ಹಾರಂಗಿ ಭಾರತದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಒಂದು ನದಿ ಹಾಗೂ ಜಲಾಶಯ. ಕಾವೇರಿ ನದಿಯ ಮುಖ್ಯ ಉಪನದಿ ಗಳಲ್ಲೊಂದು. ಇದಕ್ಕೆ ಸುವರ್ಣಾವತಿ ಎಂಬ ಹೆಸರೂ ಇದೆ. ಈ ನದಿ ಮಡಿಕೇರಿ ತಾಲ್ಲೂಕಿನ ಬೋರೊ ಬೆಟ್ಟದಲ್ಲಿ ಉಗಮಹೊಂದಿ ಆಗ್ನೇಯಾಭಿಮುಖವಾಗಿ ಹರಿದು ಮೆಗತ್ತಲು ಎಂಬಲ್ಲಿ ದಕ್ಷಿಣಕ್ಕೆ ತಿರುಗಿ, ಸ್ವಲ್ಪ ದೂರ ಹರಿದ ಅನಂತರ ಪೂರ್ವಕ್ಕೆ ತಿರುಗಿ ಪುನಃ ಉತ್ತರಾಭಿಮುಖವಾಗಿ ಹರಿದು ಮತ್ತೊಮ್ಮೆ ಪೂರ್ವಾಭಿಮುಖವಾಗಿ ಸಾಗಿ ಕುಶಾಲನಗರದ ಸ್ವಲ್ಪ ಉತ್ತರದಲ್ಲಿ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಕೂಡುತ್ತದೆ. ಹರದೂರು ಮತ್ತು ಗರ್ಗಂದೂರುಗಳ ನಡುವಣ ಇಕ್ಕಟ್ಟಿನ ಕಣಿವೆಯಲ್ಲಿ ಪ್ರವಹಿಸುವಾಗ ಇದಕ್ಕೊಂದು ಸೇತುವೆ ರಚಿಸಲಾಗಿದೆ. ಈ ಸೇತುವೆಯಿಂದಾಗಿ ಮಡಿಕೇರಿ-ಸೋಮವಾರಪೇಟೆಗಳಿಗೆ ನೇರಮಾರ್ಗಸಂಚಾರ, ಸಾರಿಗೆ ಅನುಕೂಲ ಉಂಟಾಗಿದೆ (ಗರ್ಗಂದೂರಿನಲ್ಲಿ ಚೆಂಗಾಳ್ವರ ಕಾಲದ ಒಂದು ಕೋಟೆ ಇದೆ). ಹರದೂರಿನ ಸ್ವಲ್ಪ ಪೂರ್ವಕ್ಕೆ ಕೋಟೆಬೆಟ್ಟದಲ್ಲಿ ಹುಟ್ಟುವ ಹುತ್ತೆಹೊಳೆಯನ್ನು ಕೂಡಿಕೊಂಡು ಹರಿಯುವ ಮಾದಾಪುರ ಹೊಳೆ, ಸಾಂತಳ್ಳಿಯ ಕಳಕಂದೂರು ಗುಡ್ಡದ ಬದಿಯಿಂದಿಳಿದು ಬರುವ ಚೋರನ ಹೊಳೆ, ಸೋಮವಾರ ಪೇಟೆ ಬೆಟ್ಟಗಳಿಂದ ಹುಟ್ಟಿಬರುವ ಕಕ್ಕೆಹೊಳೆ - ಇವು ಹಾರಂಗಿ ನದಿಯ ಉಪನದಿಗಳು. ಹಾರಂಗಿ ಎಂಬಲ್ಲಿಯವರೆಗಿನ ಈ ನದಿಯ ಮೊದಲ ಹರಿವನ್ನು ಹಟ್ಟಿ ಹೊಳೆಯೆಂದೂ ಅನಂತರ ಹಾರಂಗಿ ನದಿ ಎಂದೂ ಕರೆಯಲಾಗುತ್ತದೆ.

ಕೊಡಗಿನ ಉತ್ತರ-ಮಧ್ಯಭಾಗದ ಬೆಟ್ಟಗಳ ಕಣಿವೆಗಳಲ್ಲಿ ತುಂಬಿ ಹರಿಯುವ ಹಾರಂಗಿ ನದಿಯನ್ನು ಕೊಡಗಿನ ಅತಿದೊಡ್ಡ ನೀರಾವರಿ ಯೋಜನೆಗೆ ಆರಿಸಲಾಗಿದೆ. ಕಕ್ಕೆಹೊಳೆ ಈ ನದಿಯನ್ನು ಸೇರುವ ಮುನ್ನ ಸೋಮವಾರ ಪೇಟೆ ತಾಲ್ಲೂಕಿನ ಹುದಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಸಮುದ್ರ ಮಟ್ಟದಿಂದ 871.4232 ಮೀ ಎತ್ತರದಲ್ಲಿ ಕಟ್ಟಿರುವ ಈ ಅಣೆಕಟ್ಟಿನ ಉದ್ದ 845.82 ಮೀ. ಎತ್ತರ 53.0352 ಮೀ. 1960ರಲ್ಲಿ ಕಟ್ಟಲು ಪ್ರಾರಂಭಿಸಿ 1982ರಲ್ಲಿ ಪೂರ್ಣಗೊಳಿಸಲಾಯಿತು. ಈ ಜಲಾಶಯದ ಒಟ್ಟು ಜಲಧಾರಣ ಸಾಮಥ್ರ್ಯ 35,800 ದಶಲಕ್ಷ ಘನ ಅಡಿಗಳು. ನೀರಿನ ಶೇಖರಣಾ ಎತ್ತರ 46,725 ಮೀ. ಹಾರಂಗಿ ಜಲಾಶಯದಿಂದ 67,581 ಹೆಕ್ಟೇರುಗಳಿಗೂ ಹೆಚ್ಚು ಭೂಮಿಗೆ ಬೇಸಾಯಕ್ಕೆ ನೀರೊದಗುತ್ತಿದೆ. *