ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾರ್ಮೋನುಗಳು

ಹಾರ್ಮೋನುಗಳು ನಿರ್ನಾಳಗ್ರಂಥಗಳಲ್ಲಿ ಉತ್ಪತ್ತಿಯಾಗಿ, ರಕ್ತಗತವಾಗಿ ತಮ್ಮ ಜನ್ಮಸ್ಥಾನದಿಂದ ದೂರದಲ್ಲಿರುವ ಲಕ್ಷ್ಯಕೋಶಗಳಲ್ಲಿ(ಟಾರ್ಗೆಟ್ ಸೆಲ್ಸ್) ಕಾರ್ಯೋನ್ಮುಖವಾಗುವ ರಾಸಾಯನಿಕಗಳು, ಬೆಳೆವಣಿಗೆ, ಉಪಾಪಚಯ ದರ, ಕೋಶಗಳಲ್ಲಿ ಪೋಷಕಗಳ ಸದ್ವಿನಿಯೋಗ, ಸಂತಾನೋತ್ಪತ್ತಿ, ಜೀವಿಯ ಮಾಸಿಕ ಅಥವಾ ವಾರ್ಷಿಕ ಕ್ರಿಯಾಚಕ್ರಗಳ ನಿಯಂತ್ರಣ ಮತ್ತು ವ್ಯಕ್ತಿತ್ವ ವಿಕಸನ ಇವೆಲ್ಲದರ ಮೇಲ್ವಿಚಾರಣೆ ಹಾರ್ಮೋನುಗಳದ್ದು. ಆದ್ದರಿಂದ ಇವುಗಳಿಗೆ “ರಸದೂತಗಳು” ಎಂದು ಹೆಸರು. ಹಾರ್ಮೋನುಗಳನ್ನು ಐದು ಬಗೆಯ ರಾಸಾಯನಿಕ ವರ್ಗಗಳಾಗಿ ವಿಂಗಡಿಸುವುದು ವಾಡಿಕೆ. ಸ್ಟೀರಾಯ್ಡ್‍ಗಳು, ಅಮೈನೊಆಮ್ಲ ಜನ್ಯಗಳು, ಪೆಪ್ಟೈಡ್‍ಗಳು ಅಥವಾ ಪ್ರೋಟೀನ್‍ಗಳು, ಗ್ಲೈಕೊಪ್ರೋಟೀನ್‍ಗಳು ಮತ್ತು ಕೊಬ್ಬಿನ ಆಮ್ಲ ಜನ್ಯಗಳು. ಹಾರ್ಮೋನುಗಳ ಕಾರ್ಯಾಚರಣೆಯನ್ನು ನಿರ್ದೇಶಿಸುವುದು ಹೈಪೋಥ್ಯಾಲ್ಮಸ್‍ನ ಕಾರ್ಯ.

ಇನ್ಸುಲಿನ್, ಆಕ್ಸಿಟಾಸಿನ್, ಅಡ್ರೆನಲಿನ್, ಕಾರ್ಟಿಸೋನ್‍ಗಳು, ವ್ಯಾಸೊಪ್ರೆಸಿನ್, ತೈರಾಕ್ಸಿನ್ ಟೆಸ್ಟೊಸ್ಟೆರೋನ್ ಮತ್ತು ಈಸ್ಟ್ರೊಜನ್‍ಗಳು ಕೆಲವು ಪರಿಚಿತ ಹಾರ್ಮೋನುಗಳು. ಮೇದೋ ಜೀರಕದ ನಿರ್ನಾಳ ಭಾಗವೇ ಲ್ಯಾಂಗರ್‍ಹಾನ್ಸ್‍ನ ಕಿರುದ್ವೀಪಗಳು. ಇಲ್ಲಿ ಇನ್ಸುಲಿನ್ ಉತ್ಪತ್ತಿಯಾಗುವುದು. ಇದರ ನೆರವಿನಿಂದ ಯಕೃತ್ತು ನಮ್ಮ ರಕ್ತದಲ್ಲಿ ಗ್ಲೂಕೋಸ್ ಅಂಶ ಸುರಕ್ಷಿತ ಮಟ್ಟದಲ್ಲಿರುವಂತೆ (ಒಂದು ಡೆಸಿಲೀಟರ್ ರಕ್ತದಲ್ಲಿ 80-100ಮಿಲಿಗ್ರಾಮ್‍ಗಳು) ಕಾಯುತ್ತದೆ. ಈ ಮಿತಿ ಮೀರಿದರೆ ಮಧುಮೇಹ ಸನ್ನಿಹಿತ. ಪಿಟ್ಯೂಟರಿ ಗ್ರಂಥಿಯ ಹಿಂಬದಿಯ ಹಾಲೆಯಿಂದ ಆಕ್ಸಿಟಾಸಿನ್ ಮತ್ತು ವ್ಯಾಸೊಪ್ರೆಸಿನ್ ಹಾರ್ಮೋನುಗಳು ಸ್ರವಿಸುತ್ತವೆ. ಗರ್ಭಕೋಶದ ಸ್ನಾಯುಗಳು ಮತ್ತು ರಕ್ತನಾಳಗಳನ್ನು ಸಂಕುಚಿಸಿ, ಹೆಚ್ಚು ರಕ್ತಸ್ರಾವಕ್ಕೆ ಎಡೆಗೊಡದೆ ಸುಲಭ ಪ್ರಸವವಾಗಲು ಆಕ್ಸಿಟಾಸಿನ್ ಮಾಡಲೂ ಇದು ಸಹಾಯಕ. ದೇಹದ ಜಲಸಮತೋಲನ ವ್ಯಾಸೊಪ್ರೆಸಿನ್‍ನ ಹೊಣೆ. ಅದರ ಕೊರತೆಯಿಂದ ನಿಸ್ಸಾರ ಮಧುಮೇಹ ಎಂಬ ಸ್ಥಿತಿ ಉಂಟಾಗುವುದು. ಈ ಸ್ಥಿತಿಯಲ್ಲಿ ರೋಗಿ ಪ್ರತಿ ದಿನ 30 ಲೀಟರ್‍ಗಳಷ್ಟು ಮೂತ್ರವನ್ನು ವಿಸರ್ಜಿಸುತ್ತಾನೆ. ದೇಹದಲ್ಲಿ ಸೋಡಿಯಮ್-ಪೊಟ್ಯಾಸಿಯಮ್ ಸಮತೋಲನ ಕಾಪಾಡುವುದು ಕಾರ್ಟಿಸೋನ್‍ಗಳ ಕಾರ್ಯ. ಇವು ಡ್ರೀನಲ್‍ಗ್ರಂಥಿಗಳ ಉತ್ಪನ್ನ. ಈ ಗ್ರಂಥಿಗಳು ಉತ್ಪಾದಿಸುವ ಅಡ್ರೀನಲಿನ್ ಅಪಾಯಗಳನ್ನು ಎದುರಿಸಲು ಮತ್ತು ಅವುಗಳಿಂದ ಪಾರಾಗಲು ಸಹಾಯಕ. ತೈರಾಯ್ಡ್ ಗ್ರಂಥಿಗಳಲ್ಲಿ ತೈರಾಕ್ಸಿನ್ ಜನ್ಯ. ಇದು ಅಯೊಡೀನ್ ಉಳ್ಳ ಹಾರ್ಮೋನ್. ಇದರ ಕೊರತೆಯಿಂದ ಗಳಗಂಡ ರೋಗ ಪ್ರಾಪ್ತ. ಆದ್ದರಿಂದಲೇ ಅಡುಗೆ ಉಪ್ಪಿಗೆ (ಓಚಿಛಿಟ) ಸೋಡಿಯಮ್ ಅಯೊಡೈಡ್ ಕೂಡಿಸಿಯೇ ಮಾರಬೇಕು ಎಂಬ ಕಾನೂನು. ಅಂಡಾಶಯಗಳಲ್ಲಿ ಈಸ್ಟ್ರೊಜನ್‍ಗಳು ಮತ್ತು ವೃಷಣಗಳಲ್ಲಿ ಟೆಸ್ಟೊಸ್ಟೆರೋನ್‍ಗಳ ಹುಟ್ಟು. ಇವು ಅನುಕ್ರಮವಾಗಿ ಸ್ತ್ರೀ ಪುರುಷರ ಲೈಂಗಿಕ ಲಕ್ಷಣಗಳು ಮತ್ತು ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಸಸ್ಯಗಳೂ ಹಾರ್ಮೋನುಗಳಿಂದ ಪ್ರಭಾವಿತ. ಪುಷ್ಪೋತ್ಪತ್ತಿ ಪ್ರೇರಕವಾದ ¥sóÁ್ಲರಿಜೆನ್ ಒಂದು ಉದಾಹರಣೆ. (ಎಚ್.ಜಿ.ಎಸ್.)