ಹಾಸನ ಕರ್ನಾಟಕ ರಾಜ್ಯದ ಒಂದು ಜಿಲ್ಲೆ: ತಾಲ್ಲೂಕು ಮತ್ತು ಇವುಗಳ ಆಡಳಿತ ಕೇಂದ್ರ.

ಜಿಲ್ಲೆ : ಮೈಸೂರು ವಿಭಾಗಕ್ಕೆ ಸೇರಿರುವ ಈ ಜಿಲ್ಲೆಯನ್ನು ಉತ್ತರದಲ್ಲಿ ಚಿಕ್ಕಮಗಳೂರು ಜಿಲ್ಲೆ, ಪೂರ್ವದಲ್ಲಿ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳೂ ದಕ್ಷಿಣದಲ್ಲಿ ಕೊಡಗು ಮತ್ತು ಮೈಸೂರು ಜಿಲ್ಲೆಗಳೂ ಪಶ್ಚಿಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸ್ವಲ್ಪ ಭಾಗ ಮತ್ತು ದಕ್ಷಿಣಕನ್ನಡ ಜಿಲ್ಲೆ ಸುತ್ತುವರಿದಿವೆ. ಪ್ರಕೃತಿಸೌಂದರ್ಯದ ನೆಲೆವೀಡಾದ ಮಲೆನಾಡಿನಲ್ಲಿ ಈ ಜಿಲ್ಲೆ 12º 31† ಮತ್ತು 13º 33† ಉತ್ತರ ಅಕ್ಷಾಂಶ, 75º 33† ಮತ್ತು 76º 33† ಪೂರ್ವ ರೇಖಾಂಶ-ಇವುಗಳ ನಡುವೆ ಪಸರಿಸಿದೆ. ಜಿಲ್ಲೆಯ ಉತ್ತರ-ದಕ್ಷಿಣ ಗರಿಷ್ಠ ಉದ್ದ 129 ಕಿಮೀ. ಮತ್ತು ಪೂರ್ವ-ಪಶ್ಚಿಮವಾಗಿ ಪರಮಾವಧಿ ಅಗಲ 116 ಕಿಮೀ. ಆಡಳಿತಾನುಕೂಲಕ್ಕಾಗಿ ಜಿಲ್ಲೆಯನ್ನು ಹಾಸನ ಮತ್ತು ಸಕಲೇಶಪುರ ಎಂದು ಎರಡು ಉಪವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಹಾಸನ ಉಪವಿಭಾಗಕ್ಕೆ ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು ತಾಲ್ಲೂಕುಗಳೂ ಸಕಲೇಶಪುರ ಉಪವಿಭಾಗಕ್ಕೆ ಬೇಲೂರು, ಸಕಲೇಶಪುರ ಮತ್ತು ಆಲೂರು ತಾಲ್ಲೂಕುಗಳೂ ಸೇರಿವೆ. ಜಿಲ್ಲೆಯಲ್ಲಿ 8 ತಾಲ್ಲೂಕುಗಳೂ 38 ಹೋಬಳಿಗಳೂ 11 ಪಟ್ಟಣಗಳೂ ಮತ್ತು ಜನವಸತಿಯಿಲ್ಲದ ಕೆಲವು ಗ್ರಾಮಗಳೂ ಸೇರಿದಂತೆ ಒಟ್ಟು 2,552 ಗ್ರಾಮಗಳೂ ಇವೆ. ಜಿಲ್ಲೆಯ ವಿಸ್ತೀರ್ಣ 6,811.0 ಚ.ಕಿಮೀ. ಜನಸಂಖ್ಯೆ 17,21,319.

ಈ ಜಿಲ್ಲೆ ಮಲೆನಾಡು ಮತ್ತು ಮೈದಾನ ಎರಡೂ ಪ್ರದೇಶಗಳನ್ನೊಳಗೊಂಡಿದೆ. ಈ ಜಿಲ್ಲೆಯನ್ನು ದಕ್ಷಿಣ ಮಲೆನಾಡು, ಉಪ ಮಲೆನಾಡು ಮತ್ತು ದಕ್ಷಿಣ ಮೈದಾನ ಪ್ರದೇಶವೆಂದು ಮೂರು ಸ್ವಾಭಾವಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು. ದಕ್ಷಿಣ ಮಲೆನಾಡು ವಿಭಾಗ ಹೆಚ್ಚು ಮಳೆ ಬೀಳುವ ದಟ್ಟವಾದ ಕಾಡುಗಳನ್ನುಳ್ಳ ಪ್ರದೇಶ. ಇದರ ಪಶ್ಚಿಮದ ಮೇರೆ ಬಿಸಲೆಘಾಟಿನಿಂದ ಜೇನಕಲ್ಲು ಬೆಟ್ಟದವರೆಗೆ ಹಬ್ಬಿದ್ದು, ರಮಣೀಯವಾದ ಸುಂದರ ಗಿರಿಶ್ರೇಣಿಯಿಂದ ಕೂಡಿದೆ. ಉಪಮಲೆನಾಡುಪ್ರದೇಶ ಭೂವಿನ್ಯಾಸದಲ್ಲಿ ಮೈದಾನ ಪ್ರದೇಶದಂತೆಯೇ ಕಂಡರೂ ಇದರ ವಾಯುಗಣ, ಅರಣ್ಯಸಂಪತ್ತು ಮತ್ತು ಆರ್ಥಿಕ ಪರಿಸ್ಥಿತಿಗಳು ಮಲೆನಾಡಿನಂತೆಯೇ ಇವೆ. ಮಲೆನಾಡಿಗಿಂತಲೂ ಇಲ್ಲಿನ ಹಳ್ಳಿಗಳು ಒತ್ತಾಗಿದ್ದರೂ ಚದುರಿದಂತೆ ಕಂಡುಬರುತ್ತವೆ. ಇಲ್ಲಿ ಮಲೆನಾಡಿಗಿಂತಲೂ ಮಳೆ ಸ್ವಲ್ಪ ಕಡಮೆ. ದಕ್ಷಿಣ ಮೈದಾನ ಪ್ರದೇಶ ಮೇಲಿನ ಎರಡು ಪ್ರದೇಶಗಳಿಗಿಂತ ಹೆಚ್ಚು ವಿಸ್ತಾರವಾಗಿದ್ದು ಜಿಲ್ಲೆಯ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಹಳ್ಳತಗ್ಗಿನಿಂದ ಕೂಡಿದ ಈ ಮೈದಾನ ಪ್ರದೇಶದಲ್ಲಿ ವಿಸ್ತಾರವಾದ ಬೇಸಾಯ ಭೂಪ್ರದೇಶಗಳಿವೆ. ಕೆಲವು ಕಡೆ ಈಚಲುಮರಗಳ ತೋಪುಗಳು ಕಂಡುಬರುತ್ತವೆ. ಹಾಸನ, ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಕೆಲವು ಕಡೆ ವ್ಯವಸಾಯಕ್ಕೆ ಯೋಗ್ಯವಲ್ಲದ ಎತ್ತರವಾದ ಬರಡು ಪ್ರದೇಶಗಳಿವೆ. ಘಾಟ್ ಭಾಗ ಬಿಟ್ಟರೆ ಈ ಜಿಲ್ಲೆಯ ಸಾಮಾನ್ಯ ಇಳಿಜಾರು ಹೇಮಾವತಿ ನದಿ ಕಣಿವೆ ಪ್ರದೇಶದ ಕಡೆಗಿದೆ. ಸಕಲೇಶಪುರ ಪ್ರದೇಶ, ಪಶ್ಚಿಮ ಘಟ್ಟಗಳ ಇಳಿಜಾರು ಪ್ರದೇಶದಲ್ಲಿದ್ದು ಕರ್ನಾಟಕದ ಸುಂದರ ತಾಣಗಳಲ್ಲಿ ಒಂದಾಗಿದೆ.

ಜಿಲ್ಲೆಯ ಪಶ್ಚಿಮದ ಮೇರೆಯಾಗಿರುವ ಪಶ್ಚಿಮ ಘಟ್ಟದಲ್ಲಿ ಕೆಲವು ಉನ್ನತ ಗಿರಿಶೃಂಗಗಳಿವೆ. ಇವುಗಳಲ್ಲಿ ಮುಖ್ಯವಾದವು ಸುಬ್ರಹ್ಮಣ್ಯ ಅಥವಾ ಪುಷ್ಪಗಿರಿ (1,713 ಮೀ), ದೇವರಬೆಟ್ಟ (1,282 ಮೀ) ಮುರುಕನ ಗುಡ್ಡ (1,300 ಮೀ) ಮತ್ತು ಜೇನಕಲ್ಲು ಬೆಟ್ಟ (1,389 ಮೀ). ಇವುಗಳಲ್ಲದೆ ತಗ್ಗಾದ ಗ್ರಾನೈಟ್ ಗಿರಿ ಶ್ರೇಣಿಗಳು ಬೇಲೂರು, ಹಾಸನ ಮತ್ತು ಅರಸೀಕೆರೆ ತಾಲ್ಲೂಕುಗಳ ಮೂಲಕ ಹಾದುಹೋಗಿವೆ. ಈ ಶ್ರೇಣಿಗಳಲ್ಲಿನ ಅರಸೀಕೆರೆಯ, ಹಿರೇಕಲ್ಲುಗುಡ್ಡ (1,153 ಮೀ), ಗರುಡನಗಿರಿ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಶ್ರವಣಬೆಳಗೊಳದ ಗೊಮ್ಮಟಗಿರಿ ಅಥವಾ ಇಂದ್ರಗಿರಿ (1,020 ಮೀ), ಹಾಸನ ತಾಲ್ಲೂಕಿನ ಸೀಗೆಗುಡ್ಡ (1,286 ಮೀ) ಇವಲ್ಲದೆ ಹೊಳೆನರಸೀಪುರದ ಮಲ್ಲಪ್ಪನ ಬೆಟ್ಟ, ಆಲೂರು ತಾಲ್ಲೂಕಿನ ಮಹಾರಾಜನ ದುರ್ಗ, ಹಾಸನ ತಾಲ್ಲೂಕಿನ ಕೊಂತಿಗುಡ್ಡ, ಮಾಕುಂದೂರು ಬೆಟ್ಟ, ಅರಕಲಗೂಡು ತಾಲ್ಲೂಕಿನ ಹಿಪ್ಪೆಬೆಟ್ಟ ಮುಂತಾದವು ಜಿಲ್ಲೆಯ ಇತರ ಮುಖ್ಯ ಬೆಟ್ಟಗಳು.

ಹೇಮಾವತಿ, ಕಾವೇರಿ ಮತ್ತು ಯಗಚಿ ಈ ಜಿಲ್ಲೆಯ ಮುಖ್ಯ ನದಿಗಳು. ಹೇಮಾವತಿ ಕಾವೇರಿಯ ಉಪನದಿ. ಯಗಚಿ ಹೇಮಾವತಿಯ ಉಪನದಿ. ಕಾವೇರಿ ನದಿ ಜಿಲ್ಲೆಯ ದಕ್ಷಿಣದಲ್ಲಿ ಅರಕಲಗೂಡು ತಾಲ್ಲೂಕಿನ ಕಡವಿನಹೊಸಹಳ್ಳಿಯ ಬಳಿ ಜಿಲ್ಲೆಯನ್ನು ಪ್ರವೇಶಿಸಿ ಈಶಾನ್ಯಾಭಿಮುಖವಾಗಿ ಕೊಣನೂರಿನವರೆಗೂ ಹರಿದು ಅಲ್ಲಿಂದ ಮುಂದಕ್ಕೆ ಈಶಾನ್ಯಾಭಿಮುಖವಾಗಿ ಹರಿದು ಕೇರಳಾಪುರದ ಬಳಿ ಜಿಲ್ಲೆಯನ್ನು ಬಿಟ್ಟು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕನ್ನು ಪ್ರವೇಶಿಸುವುದು. ಅರಕಲಗೂಡು ತಾಲ್ಲೂಕಿನಲ್ಲಿ ಈ ನದಿಯ ಹರಿವಿನ ಉದ್ದ 24 ಕಿಮೀ. ಈ ನದಿಗೆ ಕೃಷ್ಣರಾಜೇಂದ್ರಕಟ್ಟೆ ಕಟ್ಟಿ ಕಟ್ಟೇಪುರ ಮತ್ತು ರಾಮನಾಥಪುರ ನಾಲೆಗಳನ್ನು ತೆಗೆದು ವ್ಯವಸಾಯಕ್ಕೆ ನೀರೊದಗಿಸಿಕೊಳ್ಳಲಾಗುತ್ತಿದೆ. ಹೇಮಾವತಿ ನದಿ ಜಿಲ್ಲೆಯನ್ನು ಸಕಲೇಶಪುರ ತಾಲ್ಲೂಕಿನ ಆಚನಹಳ್ಳಿ ಬಳಿ ತಲಪಿ ಆಗ್ನೇಯಾಭಿಮುಖವಾಗಿ ಎಲ್ಲೆಯಲ್ಲೆ ಸ್ವಲ್ಪದೂರ ಹರಿದು ಹೊನ್ನಾಳಿ ಗ್ರಾಮದ ಬಳಿ ಜಿಲ್ಲೆಯನ್ನು ಒಳಹೊಕ್ಕು ಸಕಲೇಶಪುರವನ್ನು ಬಳಸಿ ಆಗ್ನೇಯಾಭಿಮುಖವಾಗಿ ಸ್ವಲ್ಪದೂರ ಹರಿದು ಅನಂತರ ಪೂರ್ವಾಭಿಮುಖವಾಗಿ ಹರಿಯುವುದು. ಅರಕಲಗೂಡಿನ ಉತ್ತರಕ್ಕೆ ಗೊರೂರಿನ ಬಳಿ ಯಗಚಿ ನದಿ ಹೇಮಾವತಿಯನ್ನು ಕೂಡಿಕೊಳ್ಳುವುದು. ಜಿಲ್ಲೆಯಲ್ಲಿ ಈ ನದಿಯ ಹರಿವಿನ ಉದ್ದ 182 ಕಿಮೀ. ಹೊಳೆನರಸೀಪುರಕ್ಕೆ 6 ಕಿಮೀ ದೂರದಲ್ಲಿ ಈ ನದಿಗೆ ಶ್ರೀರಾಮದೇವರ ಕಟ್ಟೆ ಕಟ್ಟಲಾಗಿದೆ. ಈ ಕಟ್ಟೆ ಒಂದು ಶತಮಾನಕ್ಕೂ ಹಿಂದಿನದು. ಹೇಮಾವತಿ ಯೋಜನೆಯಂತೆ ಇದರಿಂದ ಹಾಸನ, ಮಂಡ್ಯ ಜಿಲ್ಲೆಗಳ ಒಂದು ಲಕ್ಷ ಎಕರೆ ಭೂಮಿಗೆ ನೀರಾವರಿಯಾಗುವುದು. ಯಗಚಿ ನದಿ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ಹುಟ್ಟಿ ಹಾಸನ ಜಿಲ್ಲೆಯನ್ನು ಬೇಲೂರು ತಾಲ್ಲೂಕಿನ ಸಿರಿಘಟ್ಟಗ್ರಾಮದ ಬಳಿ ಪ್ರವೇಶಿಸುವುದು. ಹಾಸನ ತಾಲ್ಲೂಕಿನ ಹಾಲವಾಗಲುವರೆಗೆ ನೈಋತ್ಯಾಭಿಮುಖವಾಗಿ ಹರಿದು ಅನಂತರ ದಕ್ಷಿಣಾಭಿಮುಖವಾಗಿ ಜಿಲ್ಲೆಯಲ್ಲಿ ಒಟ್ಟು 66 ಕಿಮೀ ದೂರ ಹರಿದು ಗೊರೂರಿನ ಪಶ್ಚಿಮಕ್ಕೆ ಹೇಮಾವತಿಯನ್ನು ಸೇರಿಕೊಳ್ಳುವುದು. ಈ ನದಿಗೆ ಮೂರು ಚಿಕ್ಕ ಅಣೆಕಟ್ಟುಗಳಿದ್ದು ನೀರನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲಾಗುತ್ತಿದೆ.

ಜಿಲ್ಲೆ ಪ್ರಾಚೀನ ಶಿಲಾಸ್ತರಗಳಿಂದ ಕೂಡಿದೆ. ಜಿಲ್ಲೆಯಲ್ಲಿ ಹೆಚ್ಚು ಬೆಣಚು ಕಲ್ಲು ಮತ್ತು ಅಭ್ರಕದಿಂದ ಕೂಡಿದ ಪದರುಪದರಾದ ಶಿಲೆಗಳ ಪ್ರದೇಶ ಕಂಡುಬರುತ್ತದೆ. ಹೊಳೆನರಸೀಪುರ ತಾಲ್ಲೂಕಿನಲ್ಲಿ ಆರ್ಥಿಕ ಮೌಲ್ಯದ ವಿವಿಧ ಖನಿಜ ಸಂಪತ್ತಿದೆ. ಕಟ್ಟಡಗಳ ನಿರ್ಮಾಣಕ್ಕೆ ಬೇಕಾದ ಗ್ರಾನೈಟ್ ಶಿಲೆ ಜಿಲ್ಲೆಯಲ್ಲಿ ಸಮೃದ್ಧವಾಗಿದೆ. ಅದರಲ್ಲೂ ಬಾಣಾವರ, ಅರಸೀಕೆರೆಯಲ್ಲಿ ಸಿಗುವ ಕಟ್ಟಡ ಕಲ್ಲುಗಳು ಉತ್ತಮವಾದವು. ಇದಲ್ಲದೆ ಬಾಣಾವರ ಮತ್ತು ಅರಸೀಕೆರೆಗಳಲ್ಲಿ ಒರಟಾದ ಬೆಣಚುಕಲ್ಲು ಪ್ರದೇಶವಿದೆ. ಹಾಸನ ತಾಲ್ಲೂಕಿನ ಸೀಗೆಗುಡ್ಡ ಬೆನ್ನಸುರ ಶಿಲಾಶ್ರೇಣಿಯಿಂದ ಕೂಡಿದೆ. ಬಾಗೇಶಪುರದ ಪಶ್ಚಿಮದಲ್ಲಿರುವ ದೊಡ್ಡ ಗುಡ್ಡ ಕಬ್ಬಿಣಾಂಶದ ಭಿನ್ನಸ್ತರ ಶಿಲಾಶ್ರೇಣಿಯಿಂದಾಗಿದೆ. ಭೈರಾಪುರದಲ್ಲಿನ ಕ್ರೋಮೈಟ್ ಬಾಗೇಶಪುರದ ಚೈನಾ ಜೇಡಿ ಮತ್ತು ಹೊಳೆನರಸೀಪುರದ ಕಲ್ನಾರು ಮುಖ್ಯವಾದವು. ಹೊಳೆನರಸೀಪುರದ ಈಡಿಗೊಂಡನಹಳ್ಳಿ, ಕಬ್ಬೂರು, ಸುಣ್ಣಕಲ್ಲು, ಕಟ್ಟೆಕೆರೆ, ಬೆಟ್ಟದ ಸಟ್ಟೇನಹಳ್ಳಿ, ಮಂದಗೆರೆ, ತಿಮ್ಮಲಾಪುರ ಮತ್ತು ಎಣ್ಣೆಹೊಳೆ, ರಂಗನಬೆಟ್ಟ ಮುಂತಾದ ಕಡೆ ಕಲ್ನಾರು ಸಿಕ್ಕಿ ಆ ಪ್ರದೇಶದ ಪ್ರಾಮುಖ್ಯಕ್ಕೆ ಕಾರಣವಾಗಿದೆ. ಭೂಗರ್ಭ ಸಂಶೋಧನೆಯಿಂದಾಗಿ ಅರಸೀಕೆರೆಗೆ 17 ಕಿಮೀ ದೂರದ ಕಲ್ಯಾಡಿ ಹಳ್ಳಿಯ ಸಮೀಪ ಉತ್ತಮ ತಾಮ್ರದ ಅದುರಿನ ನಿಕ್ಷೇಪವಿರುವುದು ಕಂಡುಬಂದಿದೆ. ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಬಳಿ ಬರೈಲ್ ಹರಳುಗಳು ದೊರೆಯುತ್ತವೆ. ನುಗ್ಗೇಹಳ್ಳಿ ಭಿನ್ನಸ್ತರ ಶಿಲಾಶ್ರೇಣಿಯಲ್ಲಿ ಕ್ರೋಮೈಟ್ ಹೆಚ್ಚಾಗಿದೆ. ಪೆನ ಸಮುದ್ರ, ಭೈರಾಪುರ, ಭಕ್ತರಹಳ್ಳಿ, ಚಿಕ್ಕೇನಹಳ್ಳಿ, ರಾಯಸಮುದ್ರ ಮತ್ತು ಜಂಬೂರುಗಳಲ್ಲಿ ಕ್ರೋಮೈಟ್ ಗಣಿಗಳಿವೆ. ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಕುರಂದ ನಿಕ್ಷೇಪಗಳಿವೆ. ಈ ಜಿಲ್ಲೆಯಲ್ಲಿ ಸಿಗುವ ಇತರ ಖನಿಜಗಳಲ್ಲಿ ಅಭ್ರಕ, ಮ್ಯಾಗ್ನಸೈಟ್, ಗಾರ್ನೆಟ್, ಟಾಲ್ಕ ಮುಂತಾದವು ಮುಖ್ಯವಾದುವು.

ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬೀಳುವುದರಿಂದ ಮತ್ತು ಸಹಜ ಭೌಗೋಳಿಕ ಲಕ್ಷಣಗಳಿಂದ ಸಂಪದ್ಭರಿತ ವೈವಿಧ್ಯಮಯ ಸಸ್ಯವರ್ಗವನ್ನು ಪಡೆದಿದೆ. ಪೂರ್ವದಿಂದ ಪಶ್ಚಿಮದ ಕಡೆಗೆ ಹೋದಂತೆ ಸಸ್ಯವರ್ಗದಲ್ಲಿ ತೀವ್ರಬದಲಾವಣೆಯಾಗಿ ದಟ್ಟವಾದ ಮುಂಗಾರು ಕಾಡುಗಳನ್ನುಳ್ಳ ಸಸ್ಯವರ್ಗ ಕಂಡುಬರುತ್ತದೆ. ಜಿಲ್ಲೆಯಲ್ಲಿ 1,500ಕ್ಕೂ ಹೆಚ್ಚು ಬಗೆಯ ಸಸ್ಯಸಂಪತ್ತು ಇದ್ದು ಇದರಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಾತಿಯ ಸಸ್ಯವರ್ಗವನ್ನು ಕಾಣಬಹುದು. ಜಿಲ್ಲೆಯ ಒಟ್ಟು ಅರಣ್ಯ ವಿಸ್ತೀರ್ಣ 54,107 ಹೆಕ್ಟೇರುಗಳು. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಗಂಧದ ಮರ, ಇತರ ಉಪಯುಕ್ತ ವಿವಿಧ ಫಲವೃಕ್ಷಗಳೂ ಮೃದು ಮತ್ತು ಗಟ್ಟಿಮರಗಳೂ ತಂಗಡಿ ಮತ್ತು ಕಕ್ಕೆ ತೊಗಟೆ, ಬೀಡಿಗೆ ಉಪಯೋಗಿಸುವ ತೂಪರದ ಎಲೆ, ಗೋಂದು, ಮೇಣ, ಜೇನುತುಪ್ಪ, ಬಿದಿರು ಮುಂತಾದವೂ ಹೇರಳವಾಗಿ ದೊರೆಯುವುವು. ಇತ್ತೀಚೆಗೆ ಕಾಫಿ ಮತ್ತು ಗೋಡಂಬಿ ತೋಟಗಾರಿಕೆ ಹಾಗೂ ವ್ಯವಸಾಯ ವಿಸ್ತರಣೆಗಾಗಿ ಅರಣ್ಯಭೂಮಿಯನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆಯೆಂದೆನ್ನಬಹುದು. ಇಲ್ಲಿನ ದಟ್ಟವಾದ ಅರಣ್ಯ ಪ್ರದೇಶ ವೈವಿಧ್ಯಮಯ ಪ್ರಾಣಿವರ್ಗಗಳಿಗೆ ಆಶ್ರಯಸ್ಥಾನವಾಗಿದೆ. ಹುಲಿ, ಚಿರತೆ, ಕಿರುಬ, ತೋಳ, ಜಿಂಕೆ, ಕಾಡುನಾಯಿ, ನಾಗರಹಾವು, ಮುಂಗಸಿ, ಕರಡಿ, ನರಿ, ಕಾಡೆಮ್ಮೆ ಮುಂತಾದವುಗಳೂ ವಿವಿಧ ಬಗೆಯ ಪಕ್ಷಿಗಳೂ ವಿವಿಧ ಹಾವುಗಳೂ ಇಲ್ಲಿನ ಅರಣ್ಯದಲ್ಲಿವೆ.

ಜಿಲ್ಲೆಯ ವಾಯುಗುಣ ಹಿತಕರ. ಮಾರ್ಚ್‍ನಿಂದ ಮೇ ಅಂತ್ಯದ ವರೆಗೆ ಬೇಸಗೆಯ ಕಾವೂ ಮುಂದೆ ಸೆಪ್ಟೆಂಬರ್ ಅಂತ್ಯದ ವರೆಗೆ ಮುಂಗಾರೂ ಅಕ್ಟೋಬರ್ ಮತ್ತು ನವೆಂಬರ್‍ಗಳಲ್ಲಿ ಹಿಂಗಾರು ಮಳೆಯೂ ಆಗುತ್ತದೆ. ಡಿಸೆಂಬರ್‍ನಿಂದ ಫೆಬ್ರವರಿತನಕ ಚಳಿಗಾಲವಿರುತ್ತದೆ. ಮಳೆಯ ಪ್ರಮಾಣ ಪಶ್ಚಿಮದ ಘಟ್ಟಪ್ರದೇಶಗಳಲ್ಲಿ ಅಧಿಕವಾಗಿದ್ದು, ಮೇ ಇಂದ ಅಕ್ಟೋಬರ್ ವರೆಗೆ ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತದೆ. ಜಿಲ್ಲೆಯ ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತ ಬರುವುದು. ಉದಾಹರಣೆಗೆ, ಜಿಲ್ಲೆಯ ಪಶ್ಚಿಮದಲ್ಲಿರುವ ಸಕಲೇಶಪುರದಲ್ಲಿ 2,288.93 ಮಿಮೀ ಮಳೆಯಾದರೆ ಜಿಲ್ಲೆಯ ಮಧ್ಯದಲ್ಲಿರುವ ಹಾಸನದಲ್ಲಿ 893.6 ಮಿಮೀ ಮಳೆ ಬೀಳುತ್ತದೆ. ಜಿಲ್ಲೆಯ ಪೂರ್ವದಲ್ಲಿರುವ ಚನ್ನರಾಯಪಟ್ಟಣದಲ್ಲಿ 684.9 ಮಿಮೀ ಮಳೆಯಾಗುತ್ತದೆ. ಜಿಲ್ಲೆಯ ವಾರ್ಷಿಕ ಮಳೆ 1100 ಮಿಮೀ (2000).

ಜಿಲ್ಲೆಯ ಬೆಟ್ಟ ಮತ್ತು ಪಶ್ಚಿಮಘಟ್ಟಶ್ರೇಣಿಗಳ ಇಳಿಜಾರು ಪ್ರದೇಶಗಳಲ್ಲಿ ಜೇಡಿಮಣ್ಣನ್ನೂ ಅರಣ್ಯ ಪ್ರದೇಶದಲ್ಲಿ ಸಸ್ಯಮಿಶ್ರಿತ ಫಲವತ್ತಾದ ಕೆಂಪು ಜಂಬುಮಣ್ಣನ್ನೂ ಮೈದಾನ ಪ್ರದೇಶಗಳಲ್ಲಿ ಗರಸುಮಣ್ಣು ಇರುವುದನ್ನೂ ಕಾಣಬಹುದು. ಆಲೂರು, ಸಕಲೇಶಪುರ ಮತ್ತು ಬೇಲೂರು ತಾಲ್ಲೂಕುಗಳಲ್ಲಿ ಶಿಸ್ಟ್ ಮತ್ತು ಲ್ಯಾಟರೈಟ್‍ನಿಂದಾದ ಮಣ್ಣುಪ್ರದೇಶವಿದ್ದು ಮೇಲೆ ಕೆಂಪಾಗಿದ್ದು ಆಳಕ್ಕೆ ಹೋದಂತೆ ಹಳದಿ ಬಣ್ಣದಿಂದ ಕೂಡಿರುವುದು ಕಂಡುಬರುವುದು. ಈ ಭಾಗದ ಮಣ್ಣು ಕಾಫಿ, ಟೀ, ಮೆಣಸು, ಏಲಕ್ಕಿ, ಅಡಕೆ, ಬತ್ತ ಮತ್ತು ಕಬ್ಬು ಬೆಳೆಗೆ ಬಹು ಪ್ರಶಸ್ತವಾದದ್ದು. ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ ಮತ್ತು ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಮರಳುಮಿಶ್ರಿತ ಕೆಂಪು ಜೇಡಿಮಣ್ಣಿನ ಪ್ರದೇಶ ಹೆಚ್ಚು. ಬತ್ತ, ಕಬ್ಬು, ತೆಂಗು, ಆಲೂಗಡ್ಡೆ, ತರಕಾರಿಗಳು, ಸೇಂಗಾ, ಹತ್ತಿ, ಜೋಳ ಮುಂತಾದವನ್ನು ಬೆಳೆಯಬಹುದು. ಅರಸೀಕೆರೆ ತಾಲ್ಲೂಕಿನಲ್ಲಿ ಕೆಲವು ಕಡೆ ಕಪ್ಪು ಮಣ್ಣಿನ ಪ್ರದೇಶಗಳಿವೆ. ಈ ಬಗೆಯ ಮಣ್ಣಿನಲ್ಲಿ ಮೆಣಸಿನಕಾಯಿ, ಹತ್ತಿ, ಜೋಳ, ರಾಗಿ ಮತ್ತು ತೈಲಬೀಜಗಳನ್ನು ಬೆಳೆಯುತ್ತಾರೆ. ಹೊಳೆನರಸೀಪುರದ ಬಿಳಿ ಸೌತೆ ಪ್ರಸಿದ್ಧವಾಗಿದ್ದು ವಿದೇಶಗಳಲ್ಲೂ ಇದಕ್ಕೆ ಬೇಡಿಕೆ ಇದೆ.

ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬಿದ್ದರೂ ವ್ಯವಸಾಯನುಕೂಲಕ್ಕಾಗಿ ನದಿ, ಕೆರೆ ಮತ್ತು ಬಾವಿಗಳ ನೀರಾವರಿ ವ್ಯವಸ್ಥೆಯಿದೆ. ಇವುಗಳಲ್ಲಿ ಹೊಳೆನರಸೀಪುರ ತಾಲ್ಲೂಕಿನಲ್ಲಿರುವ ಹೇಮಾವತಿ ನದಿಯ ಶ್ರೀರಾಮದೇವರ ಕಟ್ಟೆಯ ದಕ್ಷಿಣ ಮತ್ತು ಉತ್ತರ ನಾಲೆಗಳು, ಅರಕಲಗೂಡು ತಾಲ್ಲೂಕಿನಲ್ಲಿ ಕಾವೇರಿ ನದಿಗೆ ಕಟ್ಟಿರುವ ಕೃಷ್ಣರಾಜೇಂದ್ರ ಅಣೆಕಟ್ಟಿನ ಕಟ್ಟೇಪುರ ಮತ್ತು ರಾಮನಾಥಪುರ ನಾಲೆಗಳೂ ಯಗಚಿ ನದಿಗೆ ಮತ್ತು ಅದರ ಉಪನದಿಗಳಿಗೆ ಕಟ್ಟೆ ಕಟ್ಟಿ ಅವುಗಳಿಂದ ತೆಗೆದಿರುವ ಹಾಸನ ತಾಲ್ಲೂಕಿನ ಹಾಲವಾಗಲು, ಚಂಗರವಳ್ಳಿ ನಾಲೆಗಳೂ ಬೇಲೂರು ತಾಲ್ಲೂಕಿನಲ್ಲಿರುವ ಕಿತ್ತೂರು, ಹೊಸಕಡಲೂರು ಮತ್ತು ಹಳೆಕಡಲೂರು ನಾಲೆಗಳೂ ಇವಲ್ಲದೆ ಕೆಲವು ತೊರೆಗಳಿಗೆ ಕಟ್ಟಿರುವ ಅಡ್ಡಗಟ್ಟೆಯಿಂದ ತೆಗೆದಿರುವ ಮದಘಟ್ಟ, ಮಳಲಿ ಕಾಲುವೆಗಳೂ ಮುಖ್ಯವಾದವೆನ್ನಬಹುದು. ಈ ಎಲ್ಲ ಕಾಲುವೆಗಳಿಂದ 1998-99ರಲ್ಲಿ 28,921 ಹೆಕ್ಟೇರ್‍ಗಳಿಗೂ ಕೆರೆಗಳಿಂದ 27,626 ಹೆಕ್ಟೇರ್‍ಗಳಿಗೂ ಬಾವಿಗಳಿಂದ 2,124 ಹೆಕ್ಟೇರ್‍ಗಳಿಗೂ ನೀರೊದಗಿತ್ತು. ಜಿಲ್ಲೆಯ ಇತರ ಮೂಲಗಳನ್ನು ಸೇರಿಸಿ ಒಟ್ಟು 77,847 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿತ್ತು. ಜಿಲ್ಲೆಯಲ್ಲಿ ನಗರ್ತಿ ಕಾಮಸಮುದ್ರ ಮತ್ತು ರಾವತನಹಳ್ಳಿಗಳಲ್ಲಿ ಎತ್ತುನೀರಾವರಿಯೂ ಇದೆ.

ಹಾಸನ ಜಿಲ್ಲೆಯಲ್ಲಿ 1998-99ರ ಸಾಲಿನಲ್ಲಿ 66,684 ಹೆ. ಬತ್ತ, 1,35,019 ಹೆ. ರಾಗಿ, 3,933 ಹೆ. ಜೋಳ, 5,242 ಹೆ. ಮುಸುಕಿನ ಜೋಳ, 2,11,121 ಹೆ. ಏಕದಳಧಾನ್ಯಗಳು, 3,937 ಹೆ. ಕಡಲೆ, 3,730 ಹೆ. ತೊಗರಿ, 7,424 ಹೆ. ಇತರೆ ದ್ವಿದಳ ಧಾನ್ಯಗಳು 4,203 ಹೆ. ನೆಲಗಡಲೆ, 5,327 ಹೆ. ಕಬ್ಬು, 5,225 ಹೆ. ಹತ್ತಿ ಬೆಳೆಯಲಾಗಿತ್ತು. ಜಿಲ್ಲೆಯ ಪ್ರಮುಖ ತೋಟದ ಬೆಳೆಗಳಾಗಿ ಕಾಫಿಯನ್ನೂ ಟೀಯನ್ನೂ ಅಡಕೆ ಮತ್ತು ತೆಂಗನ್ನೂ ಏಲಕ್ಕಿಯನ್ನೂ ಗೋಡಂಬಿಯನ್ನೂ ಬೆಳೆಯಲಾಗಿತ್ತು. ಹೇಮಾವತಿ ಯೋಜನೆಯಿಂದ ಜಿಲ್ಲೆಯ ಇನ್ನಷ್ಟು ಹೆಚ್ಚು ಭೂಮಿ ವ್ಯವಸಾಯಕ್ಕೊಳಪಟ್ಟು ಆಹಾರ ಮತ್ತು ಆಹಾರೇತರ ಬೆಳೆಗಳ ಉತ್ಪನ್ನ ಏರುವುದನ್ನು ನಿರೀಕ್ಷಿಸಲಾಗಿದೆ.

ಈ ಜಿಲ್ಲೆ ಕಾಫಿ ಬೆಳೆಗೂ ಪ್ರಸಿದ್ಧ. ಸಕಲೇಶಪುರ, ಬೇಲೂರು ತಾಲ್ಲೂಕುಗಳಲ್ಲಿ ಮತ್ತು ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಪ್ರದೇಶಗಳಲ್ಲಿ ಕಾಫಿ ಹೆಚ್ಚು ಬೆಳೆಯುತ್ತಾರೆ. ಐಗೂರು, ಎಸಳೂರು ಮತ್ತು ಹಾನಬಾಳು ಏಲಕ್ಕಿಗೆ ಪ್ರಸಿದ್ಧವಾಗಿದ್ದವು, ಇಂದು ಕಾಫಿ ಬೆಳೆಗೆ ಪ್ರಸಿದ್ಧವಾಗಿವೆ. ಅರ್ಯಾಬಿಕ ಮತ್ತು ರೊಬಸ್ಟ ಈ ಎರಡು ಬಗೆಯ ಕಾಫಿಯನ್ನು ಜಿಲ್ಲೆಯಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲ್ಲೂಕುಗಳು ತೆಂಗು ಬೆಳೆಯಲ್ಲಿ ಮುಂದಾಗಿವೆ. ಅರಸೀಕೆರೆಯಲ್ಲಿ ತೆಂಗು ಸಂಶೋಧನ ಕೇಂದ್ರವಿದೆ. ಬೇಲೂರು, ಆಲೂರು ಮತ್ತು ಅರಕಲಗೂಡು ತಾಲ್ಲೂಕುಗಳಲ್ಲಿ ಮೆಣಸನ್ನು ಬೆಳೆಯುತ್ತಾರೆ. ಅಡಕೆಯನ್ನು ಸಕಲೇಶಪುರ ತಾಲ್ಲೂಕಿನ ತಗ್ಗುಪ್ರದೇಶದ ಕಾಫಿ ಪ್ಲಾಂಟೇಷನ್‍ಗಳಲ್ಲಿ, ಅರಕಲಗೂಡು, ಬೇಲೂರು, ಆಲೂರು, ಚನ್ನರಾಯಪಟ್ಟಣ ಮತ್ತು ಹಾಸನ ತಾಲ್ಲೂಕುಗಳಲ್ಲಿ ಬೆಳೆಯುತ್ತಾರೆ. ಹಾಸನ, ಬೇಲೂರು ಮತ್ತು ಅರಕಲಗೂಡು ತಾಲ್ಲೂಕುಗಳು ಆಲೂಗಡ್ಡೆ ಬೆಳೆಗೆ ಹೆಸರಾದುವು. ಸಕಲೇಶಪುರ ಮತ್ತು ಬೇಲೂರು ತಾಲ್ಲೂಕುಗಳಲ್ಲಿ ಕಿತ್ತಳೆ ಮತ್ತು ಬಾಳೆ ಹೆಚ್ಚು ಬೆಳೆಯಲಾಗುತ್ತವೆ. ಮಾವು, ಸಪೋಟ, ಪರಂಗಿಹಣ್ಣು ಮತ್ತು ಇತರ ಫಲಗಳೂ ಈ ಜಿಲ್ಲೆಯಲ್ಲಿ ಬೆಳೆಯುತ್ತವೆ.

ಈ ಜಿಲ್ಲೆ ಹಳ್ಳಿಕಾರ್ ಮತ್ತು ಅಮೃತಮಹಲ್ ರಾಸುಗಳಿಗೆ ಪ್ರಸಿದ್ಧ. ಮಲೆನಾಡ ಬೆಟ್ಟ ಪ್ರದೇಶಗಳಲ್ಲಿ ಸಾಮಾನ್ಯವಾದ ಬೆಟ್ಟದ ಹಸುಗಳಿವೆ. ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಅಮೃತಮಹಲ್ ಕಾವಲುಗಳಿವೆ.

ಜಿಲ್ಲೆಯಲ್ಲಿ ಪ್ರಾಣಿ ಸಂಪತ್ತು ಸಾಕಷ್ಟಿದೆ. 12 ಪಶು ವೈದ್ಯ ಆಸ್ಪತ್ರೆಗಳು, 108 ಪ್ರಾಥಮಿಕ ಪಶುವೈದ್ಯ ಕೇಂದ್ರಗಳು, 47 ಚಿಕಿತ್ಸಾಲಯಗಳು ಇದ್ದವು (2000). ಜಿಲ್ಲೆಯಲ್ಲಿ ಮತ್ಸ್ಯೋದ್ಯಮವೂ ಇದೆ. 2000-2001ರಲ್ಲಿ 4,449 ಮೆಟ್ರಿಕ್‍ಟನ್ ಮೀನನ್ನು ಹಿಡಿಯಲಾಗಿತ್ತು.

ಜಿಲ್ಲೆ ಮುಖ್ಯವಾಗಿ ಕೃಷಿ ಆಧಾರಿತವಾದದ್ದು. ಜೊತೆಗೆ ಪ್ಲಾಂಟೇಷನ್‍ಗಳ ಪ್ರದೇಶವಾಗಿದ್ದು ಬಯಲುಸೀಮೆಗಳಲ್ಲಿನ ಕೈಗಾರಿಕಾ ಪ್ರಗತಿ ಕಂಡುಬರುವುದಿಲ್ಲ. ಜಿಲ್ಲೆ ಕುಶಲ ಕೈಗಾರಿಕೆಗಳಿಗೆ ಹಿಂದಿನಿಂದಲೂ ಪ್ರಸಿದ್ಧವಾದದ್ದು. ಇತ್ತೀಚೆಗೆ ಸಾಕಷ್ಟು ವಿದ್ಯುತ್ ಪೂರೈಕೆಯಾಗುತ್ತಿದ್ದು ಕೆಲವು ಹೊಸ ಕೈಗಾರಿಕೆಗಳು ಪ್ರಾರಂಭವಾಗಿವೆ. ಕೃಷಿ ಉಪಕರಣಗಳಾದ ಹಾರೆ, ಕೊಡಲಿ, ಬಾಚಿ, ಕಬ್ಬಿಣದ ನೇಗಿಲು, ಪಿಕಾಸಿ, ಗುದ್ದಲಿ, ವಿದ್ಯುತ್ ಪ್ರೇಷಕ ಗೋಪುರಗಳು ಮತ್ತು ಆರ್.ಸಿ.ಸಿ. ಕಂಬಗಳನ್ನು ತಯಾರಿಸಲಾಗುತ್ತಿದ್ದ ಹಾಸನದ ಮೈಸೂರು ಉಪಕರಣಗಳ ಕಾರ್ಖಾನೆ 1940ರಲ್ಲೇ ಪ್ರಾರಂಭವಾಗಿದ್ದು ಈಗ ಮುಚ್ಚಿದೆ. 1968 ಡಿಸೆಂಬರ್‍ನಿಂದ ಉತ್ಪಾದನೆಯನ್ನು ಆರಂಭಿಸಿರುವ ಮೈಸೂರು ಕಲ್ನಾರು ಕಾರ್ಖಾನೆ (ಮೈಸೂರು ಅಸ್ಬೆಸ್ಟೋಸ್ ಪ್ರೈ. ಲಿ.) ಹೊಳೆನರಸೀಪುರಕ್ಕೆ ಸುಮಾರು 3 ಕಿಮೀ ದೂರದಲ್ಲಿರುವ ಹಳೇಕೋಟೆ ಬಳಿ ಹಾಸನ-ಹೊಳೆನರಸೀಪುರ ಮಾರ್ಗದಲ್ಲಿದೆ. ಈ ಕಾರ್ಖಾನೆಯಲ್ಲಿ ಕಲ್ನಾರು ಹೊದಿಕೆಗಳು, ಕೊಳವೆಗಳು ಇತ್ಯಾದಿ ವಸ್ತುಗಳನ್ನು ತಯಾರಿಸುತ್ತಾರೆ. ಜಿಲ್ಲೆಯಲ್ಲಿ 1961ರಲ್ಲಿ ಪ್ರಾರಂಭವಾದ ಕೊಥಾರಿ ಕಾಫಿ ಸಂಸ್ಕರಣ ಕಾರ್ಖಾನೆ, 1962ರಲ್ಲಿ ಪ್ರಾರಂಭವಾದ ಹಾಸನ ಕಾಫಿ ಸಂಸ್ಕರಣ ಕಾರ್ಖಾನೆ ಮತ್ತು 1971ರಲ್ಲಿ ಪ್ರಾರಂಭವಾದ ಪ್ಲಾಂಟರ್ಸ್ ಕಾಫಿ ಸಂಸ್ಕರಣ ಕಾರ್ಖಾನೆಗಳಿವೆ. ಕೈಮಗ್ಗದ ಕೈಗಾರಿಕೆ, ಬತ್ತ ಮತ್ತು ಎಣ್ಣೆಗಿರಣಿಗಳು, ಮರದ ಸಾಮಾನುಗಳ ಕೈಗಾರಿಕೆ, ಹೆಂಚು, ಬೆಂಕಿಪಟ್ಟಿಗೆ ಮತ್ತು ತೆಂಗುನಾರಿನ ಕಾರ್ಖಾನೆಗಳು, ಹತ್ತಿಗಿರಣಿಗಳು, ಖಾದಿ ಮತ್ತು ಗ್ರಾಮೋದ್ಯೋಗ ಮುಂತಾದವುಗಳೂ ಈ ಜಿಲ್ಲೆಯಲ್ಲಿವೆ.

ಜಿಲ್ಲೆಯಲ್ಲಿ ಕ್ರೋಮೈಟ್, ಕಲ್ನಾರು, ಬಿಳಿಜೇಡಿಮಣ್ಣು ಮತ್ತು ಕುರಂದ ಮುಂತಾದವುಗಳೂ ಕಲ್ಯಾಡಿ ಪ್ರದೇಶದಲ್ಲಿ ತಾಮ್ರವೂ ದೊರೆತಿರುವುದರಿಂದ ಗಣಿ ಉದ್ಯಮವಿದೆ. ಭೈರಾಪುರ ಮತ್ತು ಭಕ್ತರಹಳ್ಳಿ ಗಣಿಗಳಲ್ಲಿ ಹೆಚ್ಚಾಗಿ ಕ್ರೋಮೈಟ್ ದೊರೆಯುತ್ತಿದೆ. ಅರಸೀಕೆರೆ ತಾಲ್ಲೂಕಿನ ಬಾಗೇಶಪುರದ ಬಳಿ ಬಿಳಿಜೇಡಿಮಣ್ಣಿನ ನಿಕ್ಷೇಪವಿದ್ದು ಇದಕ್ಕೆ ಸಂಬಂಧಪಟ್ಟ ಶುದ್ಧೀಕರಣ ಕಾರ್ಖಾನೆಗಳಿವೆ. ಬಳಪದ ಕಲ್ಲು, ಗಾರ್ನೆಟ್, ಕೆಯನೆಟ್ ಮತ್ತು ಅಭ್ರಕ ಇವುಗಳಿಗೆ ಸಂಬಂಧಿಸಿದಂತೆಯೂ ಗಣಿಕೈಗಾರಿಕೆಗಳಿವೆ. ಶ್ರವಣಬೆಳಗೊಳ ಹಿಂದಿನಿಂದಲೂ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಿಗೆ ಪ್ರಸಿದ್ಧ. ಮಲೆನಾಡು ಪ್ರದೇಶವಾದ ಈ ಜಿಲ್ಲೆಯಲ್ಲಿ ಮರಕ್ಕೆ ಸಂಬಂಧಪಟ್ಟ ವಿವಿಧ ಬಗೆಯ ಕೈಗಾರಿಕೆಗಳೂ ಮರಕೊಯ್ಯುವ ಕಾರ್ಖಾನೆಗಳೂ ಇವೆ. ಜಿಲ್ಲೆಯಲ್ಲಿ 2001ನೆಯ ಸಾಲಿನಲ್ಲಿ 4 ಬಟ್ಟೆ ಕಾರ್ಖಾನೆಗಳು, 12 ರಸಾಯನಿಕ, 2 ಎಂಜನಿಯರಿಂಗ್, 32 ಇತರೇ ಕಾರ್ಖಾನೆಗಳಿದ್ದು ಒಟ್ಟು 45 ಕಾರ್ಖಾನೆಗಳಿಂದ 5,496 ಮಂದಿಗೆ ಉದ್ಯೋಗ ದೊರಕಿತ್ತು. ಕೈಗಾರಿಕಾಭಿವೃದ್ಧಿಗೆ 105 ಕೈಗಾರಿಕಾ ಶೆಡ್ಡುಗಳಿರುವ 8 ಕೈಗಾರಿಕಾಪ್ರದೇಶಗಳಿವೆ. ಒಂದು ಸಕ್ಕರೆ ಕಾರ್ಖಾನೆಯಿದ್ದು 187 ಮೆಟ್ರಿಕ್ ಟನ್ ಕಬ್ಬನ್ನು ಅರೆದು 18 ಮೆಟ್ರಿಕ್‍ಟನ್ ಸಕ್ಕರೆಯನ್ನು ಉತ್ಪಾದಿಸಲಾಗಿತ್ತು.

ಜಿಲ್ಲೆಯ ಕೈಗಾರಿಕೆ, ಕೃಷಿ ಮತ್ತು ವ್ಯಾಪಾರಾಭಿವೃದ್ಧಿಗೆ ಬೆನ್ನೆಲುಬಾಗಿ ಅನೇಕ ವಾಣಿಜ್ಯ, ಕೈಗಾರಿಕಾ ಮತ್ತು ಸಹಕಾರಿ ಬ್ಯಾಂಕುಗಳಿವೆ. ಹೊಳೆನರಸೀಪುರದಲ್ಲಿ ಕೈಮಗ್ಗದವರ ಏಳಿಗೆಗಾಗಿ 1905ರಲ್ಲಿ ಪ್ರಾರಂಭಿಸಿದ ಸಹಕಾರ ಸಂಘ ಜಿಲ್ಲೆಯಲ್ಲಿ ಮೊದಲನೆಯದಾದರೆ, 1927 ಫೆಬ್ರವರಿ 1 ರಂದು ಹಾಸನದಲ್ಲಿ ಪ್ರಾರಂಭವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈ ಜಿಲ್ಲೆಯ ಬ್ಯಾಂಕುಗಳಲ್ಲಿ ಮೊದಲನೆಯದೆಂದು ಹೇಳಬಹುದು. ಈಗ ಜಿಲ್ಲೆಯಲ್ಲಿ ಒಟ್ಟು 122 ವಾಣಿಜ್ಯ ಬ್ಯಾಂಕುಗಳೂ 44 ಗ್ರಾಮೀಣ ಬ್ಯಾಂಕುಗಳೂ 40 ಸಹಕಾರ ಬ್ಯಾಂಕುಗಳೂ 8 ಪ್ರಾಥಮಿಕ ಭೂಅಭಿವೃದ್ಧಿ ಬ್ಯಾಂಕುಗಳೂ ಒಟ್ಟು 22 ನಿಯಂತ್ರಿತ ಮಾರು ಕಟ್ಟೆಗಳೂ ಇವೆ (2001).

ಜಿಲ್ಲೆಯ ಸಾರಿಗೆ ಸಂಪರ್ಕವೂ ಉತ್ತಮವಾಗಿದೆ. ಸುತ್ತಲ ಜಿಲ್ಲಾ ಕೇಂದ್ರಗಳಿಗೆ, ಪಟ್ಟಣ ಮತ್ತು ಗ್ರಾಮಗಳಿಗೆ ರಸ್ತೆ ಸಂಪರ್ಕವಿದೆ. ಹಾಸನ-ಚನ್ನರಾಯಪಟ್ಟಣ-ಕುಣಿಗಲು-ಬೆಂಗಳೂರು, ಹಾಸನ-ಹೊಳೆನರಸೀಪುರ-ಕೃಷ್ಣರಾಜನಗರ-ಮೈಸೂರು, ಹಾಸನ-ಬೇಲೂರು-ಚಿಕ್ಕಮಗಳೂರು, ಹಾಸನ-ಸಕಲೇಶಪುರ-ಬಂಟವಾಳ-ಮಂಗಳೂರು ರಾಜ್ಯ ಹೆದ್ದಾರಿಗಳಿವೆ. ಇದಲ್ಲದೆ ಜಿಲ್ಲಾ ಮತ್ತು ಗ್ರಾಮದ ಮಾರ್ಗಗಳು ಉತ್ತಮ ಮಟ್ಟದ್ದಾಗಿದೆ. ಹಾಸನ-ಮಂಗಳೂರು ರೈಲುಮಾರ್ಗದ ನಿರ್ಮಾಣವನ್ನು 1965ರಲ್ಲಿ ಪ್ರಾರಂಭಿಸಲಾಗಿತ್ತು. ಆ ಕೆಲಸ 1979ರಲ್ಲಿ ಮುಗಿದು 20-5-1979ರಂದು ಪ್ರಥಮವಾಗಿ ಮಂಗಳೂರು-ಹಾಸನ ರೈಲುಸಂಚಾರ ಪ್ರಾರಂಭವಾಯಿತು. ಈ ರೈಲುಮಾರ್ಗದ ಉದ್ದ 188 ಕಿಮೀ. ಈ ಯೋಜನೆಗೆ ತಗುಲಿದ ವೆಚ್ಚ 42.37 ಕೋಟಿ ರೂಪಾಯಿಗಳು. ಹಾಸನ-ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ, ಪುತ್ತೂರು-ಮಂಗಳೂರು ರೈಲು ಸಂಪರ್ಕ ಏರ್ಪಟ್ಟು ಈ ಜಿಲ್ಲೆಯ ಪ್ರಗತಿಗೆ ಮತ್ತು ರಾಜ್ಯದ ಪಶ್ಚಿಮ ತೀರಪ್ರದೇಶದ ಸಂಪರ್ಕಕ್ಕೆ ಅನುಕೂಲವಾಗಿದೆ. ಜಿಲ್ಲೆಯಲ್ಲಿ ಅಂಚೆ, ದೂರವಾಣಿ ಸೌಕರ್ಯವಿದೆ. ಮೈಸೂರು-ಅರಸೀಕೆರೆ ರೈಲು ಮಾರ್ಗ ಬ್ರಾಡ್‍ಗೇಜ್ ಆಗಿ ಪರಿವರ್ತಿತವಾಗಿದೆ. ಹಾಗೆಯೇ ಹಾಸನ ಮಂಗಳೂರು ರೈಲು ಮಾರ್ಗದ ವಿಸ್ತರಣಾಕಾರ್ಯ ಪ್ರಗತಿಯಲ್ಲಿದೆ. ಎಚ್.ಡಿ. ದೇವೇಗೌಡರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಕಾಲದಲ್ಲಿ ಮಂಜೂರಾದ ಬೆಂಗಳೂರು-ಹಾಸನ ರೈಲು ಮಾರ್ಗದ ಕೆಲಸ ತ್ವರಿತವಾಗಿ ಮುಂದುವರಿಯುತ್ತಿದೆ. ಈಗ ಒಟ್ಟು 201 ಕಿಮೀ ಉದ್ದದ ಬ್ರಾಟ್‍ಗೇಜ್ ರೈಲು ಮಾರ್ಗ ಈ ಜಿಲ್ಲೆಯಲ್ಲಿದೆ. 15 ರೈಲು ನಿಲ್ದಾಣಗಳಿವೆ. 167 ಕಿಮೀ ರಾಷ್ಟ್ರೀಯ ಹೆದ್ದಾರಿ, 480 ಕಿಮೀ ರಾಜ್ಯ ಹೆದ್ದಾರಿ, 1,668 ಜಿಲ್ಲಾ ಮುಖ್ಯ ರಸ್ತೆಗಳೂ ಇವೆ. 1999-2000ರಲ್ಲಿ ಜಿಲ್ಲೆಯಲ್ಲಿ ಒಟ್ಟು 7 ಆಸ್ಪತ್ರೆಗಳೂ 3 ಭಾರತೀಯ ವೈದ್ಯಪದ್ಧತಿಯ ಆಸ್ಪತ್ರೆಗಳೂ 45 ಔಷಧಾಲಯಗಳೂ 82 ಪ್ರಾಥಮಿಕ ಆರೋಗ್ಯ ಘಟಕಗಳೂ ಕುಟುಂಬ ಕಲ್ಯಾಣ ಕೇಂದ್ರಗಳೂ ಇದ್ದವು. ಮಲೆನಾಡ ಪ್ರದೇಶವಾದರೂ ಹಾಸನ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿಲ್ಲ. 1999-2000 ಸಾಲಿನಲ್ಲಿ ಹಾಸನದಲ್ಲಿ 2,795 ಪ್ರಾಥಮಿಕ ಶಾಲೆಗಳು, 372 ಪ್ರೌಢಶಾಲೆಗಳು, 78 ಪದವಿಪೂರ್ವ ಕಾಲೇಜುಗಳೂ ಇವೆ. ಹಾಸನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಿದೆ. 4 ಪಾಲಿಟೆಕ್ನಿಕ್ ಮತ್ತು 2 ಎಂಜಿನಿಯರಿಂಗ್ ಕಾಲೇಜೂ ಇವೆ. ಜಿಲ್ಲೆಯಲ್ಲಿ ಶಾಲಾಕಾಲೇಜುಗಳ ಗ್ರಂಥಾಲಯಗಳ ಜೊತೆಗೆ ಸರ್ಕಾರಿ ಸಾರ್ವಜನಿಕ ಗ್ರಂಥಾಲಯಗಳಿವೆ. ವೇದ ಮತ್ತು ಸಂಸ್ಕøತ ಶಾಲೆಗಳಿವೆ. ಹಳೇಬೀಡಿನಲ್ಲಿ ಪುರಾತತ್ತ್ವ ವಸ್ತು ಸಂಗ್ರಹಾಲಯವಿದೆ.

ಈ ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಹಾಗೂ ಪ್ರಸಿದ್ಧ ಸ್ಥಳಗಳಿವೆ. ಜಿಲ್ಲೆಯ ವಾಸ್ತುಶಿಲ್ಪ ಜಗತ್‍ಪ್ರಸಿದ್ಧವಾದುದ್ದು. ಬೇಲೂರು (ನೋಡಿ- ಬೇಲೂರು), ಹಳೇಬೀಡು (ನೋಡಿ- ಹಳೇಬೀಡು), ಶ್ರವಣಬೆಳಗೊಳ (ನೋಡಿ- ಶ್ರವಣಬೆಳಗೊಳ) ಇವು ವಾಸ್ತುಶಿಲ್ಪ ದೃಷ್ಟಿಯಿಂದ ಸುಪ್ರಸಿದ್ಧ ಸ್ಥಳಗಳಾಗಿವೆ. ಇದೇ ರೀತಿ ನುಗ್ಗೇಹಳ್ಳಿ, ದೊಡ್ಡಗದ್ದವಳ್ಳಿ, ಮೊಸಳೆ, ಅರಸೀಕೆರೆ, ಜಾವಗಲ್ಲು ಈ ಸ್ಥಳಗಳಲ್ಲಿ ಹೊಯ್ಸಳ ವಾಸ್ತುಶಿಲ್ಪದ ಅತ್ಯುಚ್ಚ ಮಾದರಿಯ ದೇವಾಲಯಗಳನ್ನು ಕಾಣಬಹುದಾಗಿದೆ. ಸಾಹಿತ್ಯ ಮತ್ತು ಸಂಸ್ಕøತಿಗಳ ದೃಷ್ಟಿಯಿಂದ ಈ ಜಿಲ್ಲೆ ಮಹತ್ತ್ವಪಡೆದಿದೆ. ಇಲ್ಲಿನ ಅನೇಕ ಬಸದಿಗಳು ದೇವಾಲಯಗಳು ಜಿಲ್ಲೆಯ ಗತವೈಭವಕ್ಕೆ ಸಾಕ್ಷಿಯಾಗಿವೆ. ಕನ್ನಡ ಸಾಹಿತ್ಯಕ್ಕೆ ಈ ಜಿಲ್ಲೆಯ ಕೊಡುಗೆ ಅಪಾರ. ಚಾವುಂಡರಾಯ, ಒಂದನೆಯ ನಾಗವರ್ಮ, ಒಂದನೆಯ ಗುಣವರ್ಮ, ನಾಗಚಂದ್ರ, ಕಂತಿ, ಜನ್ನ, ಕೆರೆಯ ಪದ್ಮರಸ, ರಾಜಾದಿತ್ಯ, ಜಗದ್ದಳ ಸೋಮನಾಥ, ಕುಮಾರ ಪದ್ಮರಸ, ವಿರೂಪಾಕ್ಷ ಪಂಡಿತ, 2ನೆಯ ನಾಗವರ್ಮ, ರುದ್ರಭಟ್ಟ ಮಲ್ಲಿಕಾರ್ಜುನ, ಕೇಶಿರಾಜ, ಆಂಡಯ್ಯ, ನಯಸೇನ, ಪದ್ಮಣಾಂಕ ಮೊದಲಾದ ಕವಿಗಳು ಈ ಜಿಲ್ಲೆಯವರು. ಆಧುನಿಕರಲ್ಲಿ ಕರಿಬಸವಶಾಸ್ತ್ರಿ, ಎಸ್.ವಿ. ರಂಗಣ್ಣ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೆ. ಕೃಷ್ಣಮೂರ್ತಿ, ಎಲ್, ಗುಂಡಪ್ಪ, ಮತಿಘಟ್ಟ ಕೃಷ್ಣಮೂರ್ತಿ, ಅ.ನ. ಕೃಷ್ಣರಾಯ, ಅ.ರಾ. ಮಿತ್ರ, ಹಾಸನದ ರಾಜಾರಾವ್, ಎಸ್.ಎಲ್. ಭೈರಪ್ಪ ಮುಂತಾದ ಆಧುನಿಕ ಸಾಹಿತಿಗಳು ಈ ಜಿಲ್ಲೆಯವರು. ಅರಸೀಕೆರೆಯ ಕೆ. ಅನಂತಸುಬ್ಬರಾಯರು 1933ರಲ್ಲಿ ಕನ್ನಡ ಬೆರಳಚ್ಚು ಕಂಡುಹಿಡಿದವರು. ಇವರಲ್ಲದೆ ಸಂಗೀತ, ನಾಟಕ, ನೃತ್ಯ ಮುಂತಾದವುಗಳಲ್ಲೂ ಪರಿಣತ ಮತ್ತು ಪ್ರಸಿದ್ಧ ವ್ಯಕ್ತಿಗಳನ್ನೂ ಈ ಜಿಲ್ಲೆಯಲ್ಲಿ ಕಾಣಬಹುದು. (ಕೆ.ಆರ್.ಎನ್.)

ಈ ಜಿಲ್ಲೆ ಇತಿಹಾಸ ಪರಂಪರೆಗೆ ಪ್ರಸಿದ್ಧ. ಹಳೆಯ ಶಿಲಾಯುಗ ಕಾಲದಿಂದಲೂ ಮಾನವರು ಈ ಜಿಲ್ಲೆಯಲ್ಲಿ ವಾಸಿಸುತ್ತಿದ್ದುದಕ್ಕೆ ಆಲೂರು ತಾಲ್ಲೂಕಿನ ಕರಡಿ ಗುಡ್ಡದಲ್ಲಿ ಕೆಲವು ಕುರುಹುಗಳಿವೆ. ಅಲ್ಲದೆ, ನವಶಿಲಾಯುಗ ಮತ್ತು ಕಬ್ಬಿಣ ಯುಗಗಳಿಗೆ ಸಂಬಂಧಿಸಿದ ಆಧಾರಗಳೂ ಈ ಜಿಲ್ಲೆಯಲ್ಲಿ ದೊರೆತಿವೆ.

ಈ ಜಿಲ್ಲೆಯ ಪ್ರಾಚೀನ ಇತಿಹಾಸದ ಘಟನಾವಳಿಗಳಲ್ಲಿ ಮೊದಲಿನದೆಂದು ಭಾವಿಸಲಾದ ಭದ್ರಬಾಹು ಮತ್ತು ಮೌರ್ಯ ಚಕ್ರವರ್ತಿ ಚಂದ್ರಗುಪ್ತ ಈ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನೆಲಸಿ ಅಲ್ಲಿಯೇ ಸಮಾಧಿಗೊಂಡರೆಂದು ಪ್ರತೀತಿ. ಇದಕ್ಕೆ ಅನೇಕ ಸ್ಮಾರಕಗಳೂ ಶಾಸನಗಳೂ ಮತ್ತು ಸಾಹಿತ್ಯ ಗ್ರಂಥಗಳೂ ಆಧಾರವಾಗಿವೆ. ಶ್ರವಣಬೆಳಗೊಳದಲ್ಲಿ ಭದ್ರಬಾಹು ಗುಹೆಯೂ ಚಂದ್ರಗುಪ್ತನ ನೆನಪಾಗಿ ಚಂದ್ರಗಿರಿ ಎಂದು ಹೆಸರಿಸಲಾದ ಬೆಟ್ಟವೂ ಹನ್ನೆರಡನೆಯ ಶತಮಾನದಲ್ಲಿ ಚಂದ್ರಗುಪ್ತನ ಹೆಸರಿನಲ್ಲಿ ಕಟ್ಟಲಾದ ಚಂದ್ರಗುಪ್ತ ಬಸದಿಯೂ ಇವೆ. ಕ್ತಿಸ್ತಶಕದ ಪ್ರಾರಂಭದ ಎರಡುಮೂರು ಶತಮಾನಗಳಲ್ಲಿ ಈ ಜಿಲ್ಲೆಯ ಭಾಗಗಳು ಸಾತವಾಹನರಿಗೆ ಸೇರಿತ್ತೆಂಬ ಅಭಿಪ್ರಾಯವಿದೆ. 4ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಹಾಗೂ ಕರ್ನಾಟಕದಲ್ಲಿ ಪ್ರಥಮ ಸ್ವತಂತ್ರ ರಾಜ್ಯ ಸ್ಥಾಪಿಸಿದ ಕದಂಬರು ಈ ಜಿಲ್ಲೆಯೊಡನೆ ನಿಕಟಸಂಪರ್ಕ ಹೊಂದಿದ್ದರು. ಕದಂಬ ಕಾಕುಸ್ಥವರ್ಮನ ಕನ್ನಡ ಶಿಲಾಶಾಸನ ಬೇಲೂರು ತಾಲ್ಲೂಕಿನ ಹಲ್ಮಿಡಿಯಲ್ಲಿ ದೊರೆತಿದೆ (ಸು.450). ಹಲ್ಮಿಡಿ ಶಾಸನವೆಂದು ಹೆಸರಾಗಿರುವ ಈ ಶಾಸನ ಕನ್ನಡದ ಪ್ರಥಮ ಮತ್ತು ಈ ಜಿಲ್ಲೆಯ ಅತ್ಯಂತ ಹಳೆಯ ಶಾಸನ ಈಗ ಈ ಊರಿನಲ್ಲಿ ಈ ಶಾಸನದ ಪ್ರತಿಕೃತಿ ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯ ತಲಕಾಡಿನಲ್ಲಿ ನೆಲೆಯೂರಿದ ಗಂಗರು ಐದನೆಯ ಶತಮಾನದ ಕೊನೆಯಲ್ಲಿ ದಕ್ಷಿಣ ಕರ್ನಾಟಕದ ಬಹುಭಾಗವನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಂಡರು. ಹನ್ನೊಂದನೆಯ ಶತಮಾನದ ಪ್ರಾರಂಭದ ವರೆಗೂ ಅವಿರತವಾಗಿ ಪ್ರಬಲಶಕ್ತಿಯಾಗುಳಿದ ಇವರು ಸ್ವತಂತ್ರರಾಗಿ ಕೆಲವೊಮ್ಮೆ ಬಾದಾಮಿ ಚಾಳುಕ್ಯರ ಮತ್ತು ರಾಷ್ಟ್ರಕೂಟರ ಸಾಮಂತರಾಗಿ ಈ ಜಿಲ್ಲೆಯನ್ನು ಆಳಿದರು. ಶ್ರವಣಬೆಳಗೊಳದ ಗೊಮ್ಮಟೇಶ್ವರನನ್ನು ಪ್ರತಿಷ್ಠಾಪಿಸಿದ ಚಾವುಂಡರಾಯ (ನೋಡಿ- ಚಾವುಂಡರಾಯ-1) ನಾಲ್ಕನೆಯ ರಾಚಮಲ್ಲನ ಕಾಲದಲ್ಲಿದ್ದ (ಸು. 974-985). ಗಂಗರ ಅನಂತರ ಬಂದ ಕೆಚೆಂಗಾಳ್ವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಮತ್ತು ನೆರೆಯ ಕೊಡಗಿನ ಕೆಲ ಪ್ರದೇಶಗಳಲ್ಲಿ ಆಳಿದರು. ಅವರು ಮೊದಲಿಗೆ ಚೋಳರ ತರುವಾಯ ಹೊಯ್ಸಳರ ಸಾಮಂತರಾಗಿ ಸುಮಾರು ಹನ್ನೆರಡನೆಯ ಶತಮಾನದ ಕೊನೆಯ ವರೆಗೂ ಆಳಿದರು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹುಣಸೂರು ಪ್ರದೇಶದಲ್ಲಿ ನೆಲೆಯೂರಿದ್ದ ಚೆಂಗಾಳ್ವರ ಶಾಸನಗಳು ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊರೆತಿವೆ. ಇವರು ಹದಿಮೂರನೆಯ ಶತಮಾನದ ಕೊನೆಯ ವರೆಗೂ ತಮ್ಮ ಅಸ್ತಿತ್ತ್ವವನ್ನು ಉಳಿಸಿಕೊಂಡಿದ್ದರು.

ಹೊಯ್ಸಳರು ರಾಜ್ಯ ಕಟ್ಟಿ ಆಳಿದುದು ಈ ಜಿಲ್ಲೆಯಿಂದಲೇ. ಹೊಯ್ಸಳರ ಮೂಲಪುರುಷ ಸಳ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಸೊಸೆವೂರು ಅಥವಾ ಶಶಕಪುರ ಎಂಬ ಸ್ಥಳದಲ್ಲಿ ಪ್ರಥಮತಃ ಹೊಯ್ಸಳ ರಾಜ್ಯ ಸ್ಥಾಪಿಸಿದನೆಂದು ಪ್ರತೀತಿ. ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ಇವರು ತಮ್ಮ ರಾಜಧಾನಿಯನ್ನು ಸೊಸೆವೂರಿನಿಂದ ಸಮೀಪದ ಬೇಲೂರಿಗೆ, ಅನಂತರ ದ್ವಾರ ಸಮುದ್ರಕ್ಕೆ (ಈಗಿನ ಹಳೇಬೀಡಿಗೆ) ವರ್ಗಾಯಿಸಿದರು. ಹನ್ನೊಂದನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಇವರು ಪಶ್ಚಿಮಘಟ್ಟಪ್ರದೇಶದ ಮಲೆಪರು ಮತ್ತಿತರರನ್ನು ಸೋಲಿಸಿ ಹಳೆ ಮೈಸೂರಿನ ಬಹುಭಾಗದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಿದರು. 1116ರಲ್ಲಿ ಹೊಯ್ಸಳ ವಿಷ್ಣುವರ್ಧನ ಚೋಳರನ್ನು ತಲಕಾಡು ಯುದ್ಧದಲ್ಲಿ ಸೋಲಿಸಿದ. ಹೊಯ್ಸಳರು, ಬೇಲೂರು ದ್ವಾರಸಮುದ್ರ, ಮೊಸಳೆ, ನುಗ್ಗೇಹಳ್ಳಿ, ದೊಡ್ಡಗದ್ದವಳ್ಳಿ, ಸೋಮನಾಥಪುರ ಮತ್ತಿತರೆಡೆಗಳಲ್ಲಿ ಪ್ರಸಿದ್ಧ ದೇವಾಲಯಗಳನ್ನು ನಿರ್ಮಿಸಿದರು. ಇವರ ಪ್ರೋತ್ಸಾಹದಿಂದ ಸಾಹಿತ್ಯ ಮತ್ತು ಕಲಾಕ್ಷೇತ್ರಗಳಲ್ಲಿ ಉತ್ತುಂಗ ಸಾಧನೆಗಳಾದವು.

ಹೊಯ್ಸಳರ ಅನಂತರ ವಿಜಯನಗರದ ಅರಸರು ಪ್ರಾಂತಾಧಿಕಾರಿಗಳ, ಸಾಮಂತರ ಮೂಲಕ ಈ ಜಿಲ್ಲೆಯ ಪ್ರದೇಶಗಳನ್ನು ಆಳುತ್ತಿದ್ದರು. 1565ರಲ್ಲಿ ವಿಜಯನಗರ ಪತನವಾದಮೇಲೂ ಪೆನುಗೊಂಡೆಯಿಂದ ಆಳುತ್ತಿದ್ದ ವಿಜಯನಗರದ ಅರಸರಿಗೆ ಈ ಪ್ರದೇಶದ ರಾಜರುಗಳು, ಪಾಳೆಯಗಾರರು ನಿಷ್ಠರಾಗಿದ್ದರು. ಹದಿನೇಳನೆಯ ಶತಮಾನದಲ್ಲಿ ರಾಜ್ಯಭ್ರಷ್ಟವಾಗಿದ್ದ ವಿಜಯನಗರದ ಅರಸ ನಾಲ್ಕನೆಯ ಶ್ರೀರಂಗರಾಯ ಕೆಳದಿನಾಯಕರ ಬೆಂಬಲದಿಂದ ಕೆಲವು ಕಾಲ ಬೇಲೂರಿನಲ್ಲಿ ನೆಲೆಸಿದ್ದ. ವಿಜಯನಗರದ ಕಾಲದಲ್ಲಿ ಈ ಜಿಲ್ಲೆಯಲ್ಲಿ ಅನೇಕ ಪಾಳೆಯಪಟ್ಟಗಳು ಅಸ್ತಿತ್ವಕ್ಕೆ ಬಂದವು. ಇವರಲ್ಲಿ ಐಗೂರು, ಹೊಳೆನರಸೀಪುರದ ನಾಯಕರೂ ನುಗ್ಗೇಹಳ್ಳಿಯ ಪಾಳೆಯಗಾರರೂ ಮುಖ್ಯರು. ಇವರಲ್ಲಿ ಐಗೂರು ಪಾಳೆಯಗಾರರ ಹೊರತು ಉಳಿದವರು ಕೆಳದಿನಾಯಕರ ಮತ್ತು ಮೈಸೂರು ಒಡೆಯರ ರಾಜ್ಯವಿಸ್ತರಣಾ ಪ್ರಯತ್ನಗಳಿಗೆ ಬಲಿಯಾದರು. ಐಗೂರು ಪಾಳೆಯಗಾರರು ಹೈದರ್-ಟಿಪ್ಪುಗಳ ವಿರೋಧದಲ್ಲೂ ತಮ್ಮ ಉಳಿವನ್ನು ಸಾಧಿಸಿಕೊಂಡು ಬಂದಿದ್ದು, 1799ರ ಅನಂತರ ಬ್ರಿಟಿಷರನ್ನು ಎದುರಿಸಿದರು. ಬ್ರಿಟಿಷರು 1802ರಲ್ಲಿ ಐಗೂರಿನ ಕೊನೆಯ ರಾಜನನ್ನು ಗಲ್ಲಿಗೇರಿಸಿದರು. ಕೆಳದಿನಾಯಕರು ಈ ಜಿಲ್ಲೆಯ ಕೆಲವು ಭಾಗಗಳನ್ನು ಆಳಿದರೂ 1694ರ ಹೊತ್ತಿಗೆ ಮೈಸೂರು ಒಡೆಯರು ಜಿಲ್ಲೆಯ ಬಹುತೇಕ ಭಾಗದ ಮೇಲೆ ತಮ್ಮ ಸ್ವಾಮ್ಯ ಸ್ಥಾಪಿಸಿದರು. 1761ರಲ್ಲಿ ಹೈದರ್ ಅಲಿ ಬಿದನೂರನ್ನು ವಶಪಡಿಸಿಕೊಂಡ ಮೇಲೆ ಐಗೂರನ್ನು ಬಿಟ್ಟು ಈ ಜಿಲ್ಲೆಯ ಸಮಗ್ರ ಪ್ರದೇಶ ಮೈಸೂರು ರಾಜ್ಯಕ್ಕೆ ಸೇರಿತು. 1799ರಲ್ಲಿ ಶ್ರೀರಂಗಪಟ್ಟಣದ ಪತನದ ಅನಂತರ ಜಿಲ್ಲೆ ಮೈಸೂರು ಸಂಸ್ಥಾನದ ಒಂದು ಭಾಗವಾಯಿತು. ಸ್ವಾತಂತ್ರ್ಯ ಹೋರಾಟದಲ್ಲೂ ಈ ಜಿಲ್ಲೆ ತನ್ನ ಕಾಣಿಕೆ ಸಲ್ಲಿಸಿದೆ.

(ಡಿ.ಎಸ್.ಜೆ.)

ತಾಲ್ಲೂಕು : ಜಿಲ್ಲೆಯ ಮಧ್ಯದಲ್ಲಿರುವ ಹಾಸನ ತಾಲ್ಲೂಕನ್ನು ಉತ್ತರದಲ್ಲಿ ಬೇಲೂರು, ಅರಸೀಕೆರೆ ತಾಲ್ಲುಕುಗಳೂ ಪೂರ್ವದಲ್ಲಿ ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕುಗಳೂ ದಕ್ಷಿಣದಲ್ಲಿ ಅರಕಲಗೂಡು ಮತ್ತು ಪಶ್ಚಿಮದಲ್ಲಿ ಆಲೂರು ತಾಲ್ಲೂಕುಗಳೂ ಸುತ್ತುವರಿದಿವೆ. ಕಟ್ಟಾಯ, ಶಾಂತಿಗ್ರಾಮ, ದುದ್ದ, ಹಾಸನ ಮತ್ತು ಸಾಲಗಾಮೆ ಹೋಬಳಿಗಳು. ತಾಲ್ಲೂಕಿನ ಗ್ರಾಮಗಳ ಸಂಖ್ಯೆ 400. ವಿಸ್ತೀರ್ಣ 943.8 ಚ.ಕಿಮೀ. ಜನಸಂಖ್ಯೆ 3,63,028.

ಈ ತಾಲ್ಲೂಕಿನ ವೈಶಿಷ್ಟ್ಯವೆಂದರೆ ಇದರ ಪಶ್ಚಿಮ ಭಾಗ ಉಪಮಲೆನಾಡು ಪ್ರದೇಶಕ್ಕೆ ಸೇರಿದ್ದರೆ ಉಳಿದ ಪೂರ್ವಭಾಗ ಮೈದಾನ ಪ್ರದೇಶಕ್ಕೆ ಸೇರಿದೆ. ತಾಲ್ಲೂಕಿನ ಬೆಟ್ಟಗುಡ್ಡಗಳಲ್ಲಿ ಸೀಗೆಗುಡ್ಡ, (1,286 ಮೀ), ಮಾಕುಂದೂರು ಬೆಟ್ಟ (1,043 ಮೀ) ಐದಳ್ಳಿ ಕಾವಲು ಬೆಟ್ಟ (1,116 ಮೀ) ಕಟ್ಟಾಯ ಕಾರ್ಲೆ ಕಾವಲು ಬೆಟ್ಟ (1,054 ಮೀ) ಇವನ್ನು ಹೆಸರಿಸಬಹುದು. ಯಗಚಿ ಮತ್ತು ಹೇಮಾವತಿ ಇವು ತಾಲ್ಲೂಕಿನ ಮುಖ್ಯನದಿಗಳು. ಯಗಚಿ ತಾಲ್ಲೂಕಿನ ಪಶ್ಚಿಮ ಗಡಿಯಾಗಿ ಹರಿದು ದಕ್ಷಿಣದಲ್ಲಿ ತಾಲ್ಲೂಕು ಗಡಿಯಾಗಿ ಹರಿಯುವ ಹೇಮಾವತಿಯನ್ನು ಗೊರೂರು ಬಳಿ ಕೂಡಿಕೊಳ್ಳುವುದು. ಹಾಸನಕ್ಕೆ ನೈಋತ್ಯದಲ್ಲಿ 5 ಕಿಮೀ ದೂರದಲ್ಲಿ ಯಗಚಿಗೆ ಹಾಲವಾಗಲು ಬಳಿ ಕಟ್ಟೆ ಕಟ್ಟಲಾಗಿದೆ. ಈ ನದಿಯ ನೀರನ್ನೂ ಹೇಮಾವತಿ ಜಲಾಶಯದ ನೀರನ್ನು ಹಾಸನ ಪಟ್ಟಣಕ್ಕೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಸಾಮಾನ್ಯ ಕಾಡು ಇದ್ದು ವಾಯುಗುಣ ಹಿತಕರವೆನ್ನಬಹುದು. ವಾರ್ಷಿಕ ಸರಾಸರಿ ಮಳೆ 893.6 ಮಿಮೀ.

ತಾಲ್ಲೂಕಿನ ವ್ಯವಸಾಯಕ್ಕೆ ಕೆರೆ, ಬಾವಿ, ನಾಲೆಗಳೂ ಉಂಟು. ಯಗಚಿ ನದಿಗೆ ಈ ತಾಲ್ಲೂಕಿನಲ್ಲಿ ಕಟ್ಟಿರುವ ಹಾಲವಾಗಲು ಕಟ್ಟೆನಾಲೆ ಮತ್ತು ಚೆಂಗರವಳ್ಳಿ ನಾಲೆಯಿಂದ ನೀರಾವರಿ ಸೌಕರ್ಯವಿದೆ. ಬತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು, ಸೇಂಗಾ, ಕಬ್ಬು, ಹತ್ತಿ, ಅಡಕೆ, ಆಲೂಗೆಡ್ಡೆ ಮುಂತಾದವನ್ನು ಬೆಳೆಯುತ್ತಾರೆ. ವಿವಿಧ ತರಕಾರಿಗಳನ್ನೂ ಫಲಪುಷ್ಪಗಳನ್ನೂ ಬೆಳೆಯುತ್ತಾರೆ. ಹಾಸನದಲ್ಲಿ ತೋಟಗಾರಿಕೆ ಇಲಾಖೆಯಿದ್ದು ತೋಟದ ಬೆಳೆಗಳನ್ನು ಪ್ರೋತ್ಸಾಹಿಸುತ್ತಿದೆ. ತಾಲ್ಲೂಕಿನಲ್ಲಿ ವ್ಯವಸಾಯ, ಪಶುಪಾಲನೆ ಜೊತೆಯಾಗಿದೆಯೆನ್ನಬಹುದು. ಪಶುಪಾಲನೆಯ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹವಿದ್ದು ತಾಲ್ಲೂಕಿನಲ್ಲಿ ಪಶುವೈದ್ಯಾಲಯಗಳಿವೆ. ಅಕ್ಕಿಗಿರಣಿಗಳಿವೆ. ಸೋಪು ತಯಾರಿಕೆ ಮುಂತಾದ ಕಾರ್ಖಾನೆಗಳಿವೆ. ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿದ್ದು ತಾಲ್ಲೂಕಿನ ವ್ಯಾಪಾರ, ಕೈಗಾರಿಕೆಗಳಿಗೆ ಆರ್ಥಿಕ ಬೆಂಬಲವಿದೆ. ಶಾಲಾಕಾಲೇಜುಗಳೂ ಆಸ್ಪತ್ರೆ, ಔಷಧಾಲಯಗಳೂ ಇವೆ. ಹಾಸನ-ಮಂಗಳೂರು ಬೆಂಗಳೂರು-ಹಾಸನ ರೈಲು ಮಾರ್ಗದಿಂದಾಗಿ ಈ ತಾಲ್ಲೂಕಿನ ವ್ಯಾಪಾರ-ವಾಣಿಜ್ಯ ಮುಂತಾದವು ಮತ್ತಷ್ಟು ಅಭಿವೃದ್ಧಿಯಾಗುವ ನಿರೀಕ್ಷೆ ಇದೆ.

ತಾಲ್ಲೂಕಿನ ಅನೇಕ ಐತಿಹಾಸಿಕ ಮತ್ತು ಪ್ರಾಚೀನ ಸ್ಥಳಗಳಲ್ಲಿ ಹಾಸನಕ್ಕೆ ವಾಯವ್ಯದಲ್ಲಿ 18 ಕಿಮೀ ದೂರದಲ್ಲಿರುವ ದೊಡ್ಡಗದ್ದವಳ್ಳಿ (ನೋಡಿ- ದೊಡ್ಡಗದ್ದವಳ್ಳಿ) ಒಂದು. ಇಲ್ಲಿ ಪ್ರಸಿದ್ಧ ಲಕ್ಷ್ಮೀದೇವಿ ದೇವಾಲಯವಿದೆ. ಹಾಸನದ ಈಶಾನ್ಯಕ್ಕೆ 22 ಕಿಮೀ ದೂರದಲ್ಲಿರುವ ಮೂಡಿಗೆರೆಯಲ್ಲಿ ಈಶ್ವರ ದೇವಾಲಯವಿದೆ. ಇದನ್ನು 1155ರಲ್ಲಿ ಯರೆಯಮ ಹೆಗ್ಗಡೆ ಕಟ್ಟಿದುದೆಂದು ಇಲ್ಲಿನ ಒಂದು ಶಾಸನದಿಂದ ತಿಳಿದುಬರುತ್ತದೆ. ಇಲ್ಲೊಂದು ಆಂಜನೇಯ ದೇವಾಲಯವೂ ಇದೆ. ಹಾಸನದ ಈಶಾನ್ಯಕ್ಕೆ 24 ಕಿಮೀ ದೂರದಲ್ಲಿರುವ ಹೆರಗು ಗ್ರಾಮದಲ್ಲಿ ಪ್ರಸಿದ್ಧ ಕೀರ್ತಿನಾರಾಯಣ ದೇವಾಲಯವಿದೆ. ವಿಗ್ರಹ ಏಳೂವರೆ ಅಡಿ ಎತ್ತರವಿದ್ದು ಅದರ ಎಡಬಲದಲ್ಲಿ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳಿವೆ. ಪ್ರಭಾವಳಿಯ ಮೇಲೆ ದಶಾವತಾರವನ್ನು ಬಿಡಿಸಿದೆ. ದೇವಾಲಯದಲ್ಲಿರುವ ಶಾಸನದ ಪ್ರಕಾರ ಇದನ್ನು 1217ರಲ್ಲಿ ಕಟ್ಟಿದ್ದೆಂದು ತಿಳಿದುಬರುವುದು. ಇದೇ ಊರಿನಲ್ಲಿ ಕಾಮತೇಶ್ವರವೆಂದು ಕರೆಯುವ ಈಶ್ವರ ದೇವಾಲಯ, ಒಂದು ಜೈನ ಬಸದಿಗಳಿವೆ. ಈ ಬಸದಿಯನ್ನು 1155ರಲ್ಲಿ ಕಟ್ಟಿದ್ದೆಂದು ತಿಳಿದುಬರುತ್ತದೆ. ಹಾಸನಕ್ಕೆ ಪೂರ್ವದಲ್ಲಿ 13 ಕಿಮೀ ದೂರದಲ್ಲಿರುವ ಶಾಂತಿಗ್ರಾಮ ಹೋಬಳಿ ಕೇಂದ್ರ. ಹಾಸನ-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿರುವ ಈ ಗ್ರಾಮದಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ರಾಣಿ ಶಾಂತಲೆ ಈ ಗ್ರಾಮವನ್ನು ಸ್ಥಾಪಿಸಿದ್ದೆಂದು ತಿಳಿಸುವ ಶಾಸನವಿದೆ. ಇಲ್ಲಿ ಕೇಶವ, ಯೋಗಾನರಸಿಂಹ, ಧರ್ಮೇಶ್ವರ ಮತ್ತು ವೀರಭದ್ರ ದೇವಾಲಯಗಳಿವೆ. ಒಂದು ಶಾಂತಿನಾಥ ಬಸದಿಯಿದೆ. ಇಲ್ಲಿನ ಒಂದು ಶಾಸನದ ಪ್ರಕಾರ ವಿಷ್ಣುವರ್ಧನ ಈ ಗ್ರಾಮವನ್ನು ಶಾಂತಲೆಗೆ 1123ರಲ್ಲಿ ಕೊಟ್ಟದ್ದೆಂದು ತಿಳಿದು ಬರುತ್ತದೆ. ಹಾಸನಕ್ಕೆ 19 ಕಿಮೀ ದೂರದಲ್ಲಿರುವ ಮರ್ಕುಳಿಯಲ್ಲಿ ರಂಗಸ್ವಾಮಿ ದೇವಾಲಯ ಮತ್ತು ಒಂದು ಜೈನ ಬಸದಿಯಿದೆ. ಹಾಸನದಿಂದ 13ಕಿಮೀ ದೂರದಲ್ಲಿರುವ ಮೊಸಳೆ ಗ್ರಾಮದಲ್ಲಿ ಈಶ್ವರ ಮತ್ತು ಚೆನ್ನಕೇಶವ ದೇವಾಲಯಗಳಿವೆ. ಹಾಸನ-ಹೊಳೆನರಸೀಪುರ ಮಾರ್ಗದಲ್ಲಿ ಹಾಸನದಿಂದ 11 ಕಿಮೀ ದೂರದಲ್ಲಿರುವ ಬಸ್ತಿಹಳ್ಳಿಯಲ್ಲಿ ಪಾಶ್ರ್ವನಾಥ ಮತ್ತು ಆದಿನಾಥ ಬಸದಿಗಳಿವೆ. ಹಾಸನದ ಈಶಾನ್ಯಕ್ಕೆ 14 ಕಿಮೀ ದೂರದಲ್ಲಿರುವ ಜಕ್ಕನಹಳ್ಳಿಯಲ್ಲಿ ಹೊಯ್ಸಳ ದೊರೆ ಮೊದಲನೆಯ ನರಸಿಂಹನ ಮಂತ್ರಿಯಾಗಿದ್ದ ಹೆಗ್ಗಡೆ ಕಾಲಿಮಯ್ಯ 1170ರಲ್ಲಿ ಕಟ್ಟಿಸಿದ್ದೆಂದು ಹೇಳುವ ಈಶ್ವರ ದೇವಾಲಯವಿದೆ. ಗರ್ಭಗೃಹ, ಸುಕನಾಸಿ ಮತ್ತು ಮುಖಮಂಟಪವಿರುವ ಈ ದೇವಾಲಯ ಜೀರ್ಣಾವಸ್ಥೆಯಲ್ಲಿದೆ. ಹಾಸನದ ದಕ್ಷಿಣಕ್ಕೆ ಹೇಮಾವತಿ ನದಿಯ ದಡದ ಮೇಲಿರುವ ಗೊರೂರು ಗ್ರಾಮದಲ್ಲಿ ಪ್ರಸಿದ್ಧ ಯೋಗಾನರಸಿಂಹ ದೇವಾಲಯವಿದೆ. ಇವಲ್ಲದೆ ಸಾಲಗಾಮೆ, ದುದ್ದ, ಕಟ್ಟಾಯ ಇವು ಹೋಬಳಿ ಕೇಂದ್ರಗಳಾಗಿದ್ದು ಸುತ್ತಲ ಗ್ರಾಮಗಳ ವ್ಯಾಪಾರಕೇಂದ್ರಗಳಾಗಿವೆ.

ಪಟ್ಟಣ : ಹಾಸನ ಜಿಲ್ಲೆ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಬೆಂಗಳೂರಿನ ಪಶ್ಚಿಮಕ್ಕೆ 186 ಕಿಮೀ ದೂರದಲ್ಲೂ ಮೈಸೂರಿನ ವಾಯವ್ಯಕ್ಕೆ 121 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 1,16,628. ಶೀಘ್ರವಾಗಿ ಬೆಳೆಯುತ್ತಿರುವ ಮಲೆನಾಡಿನ ಪಟ್ಟಣಗಳಲ್ಲಿ ಹಾಸನವೂ ಒಂದು. ಪಟ್ಟಣ ಹಿತಕರ ಹವೆಯನ್ನು ಹೊಂದಿರುವುದರಿಂದ ಇದನ್ನು ಬಡವರ ಊಟಿ ಎಂದೂ ಕರೆಯುತ್ತಾರೆ. ಮಲೆನಾಡಿನ ಪಟ್ಟಣಗಳಲ್ಲಿ ಶಿವಮೊಗ್ಗವನ್ನು ಬಿಟ್ಟರೆ ಹಾಸನವೇ ದೊಡ್ಡ ಆಡಳಿತ ಮತ್ತು ಶಿಕ್ಷಣಕೇಂದ್ರ. ಇಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಮಲೆನಾಡು ಎಂಜನಿಯರಿಂಗ್ ಕಾಲೇಜು, ಆಯುರ್ವೇದ ಕಾಲೇಜು, ಎ.ವಿ. ಕಾಂತಮ್ಮ ಮಹಿಳೆಯರ ಕಾಲೇಜು, ವಿವಿಧೋದ್ದೇಶ ತಾಂತ್ರಿಕ ಶಾಲೆ, ಕಾನೂನು ಕಾಲೇಜು, ಕೈಗಾರಿಕಾ ತರಬೇರಿ ಸಂಸ್ಥೆ ಮತ್ತು ಅನೇಕ ಪ್ರೌಢಶಾಲೆಗಳು, ಸಾರ್ವಜನಿಕ ಗ್ರಂಥಾಲಯ ಮುಂತಾದವುಗಳಿದ್ದು ವಿದ್ಯಾಭ್ಯಾಸಕ್ಕೆ ಅನುಕೂಲವಿದೆ. ಪಟ್ಟಣದ ಹೊರವಲಯದಲ್ಲಿ ಕೈಗಾರಿಕಾ ಪ್ರದೇಶವನ್ನು ರೂಪಿಸಲಾಗಿದೆ. ಮೈಸೂರು ಉಪಕರಣಗಳ ಕಾರ್ಖಾನೆ ಇತ್ತು. ಭಾರತೀ ಕಾಫಿ ಕ್ಯೂರಿಂಗ್ ವಕ್ರ್ಸ್, ಹಾಸನ ಕಾಫಿ ಕ್ಯೂರಿಂಗ್ ವಕ್ರ್ಸ್ ಮತ್ತು ಪ್ಲಾಂಟರ್ಸ್ ಕಾಫಿ ಕ್ಯೂರಿಂಗ್ ವಕ್ರ್ಸ್ ಮುಂತಾದ ಕಾಫಿ ಸಂಸ್ಕರಣ ಕೇಂದ್ರಗಳು ಇಲ್ಲಿವೆ. ಹೆಂಚಿನ ಕಾರ್ಖಾನೆ, ಮರ ಕೊಯ್ಯುವ ಕಾರ್ಖಾನೆಗಳು, ಎಂಜಿನಿಯರಿಂಗ್ ಮತ್ತು ಆಟೊವಕ್ರ್ಸ್, ಲೋಹಕೈಗಾರಿಕೆಗಳು, ಎಣ್ಣೆ ಮತ್ತು ಅಕ್ಕಿಗಿರಣಿಗಳು, ಬೆಂಕಿಪೆಟ್ಟಿಗೆ ತಯಾರಿಕಾ ಕಾರ್ಖಾನೆಗಳು, ಮುದ್ರಣಾಲಯಗಳು ಮತ್ತು ಸಾಬೂನು ತಯಾರಿಕಾ ಕಾರ್ಖಾನೆಗಳು ಇಲ್ಲಿವೆ. ಇಲ್ಲಿನ ವ್ಯಾಪಾರ ವಾಣಿಜ್ಯ ಕೈಗಾರಿಕೆಗಳಿಗೆ ಮತ್ತು ಕೃಷಿ ಉತ್ಪಾದನೆಗಳಿಗೆ ಈ ಸ್ಥಳ ಮಲೆನಾಡು ಪ್ರದೇಶದ ದೊಡ್ಡ ಮಾರುಕಟ್ಟೆಯಾಗಿದ್ದು ಸಗಟು ವ್ಯಾಪಾರದ ಕೇಂದ್ರವಾಗಿದೆ. ಪ್ರತಿ ಮಂಗಳವಾರ ದೊಡ್ಡ ಸಂತೆ ಸೇರುತ್ತದೆ. ಆಲೂಗಡ್ಡೆ ವ್ಯಾಪಾರಕ್ಕೆ ಈ ಊರು ಪ್ರಸಿದ್ಧಿ. ಪ್ರತಿವರ್ಷ ಜನವರಿಯಲ್ಲಿ ಈ ಪಟ್ಟಣದಲ್ಲಿ ನಡೆಯುವ ದನಗಳ ಜಾತ್ರೆ ಮತ್ತು ವಸ್ತುಪ್ರದರ್ಶನ ಹೆಸರಾದುದಾಗಿತ್ತು. ಪಟ್ಟಣ ಮೈಸೂರು-ಅರಸೀಕೆರೆ ರೈಲುಮಾರ್ಗದ ಒಂದು ಮುಖ್ಯ ನಿಲ್ದಾಣ. ಇಲ್ಲಿಂದ ಸುತ್ತಲ ಪಟ್ಟಣಗಳಿಗೆ ಉತ್ತಮ ಮಾರ್ಗಸೌಲಭ್ಯಗಳಿವೆ. ಪಟ್ಟಣ ಪುರಸಭಾ ಆಡಳಿತಕ್ಕೆ ಸೇರಿದೆ.

ಇಲ್ಲಿನ ಸ್ಥಳಪುರಾಣದ ಪ್ರಕಾರ ಹಾಸನವೆಂಬ ಹೆಸರು ಸಿಂಹಾಸನಪುರವೆಂಬ ಹೆಸರಿನಿಂದ ಬಂದಿದೆ ಎಂದು ಪ್ರತೀತಿ. ಇದು ಅರ್ಜುನನ ಮೊಮ್ಮಗ ಜನಮೇಜಯನ ಸ್ಥಳವೆಂದು ಪ್ರತೀತಿ. ಇಲ್ಲಿನ ಹಾಸನಾಂಬ ದೇವಾಲಯದಿಂದ ಪಟ್ಟಣಕ್ಕೆ ಹಾಸನವೆಂಬ ಹೆಸರು ಬಂತೆಂದೂ ಹಿಂದೆ ಸಪ್ತಮಾತೆಯರು ವಾರಣಾಸಿಯಿಂದ ದಕ್ಷಿಣ ಭಾರತಕ್ಕೆ ಬರುತ್ತಿರುವಾಗ ಈ ಪ್ರದೇಶದ ಪ್ರಕೃತಿಸೌಂದರ್ಯಕ್ಕೆ ಮನಸೋತು ನೆಲೆಸಲು ನಿರ್ಧರಿಸಿ, ಅವರಲ್ಲಿ 6 ಮಂದಿ ಹಾಸನದಲ್ಲೂ ಮತ್ತೊಬ್ಬಳು ಆಲೂರು ತಾಲ್ಲೂಕಿನ ಕೆಂಚಮ್ಮನಹೊಸಕೋಟೆ ಎಂಬ ಸ್ಥಳದಲ್ಲಿ ಕೆಂಚಾಂಬ ಎಂಬ ಹೆಸರಿನಿಂದಲೂ ನೆಲೆಗೊಂಡರೆಂದು ಜನಜನಿತ ಕಥೆ.

ಐತಿಹಾಸಿಕವಾಗಿ ಸುಮಾರು 11ನೆಯ ಶತಮಾನದಲ್ಲಿ ಚೋಳರಸರ ಅಧಿಪತಿಯಾದ ಬುಕ್ಕಾನಾಯಕ ತನ್ನ ವಿಜಯೋತ್ಸಾಹದ ನೆನಪಾಗಿ ಒಂದು ಕೋಟೆ ಮತ್ತು ಮಾರುಕಟ್ಟೆಯನ್ನು ಕಟ್ಟಿ, ಆ ಸ್ಥಳಕ್ಕೆ ಚನ್ನ-ಪಟ್ಣ (ಚೆಲುವಾದ ಪಟ್ಟಣ) ಎಂಬ ಹೆಸರಿಟ್ಟನೆಂದು ತಿಳಿದು ಬರುತ್ತದೆ. ಆತ ಮತ್ತು ಆತನ ವಂಶಸ್ಥರು ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲ ಇಲ್ಲಿ ಆಳಿದ ಆನಂತರ ಅದು ಸಂಜೀವ ಕೃಷ್ಣಪ್ಪನಾಯಕನೆಂಬುವನಿಗೆ ಸೇರಿತೆಂದು ತಿಳಿಯಬರುವುದು. ಈ ನಾಯಕ ಒಮ್ಮೆ ಪ್ರಯಾಣ ಹೊರಟಾಗ ಒಂದು ಮೊಲ ಅಡ್ಡಬಂದು ಪಟ್ಟಣದ ಹೆಬ್ಬಾಗಿಲಿನೊಳಗೆ ಪ್ರವೇಶಿಸಿತೆಂದೂ ಈ ಅಪಶಕುನದಿಂದ ವ್ಯಾಕುಲಚಿತ್ತನಾದ ನಾಯಕನಿಗೆ ಹಾಸನಾಂಬ ಪ್ರತ್ಯಕ್ಷಳಾಗಿ ಆ ಸ್ಥಳದಲ್ಲಿ ಒಂದು ಕೋಟೆಯನ್ನು ಕಟ್ಟುವಂತೆ ಹೇಳಿ ಆಶೀರ್ವದಿಸಿದಳೆಂದೂ ಅದೇ ಪ್ರಕಾರ ಕೋಟೆಯನ್ನು ಕಟ್ಟಿ ಅದಕ್ಕೆ ಹಾಸನವೆಂಬ ಹೆಸರಿಟ್ಟನೆಂದೂ ಪ್ರತೀತಿ. ಇದರಿಂದ ಹಾಸನ ಸುಮಾರು 12ನೆಯ ಶತಮಾನದ ಅಂತ್ಯದಲ್ಲಿ ಸ್ಥಾಪಿತವಾಯಿತೆಂದು ಹೇಳಬಹುದು. ಹಾಸನ ಎಂಬ ಹೆಸರಿನ ಉಲ್ಲೇಖ ಹಾಸನ ತಾಲ್ಲೂಕಿನ ಕುದರಗುಂಡಿ ಎಂಬ ಗ್ರಾಮದಲ್ಲಿರುವ ಸು. 1140ರಲ್ಲಿ ಸ್ಥಾಪಿತವಾದ ವೀರಗಲ್ಲಿನ ಶಿಲಾಶಾಸನದಲ್ಲಿ ಕಂಡುಬರುತ್ತದೆ. ಮುಂದೆ ಹಾಸನ 1690ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ್ ಅವರ ಕೈವಶವಾಯಿತು. ಹಾಸನಾಂಬ ದೇವಾಲಯ ಪಾಳೆಯಗಾರರ ಕಾಲದಲ್ಲಿ ನಿರ್ಮಿತವಾದದ್ದೆನ್ನಲಾಗಿದೆ. ಪ್ರತಿ ವರ್ಷ ಆಶ್ವೀಜ ಮಾಸದ ಶುಕ್ಲಪಕ್ಷದಲ್ಲಿ ಒಂದು ವಾರ ಕಾಲ ಈ ದೇವಾಲಯ ತೆರೆದಿರುತ್ತದೆ. ಈ ಕಾಲದಲ್ಲಿ ರಥೋತ್ಸವ ನಡೆಯುತ್ತದೆ. ಪಟ್ಟಣದ ಮಧ್ಯಭಾಗದಲ್ಲಿರುವ ದೇವಿಗೆರೆಯ ದಡದ ಮೇಲೆ ಕೊಳಲು ಗೋಪಾಲಕೃಷ್ಣ ಮತ್ತು ಗಂಗಾಧರೇಶ್ವರ ಮಂದಿರಗಳಿವೆ. ಅಲ್ಲದೆ ಹೊಯ್ಸಳ ದೊರೆ ಒಂದನೆಯ ನರಸಿಂಹನ ಕಾಲದಲ್ಲಿ ಪ್ರಧಾನ ಹೆಗ್ಗಡೆ ಲಕುಮಯ ಎಂಬವನಿಂದ ಕಟ್ಟಲ್ಪಟ್ಟ ಚೆನ್ನಕೇಶವ ದೇವಾಲಯವಿದೆ. ಹೊಯ್ಸಳರ ಕಾಲದ ವಿರೂಪಾಕ್ಷೇಶ್ವರ ದೇವಾಲಯವನ್ನು (ಈಶ್ವರ) ವಿದ್ಯಾರಣ್ಯರು ಜೀರ್ಣೋದ್ಧಾರ ಮಾಡಿದರೆಂದು ಪ್ರತೀತಿ. ಒಂದು ಶತಮಾನದ ಹಿಂದೆ ವೆಂಕಟಕೃಷ್ಣಪ್ಪ ಎಂಬವರು ಕಟ್ಟಿಸಿದ ಮಲ್ಲೇಶ್ವರ ದೇವಾಲಯವಿದೆ. ಇಲ್ಲಿ ಸು. 900 ವರ್ಷಗಳಷ್ಟು ಹಳೆಯ ಒಂದು ಜೈನ ಬಸದಿಯೂ ಇದೆ.

(ವಿ.ಜಿ.ಕೆ.; ಕೆ.ಆರ್.ಎನ್.)