ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಲಭಾವಿ, ಡಿ ವಿ

ಹಾಲಭಾವಿ, ಡಿ ವಿ (1907-1997). ದಾನಪ್ಪ ವೀರಭದ್ರಪ್ಪ ಹಾಲಭಾವಿಯವರು ಧಾರವಾಡದಲ್ಲಿ 28.11.1907 ರಂದು ಜನಿಸಿದರು. ಯಾವುದೇ ಪೂರ್ವಭಾವಿ ಶಾಲಾಶಿಕ್ಷಣ ಕೈಗೊಳ್ಳದೆ ಚಿತ್ರಕಲೆಯ ಇಂಟರ್‍ಮೀಡಿಯಟ್ ಗ್ರೇಡ್ ಪರೀಕ್ಷೆ ಉತ್ತೀರ್ಣರಾಗಿ ಚಿಕ್ಕೋಡಿಯ ಆರ್.ಡಿ.ಎ.ವಿ ಶಾಲೆಯಲ್ಲಿ ಡ್ರಾಯಿಂಗ್ ಶಿಕ್ಷಕರಾಗಿ ನೇಮಕವಾದರು. ನಂತರ ಮುಂಬಯಿಯ ಜೆ.ಜೆ.ಕಲಾಶಾಲೆಯಿಂದ ಡ್ರಾಯಿಂಗ್ ಶಿಕ್ಷಕರ ತರಬೇತಿ (1928) ಹಾಗೂ ಆರ್ಟ್ ಮಾಸ್ಟರ್ ಪದವಿ (1936) ಯನ್ನು ಮುಂಬಯಿ ಪ್ರಾಂತ್ಯಕ್ಕೇ ಪ್ರಥಮ ಶ್ರೇಣಿಯಲ್ಲಿ ಪಡೆದರು. ಅಂದಿನ ಉತ್ತರ ಕರ್ನಾಟಕ ಭಾಗದ (ಮುಂದೆ ಹೆಸರಾಂತ) ಅನೇಕ ಕಲಾವಿದರು ಇವರೊಂದಿಗೆ ಮುಂಬಯಿಯಲ್ಲಿ ಅಭ್ಯಸಿಸುತ್ತಿದ್ದರು. ನೂತನ ಕಲಾ ಮಂದಿರದ ದಂಡಾವತಿಮಠರೂ ಸೇರಿದಂತೆ ಎಂ.ವಿ.ಮಿಣಜಿಗಿ, ಡಿ.ಜಿ.ಬಡಿಗೇರ, ಎಂ.ಎ.ಚೆಟ್ಟಿ, ಕಮಡೋಳಿ ಮುಂತಾ ದವರು ಹಿರಿಯ-ಕಿರಿಯ ಶ್ರೇಣಿಯಲ್ಲಿದ್ದು ಕನ್ನಡ ಭಾಷಿಕ ಕಲಾವಿದರೆಲ್ಲ ಒಟ್ಟಾಗಿ ಒಂದೇ ಎಡೆ ವಾಸಿಸುತ್ತಿದ್ದು ಪರಸ್ಪರ ಕಲಾಚಿಂತನೆ ನಡೆಸುತ್ತಿದ್ದರು. ಜೆ.ಜೆ.ಶಾಲೆಯ ಮುಖ್ಯಸ್ಥ ಗ್ಲಾಡ್‍ಸ್ಟನ್ ಸಾಲೋಮನ್ ಅವರಿಗೆ ಅಂದಿನ ಕನ್ನಡ ನಾಡಿನ ಕಲವಿದರ ಬಗ್ಗೆ ಗೌರವಾದರ ಭರವಸೆಗಳು ಇದ್ದು ದೆಹಲಿಯ ಪಾರ್ಲಿಮೆಂಟ್ ಭವ£ ಇತ್ಯಾದಿ ಕಡೆಗಳಲ್ಲಿ ಕಲಾಕೃತಿ ರಚನೆಗಾಗಿ ಹಾಲಭಾವಿಯವರೂ ಸೇರಿದಂತೆ ಕನ್ನಡ ಕಲಾವಿದರನ್ನು ಆಯ್ಕೆಮಾಡಿ ಕಳಿಸುತ್ತಿದ್ದರು. ಮುಂದೆ ಹಾಲಭಾವಿಯವರು ತಮ್ಮ ಐವತ್ತನೇ ವರ್ಷದಲ್ಲಿ ಮೆಟ್ರಿಕ್ ಹಾಗೂ ನಂತರ ಸ್ನಾತಕ ಪದವಿ ಪಡೆದರು. ಆದರೆ ಆ ವೇಳೆಗಾಗಲೇ ಉತ್ತರ ಕರ್ನಾಟಕದ ಪ್ರಪ್ರಥಮ ಕಲಾಶಾಲೆಯನ್ನು ಧಾರವಾಡದಲ್ಲಿ 10.6.1935ರಲ್ಲಿ ಆರಂಭಿಸಿದರು. ಕೆಲಕಾಲ ಶಾಲೆ ವಿದ್ಯಾವರ್ಧಕ ಸಂಸ್ಥೆಯಲ್ಲಿದ್ದು ನಂತರ 1940ರಲ್ಲಿ ಚಿತ್ರಕಲಾಭ್ಯಾಸಕ್ಕೆಂದೇ ವಿಶೇಷವಾಗಿ ರೂಪಿಸಿರುವಂತೆ ಇಂದಿಗೂ ಯಶಸ್ವಿಯಾಗಿ ನಡೆಯುತ್ತಿರುವ ಕಟ್ಟಡದಲ್ಲಿ ಶಾಲೆ ನಡೆಯಲಾರಂಭಿಸಿತು. 1962ರಲ್ಲಿ ಶಾಲೆಯ ಬೆಳ್ಳಿಹಬ್ಬವನ್ನು 1995ರಲ್ಲಿ ವಜ್ರ ಮಹೋತ್ಸವವನ್ನೂ ಆಚರಿಸಿದ್ದು, ನೆನಪಿನ ಸಂಚಿಕೆಗಳನ್ನು ಹೊರತರಲಾಯಿತು. ಅಂದಿಗೆ ಶಾಲೆ ಮುಂಬಯಿ ಕರ್ನಾಟಕ ಪ್ರಾಂತದಲ್ಲಿದ್ದುದರಿಂದ ಜೆ.ಜೆ.ಕಲಾಶಾಲೆಯಿಂದ ಮಾನ್ಯತೆ ಪಡೆದಿದ್ದು ಕಲಾಶಾಲೆಯ ಮೂಲಕ ಜೆ.ಜೆ.ಯಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಿತ್ತು.

ಹಾಲಭಾವಿಯವರ ಕೃತಿಗಳ ನಿರ್ದಿಷ್ಟವಾದ ಪ್ರಕಾರಗಳಿಗೆ ಸೇರಿದ್ದಲ್ಲವಾದರೂ ಜೆ.ಜೆ.ಶಾಲೆಯ ಪ್ರಭಾವ ದಿಂದಾಗಿ ಅಂದಿಗೆ ಅಭಿವ್ಯಕ್ತಿ ಪಂಥ (ಇಂಪ್ರೆಷನ್-ಇಸಂ) ಎನ್ನಬಹುದಾದ ಶೈಲಿಗೆ ಸೇರಬಹುದಾದವು, ಅವರ ಕೃತಿಗಳಲ್ಲಿ ಪ್ರಕೃತಿ ದೃಶ್ಯಗಳು ಹೆಚ್ಚಾಗಿದ್ದರೂ ಭಾವಚಿತ್ರ, ಸಂಯೋಜಿತ ಚಿತ್ರ, ಸ್ಟಿಲ್‍ಲೈಫ್ ಕೃತಿಗಳೂ ಇವೆ. ವಿದ್ಯಾರ್ಥಿ ಗಳಿಗೆ ಪ್ರಾತ್ಯಕ್ಷಿಕೆಗಾಗಿ ರಚಿಸಿರುವ ಕೃತಿಗಳೂ ಅಧಿಕ ಸಂಖ್ಯೆಯಲ್ಲಿವೆ. ಬೇಡಿಕೆಗಾಗಿ ರಚಿಸಿದ ಕೃತಿಗಳಲ್ಲಿ ಧಾರವಾಡದ ಲಿಂಗಾಯತರ ಅಭಿವೃದ್ಧಿ ಸಂಸ್ಥೆಗೆ ಚೆನ್ನಬಸವ ಪುರಾಣದ ಕೃತಿಗಳಲ್ಲದೆ ಬಸವೇಶ್ವರ, ಅಲ್ಲಮ, ಗೋರಖನಾಥ ಮುಂತಾದ ಶಿವಭಕ್ತರ ಶರಣರ, ಸಿದ್ಧರ ದೇವತೆಗಳು ಚಿತ್ರಗಳು, ಶಬರಶಂಕರ ವಿಳಾಸ ಇವೇ ಮುಂತಾದ ಹಲವಾರು ಸಂಯೋಜನಾ ಚಿತ್ರಗಳನ್ನು ಉದಾಹರಿಸಬಹುದು.

ಶ್ರೀಲಂಕಾ, ಕೇರಳಗಳಿಂದ ಹಿಡಿದು ಮಹಾರಾಷ್ಟ್ರ, ದೆಹಲಿ, ಪಂಜಾಬಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಅಲ್ಲಿಯ ಪ್ರಕೃತಿದೃಶ್ಯಗಳನ್ನು ಚಿತ್ರಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಕರ್ನಾಟಕದಾದ್ಯಂತ ಶೈಕ್ಷಣಿಕ ಪ್ರವಾಸಗಳನ್ನು ನಿಯಮಿತವಾಗಿ ಕೈಗೊಂಡು ಸ್ಥಳದಲ್ಲಿಯೇ ಪ್ರಕೃತಿದೃಶ್ಯ ರಚನೆಯ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಹಾಲಭಾವಿ ಯವರು ಮಾರಾಟಕ್ಕೆಂದೇ ಚಿತ್ರ ರೂಪಿಸದೇ ಹೋದರೂ, ಯಾದಗಿರಿಯ ಪ್ರಕೃತಿದೃಶ್ಯ ಹಾಗೂ ರೈತರ ಜೀವನದ 30 ಚಿತ್ರಗಳು ಅಮೆರಿಕೆಯಲ್ಲಿ, ಗೊಳಗುಮ್ಮಟದ ದೃಶ್ಯ ಇಂಗ್ಲೆಂಡ್‍ನಲ್ಲಿ, ಹಂಪಿಯ ಕಲ್ಲಿನ ರಥದ ಚಿತ್ರ, ಸ್ವೀಡನ್‍ನಲ್ಲಿ, ಲಮಾಣಿಯ ಭಾವಚಿತ್ರ ಹಾಲೆಂಡ್, ಮೀನುಮಾರುವವರ ಚಿತ್ರಣ ಫ್ರಾನ್ಸ್‍ನಲ್ಲಿ, ಹಂಪಿಯ ಕಮಲಮಹಲ್‍ನ ದೃಶ್ಯ ಜಪಾನಿನಲ್ಲಿ ಸಂಗ್ರಹಿತವಾಗಿವೆ. ಧಾರವಾಡ, ಬೆಂಗಳೂರು, ಲಖನೌ, ಮುಂಬಯಿ, ದೆಹಲಿ ಕೋಲ್ಕತ್ತಾ, ಚೆನ್ನೈ ಇತ್ಯಾದಿ ಕಡೆಗಳಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನ ಮಾಡಿದ್ದರು. ಭಾವಚಿತ್ರ ರಚನೆಯಲ್ಲಿ ಅನೇಕ ಹಿರಿಯ ಚೇತನಗಳನ್ನು ಜೀವಂತಗೊಳಿಸಿದ್ದಾರೆ. ಮಟಮುರಿ ರಾಜ ಲಖಮನಗೌಡರು, ಮಹದೇವ ದೇಸಾಯಿ, ಮಹಾತ್ಮಗಾಂಧಿ, ಬಿ.ಡಿ.ಜತ್ತಿ, ಡೆಪ್ಯುಟಿ, ಚೆನ್ನಬಸಪ್ಪ, ರೊದ್ದ ಶ್ರೀನಿವಾಸ್, ಡಿ.ಸಿ.ಪಾವಟೆ, ಎ.ಎಮ್.ಥಾಮಸ್, ಮುಂತಾದವರ ಭಾವಚಿತ್ರಗಳು ಪ್ರಮುಖ ಕಾರ್ಯಾಲಯಗಳಲ್ಲಿವೆ.

ಹಾಲಭಾವಿಯವರು ಬರಹಗಾರರೂ ಆಗಿದ್ದು ಶ್ರೀಲಂಕಾ ಯಾತ್ರೆಯ ಬಗ್ಗೆ ಸಚಿತ್ರ ಪುಸ್ತಿಕೆಯಲ್ಲದೆ ತಮ್ಮ ಸಮಕಾಲೀನ ಕಲಾವಿದರ ವ್ಯಕ್ತಿ ಚಿತ್ರಗಳನ್ನು ಸಂಗ್ರಹ `ಮೈ ಕಾಂಟೆಮ್‍ಪ್ರೆರಿ ಆರ್ಟಿಸ್ಟ್, ಎಂಬ ಕಿರು ಪುಸ್ತಕ ರಚಿಸಿದ್ದಾರೆ. `ಆರ್ಟ್ ಗಿಲ್ಡ್ ಎಂಬ ಹೆಸರಿನಲ್ಲಿ ನಿಯತಕಾಲಿಕೆಯೊಂದನ್ನು ಹಲವು ವರ್ಷ ಪ್ರಕಟಿಸಿದರು. ಧಾರವಾಡದಲ್ಲಿ ಕರ್ನಾಟಕ ಆರ್ಟ್ ಸೊಸೈಟಿ ಸ್ಥಾಪನೆಮಾಡಿ, ಕಲಾಪ್ರದರ್ಶನಗಳನ್ನು ನೀಡಿ ಜನಸಾಮಾನ್ಯರಿಗೆ ಕಲೆಯ ಪರಿಚಯಮಾಡಿಸಲು ನೆರವಾಗಿದ್ದಾರೆ. ಶ್ರೀಯುತರಿಗೆ ಅನೇಕ ಸಂಘ ಸಂಸ್ಥೆಗಳು `ಕಲಾ ಬಳ್ಳಿ `ಕಲಾಗುರು `ಕಲಾಶರಣ', `ಕುಂಚ ಬ್ರಹ್ಮ `ಕಲಾತಪಸ್ವಿ ಇತ್ಯಾದಿ ಬಿರುದುಗಳನ್ನು ನೀಡಿ ಸನ್ಮಾನಿಸಿವೆ. ರಾಜ್ಯ ಅಕಾಡೆಮಿಯಿಂದ 1968ರಲ್ಲಿ ರಾಜ್ಯ ಪ್ರಶಸ್ತಿ 1995ರಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಮುಂತಾದುವು ದೊರೆತಿವೆ. ಧಾರವಾಡದ ಹಲವಾರು ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಬಂಧವಿರಿಸಿಕೊಂಡಿದ್ದ ಹಾಲಭಾವಿಯವರು ತೊಂಬತ್ತುವರ್ಷಗಳ ಪೂರ್ಣ ಜೀವನ ನಡೆಸಿ 26.12.1997ರಂದು ನಿಧನರಾದರು.