ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾರ್ವೆ, ಡೇವಿಡ್

ಹಾರ್ವೆ, ಡೇವಿಡ್ 1935-. ಖ್ಯಾತ ಭೂಗೋಳ ಶಾಸ್ತ್ರಜ್ಞ. ಈತ ಬ್ರಿಟನ್ನಿನ ಗಿಲ್ಲಿಂಘಾನ್‍ನಲ್ಲಿ 1935ರಲ್ಲಿ ಜನಿಸಿದ. ಕೇಂಬ್ರಿಜ್ ಸೇಂಟ್ ಜಾನ್ಸ್ ಕಾಲೇಜಿನಿಂದ ಬಿ.ಎ. ಆನರ್ಸ್ ಪದವಿಯನ್ನು ಪಡೆದ(1957). ಅನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದುಕೊಂಡ(1961). ಭೂಗೋಳಶಾಸ್ತ್ರ ಮತ್ತು ಪರಿಸರ ಎಂಜಿನಿಯ ರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿ(1969) ಕೆಲಸವನ್ನು ಆರಂಭಿಸಿ, ಪ್ರಾಧ್ಯಾಪಕನಾಗಿ ನೇಮಕಗೊಂಡ(1973). ಆನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಹಾಲ್‍ಫೋರ್ಡ್ ಮಕಿಂದರ್ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿ ತರುವಾಯ ಹಾಪ್‍ಕಿನ್ಸ್ ವಿಶ್ವವಿದ್ಯಾ ಲಯದಲ್ಲಿ (1987-93) ಪ್ರಾಧ್ಯಾಪಕನಾಗಿ ನೇಮಕಗೊಂಡ(1993). ಅನಂತರ ನ್ಯೂಯಾರ್ಕ್‍ನ ಸಿಟಿ ಯೂನಿವರ್ಸಿಟಿಯಲ್ಲಿ ಮಾನವಶಾಸ್ತ್ರದ ಪ್ರಾಧ್ಯಾಪಕನಾದ(2001).

ಎರಡನೆಯ ಮಹಾಯುದ್ಧದ ಅನಂತರ ಮಾನವ ಭೂಗೋಳಶಾಸ್ತ್ರದ ಅಭಿವೃದ್ಧಿಗೆ ಇವನ ಕೃತಿಗಳು ಅಮೂಲ್ಯ ಕೊಡುಗೆ ನೀಡಿವೆ. 1960ರ ದಶಕದಲ್ಲಿ ಈತ ಪರಿಮಾಣಾತ್ಮಕ ಕ್ರಾಂತಿಯ ಪ್ರಭಾವಕ್ಕೆ ಒಳಗಾಗಿ ಭೂಗೋಳಶಾಸ್ತ್ರದ ಅಧ್ಯಯನ ವಿಧಾನ ಮತ್ತು ತತ್ತ್ವಶಾಸ್ತ್ರದ ಸಮಸ್ಯೆಗ ಳನ್ನು ಕುರಿತು ತೀವ್ರ ಕುತೂಹಲವನ್ನು ತಾಳಿದ. ಭೂಗೋಳಶಾಸ್ತ್ರ ಇತಿಹಾಸ ಸಂಶೋಧನೆಯ ಬಗೆ ಆಸಕ್ತಿ ತಳೆದ. ಅನಂತರ ಪರಿಮಾಣಾತ್ಮಕ ವಿಧಾನಗಳಲ್ಲಿ ಆಸಕ್ತಿ ಕಳೆದುಕೊಂಡು ಭೂಗೋಳಶಾಸ್ತ್ರ ವಿಧಾನಗಳ ಅಧ್ಯಯನವನ್ನು ಮುಂದುವರಿಸಿ, ಎಕ್ಸ್‍ಪ್ಲನೇಷನ್ ಇನ್ ಜಿಯಾಗ್ರಫಿ ಎಂಬ ಗ್ರಂಥ ಪ್ರಕಟಿಸಿದ(1969). ಭೂಗೋಳಶಾಸ್ತ್ರದ ಇತ್ತೀಚಿನ ಬೆಳೆವಣಿಗೆ ಅಧ್ಯಯನ ವಿಧಾನ ಕುರಿತ ಮುಖ್ಯ ಆಕರ ಗ್ರಂಥಗಳಲ್ಲಿ ಈ ಕೃತಿ ಇಂದಿಗೂ ಪ್ರಸ್ತುತವಾಗಿದೆ.

ದೃಷ್ಟ ಪ್ರಮಾಣವಾದದ ಸಂಶೋಧನೆಗಳಿಗೆ (ಪಾಸಿಟಿವಿಸಂ) ಹೆಸರಾಗಿದ್ದ ಈತ ಮಾಕ್ರ್ಸ್‍ವಾದದಿಂದ ಹೆಚ್ಚು ಪ್ರಭಾವಿತನಾದ. ಅಮೆರಿಕದ ಹಲವಾರು ನಗರಗಳಲ್ಲಿ ಕಂಡುಬರುವ ಜನಾಂಗವಾದ ಹಾಗೂ ಅಸಮಾನತೆಯ ಬಗ್ಗೆ ಅಧ್ಯಯನಗಳನ್ನು ಆರಂಭಿಸಿದ. ಈ ಬಗ್ಗೆ ಸೋಷಿಯಲ್ ಜಸ್ಟೀಸ್ ಅಂಡ್ ದಿ ಸಿಟಿ ಗ್ರಂಥವನ್ನು ಪ್ರಕಟಿಸಿದ (1973). ಇದೇ ವೇಳೆಗೆ ಈತ ಬರ್ಕ್‍ಲಿ, ಆಕ್ಸಫರ್ಡ್ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿದ. ಬಂಡವಾಳ ಶಾಹಿ ರಾಷ್ಟ್ರಗಳಲ್ಲಿಯ ರಾಜಕೀಯ ಮತ್ತು ಆರ್ಥಿಕ ಬದಲಾವಣೆಯ ಸಂಬಂಧಗಳನ್ನು ಹಾಗೂ ನಗರೀಕರಣ ಪ್ರಕ್ರಿಯೆಗಳನ್ನು ಕುರಿತು ಅಧ್ಯಯನ ಮಾಡಿದ. ಈ ಸಂಬಂಧವಾಗಿ ಕ್ರಮವಾಗಿ ದಿ ಲಿಮಿಟ್ಸ್ ಟು ಕ್ಯಾಪಿಟಲ್(1982) ದಿ ಅರ್ಬನೈಸೇಷನ್ ಆಫ್ ಕ್ಯಾಪಿಟಲ್ ಮತ್ತು ದಿ ಕಾನ್ಷಿಯಸ್‍ನೆಸ್ ಅಂಡ್ ದಿ ಅರ್ಬನ್ ಎಕ್ಸ್‍ಪೀರಿಯನ್ಸ್ (1985) ಎಂಬ ಕೃತಿಗಳು ಪ್ರಕಟಗೊಂಡವು.

ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಕ್ಕೆ ಹಿಂದಿರುಗಿದ ಅನಂತರ ಈತ ನಗರ ಮತ್ತು ರಾಜಕೀಯ-ಆರ್ಥಿಕ ಕೇಂದ್ರಗಳಿಗೆ ಸಂಬಂಧಿಸಿದಂತೆ ಸಾಂಸ್ಕøತಿಕ ಬದಲಾವಣೆ ಮತ್ತು ಪರಿಸರದ ಸಮಸ್ಯೆಗಳನ್ನು ಕುರಿತು ವ್ಯಾಪಕ ಅಧ್ಯಯನವನ್ನು ಕೈಗೊಂಡ. ಸಾಂಸ್ಕøತಿಕ ಬದಲಾವಣೆಯ ವಿಶ್ಲೇಷಣೆಗೆ ಮಾಕ್ರ್ಸ್‍ವಾದದ ದೃಷ್ಟಿಯನ್ನು ಅನ್ವಯಿಸಿ ದಿ ಕಂಡಿಷನ್ ಆಫ್ ಪೋಸ್ಟ್ ಮಾಡರ್ನಿಟಿ(1989) ಮತ್ತು ಜಸ್ಟೀಸ್, ನೇಚರ್ ಅಂಡ್ ದಿ ಜಿಯಾಗ್ರಫಿ ಆಫ್ ಡಿಫರೆನ್ಸ್(1996) ಪ್ರಕಟಗೊಂಡುವು. ಪರಿಸರದ ಆಧುನಿಕ ಸಮಸ್ಯೆಗಳನ್ನು ಇವುಗಳಲ್ಲಿ ವಿಶ್ಲೇಷಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈತ ಜಾಗತೀಕರಣದ ಪ್ರಶ್ನೆಗಳನ್ನು ಕುರಿತಂತೆ ಅಧ್ಯಯನಗಳನ್ನು ಮುಂದುವರೆಸಿದ್ದಾನೆ. ಜಾಗತೀಕರಣದಿಂದ ಪ್ರಪಂಚ ದಲ್ಲಿ ಉಂಟಾಗಿರುವ ಅಭಿವೃದ್ಧಿಯ ಭೌಗೋಳಿಕ ತರತಮವನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದಾನೆ. ಆಧುನಿಕ ಸಾಮಾಜಿಕ-ಭೌಗೋಳಿಕ ಜೀವನ ಸಂಘಟನೆ ಹಾಗೂ ಇವುಗಳಿಗೆ ಬದಲಿ ವ್ಯವಸ್ಥೆಗಳನ್ನು ವಿವರಿಸುವ ಗುರಿಯುಳ್ಳ ಸ್ಪೇಸಸ್ ಆಫ್ ಹೋಪ್ ಕೃತಿ ರಚನೆಯಲ್ಲಿ ತೊಡಗಿದ್ದಾನೆ.

ನಗರ ಸುಸ್ಥಿರತೆ, ನಗರದ ಚಾರಿತ್ರಿಕ ಭೂಗೋಳ ಮೊದಲಾದವು ಇವನ ಕಾಳಜಿಗಳು. ಮಾನವಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನಗಳ ಇತಿಹಾಸ, ತಂತ್ರಜ್ಞಾನ, ಔಷಧಶಾಸ್ತ್ರ ಹಾಗೂ ಇತರೆ ಮಾನವಿಕಗಳ ಅಂತರ್‍ಶಿಸ್ತೀಯ ದೃಷ್ಟಿಗೆ ಈತ ಒತ್ತು ನೀಡಿದ್ದಾನೆ. ಈತ ಮಾನವ ಭೂಗೋಳಶಾಸ್ತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟೊರೇಟ್ ಪದವಿ ನೀಡಿವೆ. ಲಂಡನ್ನಿನ ರಾಯಲ್ ಜಿಯೋಗ್ರಾಫಿಕಲ್ ಸೊಸೈಟಿಯ ದಿ ಗಿಲ್ ಮೆಮೋರಿಯಲ್ ಬಹುಮಾನ(1972), ದಿ ಅಸೋಸಿಯೇಷನ್ ಆಫ್ ಅಮೆರಿಕನ್ ಜಿಯಾಗ್ರಾಫರ್ಸ್‍ನ ದಿ ಔಟ್‍ಸ್ಟ್ಯಾಂಡಿಂಗ್ ಬಹುಮಾನ(1980) ಇವನಿಗೆ ಲಭ್ಯವಾಗಿವೆ. ಸ್ವೀಡಿಷ್ ಸೊಸೈಟಿ ಆಫ್ ಆಂಥ್ರೊಪಾಲಜಿ ಅಂಡ್ ಜಿಯಾಗ್ರಫಿ ಇವನಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ(1989).

ಈತನ ಜಾಗತೀಕರಣ ವಿಶ್ಲೇಷಣೆ ಐತಿಹಾಸಿಕ-ಭೌಗೋಳಿಕ ಅಂಶಗಳ ನ್ನಾಧರಿಸಿದೆ. ಇದನ್ನು ಹಾರ್ವೆ ಮಾಕ್ರ್ಸ್‍ವಾದವೆಂದು ಕರೆಯಲಾಗಿದೆ. ಈತನ ಬಹುತೇಕ ಲೇಖನಗಳು ಆಂಟಿಫೋರ್ಡ್ ಹಾಗೂ ಸೊಸೈಟಿ ಅಂಡ್ ಸ್ಪೇಸ್ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಈತ ಪ್ರಪಂಚದ ನಗರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುತ್ತಿದ್ದಾನೆ.

(ಆರ್.ಎನ್.)