ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಪ್ಟ್‌ಮಾನ್, ಹರ್ಬರ್ಟ್ ಆರನ್

ಹಾಪ್ಟ್‍ಮಾನ್, ಹರ್ಬರ್ಟ್ ಆರನ್ 1917_. ಎಕ್ಸ್-ಕಿರಣಗಳ ವಿವರ್ತನ ಪ್ರರೂಪಗಳಿಂದ ಸ್ಛಟಿಕರೂಪದ ರಾಸಾಯನಿಕ ಸಂಯುಕ್ತಗಳ ಅಣು ಸಂರಚನೆಯನ್ನು ಪಡೆಯಲು ಗಣಿತ ವಿಧಾನಗಳನ್ನು ಅಭಿವರ್ಧಿಸಿದ್ದಕ್ಕಾಗಿ 1985ರಲ್ಲಿ ಜರೋಮ್ ಕಾರ್ಲೆ (1918_) ಜೊತೆ ರಸಾಯನ ವಿಜ್ಞಾನದ ನೊಬೆಲ್ ಪಾರಿತೋಷಿಕ ಪಡೆದ ಅಮೆರಿಕನ್ ಗಣಿತಜ್ಞ ಮತ್ತು ಸ್ಫಟಿಕತಜ್ಞ.

ನ್ಯೂಯಾರ್ಕ್‍ನ ಸಿಟಿ ಕಾಲೇಜಿನಿಂದ ಸ್ನಾತಕ ಪದವಿ ಪಡೆದ (1937) ಈತ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಗಣಿತ ಅಧ್ಯಯನ ನಡೆಸಿದ. ಅನಂತರ ವಾಷಿಂಗ್ಟನ್ ಡಿ.ಸಿ. ಯಲ್ಲಿರುವ ನೇವಲ್ ರಿಸರ್ಚ್ ಲ್ಯಾಬೊರೆಟರಿಯಲ್ಲಿ (ನೌಕಾದಳದ ಸಂಶೋಧನಾಲಯ) ಸ್ಫಟಿಕ ಸಂರಚನೆಯ ಬಗ್ಗೆ ಸಂಶೋಧನೆ ನಡೆಸಿದ. 1970ರಲ್ಲಿ ಬಫೆಲೊದಲ್ಲಿರುವ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‍ನಲ್ಲಿ ಜೀವ ಭೌತವಿಜ್ಞಾನದ ಪ್ರಾಧ್ಯಾಪಕನಾದ.

ಎಕ್ಸ್ ಕಿರಣಗಳನ್ನು ಸ್ಫಟಿಕವು ವಿವರ್ತಿಸುವಾಗ ಸಿಗುವ ಪ್ರರೂಪದ ಒಂದೊಂದು ಬಿಂದುವಿನ ತೀವ್ರತೆಯ ವಿಶ್ಲೇಷಣೆಗೆ ಈತ ಮತ್ತು ಕಾರ್ಲೆ ರೂಪಿಸಿದ ಸಮೀಕರಣಗಳು ಸಹಾಯಕವಾದವು. ಇದರಿಂದ ಸ್ಫಟಿಕಗಳ ಅಣುಗಳಲ್ಲಿ ಪರಮಾಣುಗಳ ಸ್ಥಾನಗಳನ್ನು ಕರಾರುವಾಕ್ಕಾಗಿ ನಿರ್ಧರಿಸಲು ಸಾಧ್ಯವಾಯಿತು. ಹಾಪ್ಟ್‍ಮನ್ ವಿಧಾನ 1949ರಲ್ಲಿ ಪ್ರಕಟವಾಯಿತು. ಅನಂತರ ಹಾರ್ಮೋನ್, ವಿಟಮಿನ್, ಆಂಟಿಬಯಾಟಿಕ್‍ಗಳಂಥ ಸಾವಿರಾರು ಜೈವಿಕ ಅಣುಗಳ ಮೂರು ಆಯಾಮಗಳ ಸಂರಚನೆಯನ್ನು ತಿಳಿಯುವುದು ಸುಲಭವಾಯಿತು. ಸರಳವಾದ ಒಂದು ಜೈವಿಕ ಅಣುವಿನ (ಬಯಲಾಜಿಕಲ್ ಮಾಲೆಕ್ಯೂಲ್) ಸಂರಚನೆಯನ್ನು ತಿಳಿಯಲು ಇದಕ್ಕೂ ಹಿಂದೆ ಎರಡು ವರ್ಷಗಳೇ ಬೇಕಾಗಿತ್ತು. 20ನೆಯ ಶತಮಾನದ ಕೊನೆಯ ದಶಕಗಳಲ್ಲಿ ಕಂಪ್ಯೂಟರ್ ಮತ್ತು ಹಾಪ್ಟ್‍ಮಾನ್-ಕಾರ್ಲೆ ಗಣಿತ ವಿಧಾನಗಳ ಅನ್ವಯದಿಂದ ಆ ಅವಧಿ ಎರಡು ದಿನಗಳಿಗೆ ಇಳಿಯಿತು.

(ಎ.ಕೆ.ಬಿ.)