ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾನಿಮನ್, ಕ್ರಿಶ್ಚಿಯನ್ ಫ್ರೆಡರಿಕ್ ಸ್ಯಾಮ್ಯುಯಲ್ (ಹೋಮಿಯೋಪತಿ)

ಹಾನಿಮನ್, ಕ್ರಿಶ್ಚಿಯನ್ ಫ್ರೆಡರಿಕ್ ಸ್ಯಾಮ್ಯುಯಲ್ (ಹೋಮಿಯೋಪತಿ) 1755-1843. ಜರ್ಮನ್ ವೈದ್ಯಪ್ರವೀಣ, ಹೋಮಿಯೊಪತಿ ವೈದ್ಯಕೀಯ ಪದ್ಧತಿಯ ಸಂಸ್ಥಾಪಕ. ಮೇಸಿಸ್ ಎಂಬ ಊರಿನಲ್ಲಿ 1755ರಲ್ಲಿ ಜನಿಸಿದ. ಲೈಪ್‍ಜಿಗ್ ಎಂಬಲ್ಲಿ ವಿದ್ಯಾಭ್ಯಾಸ ಪಡೆದ. ಅಲೊಪತಿ ವೈದ್ಯಪದ್ಧತಿಯನ್ನು ಹತ್ತು ವರ್ಷ ಪರ್ಯಂತ ಅಭ್ಯಾಸ ಮಾಡಿದ. ಮೂಲವಾದ ಸಿಂಕೋನ ಮರದ ತೊಗಟೆ ಕ್ವಿನೈನ್ ಔಷಧಿಯ ಆಕರವೆಂಬುದು ಗೊತ್ತಿತ್ತು. ಈ ತೊಗಟೆಯ ಔಷಧೀಯ ಗುಣ ಕುರಿತು ಆರು ವರ್ಷ ಕಾಲ ಪ್ರಯೋಗಮಾಡಿ, ಅವು ರೋಗಿಯಲ್ಲಿ ಯಾವ ರೋಗ ಲಕ್ಷಣಗಳನ್ನು ಔಷಧಿಗಳು ನಿವಾರಿಸುವುವೋ ಅವನ್ನೇ ಆರೋಗ್ಯವಂತನಲ್ಲಿ ಮೂಡಿಸುತ್ತವೆ ಎಂಬ ತೀರ್ಮಾನಕ್ಕೆ ಈತ ಬಂದ. ಪ್ರಖ್ಯಾತವಾದ ಈತನ ಮೂಲಭೂತ ತತ್ತ್ವ ಸಿಮಿಲಿಯ ಸಿಮಿಲಿಬಿಸ್ ಕ್ಯೂರೆಂಟೂರ್ (ಸದೃಶ ಲಕ್ಷಣಯುತ ಔಷಧೀಯ ಪದಾರ್ಥಗಳು ಸದೃಶಲಕ್ಷಣಗಳ ರೋಗ ನಿವಾರಕಗಳು-ಲೈಕ್ ಕ್ಯೂರ್ಸ್ ಲೈಕ್) ಎಂಬ ಸಿದ್ಧಾಂತಕ್ಕೆ ಇದು ಮೂಲವಾಯಿತು. ಇದು ಅಲೊಪತಿ ವೈದ್ಯಪದ್ಧತಿಯ ನಂಬಿಕೆಗಳಿಗೆ ವಿರುದ್ಧವಾಗಿತ್ತು. ಈತನೆ ಶೋಧಿಸಿದ ಔಷಧದ ಶಕ್ತೀಕರಣ (ಪೊಟೆಂಟೈಸೇಷನ್) ಮತ್ತು ಅತ್ಯಲ್ಪ ಪ್ರಮಾಣದ ಔಷಧಿಯ ಬಳಕೆ ಇವು ಔಷಧಿ ವ್ಯಾಪಾರಿಗಳನ್ನು ಕೆರಳಿಸಿತು. ಆದ್ದರಿಂದ ಈತ ತನ್ನ ರೋಗಿಗಳಿಗೆ ಔಷಧಿಯನ್ನು ಉಚಿತವಾಗಿ ನೀಡುತ್ತಿದ್ದ. ಅಂದಿನ ಕಾನೂನಿಗೆ ಸಮ್ಮತವಲ್ಲದ ರೀತಿಯಲ್ಲಿ ಆತ ವ್ಯವಹರಿಸುತ್ತಿದ್ದ ಕಾರಣ, 1798ರಿಂದ 1810ರ ತನಕ ಈತ ಅನೇಕ ಸಾರಿ ಬಂಧನಕ್ಕೊಳಗಾಗಿ ಎಲ್ಲೂ ನೆಲೆಕಾಣದೆ ಅನೇಕ ಊರುಗಳನ್ನು ಸುತ್ತಿದ. ಮುಂದೆ ಲೈಪ್ ಜಿಗ್‍ಗೆ ಹಿಂತಿರುಗಿ 1821ರ ತನಕ ತನ್ನ ವೈದ್ಯಕೀಯ ಪದ್ಧತಿಯನ್ನು ಆರಂಭಿಸಿದ. ಅಲ್ಲಿಂದ ಮತ್ತೆ ಹೊರದೊಡಲ್ಪಟ್ಟು, ಮೊದಲು ಕೋತೆನ್‍ಗೆ ಮತ್ತೆ 1835ರಲ್ಲಿ ಪ್ಯಾರಿಸ್‍ಗೆ ಹೋಗಿ ನೆಲಸಿದ. ಶೇಷಾಯುಷ್ಯದ ಬಹು ಕಾಲವನ್ನು ಅನೇಕ ಔಷಧಗಳ ಪ್ರೂವಿಂಗ್ ಗಾಗಿ (ಸ್ಥಿರೀಕರಣ) ವಿನಿಯೋಗಿಸಿದ. ಅವುಗಳ ಲಕ್ಷಣಗಳನ್ನು ಒಳಗೊಂಡ ಮೆಟೀರಿಯ ಮೀಡಿಕ ಪ್ಯೂರ (1817) ಎಂಬ ಗ್ರಂಥವನ್ನೂ ಹೋಮಿಯೊಪತಿ ತತ್ತ್ವಗಳನ್ನು ಒಳಗೊಂಡ ಆರ್ಗನಾನ್ ಆಫ್ ಮೆಡಿಸಿನ್ (1833) ಎಂಬ ಗ್ರಂಥವನ್ನೂ ದೀರ್ಘಕಾಲೀನ ವ್ಯಾಧಿಗಳಿಗೆ ಸಂಬಂಧಿಸಿದಂತೆ ಕ್ರಾನಿಕ್ ಡಿಸೀಸಸ್ (1838) ಎಂಬ ಗ್ರಂಥವನ್ನು ರಚಿಸಿದ.

ಹೋಮಿಯೊಪತಿ ಔಷಧಗಳು ಮುಖ್ಯವಾಗಿ ಸಸ್ಯ, ಪ್ರಾಣಿ ಮತ್ತು ಖನಿಜ ಮೂಲದವಾಗಿದ್ದುವು. ಸಹಜವಾದ ಈ ಪದ್ಧತಿಯನ್ನು ಈತನ ಅನುಯಾಯಿಗಳು ಪ್ರಚಾರಗೊಳಿಸಿದರು. ಹಾನಿಮಾನ್‍ನ ಕೊನೆ ದಿನಗಳ ವೇಳೆಗೆ ಈ ಪದ್ಧತಿ ಯುರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿ ಸಾಕಷ್ಟು ಪ್ರಚಾರ ಪಡೆದು ಪ್ರಸಿದ್ಧ ವೈದ್ಯಪದ್ಧತಿಯಾಗಿ ರೂಪುಗೊಂಡಿತ್ತು. ಆದರೆ ಅಂದಿನ ಸಾಮಾನ್ಯ ಪದ್ಧತಿ ವೈದ್ಯರುಗಳ (ಅಲೊಪತಿ) ಕೆಂಗಣ್ಣಿಗೆ ಗುರಿಯಾಗಿ ಏಳುಬೀಳುಗಳನ್ನು ಕಂಡಿತ್ತು.

(ಕೆ.ಜಿ.ಪಿ.)