ಹಾಲ -

	ಸಾತವಾಹನ ಪ್ರಸಿದ್ಧ ದೊರೆ. ಇವನ ಆಳಿಕೆಯ ಬಗ್ಗೆ ಲೀಲಾವತಿ ಕೃತಿ ಸ್ವಲ್ಪ ಮಾಹಿತಿ ನೀಡುತ್ತದೆ. ಆಕೃತಿಯ ಮಾಹಿತಿ ಪ್ರಕಾರ ಇವನ ದಂಡನಾಯಕ ವಿಜಯಾನಂದ ಸಿಂಹಳದ ವಿರುದ್ಧ ದಂಡಯಾತ್ರೆ ಕೈಗೊಂಡು ಸಿಂಹಳವನ್ನು ವಶಪಡಿಸಿಕೊಂಡ. ಅನಂತರ ಇವನು ಅಲ್ಲಿನ ಅಪೂರ್ವ ಸೌಂದರ್ಯಕ್ಕೆ ಹೆಸರಾದ ರಾಜಕುಮಾರಿ ಲೀಲಾವತಿಯೊಡನೆ ಸಪ್ತ ಗೋದಾವರಿ ಭೀಮಂ ಅಥವಾ ದ್ರಾಕ್ಷಾರಾಮ ಎಂಬಲ್ಲಿ ವಿವಾಹವಾದ. ಇವನ ಆಡಳಿತಾವಧಿಯಲ್ಲಿ ಪಾಕೃತ ಆಡಳಿತ ಭಾಷೆಯಾಗಿತ್ತು. ಶಾಂತಿಪ್ರಿಯನಾದ ಇವನು ಘನ ವಿದ್ವಾಂಸನಾಗಿದ್ದು ಮಹಾರಾಷ್ಟ್ರೀ ಪ್ರಾಕೃತ ಭಾಷೆಯಲ್ಲಿ ಗಾಥಸಪ್ತಸತಿ (ಗಾಥಾಸತ್ತಸಾಯ್) ಎಂಬ ಶೃಂಗಾರ ಕಾವ್ಯ ರಚಿಸಿದ. ಇವನು ಪ್ರಾಕೃತದ ಅನೇಕ ಕವಿಗಳ ಗ್ರಂಥಗಳಿಂದ 700  ಶ್ಲೋಕಗಳನ್ನು ಆಯ್ದುಕೊಂಡು ಕಾವ್ಯ ರಚಿಸಿರುವುದರಿಂದ, ಇವನ ಕಾಲಕ್ಕೆ ಮಹಾರಾಷ್ಟ್ರೀ ಪ್ರಾಕೃತದಲ್ಲಿ ವಿಪುಲ ಸಾಹಿತ್ಯ ರಚನೆಯಾಗಿತ್ತೆಂದು ತಿಳಿಯುತ್ತದೆ. ಬಾಣ ತನ್ನ ಹರ್ಷಚರಿತೆಯಲ್ಲಿ ಹಾಲನ ಗಾಥಸಪ್ತಸತ ಮೇರುಕೃತಿ ಎಂದು ಹೊಗಳಿದ್ದಾನೆ. ಇವನು ತನ್ನ ಕಾವ್ಯವನ್ನು ಶಿವ ಮತ್ತು ಆತನ ಪತ್ನಿ ಗೌರಿಯ ಸ್ತೋತ್ರದಿಂದಲೇ ಪ್ರಾರಂಭಿಸಿರುವುದಲ್ಲದೆ, ಶಿವದತ್ತ, ಶೀರಕದಿಲ, ಕುಮಾರ, ಸ್ಕಂದ ಮೊದಲಾದ ಹೆಸರುಗಳಿರುವುದರಿಂದ ಸಾತವಾಹನರ ಕಾಲದಲ್ಲಿ ಶೈವ ಧರ್ಮ ಆಚರಣೆಯಲ್ಲಿತ್ತೆಂಬುದು ತಿಳಿಯುತ್ತದೆ.

ಇದರಲ್ಲಿ ಕನ್ನಡದ ಪೊಟ್ಟ, ತುಪ್ಪ ಎಂಬ ನಾಮಪದಗಳು, ಪೆಟ್ಟು, ತೀರ್ ಎಂಬ ಕ್ರಿಯಾಪದಗಳು ಇವೆ. ಆದ್ದರಿಂದ ಕನ್ನಡ ಆ ಕಾಲದಲ್ಲಿ ವ್ಯಾವಹಾರಿಕ ಭಾಷೆ ಮಾತ್ರವಲ್ಲ, ಕಾವ್ಯ, ಸಾಹಿತ್ಯ ಭಾಷೆ ಕೂಡ ಆಗಿತ್ತು ಎಂದು ಗೋವಿಂದ ಪೈ ಯವರ ಅಭಿಮತ. ಅಲ್ಲದೇ ಕ್ರಿಯಾಪದದ ಮೂಲಧಾತುವನ್ನು ಎರವಲಾಗಿ ಪಡೆಯಬೇಕಾದರೆ ತನಗಿಂತ ಸಮೃದ್ಧ ಭಾಷೆಯಿಂದ ಮಾತ್ರ ಸಾಧ್ಯ. ಆದ್ದರಿಂದ ಕನ್ನಡ ಸಾಹಿತ್ಯ 1-2ನೆಯ ಶತಮಾನಕ್ಕಿಂತ ಮುಂಚೆ ಇರಬೇಕೆಂಬುದು ಇವರ ಅಭಿಪ್ರಾಯವಾಗಿದೆ. ಇವನ ಕಾಲದಲ್ಲಿ ಗುಣಾಡ್ಯನಿಂದ ರಚಿತವಾದ ಬೃಹತ್ಕಥಾ ಕೋಶ ಪೈಶಾಚಿ ಭಾಷೆಯಲ್ಲಿದೆ. ಇವನು 78 ರಲ್ಲಿ ಶಾಲಿವಾಹನ ಶಕೆ ಆರಂಭಿಸಿದನೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇವನಿಗೆ ಶಾಲಿವಾಹನ ಎಂಬ ಹೆಸರೂ ಇತ್ತು. *