ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಲ್ಡೇನ್, ಜಾನ್ ಬರ್ಡ್ನ್ ಸ್ಯಾಂಡರ್ಸನ್

ಹಾಲ್ಡೇನ್, ಜಾನ್ ಬರ್ಡ್‍ನ್ ಸ್ಯಾಂಡರ್‍ಸನ್ 1892-1964. ತಳಿವಿಜ್ಞಾನ ಅಧ್ಯಯನಗಳಲ್ಲಿ ಗಣಿತೀಯ ವಿಶ್ಲೇಷಣ ತಂತ್ರ ಅನ್ವಯಿಸಿದ ಬ್ರಿಟಿಷ್ ಜೀವವಿಜ್ಞಾನಿ, ತಳಿವಿಜ್ಞಾನಿ. ಇಂಗ್ಲೆಂಡಿನ ಆಕ್ಸ್‍ಫರ್ಡ್‍ನಲ್ಲಿ ಸ್ಕಾಟ್ ಹಾಲ್ಡೇನ್‍ನ ಸಹಾಯಕನಾಗಿ ವಿಜ್ಞಾನಕ್ಷೇತ್ರ ಪ್ರವೇಶ. ಈಟನ್ ಮತ್ತು ಆಕ್ಸ್‍ಫರ್ಡ್‍ನಲ್ಲಿ ವಿದ್ಯಾಭ್ಯಾಸ. ವಿದ್ಯಾರ್ಥಿದೆಸೆಯಲ್ಲಿಯೇ ಜೀನ್ ಕುರಿತಾದ ಸಂಶೋಧನ ಪ್ರಬಂಧ ಪ್ರಕಟಿಸಿದ (1916) ಕೀರ್ತಿಭಾಜನ. ಮೊದಲನೆಯ ಜಾಗತಿಕ ಯುದ್ಧದಲ್ಲಿ ಸೈನಿಕನಾಗಿ ದೇಶಸೇವೆ (1914). ಆಕ್ಸ್‍ಫರ್ಡ್ (1919-22), ಕೇಂಬ್ರಿಜ್ (1922-33) ಮತ್ತು ಲಂಡನ್ (1933-57) ವಿಶ್ವವಿದ್ಯಾಲಯಗಳಲ್ಲಿ ಬೋಧಕ ವೃತ್ತಿ. ವೆಲ್ಡನ್ ಪ್ರೊಫೆಸರ್ ಆಫ್ ಜೆನೆಟಿಕ್ಸ್ ಆಗಿ ಆಯ್ಕೆ (1957). ಬ್ರಿಟಿಷ್ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯ ಹಾಗೂ ಅದರ ಮುಖವಾಣಿ ಡೇಯ್‍ಲಿ ವರ್ಕರ್‍ನ ಸಂಪಾದಕ ಮಂಡಲಿ ಅಧ್ಯಕ್ಷ. ಸೋವಿಯೆಟ್ ತಳಿವಿಜ್ಞಾನಿಗಳೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಪಕ್ಷಕ್ಕೆ ರಾಜೀನಾಮೆ (1950). ಸೂಯೆಜ್ ಕಾಲುವೆ ಕುರಿತಾದ ಬ್ರಿಟಿಷ್ ನೀತಿಯನ್ನು ವಿರೋಧಿಸಿ ಈಜಿಪ್ಟ್‍ನ ಮೇಲೆ ಧಾಳಿ ಮಾಡಿದ ಪಾತಕಿ ಹಾಗೂ ಪೋಲೀಸ್ ರಾಷ್ಟ್ರದಲ್ಲಿ ವಾಸ ಮಾಡುವುದಿಲ್ಲ ಎಂದು ಭಾರತಕ್ಕೆ ವಲಸೆ (1957). ಕೋಲ್ಕತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್ ಸೇರಿ ಸಂಶೋಧನೆ ಮುಂದುವರಿಕೆ. ಭುವನೇಶ್ವರದ ಜೆನೆಟಿಕ್ಸ್ ಮತ್ತು ಬಯೊಮೆಟ್ರಿ ಪ್ರಯೋಗಾಲಯದ ಸ್ಥಾಪಕ ನಿರ್ದೇಶಕ.

ಪಾಪ್ಯುಲೇಶನ್ ಜೆನೆಟಿಕ್ಸ್ ಎಂಬ ವಿಜ್ಞಾನಶಾಖೆಯನ್ನು ಹುಟ್ಟುಹಾಕಿದ್ದು; ಮಾನವದೇಹ ಎಷ್ಟು ಪೀಡನೆಯನ್ನು (ಸ್ಟ್ರೆಸ್) ತಾಳಿಕೊಳ್ಳುತ್ತದೆ ಎಂಬ ಕುರಿತು ತನ್ನ ಮೇಲೆ ತಾನೇ ಭಯಂಕರ ಪ್ರಯೋಗಗಳನ್ನು ಮಾಡಿಕೊಂಡದ್ದು; ಮೆಂಡೆಲಿಯನ್ ತಳಿವಿಜ್ಞಾನದ ಗಣಿತೀಯ ಪರಿಣಾಮಗಳ ಪರಿಭಾಷೆಯಲ್ಲಿ ನೈಸರ್ಗಿಕ ಆಯ್ಕೆ ತಂತ್ರತೆಯನ್ನು ವಿವರಿಸಿದ್ದು; ಹಾಲ್ಡೇನ್ ತತ್ವ ಎಂದೇ ಖ್ಯಾತವಾಗಿರುವ ಪ್ರಾಣಿದೇಹದಲ್ಲಿ ಇರಬೇಕಾದ ಅಂಗವ್ಯೂಹಗಳನ್ನು ಅದರ ಗಾತ್ರವೇ ನಿರ್ಧರಿಸುತ್ತದೆ ಎಂಬ ತತ್ವ ಪ್ರತಿಪಾದಿಸಿದ್ದು; ಕ್ರೋಮೊಸೋಮ್‍ಗಳಿಗೂ ಕೆಲವು ದೃಷ್ಟಿದೋಷಗಳಿಗೂ ಇರುವ ಸಂಬಂಧ ಪತ್ತೆಹಚ್ಚಿದ್ದು ಈತನ ವಿಶಿಷ್ಟ ಸಾಧನೆಗಳು.

ದಿ ಕಾಸಸ್ ಆಫ್ ಎವಲ್ಯೂಷನ್ ಈತನ ಖ್ಯಾತ ಕೃತಿ (1932). ಸೈನ್ಸ್ ಅ್ಯಂಡ್ ದಿ ಫ್ಯೂಚರ್ (1923), ಆ್ಯನಿಮಲ್ ಬಯಾಲಜಿ (1927), ಜಾನ್ ಎಸ್. ಹಕ್‍ಸ್ಲೆಯೊಂದಿಗೆ), ನ್ಯೂ ಪಾತ್ಸ್ ಇನ್ ಜೆನೆಟಿಕ್ಸ್ (1941), ಬಯೋಕೆಮಿಸ್ಟ್ರಿ ಆಫ್ ಜೆನೆಟಿಕ್ಸ್ (1954) ಈತನ ಇತರ ಕೆಲವು ಕೃತಿಗಳು. ಮೈ ಫ್ರೆಂಡ್ ಮಿಸ್ಟರ್ ಲೀಕೀ ಈತನ ವೈಜ್ಞಾನಿಕ ಕಿರುಗತೆ. ಕ್ಲೋನ್ ಎಂಬ ಪದವನ್ನು ಬಯಲಾಜಿಕಲ್ ಪಾಸಿಬಿಲಿಟೀಸ್ ಫಾರ್ ದಿ ಹ್ಯೂಮನ್ ಸ್ಪೀಶೀಸ್ ಆಫ್ ದಿ ನೆಕ್ಸ್ಟ್ ಟೆನ್ ತೌಸಂಡ್ ಈಯರ್ಸ್ ಎಂಬ ಕೊನೆಯ ಭಾಷಣದಲ್ಲಿ (1963) ಟಂಕಿಸಿದ ಖ್ಯಾತಿಯೂ ಈತನಿಗೆ ಸಲ್ಲುತ್ತದೆ.

ಭಾರತೀಯ ಸಂಸ್ಕøತಿಯನ್ನು ಪ್ರೀತಿಸಿ ವೇದಾಂತಾಧ್ಯಯನ ಮಾಡಿದ್ದ ಹಾಲ್ಡೇನ್ ಡಿಸೆಂಬರ್ 1, 1964ರಂದು ಮರಣಿಸಿದ. ಈತನ ಉಯಿಲಿನಲ್ಲಿ ನಮೂದಿಸಿದ ಪ್ರಕಾರ ದೇಹವನ್ನು ಕಾಕಿನಾಡದ ವೈದ್ಯಕೀಯ ಕಾಲೇಜಿಗೆ ನೀಡಲಾಯಿತು. (ಎಸ್.ಎಚ್.ಬಿ.ಎಸ್.)