ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಲಿನ್ಷಿಡ್, ರ್ಯಾಫೆಲ್

ಹಾಲಿನ್‍ಷಿಡ್, ರ್ಯಾಫೆಲ್ ?-1580. ಇಂಗ್ಲೆಂಡಿನ ಇತಿಹಾಸ ಬರೆಹಗಾರ. ಪ್ರಾಯಃ ಷೆಫೈರ್‍ನಲ್ಲಿ ಹುಟ್ಟಿದ. ಲಂಡನ್‍ನಲ್ಲಿ ರೆಜಿನಲ್ಡ್ ವುಲ್ಫ್ ಎಂಬ ಜರ್ಮನ್ ಮುದ್ರಣಕಾರನ ಬಳಿ ಅನುವಾದಕನಾಗಿ ಕೆಲಸಕ್ಕೆ ಸೇರಿದ. ಜಾನ್‍ಲಿಲೆಂಡ್ (1506_52) ಎಂಬಾತ ಶೇಖರಿಸಿದ ಸಾಮಗ್ರಿಯನ್ನು ಬಳಸಿಕೊಂಡು “ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡಿನ ವೃತ್ತಾಂತಗಳು” (1578) ಎಂಬ ಕೃತಿಯನ್ನು ರಚಿಸಿದ (ಕ್ರಾನಿಕಲ್ಸ್). ಹಾಲಿನ್‍ಷಿಡ್‍ನ ವೃತ್ತಾಂತಗಳು ಎಂಬ ಹೆಸರಿನಲ್ಲಿಯೂ ಈ ಕೃತಿ ಪ್ರಸಿದ್ಧವಾಗಿದೆ. ಇದರಲ್ಲಿ ಕೆಲವು ಭಾಗಗಳನ್ನು ಇತರರು ಬರೆದರು. ನೊವಾನ ಯುಗದಿಂದ ಸಮಕಾಲೀನ ಯುಗದವರೆಗಿನ ಚರಿತ್ರೆ ಇದರ ವಸ್ತು. ತಾನು ಬಳಸುವ ಅಂಶಗಳ ಮೂಲವನ್ನು ಸೂಚಿಸಿ ವಿಪುಲವಾದ ಸಾಮಗ್ರಿಯನ್ನು ನೀಡುವ ಈ ಕೃತಿ ಜನಪ್ರಿಯವಾಯಿತು. ಸ್ಪೆನ್ಸರ್‍ನನ್ನೊಳಗೊಂಡು ಅನೇಕ ಇಂಗ್ಲಿಷ್ ಸಾಹಿತಿಗಳು ಈ ಕೃತಿಯ ಸಾಮಗ್ರಿಯನ್ನು ತಮ್ಮ ಕೃತಿಗಳಿಗೆ ಆಕರವಾಗಿ ಬಳಸಿಕೊಂಡರು. ವಿಲಿಯಮ್ ಷೇಕ್‍ಸ್ಪಿಯರ್‍ನ ಐತಿಹಾಸಿಕ ನಾಟಕಗಳಿಗೆ ಈ ಗ್ರಂಥ ಮೂಲ ಸಾಮಗ್ರಿಯನ್ನು ಒದಗಿಸಿದೆ. ಪ್ರಾಟೆಸ್ಟೆಂಟ್ ದೃಷ್ಟಿಕೋನದಿಂದ ಪ್ರಭಾವಿತವಾಗಿ ರಚಿತವಾದ ಚಾರಿತ್ರಿಕ ಗ್ರಂಥವಿದು. ಶೈಲಿಯಲ್ಲಿ ಅಲ್ಲಲ್ಲಿ ಆಲಂಕಾರಿಕ ಪದಗಳ ಮೋಹ ಕಂಡುಬಂದರೂ ಸ್ಪಷ್ಟತೆಯನ್ನು ಗುರುತಿಸಬಹುದಾಗಿದೆ. (ಎಲ್.ಎಸ್.ಎಸ್.)