ಹಸನ್‍ಗಂಗು ಬಹಮನೀ ರಾಜ್ಯದ ಸ್ಥಾಪಕ (1347-58). ಹಸನ್‍ಗಂಗು ಅಲ್ಲಾವುದೀನ್ ಬಹಮನ್ ಷಾ ಇವನ ಪೂರ್ಣಹೆಸರು. ಈತನ ಮೂಲದ ಬಗ್ಗೆ ಅನೇಕ ದಂತಕಥೆಗಳಿವೆ. ಫೆರಿಸ್ತ ತಿಳಿಸುವಂತೆ ಈತ ದೆಹಲಿಯ ಗಂಗು ಎಂಬ ಬ್ರಾಹ್ಮಣನ ಬಳಿಕೆಲಸ ಮಾಡುತ್ತಿದ್ದ. ಮುಂದೆ ರಾಜನಾಗುವನೆಂದು ಬ್ರಾಹ್ಮಣ ಭವಿಷ್ಯ ನುಡಿದಿದ್ದ. ಅದರಂತೆ ಹಸನ್ ಮುಂದೆ ರಾಜನಾದಾಗ ಬ್ರಾಹ್ಮಣನ ನೆನಪಿಗಾಗಿ ಬಹಮನ್ ಗಂಗು ಎಂಬ ಹೆಸರನ್ನು ಧರಿಸಿದ. ಆದರೆ ಈತ ಅಲಾವುದ್ದೀನ್ ಖಲ್ಜಿಯ ಅಧಿಕಾರಿ ಜಫಾರ್‍ಖಾನನ ಸಂಬಂಧಿಯಾಗಿದ್ದ ಕಾರಣಕ್ಕಾಗಿ ತನ್ನ ಹೆಸರನ್ನು ಅಲಾವುದೀನ್ ಎಂದು ಕರೆದುಕೊಂಡಿದ್ದನೆಂದು ಹೇಳಲಾಗುತ್ತದೆ.

ಈತ ದಖ್ಖನ್ನಿನಲ್ಲಿದ್ದ ಅರಾಜಕತೆಯನ್ನು ಹೋಗಲಾಡಿಸಿ ತುಘಲಕನ ರಾಜ್ಯದ ಪುನರ್ ನಿರ್ಮಾಣವನ್ನು ಕೈಗೊಂಡ. ಇವನ ಸೈನ್ಯ ಬಿರುಸಿನ ದಂಡಯಾತ್ರೆಯನ್ನು ಕೈಗೊಂಡು ಮರಾಮ್ ಮಹೇಂದ್ರಿ ಅಕ್ಕಲಕೋಟೆಗಳನ್ನೂ ಜಮಖಂಡಿ ಕೋಟೆಯನ್ನೂ ಗೆದ್ದು ಗುಲ್ಬರ್ಗವನ್ನು ವಶಪಡಿಸಿಕೊಂಡಿತು. ಹೀಗೆ ಶತ್ರುಗಳನ್ನೆಲ್ಲ ಸದೆಬಡಿದ ಹಸನ್‍ಗಂಗು ತನ್ನ ರಾಜಧಾನಿಯನ್ನು ದೌಲತಾಬಾದಿನಿಂದ ಗುಲ್ಬರ್ಗಕ್ಕೆ ವರ್ಗಾಯಿಸಿದ. ಅನಂತರ ದಂಡಯಾತ್ರೆಯನ್ನು ಮುಂದುವರಿಸಿ ಗೋವವನ್ನು ಸ್ವಾಧೀನ ಪಡಿಸಿಕೊಂಡ. ಡಾಬಲ್ ಬಹಮನೀ ರಾಜ್ಯದ ಮುಖ್ಯ ಬಂದರಾಯಿತು. ಇದಾದ ಅನಂತರ ಇವನು ಉತ್ತರದಲ್ಲಿ ದಾಳಿ ಮುಂದುವರಿಸಿ ತೆಲಂಗಾಣದಿಂದ ನೆಲ್ಲೂರಿನವರೆಗೂ ರಾಜ್ಯ ವಿಸ್ತರಿಸಿದ. ಈತ ತನ್ನ ರಾಜ್ಯವನ್ನು ಗುಲ್ಬರ್ಗ, ದೌಲತಾಬಾದ್, ಬೀರಾರ್, ಬಹಮನೀ, ತೆಲಂಗಾಣ ಎಂಬ ನಾಲ್ಕು ದೊಡ್ಡ ಪ್ರಾಂತಗಳಾಗಿ ವಿಂಗಡಿಸಿದ. ಶೌರ್ಯ, ಸಾಹಸ ಮುತ್ಸದ್ದಿತನದಿಂದ ಒಳ್ಳೆಯ ಆಡಳಿತ ಪದ್ಧತಿಯನ್ನು ಜಾರಿಗೆ ತಂದ. ಸಾಹಿಬ್ ಇ ಅರ್ಜ್ ಸೈನ್ಯ ಪರಿಶೀಲಿಸುವ ಅಧಿಕಾರಿ, ನಾಯಿಬ್ ಬರ್ಬಕ್-ಸಹಾಯಕ ದ್ವಾರಪಾಲಕ, ದಬೀರ್ ಕಾರ್ಯದರ್ಶಿ, ದಿವಾನ್ ಮಂತ್ರಿ, ದವತ್‍ದಾರ್-ಮುದ್ರಾಧಿಕಾರಿ, ಸೈಯದ್ ಉಲ್ ಹುಜ್ಜಬ್-ದ್ವಾರ ಪಾಲಕ, ಹಾಜಿಬ್ ಉಲ್ ಕಾಸ್‍ಹಾಬ್-ನಗರ ರಕ್ಷಕ ಅಧಿಕಾರಿ, ಶಹ್ನಾಇಬರ್ಗಾ-ದರ್ಬಾರಿನ ಅಧಿಕಾರಿ, ಸಲಾರ್-ಪಾಕಶಾಲಾ ಮುಖ್ಯಸ್ಥ-ಎಂಬ ಅಧಿಕಾರಿಗಳನ್ನು ನೇಮಿಸಿದ. ಗುಲ್ಬರ್ಗದ ಕೋಟೆಯನ್ನು ಕಟ್ಟಿಸಿ ರಾಜಧಾನಿಯನ್ನು ಸುಂದರ ನಗರ ಮಾಡಲು ಪ್ರಯತ್ನಿಸಿದ. ಈತ ಹಿಂದುಗಳ ಮೇಲೆ ಜೆಸಿಯ ಕಂದಾಯ ವಿಧಿಸಲಿಲ್ಲ. ಇವನ ರಾಜ್ಯದಲ್ಲಿ ಹಿಂದು ಮತ್ತು ಮುಸ್ಲಿಮರ ನಡುವೆ ಸೌಹಾರ್ದ ನೆಲಸಿತ್ತು. ಈತ 1358ರಲ್ಲಿ ನಿಧನಹೊಂದಿದ. (ಎಸ್.ಎಮ್.ವಿ.)