ಹಾಲೆಂಡ್ ಪಶ್ಚಿಮ ಯುರೋಪಿನ ಉತ್ತರದಲ್ಲಿರುವ ನೆದರ್ಲೆಂಡ್ಸ್ ಸಂವಿಧಾನಬದ್ಧ ರಾಜ ಪ್ರಭುತ್ವವುಳ್ಳ ದೇಶದ ಒಂದು ಪ್ರಾಂತ್ಯ. ದೇಶದ ಪಶ್ಚಿಮ ಮಧ್ಯಭಾಗದಲ್ಲಿರುವ ಈ ಪ್ರಾಂತ್ಯ ಮೊದಲು ಪವಿತ್ರ ರೋಮನ್ ಸಾಮ್ರಾಜ್ಯಕ್ಕೆ ಸೇರಿತ್ತು. ಅನಂತರ ನೆದರ್ಲೆಂಡ್ಸ್‍ನ ಏಳು ಪ್ರಾಂತ್ಯದ ಸಂಯುಕ್ತ ಗಣರಾಜ್ಯದಲ್ಲಿ ಒಂದಾಗಿ ಹಾಲೆಂಡ್ ಸೇರಿತ್ತು(1581-1795). ಹಾಲೆಂಡನ್ನು ಉತ್ತರ, ದಕ್ಷಿಣ ಪ್ರಾಂತ್ಯಗಳನ್ನಾಗಿ ವಿಂಗಡಿಸಿದ್ದಾರೆ (1840). ಉತ್ತರ ಹಾಲೆಂಡನ್ನು ನೂರ್ಡ್ ಹಾಲೆಂಡ್ ಎಂದೂ ದಕ್ಷಿಣ ಹಾಲೆಂಡ್‍ನ್ನು ಜûೂಯಿದ್ ಹಾಲೆಂಡ್ ಎಂದೂ ಕರೆಯುತ್ತಾರೆ.

ಜರ್ಮನಿ ಮತ್ತು ಬೆಲ್ಜಿಯಮ್ ದೇಶಗಳಿಂದ ಸುತ್ತುವರಿಯಲ್ಪಟ್ಟ ನೆದರ್ಲೆಂಡ್ ವಾಯವ್ಯ ಯುರೋಪಿನಲ್ಲಿರುವ ಉತ್ತರ ಸಾಗರ ತೀರದಲ್ಲಿ ಕಂಡುಬರುವ ಒಂದು ಚಿಕ್ಕ ದೇಶ. ಹಾಲೆಂಡ್ ಹೆಸರು ದೇಶದ ಪಶ್ಚಿಮ ಭಾಗಕ್ಕೆ ಮಾತ್ರ ಅನ್ವಯಿಸುತ್ತದೆ. ಇಲ್ಲಿ ವಾಸಿಸುವ ಜನರು ಡಚ್ಚರು. ದೇವರು ಪ್ರಪಂಚವನ್ನು ಸೃಷ್ಟಿಸಿದ, ಆದರೆ ಹಾಲೆಂಡನ್ನು ಡಚ್ಚರು ಸೃಷ್ಟಿಸಿದರು ಎಂಬ ಡಚ್ ನುಡಿ ಇದೆ. ಒಂದು ಕಾಲದಲ್ಲಿ ದೇಶದ 2/5 ಭಾಗ ಭೂ ಪ್ರದೇಶ ಸಮುದ್ರ ಅಥವಾ ಸರೋವರಗಳಿಂದ ಆವರಿಸಿತ್ತು. ಡಚ್ಚರು ಈ ನೀರನ್ನು ಪಂಪ್ ಮೂಲಕ ಹೊರಹಾಕಿ, ಕಟ್ಟೆ ಕಟ್ಟಿ ಭೂಮಿಯನ್ನು ನೀರಿನಿಂದ ತೆರವು ಮಾಡಿದರು. ಈ ಭೂ ಭಾಗವನ್ನು ಪೋಲ್ಡರ್ಸ್ ಎಂದು ಕರೆಯುತ್ತಾರೆ. ಇದು ನೆದರ್ಲೆಂಡಿನ ಅತ್ಯಂತ ಫಲವತ್ತಾದ ಕೃಷಿ ಭೂಮಿಯಾಗಿದೆ. ಹಾಲೆಂಡಿನ ಕೆಲವು ಭೂ ಪ್ರದೇಶಗಳು ಸಮುದ್ರಮಟ್ಟಕ್ಕಿಂತ ಕೆಳಗಿದೆ. 1932ರಲ್ಲಿ ನಿರ್ಮಿಸಲಾದ 32 ಕಿಮೀ ಉದ್ದದ ದಂಡೆ ಉತ್ತರ ಸಾಗರದಿಂದ ದೇಶದೊಳಕ್ಕೆ ನುಗ್ಗುತ್ತಿದ್ದ ಸಮುದ್ರದ ನೀರಿಗೆ ತಡೆಯೊಡ್ಡಿತು. ಅನೇಕ ಸಿಹಿ ನೀರಿನ ಸರೋವರಗಳನ್ನು ನಿರ್ಮಿಸಲಾಯಿತು. ಇದನ್ನು ಐಸೆಲ್‍ಮೀರ್ ಎಂದು ಕರೆಯುತ್ತಾರೆ. ಇವು ಸುಮಾರು 1650 ಚ.ಕಿಮೀ ಭೂ ಪ್ರದೇಶಕ್ಕೆ ನೀರೊದಗಿಸುವುದರ ಜೊತೆಗೆ ಅನೇಕ ನಗರಗಳಿಗೆ ನೀರನ್ನು ಪೂರೈಸುತ್ತವೆ. ಇದು ಪ್ರಪಂಚದ ಅತ್ಯಂತ ಜನಭರಿತ ರಾಷ್ಟ್ರಗಳಲ್ಲೊಂದಾಗಿದೆ.

1795ರಲ್ಲಿ ಫ್ರೆಂಚರು ನೆದರ್ಲೆಂಡನ್ನು ವಶಪಡಿಸಿಕೊಂಡು ಆಮ್‍ಸ್ಟರ್‍ಡ್ಯಾಮನ್ನು ರಾಜಧಾನಿಯನ್ನಾಗಿ ಮಾಡಿದರು. 1815ರಲ್ಲಿ ಸ್ವಾತಂತ್ರ್ಯ ಪಡೆದು ಬೆಲ್ಜಿಯಮ್ ದೇಶದೊಡನೆ ವಿಲೀನಗೊಂಡಿತು. 1830ರಲ್ಲಿ ಮತ್ತೆ ಬೆಲ್ಜಿಯಮ್‍ನಿಂದ ನೆದರ್ಲೆಂಡ್ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಯಿತು. ಈ ದೇಶವನ್ನು ರೋಮನರು, ಜರ್ಮನರು, ಸ್ಪೇನ್ ಹಾಗೂ ಫ್ರೆಂಚರು ಬಹಳ ವರ್ಷಗಳವರೆಗೆ ಆಳಿದರು. ಹಾಲೆಂಡಿನ ಆರ್ಥಿಕ ಸ್ಥಿತಿ ಫ್ರೆಂಚರ ಕಾಲದಲ್ಲಿ ಕೆಟ್ಟಿತು. ಆದರೆ 1876 ರಲ್ಲಿ ನಿರ್ಮಾಣಗೊಂಡ ಉತ್ತರ ಸಾಗರದ ಕಾಲುವೆಯಿಂದಾಗಿ ವ್ಯಾಪಾರ-ವಹಿವಾಟು ವೃದ್ಧಿಯಾಯಿತು. ಮತ್ತೆ ಎರಡನೆಯ ಮಹಾಯುದ್ಧದಿಂದಾಗಿ ಆಮ್‍ಸ್ಟರ್‍ಡ್ಯಾಮ್‍ನ ಜನರು ತತ್ತರಿಸಿಹೋದರು (1939-45). ಜರ್ಮನಿ ಪಡೆಗಳು ಇಲ್ಲಿ ನಡೆಸಿದ ಸೈನಿಕರ ಹಾಗೂ ಕೈದಿಗಳ ಕಾನ್‍ಸೆಂಟ್ರೇಷನ್ ಕ್ಯಾಂಪ್‍ನಲ್ಲಿ ಬಹುಪಾಲು ಯೆಹೂದಿಗಳು ಸಾವನ್ನಪ್ಪಿದರು.

ಉತ್ತರ ಹಾಲೆಂಡ್ ನೆದರ್ಲೆಂಡಿನ ವಾಯವ್ಯ ಭಾಗದಲ್ಲಿದೆ. ಇದರ ರಾಜಧಾನಿ ಹಾರ್ಲೆಮ್. ಇತರ ಪಟ್ಟಣಗಳೆಂದರೆ ದೇಶದ ರಾಜಧಾನಿಯಾದ ಆಮ್‍ಸ್ಟರ್‍ಡ್ಯಾಮ್, ಜಾನ್‍ಡಮ್, ಹಿಲ್‍ವಿರ್‍ಸಮ್, ಅಲಕ್‍ಮಾರ್, ಡೆನ್‍ಹೆಲ್ಡರ್, ಉತ್ತರ ಹಾಲೆಂಡ್, ಉತ್ತರ ಸಮುದ್ರ ಮತ್ತು ಐಸೆಲ್‍ಮಿರ್ ನಡುವಿನ ಒಂದು ಪರ್ಯಾಯ ದ್ವೀಪ. ಈ ಪ್ರಾಂತ್ಯದ ಅರ್ಧಭಾಗ ಕೃಷಿಗೆ ಯೋಗ್ಯವಾಗಿದ್ದು, ಸಮುದ್ರ ಮಟ್ಟಕ್ಕಿಂತ ಕೆಳಗಿದೆ. ಟೆಕ್ಸೆಲ್ ದ್ವೀಪ ಉತ್ತರ ಹಾಲೆಂಡಿನ ಒಂದು ಭಾಗವಾಗಿದೆ.

ದಕ್ಷಿಣ ಹಾಲೆಂಡನ್ನು ಡಚ್ ಭಾಷೆಯಲ್ಲಿ ಜûುಯಿಡ್ ಹಾಲೆಂಡ್ ಅಂತಲೂ ಕರೆಯುತ್ತಾರೆ. ಇದು ನೆದರ್ಲೆಂಡಿನ ಪಶ್ಚಿಮ ಭಾಗದಲ್ಲಿರುವ ಉತ್ತರ ಸಾಗರ ತೀರದಲ್ಲಿದೆ. ಹೆಚ್ಚು ಜನಸಾಂದ್ರತೆಯಿಂದ ಕೂಡಿದ ಕೈಗಾರಿಕಾ ಪ್ರಾಂತ್ಯವಾಗಿದೆ. ಇದು ನೈಋತ್ಯದಲ್ಲಿ ಜಿûೀಲೆಂಡ್, ಆಗ್ನೇಯದಲ್ಲಿ ಉತ್ತರ ಬ್ರಬಾಂಟ್, ಪೂರ್ವಕ್ಕೆ ಯೂಟ್ರೆಕ್ಟ್ ಮತ್ತು ಉತ್ತರದಲ್ಲಿ ಉತ್ತರ ಹಾಲೆಂಡನ್ನೊಳಗೊಂಡಿದೆ. ದಿ ಹೇಗ್, ರಾಟರ್‍ಡ್ಯಾಮ್, ಲೆಡನ್, ಡೆಲ್ಫ ಮತ್ತು ಗೌವ್ದ್ ಪಟ್ಟಣಗಳು. ಇಲ್ಲಿ 17ನೆಯ ಶತಮಾನದ ಕೆಲವು ಕಟ್ಟಡಗಳಿವೆ. ನ್ಯೂವೆಮಾಸ್, ವಾಟರ್‍ವೆಗ್, ಒಡಿಮಾಸ್, ಹರಿಂಗ್‍ವೆಲಿಟ್ ಮತ್ತು ಹಾಲೆಂಡ್ ಡಿಪ್ ಇವು ಹಾಲೆಂಡಿನ ಮುಖ್ಯ ನದಿಗಳು.

ಹಾಲೆಂಡ್ ಎಂಬ ಪದ ಹಾಲ್ಟ್‍ಲೆಂಡ್‍ನಿಂದ ವ್ಯುತ್ಪತ್ತಿಯಾಗಿದೆ. ಇಲ್ಲಿ ಸಮುದ್ರ ಮಟ್ಟಕ್ಕಿಂತ ತಗ್ಗಿನಲ್ಲಿರುವ ಪಟ್ಟಣಗಳಲ್ಲಿ ಕಟ್ಟಡಗಳನ್ನು ಕಾಂಕ್ರೀಟ್ ಅಥವಾ ಮರದ ದಿಮ್ಮಿಗಳ ಮೇಲೆ ಕಟ್ಟುವರು. ಇದು ಹಾಲೆಂಡ್‍ನ ಸಮಸ್ಯೆಗಳಲ್ಲೊಂದಾಗಿದೆ. ರಾಜಧಾನಿ ಆಮ್‍ಸ್ಟರ್‍ಡ್ಯಾಮ್ 1200 ರಲ್ಲಿ ಒಂದು ಸಣ್ಣ ಹಳ್ಳಿಯಾಗಿತ್ತು. ಆಮ್‍ಸ್ಟೆಲ್ ನದಿಗೆ ಅಣೆಕಟ್ಟು ಕಟ್ಟಲಾಗಿ ಇದಕ್ಕೆ ಆಮ್‍ಸ್ಟರ್‍ಡ್ಯಾಮ್ ಎಂಬ ಹೆಸರು ಬಂತು. 1580 ರಿಂದ ಸು. 100 ವರ್ಷಗಳಲ್ಲಿ ಸಾವಿರಾರು ರಾಜಕೀಯ ಹಾಗೂ ಧಾರ್ಮಿಕ ನಿರಾಶ್ರಿತರು, ಉಚ್ಚಾಟನೆಗೊಂಡ ಪೋರ್ಚುಗಲ್ ಯೆಹೂದಿಗಳು ಇಲ್ಲಿ ನೆಲೆಸಿದರು. ಬೆಲ್ಜಿಯಮ್ ದೇಶದ ಅಂಟ್‍ವೆರ್ಪ್‍ನ ಪ್ರಾಟೆಸ್ಟಂಟ್ ವ್ಯಾಪಾರಿಗಳು ಅನೇಕ ಕೈಗಾರಿಕೆಗಳನ್ನು ಬೇರೆ ದೇಶಗಳೊಂದಿಗೆ ಸೇರಿ ಅಭಿವೃದ್ಧಿಪಡಿಸಿಕೊಂಡರು. ಇದರಿಂದಾಗಿ ಅಮೆರಿಕ, ಆಫ್ರಿಕ ಹಾಗೂ ಈಸ್ಟ್ ಇಂಡಿಸ್‍ನೊಂದಿಗೆ ವ್ಯಾಪಾರ ಸಂಬಂಧ ಬೆಳೆಯುವುದರ ಜೊತೆಗೆ, 1600ರ ಹೊತ್ತಿಗೆ ಆಮ್‍ಸ್ಟರ್‍ಡ್ಯಾಮ್ ಯುರೋಪಿನಲ್ಲಿಯೇ ಒಂದು ಅತ್ಯಂತ ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಸಾಂಸ್ಕøತಿಕ ಕೇಂದ್ರವಾಯಿತು.

ಎರಡನೆಯ ಮಹಾಯುದ್ಧದ ಅನಂತರ ಉಂಟಾದ ವಸತಿ ಸಮಸ್ಯೆಯನ್ನು ನಿವಾರಿಸಲು ನೆದರ್ಲೆಂಡಿನ ಹೊರವಲಯದಲ್ಲೂ ಕಟ್ಟಡಗಳನ್ನು ನಿರ್ಮಾಣ ಮಾಡಬೇಕಾಯಿತು. ಹಾಗೆ 1970 ರಲ್ಲಿ ನಿರ್ಮಿಸಲಾದ ಬೃಹತ್ ವಸತಿ ಸಮುಚ್ಚಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಯಿತು.

ಹಾಲೆಂಡಿನ ಆರ್ಥಿಕತೆ ಮುಖ್ಯವಾಗಿ ಪ್ರವಾಸೋದ್ಯಮ, ಅಂತಾರಾಷ್ಟ್ರೀಯ ವಹಿವಾಟು, ಕೈಗಾರಿಕೆಗಳು, ಮತ್ಸ್ಯೋದ್ಯಮ, ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆ, ಆಹಾರ ಸಂರಕ್ಷಣೆ, ವಜ್ರದ ವ್ಯಾಪಾರ, ಹಡಗು ನಿರ್ಮಾಣ, ರಾಸಾಯನಿಕ ವಸ್ತುಗಳ ತಯಾರಿಕೆ ಮತ್ತು ಉಕ್ಕಿನ ಕಾರ್ಖಾನೆಗಳ ಮೇಲೆ ಅವಲಂಬಿತವಾಗಿದೆ. ಇಲ್ಲಿನ ಕಾಲುವೆಗಳು ಉತ್ತರ ಸಾಗರ ಮತ್ತು ರೈನ್ ಹಾಗೂ ಇತರೆ ನದಿಗಳು ಆಮ್ಸ್‍ಸ್ಟರ್‍ಡ್ಯಾಮ್‍ನ ಸಂಪರ್ಕ ಕೊಂಡಿಯಂತಿವೆ. ಇದು ಯುರೋಪಿನ ಮುಖ್ಯ ಸಂಚಾರ ಮಾರ್ಗವಾಗಿದೆ. ರಜಿಕ್ಸ್ ಮ್ಯೂಸಿಯಮ್, ಸ್ಪೆಡಿಲಿಕ್ ಮ್ಯೂಸಿಯಮ್ ಆಮ್‍ಸ್ಟರ್‍ಡ್ಯಾಮ್‍ನ ಮುಖ್ಯ ಸಾಂಸ್ಕøತಿಕ ಆಕರ್ಷಣೆಗಳಾಗಿವೆ. ಡಚ್ ಕಲೆಗಾರ ವ್ಯಾನ್‍ಗೋನ ಆಧುನಿಕ ಕಲೆಯ ಮ್ಯೂಸಿಯಮ್ ಪ್ರಪಂಚದಲ್ಲೇ ಪ್ರಮುಖವಾಗಿದೆ. ಇಲ್ಲಿ ಎರಡು ವಿಶ್ವವಿದ್ಯಾಲಯಗಳಿವೆ. ಇಲ್ಲಿಯ ಸಂಗೀತ ಅತ್ಯಂತ ಜನಪ್ರಿಯವಾದದ್ದು.

ದೇಶದ ಮುಖ್ಯ ಬೆಳೆಗಳಲ್ಲಿ ಬಾರ್ಲಿ, ಆಲೂಗೆಡ್ಡೆ, ಸಕ್ಕರೆ, ಬೀಟ್ ಮತ್ತು ಗೋದಿ ಮುಖ್ಯವಾದುವು. ಹಸಿರು ಮನೆಗಳಲ್ಲಿ ಹೂವು-ತರಕಾರಿಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಹೂವಿಗೆ ಪ್ರಪಂಚದಲ್ಲಿಯೇ ಹೆಚ್ಚಿನ ಬೇಡಿಕೆಯಿದ್ದು ವಿಮಾನದ ಮೂಲಕ ಯುರೋಪಿನ ಇತರ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಇಲ್ಲಿನ ಮುಖ್ಯ ರಫ್ತುಗಳಲ್ಲಿ ಕಾರು, ರಾಸಾಯನಿಕ ವಸ್ತುಗಳು, ಹಾಲಿನ ಉತ್ಪನ್ನಗಳು, ಹೂವು, ಮಾಂಸದ ಪದಾರ್ಥಗಳು, ಪೆಟ್ರೋಲಿಯಂ ಮತ್ತು ಪ್ಲಾಸ್ಟಿಕ್ ಸೇರಿವೆ. ಇದು ಕಬ್ಬಿಣ, ಉಕ್ಕು ಮತ್ತು ಇತರೇ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತದೆ.

(ಕೆ.ಆರ್.ಐ.)