ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾರ್ನಹಳ್ಳಿ

ಹಾರ್ನಹಳ್ಳಿ

	ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಅರಸೀಕೆರೆಯ ದಕ್ಷಿಣಕ್ಕೆ 8 ಮೀ. ದೂರದಲ್ಲಿರುವ ಗ್ರಾಮ. 1882ರ ವರೆಗೆ ಇದು ತಾಲ್ಲೂಕಿನ ಮುಖ್ಯ ಕೇಂದ್ರವಾಗಿತ್ತು. ಈ ಗ್ರಾಮದ ಪ್ರಾಚೀನ ಹೆಸರು ಹಾರುವನಹಳ್ಳಿ. ಮೊದಲಿಗೆ ಇದೊಂದು ಅಗ್ರಹಾರವಾಗಿದ್ದು, ಶಾಸನಗಳಲ್ಲಿ ಇದನ್ನು ಲಕ್ಷ್ಮೀನರಸಿಂಹಪುರವೆಂದು ಕರೆಯಲಾಗಿದೆ. 13ನೆಯ ಶತಮಾನದಲ್ಲಿ ಇಮ್ಮಡಿನರಸಿಂಹನ ಸೋದರಿ ಸೋಮಲದೇವಿಯು ಇಲ್ಲಿ ಸೋಮನಾಥಪುರವೆಂಬ ಅಗ್ರಹಾರವನ್ನು ನಿರ್ಮಿಸಿದಳು.

ಇಲ್ಲಿರುವ ಕೇಶವ ಮತ್ತು ಸೋಮೇಶ್ವರ ದೇವಾಲಯಗಳು ಹೊಯ್ಸಳ ಶೈಲಿಯಲ್ಲಿವೆ. ಕೇಶವ ದೇವಾಲಯವನ್ನು 1234ರಲ್ಲಿ ನಿಜೇಶ್ವರ ಭಟ್ಟ, ಸಂಕಣ್ಣ, ಗೋಪಣ್ಣ ಎಂಬ ಸಹೋದರರು ತಮ್ಮ ತಂದೆಯ ನೆನಪಿಗಾಗಿ ಕಟ್ಟಿಸಿ, ಲಕ್ಷ್ಮೀನರಸಿಂಹ ವಿಗ್ರಹವನ್ನು ಪ್ರತಿಷ್ಠೆಮಾಡಿದಂತೆ ಇಲ್ಲಿಯ ಶಾಸನ ತಿಳಿಸುತ್ತದೆ. ಎತ್ತರವಾದ ಜಗತಿಯ ಮೇಲೆ ನಿರ್ಮಿತವಾಗಿರುವ ಈ ತ್ರಿಕೂಟಾಚಲದ ನಡುವಿನ ಗರ್ಭಗುಡಿಯ ಮೇಲೆ ಸುಂದರವಾದ ಗೋಪುರವಿದೆ. ದೇವಾಲಯದ ಹೊರ ಭಿತ್ತಿಯ ಬುಡದಲ್ಲಿ ಆನೆ, ಕುದುರೆ, ಬಳ್ಳಿಯ ಸುರುಳಿ, ಮಕರ, ಹಂಸಗಳ ಸಾಲುಗಳಿದ್ದು ನಡುವಿನ ಪಟ್ಟಿಕೆಯನ್ನು ಮಾತ್ರ ಕಂಡರಿಸದೆ ಹಾಗೆಯೇ ಬಿಟ್ಟಿದೆ. ನಕ್ಷತ್ರಾಕಾರದ ಗರ್ಭಗೃಹಗಳು ಮತ್ತು ಹಲವು ಭಂಗಿಗಳಲ್ಲಿ ನಿಂತಿರುವ ಮೂರ್ತಿಗಳು ಗುಂಡಾಗಿ ಆಭರಣಗಳಿಂದ ತುಂಬಿದ್ದುರ ಸುಂದರವಾಗಿವೆ; ವಿಷ್ಣುವಿನ ದಶಾವತಾರ, ಬ್ರಹ್ಮ, ಸರಸ್ವತಿ, ಮಹಿಷಮರ್ದಿನಿ, ಅರ್ಜುನನ ಮತ್ಸ್ಯಯಂತ್ರಭೇದನ - ಇನ್ನೂ ಹಲವಾರು ಚಿತ್ರಗಳನ್ನು ಕೆತ್ತಲಾಗಿದೆ. ಮಧ್ಯದ ಗರ್ಭಗೃಹದಲ್ಲಿ ಲಕ್ಷ್ಮೀನರಸಿಂಹ ಮತ್ತು ವೇಣುಗೋಪಾಲರ ಸುಂದರ ಮೂರ್ತಿಗಳಿವೆ.

ಸೋಮೇಶ್ವರ ದೇವಾಲಯ, ರಚನೆಯಲ್ಲಿ ಕೇಶವ ದೇವಾಲಯದಂತೆ ಇದೆ. ಇದು ಗರ್ಭಗೃಹ ಮತ್ತು ನವರಂಗವನ್ನು ಹೊಂದಿದೆ. ನವರಂಗದ ಭುವನೇಶ್ವರಿಗಳು ವೈವಿಧ್ಯಮಯವಾಗಿವೆ. 1070ರಲ್ಲಿ ಸೋಮೇಶ್ವರ ಎಂಬ ಹೊಯ್ಸಳ ರಾಜ ಕಟ್ಟಿಸಿದ ಒಂದು ಕೋಟೆಯ ಅವಶೇಷ ಮತ್ತು ಆತ ತನ್ನ ಮಗಳ ಹೆಸರಿನಲ್ಲಿ ಕಟ್ಟಿಸಿರುವ ನಾಗರ್ತಿ ಎಂಬ ಒಂದು ಕೆರೆ ಇಲ್ಲಿವೆ. (ಎಮ್.ಎಚ್.)