ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಬ್ಸ್‌, ತಾಮಸ್

ಹಾಬ್ಸ್, ತಾಮಸ್ 1588-1679. ಇಂಗ್ಲೆಂಡಿನ ಪ್ರಸಿದ್ಧ ತತ್ತ್ವಜ್ಞಾನಿ ಮತ್ತು ರಾಜಕೀಯ ವಿಚಾರವಾದಿ. ಈತನನ್ನು ಆಧುನಿಕ ರಾಜಕೀಯ ತತ್ತ್ವಗಳ ಜನಕನೆಂದು ಗೌರವಿಸಲಾಗುತ್ತದೆ. ಜೀವನ ಚರಿತ್ರೆ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‍ಗಳ ರಾಜಕೀಯ ಘಟನೆಗಳೊಡನೆ ಬೆಸೆದುಕೊಂಡಿದೆ. ಈತ 1588ರಲ್ಲಿ ಇಂಗ್ಲೆಂಡಿನ ಮಾಲ್ಮೆಸ್‍ಬರಿಗೆ ಸೇರಿದ ವೆಸ್ಟ್‍ಪೋರ್ಟ್ ಎಂಬಲ್ಲಿ ಜನಿಸಿದ. ಈತನ ತಂದೆ ಹಳ್ಳಿಯ ಚರ್ಚಿನ ಒಬ್ಬ ಬಡ ಸೇವಕ. ಆದರೆ ಇವನ ಚಿಕ್ಕಪ್ಪ ಹಣವಂತನಾಗಿದ್ದು ಇವನಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲಮಾಡಿಕೊಟ್ಟ. ಮುಂದೆ ಈತ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಮಾಡುವ ಅವಕಾಶ ಲಭಿಸಿತು. ವಿದ್ಯಾವಂತನೂ ಬುದ್ಧಿವಂತನೂ ಆಗಿದ್ದ ಈತ ಅನೇಕ ಹಣವಂತರ, ಅಧಿಕಾರಸ್ಥರ ಸನಿಹಕ್ಕೆ ಬರುವಂತಾದ. ಫ್ರಾನ್ಸಿಸ್ ಬೇಕನ್‍ನ ಕಾರ್ಯದರ್ಶಿಯಾಗಿ ಕೆಲಸಮಾಡುತ್ತ, ಮುಂದೆ ಡೆವನ್‍ಷೈರ್‍ನ ಅರ್ಲ್ ಆದ ವಿಲಿಯಮ್ ಕ್ಯಾವೆಂಡಿಷ್‍ಗೆ ಪಾಠಹೇಳಿಕೊಡುವ ಕೆಲಸವನ್ನೂ ಮಾಡಿದ. ಇದರಿಂದ ಈತನಿಗೆ ಕ್ಯಾವೆಂಡಿಷ್ ಜೊತೆ ವಿವಿಧ ದೇಶಗಳ ಪರ್ಯಟನೆಯ ಅವಕಾಶ ಒದಗಿ ಬಂತು. ಯುರೋಪಿನ ಅನೇಕ ತತ್ತ್ವಜ್ಞರನ್ನೂ ವಿಜ್ಞಾನಿಗಳನ್ನೂ ಭೇಟಿಯಾಗುವ ಹಾಗೂ ಅವರ ಪರಿಚಯ ಪಡೆಯುವ ಅನುಕೂಲವುಂಟಾಯಿತು. ರಾಜಕುಮಾರ ಚಾಲ್ರ್ಸ್‍ಗೆ (ಮುಂದೆ ಎರಡನೆಯ ಚಾಲ್ರ್ಸ್ ಎಂದು ಇಂಗ್ಲೆಂಡ್‍ನ ಸಿಂಹಾಸನವೇರಿದ) ಗಣಿತದ ಅಧ್ಯಾಪಕನಾಗಿಯೂ ಕೆಲಸಮಾಡಿದ. 1642-46 ಮತ್ತು 1648-51ರಲ್ಲಿ ಇಂಗ್ಲೆಂಡ್ ಅಂತರ್ಯುದ್ಧ ನಡೆದು ಕ್ರಾಮ್‍ವೆಲ್ ಅಧಿಕಾರಕ್ಕೆ ಬಂದ; ದೊರೆ ಚಾಲ್ರ್ಸ್‍ನನ್ನು ಹತ್ಯೆಮಾಡಲಾಯಿತು. ಈ ಕಾಲದಲ್ಲಿ ಹಾಬ್ಸ್ ಇಂಗ್ಲೆಂಡನ್ನು ತೊರೆದು ಫ್ರಾನ್ಸ್‍ನಲ್ಲಿ ವಾಸಿಸಿದ(1640-51). ಮತ್ತೆ ಈತ ಇಂಗ್ಲೆಂಡಿಗೆ ಮರಳಿದಾಗ ಕ್ರಾಮ್‍ವೆಲ್‍ನ ಅಧಿಕಾರವಿನ್ನೂ ಮುಗಿದಿರಲಿಲ್ಲ. ಆಗಿನ ಪಾರ್ಲಿಮೆಂಟಿನಲ್ಲಿ ಈತನ ಕೆಲವು ಬರೆಹಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿ ತನ್ನ ರಕ್ಷಣೆಗಾಗಿ ಈತ ತನ್ನ ಕೆಲವು ಬರೆವಣಿಗೆಯ ಪತ್ರಗಳನ್ನು ಸುಟ್ಟುಹಾಕಿದನೆಂದು ಪ್ರತೀತಿ.. 1660ರಲ್ಲಿ ಎರಡನೆಯ ಚಾಲ್ರ್ಸ್ ರಾಜನಾದಾಗ ಆತನೊಡನೆ ಶಾಂತಿಸಂಧಾನಮಾಡಿಕೊಂಡನೆಂದು ತಿಳಿದುಬರುತ್ತದೆ.

ಈತ ಆಗಿನ ಕೆಲವು ಘಟನೆಗಳಿಂದ ಪ್ರಭಾವಿತನಾಗಿದ್ದ. ಹಾಗೆಯೇ ಇವನ ಚಿಂತನೆಗಳೂ ಹೊಸತೆನ್ನುವಂತೆ ಕಾಣುವುದರ ಜೊತೆಗೆ ಕೆಲವು ಪ್ರಶ್ನೆಗಳನ್ನೂ ಹೊರಹಾಕಿವೆ. ಭೌತಶಾಸ್ತ್ರದ ಹೊಸ ನಿಯಮಗಳ ಬಗ್ಗೆ ಗೆಲಿಲಿಯೊ ಮತ್ತು ಇತರರು ನಡೆಸುತ್ತಿದ್ದ ಕಾರ್ಯಗಳ ಬಗ್ಗೆ ಈತ ತನ್ನದೇ ಆದ ಅಭಿಪ್ರಾಯಗಳನ್ನಿಟ್ಟುಕೊಂಡಿದ್ದ.

ಈತನ ಮೇಲೆ ಅತೀವ ಪರಿಣಾಮ ಬೀರಿದ್ದ ಆಗಿನ ಘಟನೆಗಳಲ್ಲಿ ಇಂಗ್ಲೆಂಡಿನ ಅಂತರ್ಯುದ್ಧವೂ ಒಂದಾಗಿತ್ತು. ಮಾನವರು ಸ್ವಾರ್ಥಪರರು, ಮತ್ತೊಬ್ಬರ ಆಕ್ರಮಣದ ಹೆದರಿಕೆಯಿಂದ ಅಧಿಕಾರದ ಲಾಲಸೆಯುಳ್ಳವರು, ಹಾಗಾಗಿ ಒಬ್ಬ ಸರ್ವಸಮರ್ಥ ಸರ್ವಾಧಿಕಾರಿ ಇವರನ್ನು ಆಳಬೇಕು. ಹಾಗಿಲ್ಲದಿದ್ದರೆ ಇವರ ಜೀವನ ಅಂತಂತ್ರದ್ದೂ ರಕ್ಷಣೆಯಿಲ್ಲದ್ದೂ ಪರದಾಟದ್ದೂ ಕಷ್ಟಕರದ್ದೂ ಅನಾಗರಿಕವೂ ಆಗುತ್ತದೆ, ಎಂದು ರಾಜಾಧಿಕಾರದ ಬಗ್ಗೆ ಹೇಳಿದ. ಆಗ ಅನೇಕರು ಈತನ ಹೇಳಿಕೆಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು. ಕಾರಣ ಕ್ರಾಮ್‍ವೆಲ್ ಸರ್ವಾಧಿಕಾರಿಯ ಆಡಳಿತದಿಂದ ದೊರೆ ಚಾಲ್ರ್ಸ್‍ನ ಆಡಳಿತಕ್ಕೆ ಆಗ ಇಂಗ್ಲೆಂಡ್ ಬಂದಿತ್ತು.

ಲಿವಿಯಥಾನ್ ಅಥವಾ ದಿ ಮ್ಯಾಟರ್, ಫಾರಮ್ ಅಂಡ್ ಪವರ್ ಆಫ್ ಎ ಕಾಮನ್ವೆಲ್ತ್, ಎಕ್ಲೀಸಿಯಾಸ್ಟಿಕಲ್ ಅಂಡ್ ಸಿವಿಲ್ (1651) ಇವನ ಬಹುಮುಖ್ಯ ಕೃತಿ. ಈ ಕೃತಿಯಲ್ಲಿ ಈತನ ರಾಜಕೀಯ ಚಿಂತನೆಗಳು ಹರಳುಗಟ್ಟಿವೆ.

ಈತನ ಕಾಲದ ನಿರ್ಣಯದಂತೆ ಆಧುನಿಕ ಭೌತವಿಜ್ಞಾನ ಐಹಿಕ ಭೋಗವಸ್ತುಗಳಿಗೇ ಸಂಬಂಧಿಸಿಲ್ಲ. ವಿಜ್ಞಾನ ಮತ್ತು ಧರ್ಮ, ಯೋಚನೆ ಮತ್ತು ದೈಹಿಕ ಪ್ರಕ್ರಿಯೆಗಳು, ರಾಜಕೀಯ ಶಕ್ತಿಯ ಪರಿಮಿತಿ ಮತ್ತು ಪ್ರಕೃತಿಗಳ ನಡುವಿನ ಸಂಬಂಧ - ಇವುಗಳ ಬಗ್ಗೆ ಈತ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜನ ಈಗಲೂ ಚಿಂತಿಸಬೇಕಾದ ಪರಿಸ್ಥಿತಿಯಿದೆ.