ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಡುವಳ್ಳಿ

ಹಾಡುವಳ್ಳಿ ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನ ಒಂದು ಗ್ರಾಮ; ಇತಿಹಾಸ ಪ್ರಸಿದ್ಧ ಸ್ಥಳ. ಭಟ್ಕಳಕ್ಕೆ ಸು. 19 ಕಿಮೀ ದೂರದಲ್ಲಿದೆ. ಈ ಗ್ರಾಮ ಹಿಂದೆ ಸಂಗೀತಪುರ ಎಂಬ ಹೆಸರಿನಿಂದ ಪ್ರಖ್ಯಾತ ವಾಗಿದ್ದು ಸಾಳುವರ ರಾಜಧಾನಿಯಾಗಿತ್ತು (ನೋಡಿ : ಸಾಳುವರು, ಹಾಡುವಳ್ಳಿಯ). ಊರು ಇಂದ್ರಗಿರಿ, ಚಂದ್ರಗಿರಿ ಎಂಬ ಎರಡು ಬೆಟ್ಟಗಳ ಬುಡದಲ್ಲಿ ಇದೆ. ಚಂದ್ರಗಿರಿಯ ಮೇಲೆ ಸಂಗೀತ ಬಾರಿಸಿದರೆ ಇಂದ್ರಗಿರಿಯಲ್ಲಿ ಪ್ರತಿಧ್ವನಿಸಿ ತಿರುಗಿ ಸ್ವಲ್ಪ ಸಮಯದಲ್ಲಿ ಕೇಳುತ್ತದೆಯೆಂದೂ ಚೆನ್ನಭೈರಾದೇವಿಯ ಕಾಲದಲ್ಲಿ ಸಂಗೀತ, ನೃತ್ಯ, ಆಟಪಾಟಗಳು ಚಂದ್ರಗಿರಿಯ ಮೇಲೆ ನಡೆಯುತ್ತಿದ್ದು ಇದನ್ನು ಇಂದ್ರಗಿರಿಯಲ್ಲಿ ಕುಳಿತು ನೋಡಿ ನಲಿಯುತ್ತಿದ್ದರೆಂದೂ ತಿಳಿದುಬರುತ್ತದೆ. ಇದೊಂದು ಸಂಗೀತಕೇಂದ್ರವಾಗಿ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದ್ದುದರಿಂದ ಇದಕ್ಕೆ ಸಂಗೀತಪುರವೆಂಬ ಹೆಸರಾಯಿತು.

ಜೈನಕ್ಷೇತ್ರವೆಂದು ಹೆಸರಾಗಿರುವ ಈ ಊರಿನಲ್ಲಿ ಪದ್ಮಾವತಿ ದೇವಾಲಯ, ಹರಿಪೀಠದಲ್ಲಿಯ ಇಪ್ಪತ್ತನಾಲ್ಕು ತೀರ್ಥಂಕರರ ವಿಗ್ರಹ, ಚಂದ್ರನಾಥ ದೇವಾಲಯ, ಪಾಶ್ರ್ವನಾಥ, ನೇಮಿನಾಥ ಮೊದಲಾದ ದೇವಾಲಯಗಳು, ಚಂದ್ರಗಿರಿ ಮತ್ತು ಇಂದ್ರಗಿರಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳು ಇವೆ. ಪದ್ಮಾವತಿ ದೇವಾಲಯದಲ್ಲಿ ವಿಗ್ರಹಗಳು ತುಂಬ ಆಕರ್ಷಕವಾಗಿವೆ. ಹರಿಪೀಠದಲ್ಲಿ ಇಪ್ಪತ್ನಾಲ್ಕು ತೀರ್ಥಂಕರರನ್ನು ಒಂದೇ ಸಾಲಿನಲ್ಲಿ ಪ್ರತಿಷ್ಠಾಪಿಸಿದ್ದು, ಬಲಬದಿಗೆ ಪದ್ಮಾವತಮ್ಮನವರ ವಿಗ್ರಹ, ಎಡಬದಿಗೆ ಶಾರದಾವಿಗ್ರಹ, ಎದುರಿಗೆ ಪದ್ಮಾವತಮ್ಮನವರ ಕಂಚಿನ ವಿಗ್ರಹ, ಬ್ರಹ್ಮ, ಕ್ಷೇತ್ರಪಾಲ ಮೊದಲಾದ ವಿಗ್ರಹಗಳನ್ನು ಕಾಣಬಹುದು. ದೇವಾಲಯಗಳ ಸುತ್ತಲೂ ಅನೇಕ ವೀರಗಲ್ಲುಗಳು ಇವೆ. ಪದ್ಮಾವತಿ ದೇವಾಲಯದ ಸಮೀಪದಲ್ಲಿಯೇ ಪಾಶ್ರ್ವನಾಥ ದೇವಾಲಯವಿದೆ. ಇಲ್ಲಿರುವ ಪಾಶ್ರ್ವನಾಥನ ಸುಂದರ ವಿಗ್ರಹ ಅಮೃತಶಿಲೆಯದು. ಈ ಮೂರ್ತಿಯ ಪ್ರಭಾವಳಿಯಲ್ಲಿ ಆದಿಶೇಷನ ಚಿತ್ರವನ್ನು ಬಿಡಿಸಲಾಗಿದೆ. ಈ ದೇವಾಲಯಕ್ಕೆ ಸ್ವಲ್ಪ ದೂರದಲ್ಲಿ ನೇಮಿನಾಥ ಬಸದಿ ಇದೆ. ಇದು ವಿಶಾಲವಾಗಿದ್ದು ಆಕರ್ಷಕ ಕೆತ್ತನೆಕೆಲಸದಿಂದ ಕೂಡಿದೆ. ಈ ದೇವಾಲಯಕ್ಕೆ ಅನತಿದೂರದಲ್ಲಿ ಚಂದ್ರನಾಥ ಬಸದಿ ಇದೆ. ಇಲ್ಲಿಯ ವಿಗ್ರಹ ಅಮೃತಶಿಲೆಯಿಂದ ರಚಿತವಾಗಿದ್ದು ಸುಂದರವಾಗಿದೆ. ಈ ವಿಗ್ರಹದ ಎಡಬಲಗಳಲ್ಲಿ ಜ್ವಾಲಾ ಮತ್ತು ಮಾಲಿನಿಯರ ವಿಗ್ರಹಗಳಿವೆ. ಈ ದೇವಾಲಯಕ್ಕೆ ಸ್ವಲ್ಪ ದೂರದಲ್ಲಿ ಚಂದ್ರಪ್ರಭ ತೀರ್ಥಂಕರರ ಬಸದಿ ಇದೆ. *