ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಯ್ಲ್‌, ಫ್ರೆಡ್

ಹಾಯ್ಲ್, ಫ್ರೆಡ್ 1915-2001. ವಿಲಕ್ಷಣ, ವಿವಾದಾತ್ಮಕ ಬ್ರಿಟಿಷ್ ಖಗೋಳ ವಿಜ್ಞಾನಿ, ಗಣಿತಜ್ಞ, ಜನಪ್ರಿಯ ವಿಜ್ಞಾನ ಲೇಖಕ, ವೈಜ್ಞಾನಿಕ ಕಾಲ್ಪನಿಕ ಕಥೆಗಳ ಲೇಖಕ, ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಅಧ್ಯಕ್ಷ ಪದವಿ ಅಲಂಕರಿಸಿದವ, ವಿಶ್ವದ ಹುಟ್ಟಿನ ಮಹಾಬಾಜಣೆ ಸಿದ್ಧಾಂತಕ್ಕೆ ಪ್ರತಿಯಾಗಿ ಸ್ತಿಮಿತ ಸ್ಥಿತಿ ಸಿದ್ಧಾಂತದ ಸಹ ಅಭಿವರ್ಧಕ; ಸೃಷ್ಟಿಯ ಮಾನವಕೇಂದ್ರೀಯ (ಆ್ಯನ್‍ತ್ರಪಿಕ್) ತತ್ತ್ವದ ಸಮರ್ಥಕ; ಜೀವ ಉಗಮದ ಮೂಲ ಭೂಮ್ಯೇತರ ವಿಶ್ವ ಎಂಬ ವಾದ ಮಂಡಿಸಿದವ.

ಇಂಗ್ಲೆಂಡಿನ ಯಾರ್ಕ್‍ಶೈರ್ ಪ್ರಾಂತ್ಯದ ಬಿಂಗ್ಲೆ ಎಂಬಲ್ಲಿ 1915 ಜೂನ್ 24ರಂದು ಜನಿಸಿದ. 6 ವರ್ಷ ವಯಸ್ಸಿನೊಳಗೆ 12 ಘಿ 12ರ ವರೆಗಿನ ಮಗ್ಗಿ ಕೋಷ್ಟಕಗಳನ್ನು ಬರೆಯಬಲ್ಲ ಸಾಮಥ್ರ್ಯ ಗಳಿಕೆ. ಉಡುಗೊರೆಯಾಗಿ ದೊರೆತಿದ್ದ ದೂರದರ್ಶಕದ ನೆರವಿನಿಂದ ಆಕಾಶವೀಕ್ಷಣೆ. 13 ವಯಸ್ಸಿನಲ್ಲಿಯೇ ಪ್ರೌಢ ಗ್ರಂಥಗಳನ್ನು ಓದುವುದರಲ್ಲಿ ಅಪಾರ ಆಸಕ್ತಿ. ಸ್ಥಳೀಯ ಗ್ರ್ಯಾಮರ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ವಿದ್ಯಾರ್ಥಿವೇತನ ದೊರೆತದ್ದರಿಂದ ಕೇಂಬ್ರಿಜ್ ವಿಶ್ವವಿದ್ಯಾಲಯದ ಇಮ್ಯಾನ್ಯುಯೆಲ್ ಕಾಲೇಜಿನಲ್ಲಿ ಗಣಿತ ವಿದ್ಯಾರ್ಥಿಯಾಗಿ ಸೇರ್ಪಡೆ. ಬಿ.ಎ. ಪದವಿ ಪ್ರಾಪ್ತಿ (1936). ಮಹೋನ್ನತ ಸಾಧನೆಗಾಗಿ ಕೇಂಬ್ರಿಜ್‍ನ ಮೇಹ್ಯೂ ಬಹುಮಾನದ ಗೌರವ. ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನದಲ್ಲಿ ಎಮ್.ಎ.ಪದವಿ ಪ್ರಾಪ್ತಿ (1939). ಬೀಟಕ್ಷಯ ಅಧ್ಯಯಿಸಲೋಸುಗ ಕೇಂಬ್ರಿಜ್‍ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಫೆಲೋಶಿಪ್‍ಗೆ ಆಯ್ಕೆ (1939). ಸಹೋದ್ಯೋಗಿ ರೇಮಂಡ್ ಲೈಟಲ್‍ಟನ್‍ನ ಪ್ರಭಾವದಿಂದ ಖಭೌತವಿಜ್ಞಾನದಲ್ಲಿ ಆಸಕ್ತಿ. ಸಂಚಯನ ಮತ್ತು ನಾಕ್ಷತ್ರಿಕ ವಿಕಸನದ ಕುರಿತು ಪ್ರಬಂಧಗಳ ಮಂಡನೆ. ಎರಡನೆಯ ಮಹಾಯುದ್ಧಾವಧಿಯಲ್ಲಿ 6 ವರ್ಷ ಕಾಲ ಸೇನಾ ಸೇವೆ. ರೇಡಾರ್ ವಿಕಸನದಲ್ಲಿ ಭಾಗಿ. ಹರ್ಮನ್ ಬಾಂಡಿ (1919-) ಮತ್ತು ಥಾಮಸ್ ಗೋಲ್ಡ್ (1920-2004) ಎಂಬ ಸಹೋದ್ಯೋಗಿಗಳೊಂದಿಗೆ ವಿರಾಮ ವೇಳೆಯಲ್ಲಿ ಖಗೋಳವಿಜ್ಞಾನ ಸಂಬಂಧಿತ ಚರ್ಚೆ. ಸ್ತಿಮಿತ ಸ್ಥಿತಿ ಸಿದ್ಧಾಂತದ ರೂಪುರೇಷೆ ತಯಾರಿ.

ಕೇಂಬ್ರಿಜ್‍ನಲ್ಲಿ ಗಣಿತ ಉಪನ್ಯಾಸಕನಾಗಿ ನೇಮಕ (1946). ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಪತ್ರಿಕೆಯಲ್ಲಿ ದಿ ಸಿಂತೆಸಿಸ್ ಆಫ್ ದಿ ಎಲಿಮೆಂಟ್ಸ್ ಫ್ರಮ್ ಹೈಡ್ರೊಜನ್ ಮತ್ತು ನೋಟ್ ಆನ್ ದಿ ಆರಿಜಿನ್ ಆಫ್ ಕಾಸ್ಮಿಕ್ ರೇಸ್ ಎಂಬ ಎರಡು ಪ್ರಬಂಧಗಳ ಪ್ರಕಟಣೆ (1946). 22 ವರ್ಷಗಳ ಬಳಿಕ ಸಾಬೀತಾದ ವಿಶ್ವಕಿರಣಗಳಲ್ಲಿ ಭಾರಧಾತುಗಳು ಲಭ್ಯ ಎಂಬ ಭವಿಷ್ಯವಾಣಿ ಇದ್ದ ಪ್ರಬಂಧ ಎರಡನೆಯದು. ಅದೇ ಪತ್ರಿಕೆಯಲ್ಲಿ ವಿಶ್ವದ ಸ್ತಿಮಿತ ಸ್ಥಿತಿ ಸಿದ್ಧಾಂತದ ಪ್ರಬಂಧ ಪ್ರಕಟಣೆ (1948). ಬಿಬಿಸಿಯಲ್ಲಿ ಹಾಯ್ಲ್ ಮಾಡಿದ ಐದು ಸರಣಿಭಾಷಣಗಳು ಮತ್ತು ಅವನ್ನು ಆಧರಿಸಿ ಪ್ರಕಟಿಸಿದ ನೇಚರ್ ಆಫ್ ದಿ ಯೂನಿವರ್ಸ್ ಪುಸ್ತಕ (1950) ಸಾರ್ವಜನಿಕರಿಗೆ ಈ ಸಿದ್ಧಾಂತವನ್ನು ಪರಿಚಯಿಸಿತು. ಈ ಕುರಿತು ಬಾಂಡಿ ಮತ್ತು ಗೋಲ್ಡ್ ಮಂಡಿಸಿದ್ದ ವಾದಗಳಿಗಿಂತ ಹೆಚ್ಚು ನಿಖರವಾಗಿದ್ದುದರಿಂದ ವಿಜ್ಞಾನಿ ಸಮೂಹದಿಂದ ಅಧ್ಯಯನಯೋಗ್ಯ ಎಂಬ ಗೌರವ ಪ್ರಾಪ್ತಿ. ಆಲ್ಬರ್ಟ್ ಐನ್‍ಸ್ಟೈನ್‍ನ ಸಮೀಕರಣಗಳಲ್ಲಿ ಋಣಸಂಮರ್ದ ಅ-ಕ್ಷೇತ್ರದ ಪರಿಕಲ್ಪನೆಯನ್ನು ಸಂಯೋಜಿಸಿದ್ದು ಈತನ ಸಿದ್ಧಾಂತದ ವೈಶಿಷ್ಟ್ಯ. ವಿಶ್ವದ ಅತಿಪ್ರಸರಣ ಮಾದರಿಗಳ ರೂಪಣೆಯ ಮುನ್ಸೂಚಕ ಇದಾಗಿತ್ತು ಎಂಬುದು ಹಾಯ್ಲ್‍ನ ಅಭಿಮತ. ಪರೀಕ್ಷಿಸಬಹುದಾದ ರೂಪದಲ್ಲಿ ಇದ್ದುದರಿಂದ ಮುಂದಿನ ಸುಮಾರು 15 ವರ್ಷಕಾಲ ತೀಕ್ಷ್ಣ ವಾದಪ್ರತಿವಾದಗಳ ಕೇಂದ್ರ ವಿಷಯ. ಬೆಲ್ಜಿಯನ್ ಪಾದ್ರಿ ಮತ್ತು ಖಗೋಲವಿಜ್ಞಾನಿ ಅಬ್ಬೆ ಜಾರ್ಜಸ್ ಎಡ್ವರ್ಡ್ ಲ್ಹಮ್ಹೆಟರ್ (1894-1966) ಪರಿಚಯಿಸಿದ್ದ (1927) ಮಹಾಬಾಜಣೆ ಪ್ರಕಲ್ಪನೆಗೆ ವಿರುದ್ಧವಾದ ಸಿದ್ಧಾಂತ ಇದಾಗಿತ್ತು. ಈ ಸಾಧನೆಗಳ ಫಲವೇ ಖಗೋಲವಿಜ್ಞಾನ ಮತ್ತು ಪ್ರಾಯೋಗಿಕ ತತ್ತ್ವಶಾಸ್ತ್ರದ ಪ್ಲುಮಿಯನ್ ಪ್ರೊಫೆಸರ್ ಹುದ್ದೆ ಪ್ರಾಪ್ತಿ (1958). ಸೂಕ್ಷ್ಮತರಂಗ ಹಿನ್ನೆಲೆಯ ಆವಿಷ್ಕಾರದ (1965) ಅನಂತರ ಬಹುತೇಕ ವಿಶ್ವವಿಜ್ಞಾನಿಗಳು ಮಹಾಬಾಜಣೆ ಪರ ಒಲವು ತೋರಲಾರಂಭಿಸಿದರೂ ಹಾಯ್ಲ್ ಅದನ್ನು ವಿರೋಧಿಸುತ್ತಲೇ ಇದ್ದ. ಆದಾಗ್ಯೂ ರೋಜರ್ ಟೇಯ್ಲರ್, ವಿಲಿಯಮ್ ಆಲ್ಫ್ರೆಡ್ ಫೌಲರ್ (1911-1995) ಮತ್ತು ಬಾಬ್ ವ್ಯಾಗನರ್‍ರಡಗೂಡಿ ಮಹಾಬಾಜಣೆ ನ್ಯೂಕ್ಲಿಯೊಸಂಶ್ಲೇಷಣೆಯ ಅಧ್ಯಯನಗಳಿಗೆ ಗಮನಾರ್ಹ ಕೊಡುಗೆ ನೀಡಿದ.

ಆಗಿಂದಾಗ್ಗೆ ಅಮೆರಿಕ ಭೇಟಿಯಿಂದ ಸ್ಫೂರ್ತಿ ಪಡೆಯುತ್ತಿದ್ದ ಹಾಯ್ಲ್ ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದ ಮಾರ್ಟಿನ್ ಸ್ಕ್ವಾರ್ಝ್‍ಚೈಲ್ಟ್‍ನ (1912-1997) ಸಹಭಾಗಿತ್ವದಲ್ಲಿ ಅಲ್ಪರಾಶಿ ನಕ್ಷತ್ರಗಳಿಂದ ಮೊದಲ್ಗೊಂಡು ಕೆಂಪುದೈತ್ಯ ನಕ್ಷತ್ರ ಹಂತದ ತನಕದ ವಿಭಿನ್ನ ನಕ್ಷತ್ರಗಳ ವಿಕಸನದ ಸೈದ್ಧಾಂತಿಕ ಮಾದರಿ ತಯಾರಿಸಿದ. ಅಮೆರಿಕದಲ್ಲಿ ಹಾಯ್ಲ್ ಹೆಚ್ಚು ಸಮಯ ಕಳೆಯುತ್ತಿದ್ದದ್ದು ಕಾಲ್ಟೆಕ್‍ನಲ್ಲಿ. ಆ ಅವಧಿಯಲ್ಲಿ 1946ರಲ್ಲಿ ಪ್ರಕಟಿಸಿದ್ದ ದಿ ಸಿಂತೆಸಿಸ್ ಆಫ್ ದಿ ಎಲಿಮೆಂಟ್ಸ್ ಫ್ರಂ ಹೈಡ್ರೊಜನ್ ಪ್ರಬಂಧದಲ್ಲಿ ಸ್ಥೂಲವಾಗಿ ಪ್ರತಿಪಾದಿಸಿದ್ದ ಅಂಶಗಳ ಕುರಿತು ಅಧ್ಯಯನ ಮುಂದುವರಿಸಿದ. ಫೌಲರ್‍ನೊಡಗೂಡಿ ನಕ್ಷತ್ರ ಮತ್ತು ಸೂಪರ್ನೋವಾಗಳಲ್ಲಿ ಜರಗುವ ಬೈಜಿಕ ಪ್ರಕ್ರಿಯೆಗಳ ಕುರಿತು ಸುದೀರ್ಘಕಾಲ ಸಂಶೋಧನೆ ಮಾಡಿದ. ಇದರ ಫಲವೇ ಹಾಯ್ಲ್, ಫೌಲರ್, ಜಿಯೊಫ್ರೆ ರೊನಾಲ್ಡ್ (1925-) ಮತ್ತು ಮಾರ್ಗರೆಟ್ ಎಲಿಯನಾರ್ (1919-) ಬರ್ಬಿಡ್ಜ್‍ರು ಜಂಟಿಯಾಗಿ ಬರೆದ ಃ2ಈಊ ಎಂದು ಖ್ಯಾತವಾದ ಸಿಂತೆಸಿಸ್ ಆಫ್ ದಿ ಎಲಿಮೆಂಟ್ಸ್ ಇನ್ ಸ್ಟಾರ್ಸ್ ಪ್ರಬಂಧ (1957). ನಕ್ಷತ್ರಗಳ ಒಡಲೊಳಗೆ ಧಾತುಗಳು ಹೇಗೆ ಉತ್ಪತ್ತಿಯಾಗುತ್ತವೆ ಎಂಬುದರ ಸಮಗ್ರ ವಿವರಣೆಯುಳ್ಳ ಮೊದಲನೆಯ ಪ್ರಬಂಧ ಇದು. ಹಾಯ್ಲನ ಸಾಧನೆಗಳಿಗಾಗಿ ರಾಯಲ್ ಸ್ವೀಡಿಶ್ ಅಕ್ಯಾಡೆಮಿ ಕ್ರಫೂರ್ಡ್ ಬಹುಮಾನ ನೀಡಿ (1997) ಗೌರವಿಸಿತು (1983ರಲ್ಲಿ ಫೌಲರ್‍ನೊಂದಿಗೆ ಈತನಿಗೂ ಭೌತವಿಜ್ಞಾನ ನೊಬೆಲ್ ಬಹುಮಾನ ದೊರೆಯಬೇಕಿತ್ತೆಂಬುದು ಕೆಲವರ ಅನಿಸಿಕೆ).

1950-60ರ ದಶಕದಲ್ಲಿ ಸೌರಭೌತವಿಜ್ಞಾನ, ಸೌರಮಂಡಲದ ಹುಟ್ಟು, ಗೆಲಕ್ಸಿಗಳ ಸಂರಚನೆ ಮತ್ತು ಗುರುತ್ವದ ಸ್ವರೂಪದ ಅಧ್ಯಯನಗಳಲ್ಲಿ ತಲ್ಲೀನ. ಬರ್ಬಿಡ್ಜ್‍ರೊಂದಿಗೆ ಜಂಟಿಯಾಗಿ ಅಧಿರಾಶಿ ಕಾಯಗಳ ಮತ್ತು ಉಚ್ಚಶಕ್ತಿ ಖಭೌತವಿಜ್ಞಾನದ ವಿಭಿನ್ನ ಅಂಶಗಳ ಕುರಿತು ಅನೇಕ ಪ್ರಬಂಧಗಳ ಪ್ರಕಟಣೆ.

ಆಡಳಿತ ಮತ್ತು ಸಮಿತಿ ಕಾರ್ಯಗಳಲ್ಲಿ ಹಾಯ್ಲ್‍ನಿಗೆ ವಿಶೇಷ ಆಸಕ್ತಿ ಇಲ್ಲದೆ ಇದ್ದರೂ 1960-70ರ ದಶಕದಲ್ಲಿ ಬ್ರಿಟನ್‍ನ ಸೈನ್ಸ್ ರಿಸರ್ಚ್ ಕೌನ್ಸಿಲ್‍ನ ಸದಸ್ಯನಾಗಿ, ಕೌನ್ಸಿಲ್ ಆಫ್ ದಿ ರಾಯಲ್ ಸೊಸೈಟಿಯ ಉಪಾಧ್ಯಕ್ಷನಾಗಿ, ಅಮೆರಿಕನ್ ಫಿಲಸಾಫಿಕಲ್ ಸೊಸೈಟಿ ಮತ್ತು ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್‍ನ ಬಾಹ್ಯ ಸದಸ್ಯನಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ. ಕೇಂಬ್ರಿಜ್‍ನಲ್ಲಿ ಇನ್‍ಸ್ಟಿಟ್ಯೂಟ್ ಆಫ್ ತಿಯರೆಟಿಕಲ್ ಅಸ್ಟ್ರಾನಮಿ ಸ್ಥಾಪನೆ (1966) ಈತನ ಅವಿರತ ಶ್ರಮದ ಫಲ. ಅದರ ಪ್ರಥಮ ನಿರ್ದೇಶಕನಾಗುವ ಗೌರವ ಪ್ರಾಪ್ತಿ. ಈ ಸಂಸ್ಥೆಯ ಆಶ್ರ್ರಯದಲ್ಲಿ ಹಾಯ್ಲ್ ಸಂಘಟಿಸುತ್ತಿದ್ದ ಸಂದರ್ಶನ ಕಾರ್ಯಕ್ರಮದ ಉತ್ಪನ್ನವೇ ಸೂಪರ್ನೋವ ಮತ್ತು ಆಸ್ಫೋಟನ ನ್ಯೂಕ್ಲಿಯೊಸಂಶ್ಲೇಷಣೆಗೆ ಸಂಬಂಧಿಸಿದ ಪ್ರಮುಖ ಆಲೋಚನೆಗಳು (ಐಡಿಯಾಸ್). ಜಯಂತ್ ವಿ. ನಾರ್ಳೀಕರ್ (1938-), ನಲಿನ್‍ಚಂದ್ರ ವಿಕ್ರಮಸಿಂಘೆ (1939-) ಮೊದಲಾದ ಮೇಧಾವಿ ಖಭೌತವಿಜ್ಞಾನಿಗಳ ಸಮೂಹವೇ ಈ ಸಂಸ್ಥೆಯಲ್ಲಿತ್ತು. ಬ್ರಿಟನ್‍ನಲ್ಲಿ ಆಂಗ್ಲೊಆಸ್ಟ್ರೇಲಿಯನ್ ವೀಕ್ಷಣಾಲಯ ಸ್ಥಾಪನೆಯ ಪ್ರಧಾನ ಪ್ರೇರಕ ಹಾಯ್ಲ್. ಈ ಎಲ್ಲ ಸಾಧನೆಗಳಿಗಾಗಿ ನೈಟ್‍ಹುಡ್‍ನ ಗೌರವ ಪ್ರಾಪ್ತಿ (1972). ಕೇಂಬ್ರಿಜ್ ಆಡಳಿತ ಮಂಡಳಿಯೊಂದಿಗೆ ಉದ್ಭವಿಸಿದ ಭಿನ್ನಾಭಿಪ್ರಾಯದಿಂದಾಗಿ ಅವಧಿಗೆ ಮುನ್ನವೇ ನಿವೃತ್ತಿ (1972). ತದನಂತರ ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕಾರ್ನೆಲ್‍ನಲ್ಲಿದ್ದು 1977ರಲ್ಲಿ ಅಲೆಮಾರಿ ಜೀವನಕ್ಕೆ ವಿದಾಯ. ಅನಂತರ ಇಂಗ್ಲೆಂಡಿನ ಲೇಕ್ ಪ್ರಾಂತ್ಯದಲ್ಲಿ ಅನೇಕ ವರ್ಷ ವಾಸ. ಬಳಿಕ ಬೋರ್ನ್‍ಮೌತ್‍ನಲ್ಲಿ ನೆಲೆ. ವಿಷಮ ಪರಿಸ್ಥಿತಿಯಲ್ಲಿಯೂ ವಿಜ್ಞಾನಿಗಳು ಜಗತ್ತಿಗೆ ಮಾರ್ಗದರ್ಶನ ಮಾಡಬಲ್ಲರು ಎಂಬ ಸಂದೇಶ ನೀಡುವ ವೈಜ್ಞಾನಿಕ ಕಾಲ್ಪನಿಕ ಕಥೆ ದಿ ಇನ್‍ಫರ್ನೊ ಪ್ರಕಟವಾದದ್ದು (1973) ಈ ಹಿನ್ನೆಲೆಯಲ್ಲಿ. 1980-90ರ ದಶಕಗಳಲ್ಲಿ ಸ್ಟೋನ್‍ಹೆಂಜ್, ಡಾರ್ವಿನಿಸಮ್, ವೈರಸ್‍ಗಳು, ಪ್ರಾಗ್ಜೀವ ವಿಜ್ಞಾನ ಮುಂತಾದ ವಿದೃಶ ವಿಷಯಗಳ ಕುರಿತು ವಿವಾದಾತ್ಮಕ ಲೇಖನಗಳು (ಕೆಲವು ಇತರರ ಸಹಭಾಗಿತ್ವದಲ್ಲಿ) ಪ್ರಕಟವಾದವು. ಅವುಗಳ ಪೈಕಿ ಪ್ರಮುಖವಾದವು: ಜೀವದ ಮೂಲದ ಕುರಿತಾದ ಲೈಫ್ ಕ್ಲೌಡ್ (1978), ರೋಗಗಳ ಮೂಲದ ಕುರಿತಾದ ಡಿಸೀಸಸ್ ಫ್ರಮ್ ಸ್ಪೇಸ್ (1979) ಮತ್ತು ಎವಲ್ಯೂಷನ್ ಫ್ರಮ್ ಸ್ಪೇಸ್ (1981). ನಿಕಟ ಸಂಪರ್ಕದ ಅವಧಿಯಲ್ಲಿ ಧೂಮಕೇತುಗಳಲ್ಲಿರುವ ಕಾರ್ಬನಿಕ ಅಣುಗಳು ಭೂಮಿಯಲ್ಲಿ ಇರುವ ಜೀನ್ ಸಂಚಯದಲ್ಲಿ ಸೇರಿ ಜೀವವಿಕಾಸವನ್ನು ಸಾಧ್ಯವಾಗಿಸಿದೆ ಎಂಬುದು ಇವುಗಳ ತಿರುಳು ಖಗೋಲವಿಜ್ಞಾನದ ಇತಿಹಾಸ ಕೊಪರ್ನಿಕಸ್ (1973), ಪ್ರಾಕ್-ಖಗೋಲವಿಜ್ಞಾನದ ಕುರಿತಾದದ್ದು ಫ್ರಮ್ ಸ್ಟೋನ್‍ಹೆಂಜ್ ಟು ಮಾಡರ್ನ್ ಅಸ್ಟ್ರಾನಮಿ (1972). ಇಷ್ಟಾದರೂ ವಿಶ್ವವಿಜ್ಞಾನದಲ್ಲಿ ಆಸಕ್ತಿ ಕುಂದಿರಲಿಲ್ಲ ಎಂಬುದಕ್ಕೆ ಜಿಯೊಫ್ರೆ ಬರ್ಬಿಡ್ಜ್ ಮತ್ತು ನಾರ್ಳೀಕರ್‍ರ ಸಹಯೋಗದಲ್ಲಿ ಪ್ರಕಟಿಸಿದ (2000) ಎ ಡಿಫರೆಂಟ್ ಅಪ್ರೋಚ್ ಟು ಕಾಸ್ಮಾಲಜಿ: ಫ್ರಮ್ ಎ ಸ್ಟ್ಯಾಟಿಕ್ ಯೂನಿವರ್ಸ್ ತ್ರೂ ದಿ ಬಿಗ್ ಬ್ಯಾಂಗ್ ರಿಯಾಲಿಟಿ ಪುಸ್ತಕವೇ ಸಾಕ್ಷಿ.

ವಿಜ್ಞಾನವನ್ನು ಜನಪ್ರಿಯಗೊಳಿಸುವುದರಲ್ಲಿ ಹಾಯ್ಲ್ 1950ರಿಂದ ಆರಂಭಿಸಿ ಅಸಂಖ್ಯ ಭಾಷಣಗಳು ಮತ್ತು ರೇಡಿಯೊ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ ವೈಜ್ಞಾನಿಕ ಕಾಲ್ಪನಿಕ ಕಥೆಗಳನ್ನೂ ಬರೆದ. ಇಂಥ ಇತರ ಕೃತಿಗಳು: ಫ್ರಾಂಟಿಯರ್ಸ್ ಆಫ್ ಅಸ್ಟ್ರಾನಮಿ (1970) ಅನೇಕರಿಗೆ ಸ್ಫೂರ್ತಿ ನೀಡಿದ ಪುಸ್ತಕ. ದಿ ಬ್ಲ್ಯಾಕ್ ಕ್ಲೌಡ್ (1957), ಆಸ್ಸಿಯಾನ್ಸ್ ರೈಡ್ (1959), ಎ ಫಾರ್ ಆಂಡ್ರೊಮೆಡಾ: ಎ ನಾವೆಲ್ ಫಾರ್ ಟುಮಾರೊ (1962), ಅಕ್ಟೋಬರ್ ದಿ ಫಸ್ಟ್ ಈಸ್ ಟೂ ಲೇಟ್ (1966), ದಿ ವೆಸ್ಟ್‍ಮಿನಿಸ್ಟರ್ ದಿಸಾಸ್ಟರ್ (1978). ಹೋಮ್ ಈಸ್ ವೇರ್ ದಿ ವಿಂಡ್ ಬ್ಲೋಸ್: ಚ್ಯಾಪ್ಟರ್ಸ್ ಫ್ರಮ್ ಎ ಕಾಸ್ಮಾಲಜಿಸ್ಟ್ಸ್ ಲೈಫ್ (1994) ಆತ್ಮಚರಿತ್ರೆ.

ನಕ್ಷತ್ರಗಳು, ನ್ಯೂಕ್ಲಿಯೊಸಂಶ್ಲೇಷಣೆ ಮತ್ತು ವಿಶ್ವದ ಬಗ್ಗೆ ಅಸದೃಶ ಒಳನೋಟ ಗಳಿಸಿದ್ದ ಈ ಅದ್ವಿತೀಯ ಖಭೌತವಿಜ್ಞಾನಿ 2001 ಆಗಸ್ಟ್ 20ರಂದು ನಿಧನನಾದ. (ಎಸ್‍ಎಚ್.ಬಿ.ಎಸ್.)