಗಳಲ್ಲಿಯೇ ಅತಿ ದೊಡ್ಡದಾದ ದೇವಾಲಯವಿದು. ಈ ದೇವಾಲಯವನ್ನು ನಿರ್ಮಿಸಿದ ವಿವರಗಳು ಇಲ್ಲಿನ ಶಾಸನಗಳಲ್ಲಿ ದೊರೆಯದೇ ಹೋದರೂ ಹಳೇಬೀಡಿನ ಸಮೀಪದ ಗಟ್ಟದಹಳ್ಳಿಯಲ್ಲಿರುವ ದೊಡ್ಡದೊಂದು ಶಾಸನದಿಂದ ಹೊಯ್ಸಳ ವಿಷ್ಣುವರ್ಧನನ ಅಧಿಕಾರಿ ಕೇತುಮಲ್ಲ 1121ರ ಹೊತ್ತಿಗೆ ದೋರಸಮುದ್ರದಲ್ಲಿ ತನ್ನ ರಾಜನ ಹೆಸರಿನಲ್ಲಿ (ವಿಷ್ಣುವರ್ಧನ) ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಿಸಿದಂತೆ ತಿಳಿದುಬರುವುದರಿಂದ ಈ ದೇವಾಲಯವನ್ನು 1121ರ ಹೊತ್ತಿಗಾಗಲೇ ಕಟ್ಟಿಸಿದ್ದಿರಬೇಕು. ಆದರೂ ಇದಕ್ಕೆ ಮುಂದೆ ಕೆಲವು ಬೇರೆ ಬೇರೆ ಭಾಗಗಳನ್ನು ಒಂದನೆಯ ನರಸಿಂಹ, ಎರಡನೆಯ ಬಲ್ಲಾಳರ ಕಾಲದಲ್ಲಿಯೂ ಸೇರಿಸಿದಂತೆ ತಿಳಿದುಬರುತ್ತದೆ. ಈ ದೇವಾಲಯದ ದಕ್ಷಿಣ ಬಾಗಿಲುವಾಡದ ಮೇಲಿನ ಒಂದು ಶಾಸನದಿಂದ ಆ ಬಾಗಿಲನ್ನು ಒಂದನೆಯ ನರಸಿಂಹನ ಸೂತ್ರಧಾರಿ ಕೇದಾರೋಜನಿಗಾಗಿ ಕಾಳಿದಾಸಿಯು ಕಂಡರಿಸಿದುದಾಗಿ ತಿಳಿದುಬರುತ್ತದೆ. ಇದೇ ರೀತಿ ಮತ್ತೊಂದು ಶಾಸನ ಪೂರ್ವದಿಕ್ಕಿನ ಬಾಗಿಲುವಾಡವನ್ನು ದೇಮೋಜ ಮಾಡಿದನೆನ್ನುತ್ತದೆ. ಆದ್ದರಿಂದ ಪೂರ್ತಿಯಾಗಿ ತೆರೆದ ಮಂಟಪದಂತಿದ್ದ ನವರಂಗಗಳಿಗೆ ಬಾಗಿಲುವಾಡಗಳು, ಜಾಲಂಧ್ರಗಳು ನರಸಿಂಹನ ಕಾಲದಲ್ಲಿ ಸೇರಿಸಲ್ಪಟ್ಟವು. ಬಹುಶಃ ಇದೇ ಕಾಲದಲ್ಲಿ ಎರಡು ನವರಂಗಗಳನ್ನು ಸೇರಿಸಿರುವ ಕೈಸಾಲೆಯ ಎರಡು ಕಡೆಯೂ ಎರಡು ಚಿಕ್ಕ ಗುಂಡಿಗಳು ನಿರ್ಮಿತವಾಗಿರಬೇಕು. ಹಾಗೆಯೇ ದಕ್ಷಿಣ ನಂದಿಮಂಟಪದ ಹಿಂದಿನ ಸೂರ್ಯನ ಗುಡಿಯೂ ಅನಂತರದ ಕಟ್ಟಡವಾಗಿರುವಂತೆ ತೋರುತ್ತದೆ.

ಹೊಯ್ಸಳೇಶ್ವರ ದೇವಾಲಯ ಜೋಡಿ ದೇವಾಲಯ. ಬೇಲೂರಿನ ಚೆನ್ನಕೇಶವ ದೇವಾಲಯದ ವಿನ್ಯಾಸದಲ್ಲಿಯೇ ಇರುವ ಎರಡು ದೇವಾಲಯಗಳು ಒಂದರ ಪಕ್ಕದಲ್ಲಿ ಒಂದಿದ್ದು ಅವೆರಡರ ನವರಂಗಗಳನ್ನೂ ಒಂದು ಕೈಸಾಲೆಯ ಮೂಲಕ ಒಂದುಗೂಡಿಸಿ ಒಂದೇ ದೇವಾಲಯವೆಂಬ ಭಾವನೆ ಬರುವಂತೆ ಜೋಡಿಸಿದೆ. ಪೂರ್ತಿಯಾಗಿ ಗಟ್ಟಿಜಾತಿಯ ಬಳಪದ ಕಲ್ಲಿನಿಂದ ನಿರ್ಮಿತವಾಗಿ, ಪೂರ್ವಾಭಿಮುಖವಾಗಿರುವ ಈ ಒಂದೊಂದು ದೇವಾಲಯದಲ್ಲಿಯೂ ನಕ್ಷತ್ರಾಕಾರದ ಗರ್ಭಗೃಹ, ಸುಕನಾಸಿ ಮತ್ತು ಚೌಕಾಕಾರದ, ಆದರೆ ಒಂದೊಂದು ಮುಖದ ಮಧ್ಯಭಾಗ ಮುಂಚಾಚಿದಂತಿರುವ, ನವರಂಗವಿದ್ದು ಇದರಿಂದ ಬೇರೆಯಾಗಿ ಮುಂದೆ ಒಂದೊಂದು ನಂದಿಮಂಪಟವಿದೆ. ದಕ್ಷಿಣದ ನಂದಿಮಂಟಪದ ಹಿಂಭಾಗದಲ್ಲಿ ಸೂರ್ಯನ ಗುಡಿಯೂ ನವರಂಗಗಳನ್ನು ಸೇರಿಸಿರುವ ಕೈಸಾಲೆಯ ಎರಡು ಕಡೆಗಳಲ್ಲಿಯೂ ಒಳಮುಖವಾಗಿ ಒಂದೊಂದು ಗುಡಿಯೂ ಉಂಟು. ಈ ದೇವಾಲಯ ತನ್ನದೇ ವಿನ್ಯಾಸವನ್ನು ಬಹುಮಟ್ಟಿಗೆ ಅನುಸರಿಸಿದ ಎತ್ತರವಾದ ಮತ್ತು ಅಗಲವಾದ ಜಗತಿಯ ಮೇಲಿದೆ. ನಕ್ಷತ್ರಾಕಾರದ ಗರ್ಭಗುಡಿಗಳಿಗೆ ಬಹುಶಃ ಹೊರಗೋಡೆ ಭದ್ರವಾಗಿರು ವಂತೆ ಮಾಡಲೂ ಅದಕ್ಕೆ ಮತ್ತಷ್ಟು ಅಲಂಕರಣವನ್ನೊದಗಿಸಲೂ ಅವುಗಳ ಮೂರು ಕಡೆಯೂ ದೊಡ್ಡದಾದ ಎರಡು ಅಂತಸ್ತಿನ ಆಸರೆಮಂಟಪಗಳನ್ನು ಜೋಡಿಸಲಾಗಿದೆ. ಇವುಗಳನ್ನು ಅನಂತರದ ಕಾಲದಲ್ಲಿ ಜೋಡಿಸಿರುವುದು ಗೋಡೆಯ ಮೇಲಿನ ಕೆಲವು ಶಿಲ್ಪಗಳು ಮುಚ್ಚಿ ಹೋಗಿರುವುದರಿಂದ ಸ್ಪಷ್ಟಗೊಳ್ಳುತ್ತದೆ. ಗರ್ಭಗೃಹಗಳ ಮೇಲೆ ಗೋಪುರಗಳಿದ್ದುವೇ, ಇದ್ದರೆ ಯಾವ ಮಾದರಿಯಲ್ಲಿದ್ದುವು ಎಂಬುದನ್ನು ತಿಳಿಯಲು ಈಗ ಸಾಧ್ಯವಿಲ್ಲ. ಇವುಗಳ ಮೇಲೆ ಗೋಪುರಗಳಿದ್ದುದೂ ಇವು ನಕ್ಷತ್ರಾಕಾರದ ವಿನ್ಯಾಸದಲ್ಲಿಯೇ ಮೇಲೆದ್ದಿದ್ದುದೂ ಸಂಭವನೀಯ. ಒಂದೊಂದು ನವರಂಗದ ಮುಂದೆಯೂ ಒಂದೊಂದು, ಉತ್ತರ ದಕ್ಷಿಣದ ಪಕ್ಕಗಳಲ್ಲಿ ಒಂದೊಂದು, ಹೀಗೆ ನಾಲ್ಕು ಬಾಗಿಲುವಾಡಗಳಿದ್ದು ನವರಂಗದ ಮುಂಭಾಗದ ಜಾಲಂಧ್ರಗಳು ಹೆಚ್ಚು ಸರಳವಾಗಿವೆ. ಆದರೆ ಇವುಗಳ ಹಿಂಭಾಗದ ಎರಡು ಮೂಲೆಗಳಿಗೂ ಸೇರಿದಂತಿರುವ ಭಾಗದ ಹೊರಗೋಡೆಗಳು ಹೆಚ್ಚು ದಪ್ಪವಾಗಿದ್ದು, ಇವುಗಳನ್ನು ಹಲವು ಮುಖಗಳಾಗುವಂತೆ ಕಚ್ಚುಕಚ್ಚಾಗಿ ಮಾಡಿದೆ. ದೇವಾಲಯವನ್ನು ಸುತ್ತುವರಿದಂತೆ ಅದರ ಬುಡದ ಭಾಗ ಒಂದರ ಮೇಲೊಂದರಂತೆ ಹಲವು ಅಡ್ಡಪಟ್ಟಿಕೆಗಳಾಗಿ ವಿಂಗಡಣೆಗೊಂಡಿದೆ. ಅಲ್ಲಿಂದ ಮೇಲೆ ಉತ್ತರ, ದಕ್ಷಿಣ ಬಾಗಿಲುವಾಡಗಳವರೆಗಿನ ಹಿಂಭಾಗದಲ್ಲಿ ಹಲವು ಮುಖಗಳಾಗಿ ಒಡೆದು ಮಡಿಕೆಗೊಂಡಿರುವ ಗೋಡೆಯಲ್ಲಿ ಒಂದೊಂದು ಮುಖವೂ ತನ್ನ ನೀಳತೆಯನ್ನು ಪ್ರದರ್ಶಿಸುವಂತಿದ್ದು ಇವುಗಳ ವಿನ್ಯಾಸ ವೈವಿಧ್ಯ, ಒಂದೊಂದು ಮುಖವನ್ನೂ ಒಟ್ಟು ವಿನ್ಯಾಸಕ್ಕೆ ಹೊಂದಿಸಿರುವುದು, ನೀಳ ಅಡ್ಡ ವಿಭಾಗಗಳಲ್ಲಿರುವ ಸಾಮರಸ್ಯಗಳು ವಾಸ್ತುಕಲೆಯ ಪ್ರೌಢಿಮೆಯ ಹೆಗ್ಗುರುತು.

ಹಲವು ಮುಖಗಳಾಗಿ ಮಡಿಕೆಗೊಂಡ, ಹೊಯ್ಸಳ ದೇವಾಲಯ ಗಳಲ್ಲಿಯೇ ಅತ್ಯಂತ ವಿಸ್ತಾರವಾದ ಭಿತ್ತಿಪಟಲ ರೂವಾರಿಗಳಿಗೊಂದು ಸುಗ್ಗಿಯಾಯಿತು. ದೇವಾಲಯವನ್ನು ಸುತ್ತುವರಿದು ಬಂದಿರುವ 700 ಅಡಿಗೂ ಹೆಚ್ಚು ಉದ್ದವಾಗಿರುವ ಹಲವಾರು ಪಟ್ಟಿಕೆಗಳು ಆನೆ, ಸಿಂಹ, ಬಳ್ಳಿಸುರುಳಿ, ಕುದುರೆ ಮತ್ತೆ ಬಳ್ಳಿಸುರುಳಿ, ಕಥಾಪಟ್ಟಿಕೆ, ಯಾಳಿಗಳು, ಹಂಸಗಳ ಸಾಲುಗಳನ್ನು ಕ್ರಮವಾಗಿ ಬುಡದಿಂದ ಮೇಲಕ್ಕೆ ಒಂದರಮೇಲೊಂದರಂತೆ ಹೊಂದಿದ್ದು, ಆನೆ ಸಾಲಿನ ಪಟ್ಟಿಕೆಯೊಂದ ರಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಆನೆಗಳಿವೆ. ಅವು ಸರ್ವಾಲಂಕಾರ ಭೂಷಿವಾಗಿ ಮಾವುತರಿಂದೊಡಗೂಡಿ ಗಂಭೀರವಾಗಿ ಮುಂದುವರಿಯುವ, ಹಿಂದಿನ ಆನೆ ತನ್ನೆಲ್ಲ ಬಲವನ್ನೂ ಬಿಟ್ಟು ತಿವಿದಾಗ ಮುದುರಿ, ಅಷ್ಟೇ ರೋಷದಿಂದ ತಲೆಯನ್ನು ಪಕ್ಕಕ್ಕೆ ಹೊರಳಿಸಿ ದುರುಗುಟ್ಟುವ, ಚೆಲ್ಲಾಟವಾಡುವ ಅವುಗಳ ಗುಣಸ್ವಭಾವಗಳನ್ನು ಸೆರೆಹಿಡಿದಿರುವುದೇ ಬೆರಗುಗೊಳಿಸುವ ಒಂದು ಅಂಶವಾದರೆ ಇನ್ನುಳಿದ ಸಾಲುಪಟ್ಟಿಕೆಗಳೂ ಇದೇ ಕುತೂಹಲವನ್ನೇ ಉಂಟು ಮಾಡುತ್ತವೆ. ರಾಮಾಯಣ, ಭಾರತ, ಭಾಗವತಗಳ, ಬಲಿ-ವಾಮನ, ಪ್ರಹ್ಲಾದ, ಸಮುದ್ರಮಥನ, ಶೈವಪುರಾ ಣದ ಕಥೆಗಳಿರುವ ಕಥಾಪಟ್ಟಿಕೆಯಂತೂ ಆ ಕಥಾಲೋಕವನ್ನೇ ಕಣ್ಣೆದುರಿಗೆ ಬಿತ್ತರಿಸಿದೆ. ಈ ಅಡ್ಡಪಟ್ಟಿಕೆಗಳಲ್ಲಿ ಉದ್ದವಾಗಿ ಹರಿಯುವ ಶಿಲ್ಪವೈಖರಿ ಇದ್ದರೆ ಇವುಗಳ ಮೇಲಿನ ನೀಳಮುಖಗಳು ಒಂದೊಂದು ಬಿಡಿಬಿಡಿಯಾದ ಒಂದೊಂದು ದೊಡ್ಡ ಗಾತ್ರದ ಮೂರ್ತಿಶಿಲ್ಪಗಳನ್ನು ಹೊಂದಿದೆ. ಸುಮಾರು ಒಂದು ಮೀಟರಿನಷ್ಟು ಎತ್ತರವಾಗಿರುವ ಈ ಮೂರ್ತಿಗಳು ಸಾಮಾನ್ಯವಾಗಿ ನವುರಾಗಿ ಬಿಡಿಸಿರುವ ಲತಾತೋರಣಗಳ ಕೆಳಗಿರುವಂತೆ ಕಂಡರಿಸಿದೆ. ಇವುಗಳಲ್ಲಿ ಶಿವಪಾರ್ವತಿಯರು, ಅವರ ಪರಿವಾರವರ್ಗ, ವಿಷ್ಣು, ಲಕ್ಷ್ಮಿ, ವಿಷ್ಣುವಿನ ದಶಾವತಾರಗಳು, ಪಾರಿಜಾತಾ ಪಹರಣ, ಗಜೇಂದ್ರಮೋಕ್ಷ, ಬ್ರಹ್ಮಸರಸ್ವತಿಯರು, ಗಜಾರಿ, ಮಹಿಷಾಸುರ ಮರ್ದಿನಿ, ಮೋಹಿನಿ, ದಕ್ಷಿಣಾಮೂರ್ತಿ, ಅಪ್ಸರೆಯರು, ರಾವಣ ಕೈಲಾಸವನ್ನೆತ್ತುತ್ತಿರುವುದು, ನೃತ್ಯಗಾತಿಯರು, ಪರಿವಾರವರ್ಗ-ಹೀಗೆ ನಾನಾ ಬಗೆಯ ಮೂರ್ತಿಗಳನ್ನು ನಾನಾಭಂಗಿಗಳಲ್ಲಿ ಕಾಣಬಹುದು. ದೇವಾಲಯದ ಮುಂಭಾಗದಲ್ಲಿ ಎರಡು ನವರಂಗಗಳ ನಡುವೆ ಮುಂಚಾಚಿದ ಭಾಗದಲ್ಲೂ ಇದೇ ರೀತಿಯ ಶಿಲ್ಪಗಳಿವೆ. ದಕ್ಷಿಣದ ನಂದಿ ಮಂಟಪ ದೊಡ್ಡದೂ ಉತ್ತರದ್ದು ಸ್ವಲ್ಪ ಚಿಕ್ಕದೂ ಆಗಿದ್ದು ಇವುಗಳಲ್ಲಿರುವ ನಂದಿಯ ಮೂರ್ತಿಗಳು ಬೃಹದಾಕಾರದವು. ದೇವಾಲಯದ ಎಲ್ಲ ಕಂಬಗಳೂ ತಿರುಗಣೆಯಲ್ಲಿ ಕಡೆದವಾಗಿದ್ದು, ಅನೇಕ ಕಂಬಗಳು ತುಂಬ ಹೊಳಪು ಪಡೆದಿವೆ. ನವರಂಗಗಳ ಮಧ್ಯದ ದಪ್ಪ ಕಂಬಗಳ ಮೇಲೆ ಮಣಿಹಾರಗಳು, ಕೀರ್ತಿಮುಖಗಳು ಇತರ ಅಲಂಕರಣಗಳೂ ತುಂಬಿವೆ. ಬೇಲೂರಿನಲ್ಲಿರುವಂತೆ ಇಲ್ಲಿಯೂ ಕಂಬಗಳ ಮೇಲೆ ಮದನಿಕೆಗಳನ್ನು ನಿಲ್ಲಿಸಿದ್ದರೂ ಈಗ ಇವು ಹೆಚ್ಚು ಉಳಿದುಬಂದಿಲ್ಲ. ಚಾವಣಿಗಳು ಹೆಚ್ಚು ವಿಸ್ತಾರವಾಗಿ ಕೆಲಸಮಾಡಿದವು ಗಳಲ್ಲ. ಗರ್ಭಗೃಹಗಳ ಬಾಗಿಲುವಾಡಗಳ ಮೇಲಿನ ಕೆತ್ತನೆ ವೈವಿಧ್ಯಮಯವಾಗಿವೆ. ವಿಸ್ತಾರವಾಗಿ ಬಿಡಿಸಿರುವ ಮಕರತೋರಣದಲ್ಲಿ ಅತಿ ಜಟಿಲವಾಗಿ ಹೆಣೆದುಕೊಂಡಿರುವ ಮಕರಗಳ ಬಾಲದ ಆಡಂಬರದ ಹರವು, ತಗಡುಗಳಿಂದ ಕತ್ತರಿಸಿ ಬಿಡಿಸಿದಂತೆ ಪದರಪದರವಾಗಿ ತೆಳುವಾಗಿ ಬಿಡಿಸಿರುವುದು ಆಶ್ಚರ್ಯಕರವಾಗಿದೆ. ಈ ದೇವಾಲಯ ಗಳಲ್ಲಿನ ಲಿಂಗಗಳೂ ದೊಡ್ಡವಾಗಿದ್ದು, ಎತ್ತರವಾದ ಪಾಣಿಪೀಠಗಳ ಮೇಲಿವೆ. ಇವುಗಳಲ್ಲಿ ಒಂದು ಹೊಯ್ಸಳೇಶ್ವರ, ಇನ್ನೊಂದು ಶಾಂತಲೇಶ್ವರ. ವಿಷ್ಣುವರ್ಧನ ಮತ್ತು ಅವನ ರಾಣಿ ಶಾಂತಲೆಯ ಹೆಸರಿನಲ್ಲಿ ಸ್ಥಾಪಿಸಿದವು.

ಕುಸುರಿ ಕೆಲಸದಲ್ಲಾಗಲಿ, ಮೂರ್ತಿಶಿಲ್ಪದಲ್ಲಾಗಲಿ ಹೊಯ್ಸಳೇಶ್ವರ ದೇವಾಲಯದ ಮೇಲಿನ ಶಿಲ್ಪಕಲೆ ಹೊಯ್ಸಳ ಶಿಲ್ಪದಲ್ಲಿಯೇ ಅತ್ಯುತ್ತಮ ವಾದುದು. ಪರಂಪರಾಗತವಾಗಿ ಬಂದ ಶಿಲ್ಪರೀತಿಯನ್ನು ಅಳವಡಿಸಿಕೊಂಡಿ ದ್ದರೂ ಇದರಲ್ಲಿ ನಾವೀನ್ಯ ಇದೆ. ದೇವಾನುದೇವತೆಗಳು, ವಿಲಾಸಿನಿಯರ ಹಾವಭಾವಗಳು, ನೃತ್ಯಗೀತವಾದ್ಯನಿರತರು, ವೀರರು, ಯೋಧರು, ನಟರು, ನರ್ತಕರು, ಆನೆ, ರಥ, ಕುದುರೆ, ಕಾಲಾಳುಗಳು, ಸುಖಸಂತೋಷಗಳಲ್ಲಿ ಬೆರೆತವರು, ಹಲವು ಬಗೆಯ ಪ್ರಾಣಿಪಕ್ಷಿಗಳು, ಗಿಡಬಳ್ಳಿಗಳು, ಒಡವೆ ವಸ್ತ್ರಗಳು ಹೊರಗೋಡೆಯ ತುಂಬ ಇಡಿಕಿರಿದಂತೆ ತುಂಬಿಹೋಗಿರುವ ಇಲ್ಲಿನ ಅಡ್ಡಪಟ್ಟಿಕೆಗಳಲ್ಲಾಗಲಿ ಉದ್ದ ಅಂಕಣ ಗಳಲ್ಲಾಗಲಿ ಸಾಲುಸಾಲಾಗಿ, ಬಿಡಿಬಿಡಿಯಾಗಿ, ಸೂಕ್ಷ್ಮಾತಿಸೂಕ್ಷ್ಮವಾಗಿ ಬಿಡಿಸಿರುವ ಮೂರ್ತಿಶಿಲ್ಪವಾಗಲಿ, ಕುಸುರಿ ಶಿಲ್ಪವಾಗಲಿ, ರೂವಾರಿಗಳ ಕಲಾಪ್ರೌಢಿಮೆಯನ್ನೂ ತಾಳ್ಮೆಯನ್ನೂ ಉತ್ಸಾಹವನ್ನೂ ಎತ್ತಿತೋರಿಸುತ್ತವೆ. ವಾಸ್ತುವನ್ನು ಶಿಲ್ಪದಿಂದ ಮುಚ್ಚಿಬಿಡುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ; ಶಿಲ್ಪ ವೈವಿಧ್ಯದ ಪ್ರದರ್ಶನಶಾಲೆಯಾಗಿದೆ.

ಇಂಥ ಭವ್ಯವಾದ ದೇವಾಲಯದ ಶಿಲ್ಪಗಳನ್ನು ಕಂಡರಿಸುವಲ್ಲಿ ಹಲವಾರು ಶಿಲ್ಪಿಗಳ ಕೈವಾಡವಿದೆ. ಬೇಲೂರಿನ ಚೆನ್ನಕೇಶವ ದೇವಾಲ ಯವೂ ಈ ದೇವಾಲಯವೂ ಸ್ವಲ್ಪ ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ ನಿರ್ಮಿತವಾದುವಾದರೂ ಎರಡು ಕಡೆಯೂ ಕೆಲಸ ಮಾಡಿದ ರೂವಾರಿಗಳು ಬೇರೆಬೇರೆಯೇ. ದಾಸೋಜನೆಂಬೊಬ್ಬನ ಹೆಸರು ಹಳೇಬೀಡಿನ ದೇವಾಲಯದಲ್ಲಿ ಕಂಡುಬಂದರೂ ಅವನು ಬೇಲೂರಿನಲ್ಲಿ ಕೆಲಸ ಮಾಡಿದ ದಾಸೋಜನೇ ಅಥವಾ ಶ್ರವಣಬೆಳಗೊಳದಲ್ಲಿ ಕೆಲಸ ಮಾಡಿದವನೇ ಹೇಳಲು ಬಾರದು. ಚಡೆಯಗೆರಿಯ ಹರಿಷನು ಬೇಲೂರಿನಲ್ಲಿ ಆಗದೆ ಇಲ್ಲಿ ಬಂದು ಕೆಲಸಮಾಡಿದನೆಂದು ಒಂದು ಶಾಸನ ಸೂಚಿಸುತ್ತದೆ. ಆದ್ದರಿಂದ ಈ ಎರಡು ದೇವಾಲಯಗಳಲ್ಲಿ ಕೆಲಸಮಾಡಿದ ರೂವಾರಿಗಳಲ್ಲಿ ಒಂದು ಬಗೆಯ ಹುರುಡಿದ್ದಂತೆ ತೋರುತ್ತದೆ. ಕಾಳಿದಾಸ, ದೇಮೋಜ, ಕೇತಣ, ಬಲ್ಲಣ, ರೇವೋಜ, ಅವನ ಮಗ ಹಪುಗ, ಮಾಣುಬಲಕಿ, ತಣದು ದೂರ ಹರಿಷ, ಕೇಸಿಮೋಜನ ಮಗ ಮಸ ಮೊದಲಾದವರು ಇಲ್ಲಿನ ರೂವಾರಿಗಳಲ್ಲಿ ಕೆಲವರು.

ಹಿಂದು ವಾಸ್ತುರೀತಿಯನ್ನು ಸಮರ್ಥಿಸುವ ಯಾರೇ ಆದರೂ ಈ ದೇವಾಲಯವನ್ನು ಉದಾಹರಿಸಲಿಚ್ಛಿಸುತ್ತಾರೆ. ಅಡ್ಡನೀಳಗಳ ಕಲಾತ್ಮಕ ಹೊಂದಾಣಿಕೆ, ನೆಳಲು ಬೆಳಕುಗಳ ಚೆಲ್ಲಾಟದ ಸೊಗಸು ಇಲ್ಲಿನಷ್ಟು ಬೇರೆಲ್ಲಿಯೂ ಕಂಡುಬರದು ಎಂಬುದು ಈ ದೇವಾಲಯವನ್ನು ಕುರಿತು ಫಗ್ರ್ಯೂಸನ್ನನ ಉದ್ಗಾರ.

ಈ ದೇವಾಲಯದ ಆವರಣದಲ್ಲಿರುವ ಬೃಹದ್ಗಣಪತಿ ಮತ್ತು ಇಮ್ಮಡಿ ಬಲ್ಲಾಳನ ಗರುಡ ಕುವರಲಕ್ಷ್ಮನ ನೆನಪಿಗೆ ನಿಲ್ಲಿಸಿರುವ ಗರುಡಸ್ತಂಭ ಶಾಸನಗಳೂ ಹಾಗೆಯೇ ದೇವಾಲಯದೊಳಗೆ ಪ್ರೌಢದೇವರಾಯನ ಸ್ತಂಭವೆಂದು ಕರೆಯುವ ಮತ್ತೊಂದು ಗರುಡ ಸ್ತಂಭವೂ ಉಲ್ಲೇಖನೀಯ.

(ಎಮ್.ಎಚ್.)

ಕೇದಾರೇಶ್ವರ ದೇವಾಲಯವನ್ನು ಹೊಯ್ಸಳ ದೊರೆ ಎರಡನೆಯ ಬಲ್ಲಾಳ ಹಾಗೂ ಅವನ ಕಿರಿಯ ರಾಣಿ ಕೇತಲದೇವಿ ತಮ್ಮ ಆಳಿಕೆಯ ಕೊನೆಯಲ್ಲಿ ಸು. 1219ರಲ್ಲಿ ಕಟ್ಟಿಸಿದರು. ಬಂದಳಿಕೆಯಲ್ಲಿರುವ ಶಾಸನದ ಪ್ರಕಾರ ಎರಡನೆಯ ಬಲ್ಲಾಳ ಈ ದೇವಾಲಯವನ್ನು ಬೆಳಗಾಂವಿಯ ದಕ್ಷಿಣ ಕೇದಾರೇಶ್ವರ ದೇವಾಲಯದಿಂದ ಸ್ಫೂರ್ತಿಹೊಂದಿ ಆ ದೇವಾಲಯವನ್ನು ಆಧಾರವಾಗಿಟ್ಟುಕೊಂಡು ಕಟ್ಟಿಸಿದನಂತೆ. ಅನಂತರ ಸು. 1220ರಲ್ಲಿ ಈ ದೇವಾಲಯವನ್ನು ಎರಡನೆಯ ನರಸಿಂಹ ಹಾಗೂ ಅವನ ಮಾತೆಯಾದ ಪದುಮಲದೇವಿಯವರು ಉಂಬಳಿಯಾಗಿ ಕೊಟ್ಟರೆಂದು ತಿಳಿದುಬರುತ್ತದೆ.

ಈ ದೇವಾಲಯದಲ್ಲಿ ಮೂರು ಕೋಣೆಗಳಿವೆ. ಗರ್ಭಗುಡಿಯಲ್ಲಿ ಯಾವ ವಿಗ್ರಹವೂ ಇಲ್ಲ. ಮೂಲದಲ್ಲಿ ಈ ದೇವಾಲಯಕ್ಕೆ ಬಳಪದ ಕಲ್ಲಿನ ಬಹಳ ಸುಂದರವಾದ ನಕ್ಷತ್ರಾಕಾರದ ಗೋಪುರವಿದ್ದು ಈಗ ಅದು ಹಾಳಾಗಿದೆ. ಹೊಯ್ಸಳೇಶ್ವರ ದೇವಾಲಯದಂತೆ ನಕ್ಷತ್ರಾಕಾರದ ತಳವಿನ್ಯಾಸವನ್ನು ಹೊಂದಿದ್ದು ಎತ್ತರವಾದ ಜಗತಿಯ ಮೇಲೆ ಕಟ್ಟಲ್ಪಟ್ಟಿದ್ದು ಅದರಂತೆಯೇ ಅಲಂಕಾರಪಟ್ಟಿಕೆಗಳನ್ನು ಹೊಂದಿದೆ. ಈ ಅಲಂಕಾರ ಪಟ್ಟಿಕೆಗಳಲ್ಲಿ ಬಹಳ ಸುಂದರವಾದ ಪುಷ್ಪಗಳನ್ನು, ರಾಮಾಯಣ, ಮಹಾಭಾರತ ಮತ್ತು ಭಾಗವತಗಳ ಕೆಲವು ಕಥೆಗಳನ್ನು ಅತ್ಯಾಕರ್ಷಕವಾಗಿ ಬಿಡಿಸಲಾಗಿದೆ. ಅದರಲ್ಲೂ ಹಂಸಗಳ ಮತ್ತು ಮೊಸಳೆಗಳ ಶಿಲ್ಪಗಳು ಮನಮೋಹಕವಾಗಿವೆ. ಇದಲ್ಲದೆ ಈ ದೇವಾಲಯದ ಬಾಗಿಲುವಾಡ, ಭುವನೇಶ್ವರಿ ಹಾಗೂ ಹೊರಭಾಗದ ಗೋಡೆಗಳಲ್ಲಿ ಕೆಲವು ಸುಂದರ ಮೂರ್ತಿಗಳಿವೆ.

ಈ ದೇವಾಲಯದ ಅನೇಕ ವಿಗ್ರಹಗಳು ಈಗ ಇಲ್ಲ. ಇವುಗಳಲ್ಲಿ ಕೆಲವು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಮತ್ತೆ ಕೆಲವು ಹೊಯ್ಸಳೇಶ್ವರ ದೇವಾಲಯದ ಸುತ್ತುಮುತ್ತಲೂ ಇವೆ. ಈ ದೇವಾಲಯದ ಮೂರ್ತಿಗಳನ್ನು ಕಡೆದ ಶಿಲ್ಪಿಗಳಲ್ಲಿ ರೇವೋಜನ ಹೆಸರು ಮಾತ್ರ ಕಂಡುಬರುತ್ತದೆ. ಈ ದೇವಾಲಯದ ಹೊರಗೋಡೆಯ ಮೇಲೆ ಒಟ್ಟು ಸು. 188 ವಿಗ್ರಹಗಳಿವೆ. ಇವುಗಳಲ್ಲಿ ಕೆಲವಂತೂ ಬಹಳ ಸುಂದರವಾಗಿ ಕಡೆದ ಹಾಗೂ ಮಾಟವಾಗಿ ರೂಪಿಸಿದ ಮೂರ್ತಿಗಳು. ಈ ದೇವಾಲಯಗಳ ರಚನೆಯನ್ನೂ ಕೆತ್ತನೆಯ ಕೆಲಸವನ್ನೂ ಕುರಿತಂತೆ ಕಸಿನ್ಸ್, ಫಗ್ರ್ಯೂಸನ್ ಮುಂತಾದ ವಿದ್ವಾಂಸರು ಅತ್ಯುತ್ಕøಷ್ಟ ರಚನೆಗಳೆಂದು ಪ್ರಶಂಸಿಸಿದ್ದಾರೆ. (ಎಚ್.ವಿ.ಎಮ್.)

ಹಳೇಬೀಡಿನಲ್ಲಿ ಮೂಲರೂಪದಲ್ಲಿ ಈಗ ಉಳಿದುಬಂದಿರುವ ಮತ್ತೊಂದು ದೇವಾಲಯವೆಂದರೆ ಊರಿನೊಳಗಿರುವ ವೀರಭದ್ರದೇವಾ ಲಯ. ಚಿಕ್ಕದಾದ ಈ ದೇವಾಲಯಕ್ಕೂ ಚೌಕವಿನ್ಯಾಸದ ಗರ್ಭಗೃಹ, ಸುಕನಾಸಿ, ನವರಂಗಗಳಿದ್ದು, ಇದರ ಮುಂದೆ ಬಹುಶಃ ವಿಜಯನಗರದ ಕಾಲದಲ್ಲಿ ಹೊಯ್ಸಳ ಕಾಲದ ಯಾವುದೋ ದೇವಾಲಯದ ನವರಂಗವೊಂದನ್ನು ತಂದು ಜೋಡಿಸಲಾಗಿದೆ. ಈ ದೇವಾಲಯದ ಹೊರಗೋಡೆಗಳು ಬಹುಮಟ್ಟಿಗೆ ಸರಳವಾಗಿದ್ದರೂ ಇವುಗಳ ಮೇಲೆ ಒಂದು ಸಾಲು ದೇವತಾಮೂರ್ತಿಗಳನ್ನು ಲತಾವಿತಾನಗಳ ಕೆಳಗೆ ಬಿಡಿಸಿದೆ. ಇದರ ಗರ್ಭಗೃಹದ ಮೇಲೆ ಮೆಟ್ಟಿಲುಮೆಟ್ಟಿಲಾಗಿ ಮೇಲೇರುವ ಕದಂಬ ಶೈಲಿಯ ಗೋಪುರವಿದ್ದು, ಇದರ ಮುಂದೆ ಸಳ ಹುಲಿಯನ್ನು ಇರಿಯುತ್ತಿರುವ ಹೊಯ್ಸಳ ಲಾಂಛನವೂ ಇದೆ. ಇದಕ್ಕೆ ಸಮೀಪವಾಗಿ ಮತ್ತೊಂದು ಗುಡಿಯಿದ್ದು ಇದರ ಕೆಲಭಾಗ ಬಿದ್ದುಹೋಗಿದ್ದು ಮಹಾದ್ವಾರವನ್ನು ಹಳೆಯ ದೇವಾಲಯದ ಶಿಲ್ಪಗಳಿಂದ ಈಚೆಗೆ ಪುನರ್‍ನಿರ್ಮಿಸಲಾಗಿದೆ. ಇದನ್ನು ಈಗ ರಂಗನಾಥಸ್ವಾಮಿ ದೇವಾಲಯವೆನ್ನುತ್ತಾರೆ. ಇದರ ಗರ್ಭಗೃಹದಲ್ಲಿ ಸುಂದರವಾದ ಒಂದು ರಂಗನಾಥನ ಮೂರ್ತಿಯಿದೆ. ಆದರೆ ಇದು ಮೂಲತಃ ಬೂಚೇಶ್ವರ ದೇವಾಲಯವಾಗಿತ್ತೆಂದು ಇಲ್ಲಿನ ಶಾಸನವೊಂದರಿಂದ ತಿಳಿದುಬರುತ್ತದೆ. ಈ ದೇವಾಲಯದ ಗರ್ಭಗೃಹದ ಮೇಲೂ ವೀರಭದ್ರದೇವಾಲಯದ ಮೇಲಿರುವಂಥ ಒಂದು ಗೋಪುರವಿದೆ.

ಪ್ರವಾಸಿ ಮಂದಿರಕ್ಕೆ ಸಮೀಪವಾಗಿ ಈಗ ಪಾಳುಬಿದ್ದಿರುವ ನಗರೇಶ್ವರ, ಪಂಚಲಿಂಗೇಶ್ವರ ದೇವಾಲಯಗಳ ಗುಡ್ಡಗಳಿವೆ. ಇವೂ ಹೊಯ್ಸಳೇಶ್ವರ ದೇವಾಲಯದಷ್ಟೇ ಶಿಲ್ಪಾಲಂಕರಣಗಳಿಂದ ತುಂಬಿದ್ದು ಸುಂದರವಾಗಿದ್ದಿರಬೇಕೆಂದು ಇವುಗಳಿಂದ ಎತ್ತಿತಂದು ಈಗ ಹೊಯ್ಸಳೇಶ್ವರ ದೇವಾಲಯದ ಸಮೀಪದಲ್ಲಿರುವ ವಸ್ತುಸಂಗ್ರಹಾಲಯ ದಲ್ಲಿ ಪ್ರದರ್ಶಿಸಿರುವ ಮೂರ್ತಿಗಳಿಂದ ನಿರ್ಧರಿಸಬಹುದು. ಇದರಲ್ಲಿನ ಹಲವಾರು ಮೂರ್ತಿಗಳನ್ನು ಕೇದಾರೇಶ್ವರ ದೇವಾಲಯದ ಪುನರ್ ನಿರ್ಮಾಣದಲ್ಲಿ ಬಳಸಲಾಗಿದೆ; ಕೆಲವು ಮೂರ್ತಿಗಳು ಮೈಸೂರಿನಲ್ಲಿರುವ ಪ್ರಾಚ್ಯ ವಿದ್ಯಾಸಂಶೋಧನಾಲಯದ ಗೋಡೆಗಳನ್ನು ಅಲಂಕರಿಸಿವೆ.

ಹೊಯ್ಸಳೇಶ್ವರ ದೇವಾಲಯದ ದಕ್ಷಿಣಕ್ಕೆ ಅರ್ಧ ಕಿಮೀ ದೂರದಲ್ಲಿ ಒಂದೇ ಆವರಣದಲ್ಲಿ ಮೂರು ಬಸದಿಗಳಿವೆ. ಇವುಗಳಲ್ಲಿ ಎರಡು ದೊಡ್ಡವು; ಇವುಗಳಲ್ಲಿ ನಡುವಿನದು ಚಿಕ್ಕದು. ಇವು ಹೊಯ್ಸಳೇಶ್ವರ ಅಥವಾ ಕೇದಾರೇಶ್ವರ ದೇವಾಲಯಗಳೊಡನೆ ಹೋಲಿಸಿದಾಗ ಸರಳವಾಗಿವೆ. ಈ ಸರಳತೆಯಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಇವುಗಳಲ್ಲಿ ಪಶ್ಚಿಮದ ಕಡೆ ಇರುವ ಪಾಶ್ರ್ವನಾಥ ಬಸದಿಯನ್ನು ಗಂಗರಾಜನ ಮಗ ಬೊಪ್ಪಣ ತನ್ನ ತಂದೆಯ ನೆನಪಿಗಾಗಿ 1133ರಲ್ಲಿ ಕಟ್ಟಿಸಿದ. ಇದೇ ಸಮಯಕ್ಕೆ ಸರಿಯಾಗಿ ವಿಷ್ಣುವರ್ಧನ ಬಂಕಾಪುರದಲ್ಲಿ ವಿಜಯವನ್ನು ಸಾಧಿಸಿದ್ದರಿಂದ ಇದರಲ್ಲಿ ಪ್ರತಿಷ್ಠಿತನಾದ ಪಾಶ್ರ್ವನಾಥನಿಗೆ ವಿಜಯಪಾಶ್ರ್ವನಾಥ ಎಂಬ ಹೆಸರು ಬಂತು. ಗರ್ಭಗೃಹ, ಸುಕನಾಸಿ, ನವರಂಗಗಳಿದ್ದು ಮುಂದೆ ಬೇರೆಯಾದ ಮುಖಮಂಟಪವಿದೆ. ಚೌಕವಿನ್ಯಾಸದಲ್ಲಿರುವ ಗರ್ಭಗೃಹ, ನವರಂಗಗಳ ಹೊರಗೋಡೆಗಳು ನೇರವಾಗಿದ್ದು ಹತ್ತಿರಹತ್ತಿರವಾಗಿ ಬಿಡಿಸಿರುವ ಅರೆಗಂಬಗಳಿಂದ ವಿಭಾಗಿಸಲ್ಪಟ್ಟಿವೆ. ಗೋಡೆಗಳ ಬುಡದಲ್ಲಿ ಮತ್ತು ಕೈಪಿಡಿಯಲ್ಲಿ ಮಾತ್ರ ಶಿಲ್ಪಗಳುಂಟು. ನಾಲ್ಕೂವರೆ ಮೀಟರಿಗೂ ಎತ್ತರವಾಗಿರುವ ಪಾಶ್ರ್ವನಾಥನ ಮೂರ್ತಿಯನ್ನುಳ್ಳ ಈ ಬಸದಿ ತಕ್ಕಷ್ಟು ಎತ್ತರವಾಗಿದೆ. ಎತ್ತರವಾದ ಜಗತಿಯ ಮೇಲಿದ್ದು ಸುಂದರವಾದ ಕಂಬಗಳ ಮೇಲೆ ನಿಂತಿರುವ ತೆರೆದ ಮುಖಮಂಟಪದ ಸುತ್ತಲ ಕಟಾಂಜನದಲ್ಲಿ ವಿಶಿಷ್ಟವಾದ ಕಥನಶಿಲ್ಪಗಳಿದ್ದರೆ ಚಾವಣಿಯಲ್ಲಿ ಧರಣೀಂದ್ರ ಯಕ್ಷನ ಮೂರ್ತಿಯಿದೆ. ನವರಂಗದ ಮಧ್ಯದ ಅಂಕಣದ ಚಾವಣಿಯಲ್ಲಿರುವ ಇದೇ ಮೂರ್ತಿ ಹೆಚ್ಚು ಸುಂದರವಾದುದು. ಈ ನವರಂಗದ ವೈಶಿಷ್ಟ್ಯವೆಂದರೆ ಅತ್ಯಂತ ಹೊಳಪು ಕೊಟ್ಟು ತಿರುಗಣಿಯಲ್ಲಿ ಕಡೆದು ನಿಲ್ಲಿಸಿರುವ ಇದರ ಮಧ್ಯದ ಕಂಬಗಳು. ಅವುಗಳ ನಿಮ್ನೋನ್ನತ ಹಿನ್ನೆಲೆಯಲ್ಲಿ ಚಿತ್ರವಿಚಿತ್ರವಾಗಿ ಪ್ರತಿಬಿಂಬಗಳು ಹೊಮ್ಮುವಷ್ಟು ಅವು ಹೊಳಪಿನಿಂದ ಕೂಡಿವೆ. ಗರ್ಭಗೃಹದಲ್ಲಿರುವ ಪಾಶ್ರ್ವನಾಥನ ಉನ್ನತವಾದ ಮೂರ್ತಿ ನೇರನಿಲುವಿನ ಶಾಂತಮುಖ ಮುದ್ರೆಯ ಪರಿಪೂರ್ಣ ಆಕಾರದ ಭವ್ಯಮೂರ್ತಿ.

ಇದೇ ಬಸದಿಯನ್ನೇ ಹೋಲುವ, ಆದರೆ ಇಷ್ಟು ಭವ್ಯವಾಗಿಲ್ಲದ ಶಾಂತಿನಾಥ ದೇವಾಲಯ ಸು. 1192ರ ಹೊತ್ತಿಗೆ ಇಮ್ಮಡಿ ಬಲ್ಲಾಳನ ಕಾಲದಲ್ಲಿ ನಿರ್ಮಿತವಾಗಿದ್ದಂತೆ ಒಂದು ಶಾಸನದಿಂದ ತಿಳಿದುಬಂದರೆ ಇನ್ನೊಂದು ಶಾಸನ ಇದಕ್ಕೆ ಮುಮ್ಮಡಿ ನರಸಿಂಹನ ಕಾಲದಲ್ಲಿ 1257ರಲ್ಲಿ ದತ್ತಿಬಿಟ್ಟುದನ್ನು ತಿಳಿಸುತ್ತದೆ. ಇದರ ನವರಂಗದ ಕಂಬಗಳೂ ಪಾಶ್ರ್ವನಾಥ ಬಸದಿಯ ಕಂಬಗಳಂತೆಯೇ ಇದ್ದರೂ ಇವುಗಳಲ್ಲಿನ ಕುಸುರಿ ಕೆಲಸವಾಗಲಿ, ಹೊಳಪಾಗಲಿ ಇಲ್ಲ. ಇದರಲ್ಲಿನ ಶಾಂತಿನಾಥನ ಮೂರ್ತಿಯೂ ಮೂರೂವರೆ ಮೀಗಿಂತ ಹೆಚ್ಚು ಎತ್ತರವಾಗಿದೆ. ಇದರ ಮುಂದೆ ಕಟ್ಟಿರುವ ದೊಡ್ಡದಾದ ಮುಖಭದ್ರ ವಿಜಯನಗರದ ಕಾಲದ್ದಾಗಿದ್ದು ಈ ಕಟ್ಟಡದಲ್ಲಿ ನಾಜೂಕು ಇಲ್ಲ. ಇದರ ಮುಂದೆ ಸುಮಾರು ಏಳು ಮೀಟರಿನಷ್ಟು ಉನ್ನತವಾದ ಕಂಬವಿದ್ದು, ಇದರ ಮೇಲಿನ ಮಂಟಪದಲ್ಲಿ ಯಕ್ಷನ ಮೂರ್ತಿಯೊಂದಿದೆ.

ಪಾಶ್ರ್ವನಾಥ ಮತ್ತು ಶಾಂತಿನಾಥ ಬಸದಿಗಳ ನಡುವೆ ಇರುವ, ಗರ್ಭಗೃಹ ಸುಕನಾಸಿಗಳನ್ನು ಮಾತ್ರ ಹೊಂದಿರುವ ಚಿಕ್ಕಬಸದಿಯನ್ನು ಆದಿನಾಥ ಬಸದಿ ಎಂದು ಈಗ ಕರೆಯುತ್ತಾರೆ. ಆದರೆ ಇದು ನಕರಜಿನಾಲಯ. ವಿಷ್ಣುವರ್ಧನನ ಕಾಲದಲ್ಲಿ 1138ರಲ್ಲಿ ಹೆಗ್ಗಡೆ ಮಲ್ಲಯ್ಯನೆಂಬುವನು ಕಟ್ಟಿಸಿದ ಈ ಜಿನಾಲಯದಲ್ಲಿ ಅವನು ಪ್ರತಿಷ್ಠೆಮಾಡಿಸಿದ್ದುದು ಮಲ್ಲಿನಾಥನ ಜಿನಮೂರ್ತಿಯನ್ನು. ಇದನ್ನು ತಿಳಿಸುವ ಶಾಸನದಲ್ಲಿ ಪಂಪನ ಆದಿಪುರಾಣದ ಪದ್ಯವೊಂದನ್ನು ಉಲ್ಲೇಖಿಸಿರುವುದೊಂದು ವಿಶೇಷ. (ಎಮ್.ಎಚ್.)