ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಲೊಗ್ರಫಿ

ಹಾಲೊಗ್ರಫಿ - ಸಂಸಕ್ತ (ಕೊಹೆರೆಂಟ್) ಪ್ರಕಾಶರಶ್ಮಿಯ ನೆರವಿನಿಂದ, ಕ್ಯಾಮೆರಾ ಅಥವಾ ಮಸೂರ ಉಪಯೋಗಿಸದೆ, ಛಾಯಾಚಿತ್ರ ಫಲಕದ ಮೇಲೆ ಮೂರು ಆಯಾಮಗಳ ಚಿತ್ರ ದಾಖಲಿಸುವ ಹಾಗೂ ಪನರಪಿ ಪ್ರದರ್ಶಿಸುವ ವಿಧಾನ. ಇದರಲ್ಲಿ ಲೇಸರ್‍ನಿಂದ ಬರುವ (ಅಂದರೆ ಆಪಾತ) ಸಂಸಕ್ತ ಪ್ರಕಾಶದಂಡವನ್ನು ಅರೆಪಾರಕ ದರ್ಪಣ ಎರಡು ದಂಡಗಳಾಗಿ ವಿಭಜಿಸುತ್ತದೆ: ಸಂಜ್ಞಾಕಿರಣಪುಂಜ, ಮೂಲಕಿರಣಪುಂಜ. ಮೊದಲನೆಯದು, ಚಿತ್ರೀಕರಿಸಬೇಕಾದ ವಸ್ತುವಿನ ಮೇಲೆ ಬಿದ್ದು ಅದರಿಂದ ವಿವರ್ತನೆಗೊಂಡು (ಡಿಫ್ರ್ಯಾಕ್ಷನ್) ಛಾಯಾಚಿತ್ರ ಫಲಕದ ಮೇಲೆ ಬೀಳುತ್ತದೆ. ಎರಡನೆಯದು, ನೇರವಾಗಿ ಛಾಯಾಚಿತ್ರ ಫಲಕದ ಮೇಲೆಯೇ ಬೀಳುತ್ತದೆ. ಇವೆರಡೂ ಸೇರಿ ಛಾಯಾಚಿತ್ರ ಫಲಕದ ಮೇಲೆ ವ್ಯತಿಕರಣದ (ಇಂಟರ್‍ಫಿರೆನ್ಸ್) ಮೂಲಕ ಮೂರು ಆಯಾಮಗಳ ಚಿತ್ರ ದಾಖಲಿಸುತ್ತವೆ. ಇದನ್ನು ಸಂಸ್ಕರಿಸಿದಾಗ ದೊರೆಯುವುದೇ ಹಾಲೊಗ್ರಾಮ್ (ಹಾಲೊಗ್ರಫಿಯಿಂದ ದೊರೆಯುವ ಪ್ರತಿಬಿಂಬ). ಹಾಲೊಗ್ರಾಮಿನ ಮೇಲೆ ಮತ್ತೆ ಲೇಸರ್‍ನ ಮೂಲಕಿರಣಪುಂಜ ಕೆಡೆಯುವಂತೆ ಮಾಡಿದರೆ ಆಗ ಅದು ಮತ್ತೆ ಎರಡು ಭಾಗಗಳಾಗಿ ವಿವರ್ತನೆಗೊಂಡು ಒಂದು ಮೂಲಚಿತ್ರದ ಮಿಥ್ಯಾಬಿಂಬವನ್ನೂ ಇನ್ನೊಂದು ನೈಜಬಿಂಬವನ್ನೂ ಮೂಡಿಸುತ್ತದೆ. *