ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾರ್ನಿಮನ್, ಬೆಂಜಮಿನ್ ಗೈ

ಹಾರ್ನಿಮನ್, ಬೆಂಜಮಿನ್ ಗೈ 1873-1948. ಪ್ರಸಿದ್ಧ ಬ್ರಿಟಿಷ್ ಪತ್ರಿಕೋದ್ಯಮಿ. ಬ್ರಿಟಿಷ್ ವಸಾಹತುಶಾಹಿಯನ್ನು ವಿರೋಧಿಸಿದರು. ಇಂಗ್ಲೆಂಡಿನಲ್ಲಿ 1873 ಜುಲೈ 17ರಂದು ಜನಿಸಿದರು. ತಂದೆ ವಿಲಿಯಮ್ ಹಾರ್ನಿಮನ್. ತಾಯಿ ಸಾರಾ ಎಸ್ತರ್. ನೌಕಾದಳದಲ್ಲಿ ಅಧಿಕಾರಿಯಾಗಿದ್ದ ಇವನ ತಂದೆ ತನ್ನಂತೆ ಮಗನೂ ಸೈನ್ಯಾಧಿಕಾರಿ ಆಗಲೆಂದು ರಾಯಲ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕ ತರಬೇತಿ ಕೊಡಿಸಿದರು. ಆದರೆ ಈತ ಪತ್ರಕರ್ತನಾದ. ಪೋಟ್ರ್ಸ್‍ಮೌತ್ ನಗರದ ಸದರನ್ ಡೈಲಿ ಮೇಲ್ ಪತ್ರಿಕೆಯಲ್ಲಿ ವರದಿಗಾರನಾಗಿ, ಅನಂತರ ಸಹಾಯಕ ಸಂಪಾದಕ ಹುದ್ದೆಯವರೆಗೆ ಏರಿದ. 1900ರಲ್ಲಿ ಲಂಡನ್ ನಗರದ ಮಾರ್ನಿಂಗ್ ಲೀಡರ್ ಪತ್ರಿಕೆಯಲ್ಲಿ ಸಹಾಯಕ ಸಂಪಾದಕ ಹುದ್ದೆ ಪಡೆದರು. ಅನಂತರ ಡೈಲಿ ಎಕ್ಸ್‍ಪ್ರೆಸ್ ಮತ್ತು ಡೈಲಿ ಕ್ರಾನಿಕಲ್ ಪತ್ರಿಕೆಗಳಲ್ಲೂ ಮುಂದೆ ಹೆಸರಾಂತ ಸಿ.ಪಿ.ಸ್ಕಾಟ್ ಅವರ ಕೈಕೆಳಗೆ ಮ್ಯಾಂಚೆಸ್ಟರ್ ಗಾರ್ಡಿಯನ್ ಪತ್ರಿಕೆಯಲ್ಲೂ ಕೆಲಸ ಮಾಡಿದ.

ಪತ್ರಿಕಾ ವ್ಯವಸಾಯ ಇವನ ವಿಚಾರಶೀಲತೆಯನ್ನು ಪಕ್ವಗೊಳಿಸಿತು. ಪ್ರಪಂಚದ ಎಲ್ಲ ರಾಷ್ಟ್ರಗಳಿಗೂ ಸ್ವಾತಂತ್ರ್ಯ ದೊರಕಬೇಕು ಎನ್ನುವ ಧ್ಯೇಯ ಇವನದಾಯಿತು. ಭಾರತವನ್ನು ತನ್ನ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡು ಕಲ್ಕತ್ತದ ಸ್ಟೇಟ್ಸ್‍ಮನ್ ಪತ್ರಿಕೆಯ ಸಹಾಯಕ ಸಂಪಾದಕ ಹುದ್ದೆ ಸ್ವೀಕರಿಸಿದ(1906). ಗಾಂಧೀಜಿಯವರ ಅಹಿಂಸಾತ್ಮಕ ಸತ್ಯಾಗ್ರಹ ಮೆಚ್ಚಿಕೊಂಡು ಅವರ ಆಪ್ತ ಪರಿವಾರದಲ್ಲಿ ಸೇರಿಹೋದ. ಅಲ್ಲಿ ಸಿ.ಆರ್.ದಾಸ್, ಫಿರೋಜ್ ಷಾ ಮೆಹತಾ ಮುಂತಾದವರ ಸಂಪರ್ಕ ಇವನನ್ನು ಭಾರತದ ವಿಮೋಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು.

ಮುಂಬಯಿ ನಗರದಲ್ಲಿದ್ದ ಆಗಿನ ಕೆಲವು ಇಂಗ್ಲಿಷ್ ಪತ್ರಿಕೆಗಳು ಬ್ರಿಟಿಷ್ ಮಾಲೀಕತ್ವದಲ್ಲಿದ್ದು ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು ವಿರೋಧಿಸುತ್ತಿದ್ದುವು. ಅದನ್ನು ಪ್ರತಿರೋಧಿಸಲು ಭಾರತೀಯರದೇ ಆದ ಒಂದು ಇಂಗ್ಲಿಷ್ ದಿನಪತ್ರಿಕೆ ಆರಂಭಿಸಲು ಫಿರೋಜ್ ಷಾ ಮೆಹತಾ ಯೋಚಿಸಿ ಅದರಂತೆ 1916 ಮಾರ್ಚ್ 2ರಂದು ಬಾಂಬೆ ಕ್ರಾನಿಕಲ್ ಪತ್ರಿಕೆಯನ್ನು ಪ್ರಾರಂಭಿಸಿದರು. ಅದರ ಸಂಪಾದಕನಾಗಲು ಮೆಹತಾ ಅವರ ಆಹ್ವಾನವನ್ನು ಒಪ್ಪಿಕೊಂಡು ಈತ ಮುಂಬಯಿಗೆ ಬಂದ. ಇವನ ಸಂಪಾದಕತ್ವದಲ್ಲಿ ಬಾಂಬೆ ಕ್ರಾನಿಕಲ್ ಜನಪ್ರಿಯತೆಯ ಹೊಸ ಮಜಲನ್ನು ಮುಟ್ಟಿತು. ಇತರ ಪತ್ರಿಕೆಗಳ ಬೆಲೆ ಆಗ ನಾಲ್ಕು ಆಣೆ ಇದ್ದರೂ ಬಾಂಬೆ ಕ್ರಾನಿಕಲ್ ತನ್ನ ಪ್ರಥಮ ಸಂಚಿಕೆಯಿಂದಲೇ ಒಂದಾಣೆಗೆ ಮಾರಾಟ ಮಾಡಿತು. ಕಡಿಮೆ ಬೆಲೆ ಮತ್ತು ಉತ್ತಮ ಸಂಪಾದಕೀಯ ಹಾಗೂ ನಿರ್ಭೀತ ಸುದ್ದಿ ಸಮಾಚಾರಗಳಿಂದ ಪತ್ರಿಕೆ ಹೆಸರು ಗಳಿಸಿತು.

ಈತನಿಗೆ ಪೂರ್ಣ ಸಂಪಾದಕೀಯ ಸ್ವಾತಂತ್ರ್ಯ ದೊರೆತದ್ದರಿಂದ ಇವನು ಅದನ್ನು ರಾಷ್ಟ್ರೀಯವಾದಿಗಳ ಬೆಂಬಲಕ್ಕೆ ಬಳಸಿದ. ಬಾಂಬೆ ಕ್ರಾನಿಕಲ್ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮುಖಪತ್ರ ಆಯಿತು. ಸ್ವಾತಂತ್ರ್ಯ ಹೋರಾಟಗಾರರನ್ನು ಯಾವ ಪೂರ್ವ ವಿಚಾರಣೆಯೂ ಇಲ್ಲದೆ ಸೆರೆಮನೆಯಲ್ಲಿ ಕೊಳೆಹಾಕಲು ಬ್ರಿಟಿಷರು ತಂದ ರೌಲತ್ ಶಾಸನದ ವಿರುದ್ಧ ಲೇಖನಸಮರ ಸಾರಿ ಅದರ ವಿರುದ್ಧ ಬರೆದ. ಜಲಿಯನ್‍ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಕಟು ಶಬ್ದ ಬಳಸಿ ಬ್ರಿಟಿಷ್ ಆಡಳಿತವನ್ನು ಖಂಡಿಸಿದ. ಇದರಿಂದ ಬ್ರಿಟಿಷ್ ಸರ್ಕಾರ ಕುಪಿತಗೊಂಡಿತು. ಈತ ಬಂಗಾಲದ ವಿಭಜನೆಯನ್ನು ವಿರೋಧಿಸಿದಾಗ ಇವನನ್ನು ಭಾರತದಿಂದ ಗಡಿಪಾರು ಮಾಡಲು ಸರ್ಕಾರ ಸಿದ್ಧತೆ ನಡೆಸಿತು. 1919 ಏಪ್ರಿಲ್ 26ರಂದು ಇವನನ್ನು ಬಂಧಿಸಿ ಅದರ ಮರುದಿನವೇ ಬಲವಂತವಾಗಿ ಇಂಗ್ಲೆಂಡಿಗೆ ಕಳುಹಿಸಲಾಯಿತು. ಈತನ ಗಡಿಪಾರಿನ ಬಗ್ಗೆ ಬ್ರಿಟಿಷ್ ಶಾಸನ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಬ್ರಿಟಿಷ್ ಸರ್ಕಾರ ಗಡಿಪಾರಿನ ಆಜ್ಞೆಯನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿತು. ಈತನೂ ತನ್ನ ಪಟ್ಟನ್ನು ಬಿಡಲಿಲ್ಲ. ಭಾರತಕ್ಕೆ ತತ್‍ಕ್ಷಣವೇ ಸ್ವಾತಂತ್ರ್ಯ ನೀಡಬೇಕೆಂದು ಒತ್ತಾಯಿಸುವ ಲೇಖನಗಳನ್ನು ಇಂಗ್ಲೆಂಡಿನಲ್ಲಿದ್ದೇ ಬರೆದ. ಸರ್ಕಾರದ ಅಪಪ್ರಚಾರ ತೀವ್ರವಾದಾಗ ಈತ ಗಾರ್ಡಿಯನ್ ಪತ್ರಿಕೆ ಮೂಲಕ ಯುಕ್ತ ಉತ್ತರ ನೀಡಿದ. ಇವನ ಲೇಖನಗಳನ್ನು ಪುನರ್ ಮುದ್ರಿಸಿದ ಬಾಂಬೆ ಕ್ರಾನಿಕಲ್ ಪತ್ರಿಕೆಗೆ ಭದ್ರತಾ ಠೇವಣಿ ಕೇಳಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತು. ಗಡಿಪಾರಿನ ಆಜ್ಞೆಯಲ್ಲಿದ್ದ ಕೆಲವು ನ್ಯೂನತೆಗಳನ್ನು ಬಳಸಿಕೊಂಡು ಈತ 1926ರಲ್ಲಿ ಭಾರತಕ್ಕೆ ಮರಳಿ ಬಂದು ಬಾಂಬೆ ಕ್ರಾನಿಕಲ್‍ನ ಸಂಪಾದಕತ್ವವನ್ನು ಮತ್ತೆ ವಹಿಸಿಕೊಂಡ. ಮೋತಿಲಾಲ್ ನೆಹರೂ ಅವರು ಇಂಡಿಪೆಂಡೆಂಟ್ ಪತ್ರಿಕೆಯನ್ನು ಆರಂಭಿಸಿದಾಗ ಈತ ಅದರ ಉಸ್ತುವಾರಿ ನೋಡಿಕೊಂಡ.

ಈತ ಲಂಡನ್ನಿನಲ್ಲಿದ್ದಾಗ ಕೆಥೊಲಿಕ್ ಹೆರಾಲ್ಡ್ ಪತ್ರಿಕೆಯಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ ಲೇಖನಮಾಲೆಯನ್ನೇ ಬರೆದಿದ್ದ. ಬಾಂಬೆ ಸೆಂಟಿನಲ್ ಸಂಜೆ ಪತ್ರಿಕೆಯ ಸಂಪಾದಕನಾಗಿದ್ದಾಗ ಈತ ಪ್ರಕಟಿಸಿದ ಲೇಖನದಿಂದಾಗಿ ಮಾನನಷ್ಟ ಮೊಕದ್ದಮೆಗೆ ಗುರಿಯಾಗಿ ನ್ಯಾಯಾಲಯದಲ್ಲಿ ಪಾಟೀ ಸವಾಲೂ ನಡೆಸಿ ಜಯಶೀಲನಾದ. ಪತ್ರಿಕೋದ್ಯಮ ಶಿಕ್ಷಣದಲ್ಲಿ ಇವನಿಗೆ ಅಪಾರ ಆಸಕ್ತಿ. ಅನೇಕ ಪ್ರತಿಭಾವಂತ ಪತ್ರಿಕೋದ್ಯಮಿಗಳನ್ನು ತಯಾರು ಮಾಡಿದ. ಮುಂಬಯಿ ನಗರದ ಜನರಿಗೆ `ಬಿ.ಜಿ.ಅಂಕಲ್ ಎಂದು ಪರಿಚಿತನಾಗಿದ್ದ ಈತ 1948 ಅಕ್ಟೋಬರ್ 16ರಂದು ಮುಂಬಯಿಯಲ್ಲಿ ನಿಧನನಾದ. ಇವನ ನೆನಪಿಗಾಗಿ ಮುಂಬಯಿಯಲ್ಲಿ ಹಾರ್ನಿಮನ್ ಪತ್ರಿಕೋದ್ಯಮ ಕಾಲೇಜು ಮತ್ತು ಆ ಮಹಾನಗರದ ಒಂದು ಮಾರ್ಗಮಧ್ಯದಲ್ಲಿ ಹಾರ್ನಿಮನ್ ವೃತ್ತ ಕೂಡ ಇದೆ. (ಕೆ.ವಿ.ಎನ್.)