ಆವ ಲಕುಮೀ ರಮಣ.."
ಮೆಲ್ಲನೆ ತುಂಬಿ ಬರುತ್ತಿದ್ದ ಎದೆ, ಅಗಲವಾದ ಮುಖ, ಮಾಟವಾದ ಹುಬ್ಬು
ಗಳು. ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲದ ಕಣ್ಣುಗಳೆರಡು-
"ಹೂವ ತರುವರ ಮನೆಗೆ ಹುಲ್ಲು ತರುವಾ.."
ಸೊಗಸಾಗಿತ್ತು ಕಂಠ, ಮಗುವಿನ ಕೆಂಪು ಮುಖದ ಮೇಲೆ ಬಿಳಿಯ ಪೌಡರಿನ
ತೆರೆಯೆಳೆದು ಗುಳಿ ಬೀಳುತ್ತಿದ್ದ ಕೆನ್ನೆಗೆ 'ಉಮ್ಮ' ಕೊಟ್ಟು, ತನ್ನ ಪುಟ್ಟ ಕಾಲುಗಳ
ಮೇಲೆಯೇ ಅದು ನಿಲ್ಲುವಂತೆ ನೆರವಾಗುತ್ತಿದ್ದ ಚಂಪಾವತಿಗೆ ಅಹಲ್ಯೆಯ ಹಾಡು
ಕೇಳಿಸಿತು.
ಮಧುರ ಧ್ವನಿ ಓಣಿಯಲ್ಲಿ ಸಾಗಿಬಂದು ಕೊನೆಯ ಮನೆಯೊಳಕ್ಕೂ ಇಣಕಿ
ನೋಡಿತ್ತು. ಚಂಪಾ ಮಗುವನ್ನೆತ್ತಿಕೊಂಡು ಬಾಗಿಲ ಬಳಿ ನಿಂತು, ಎದುರುಗಡೆ
ಬಲಕ್ಕೆ ಹಾಯಿಸಿದಳು .
ಕನ್ನಡಿ ನೋಡಿ ಮುಗಿದು ಜಡಿಯನ್ನು ಎದೆಯ ಮೇಲಕ್ಕೆ ಎಳೆದುಕೊಳ್ಳುತ್ತಾ
ಅಹಲ್ಯಾ ತಲೆ ಎತ್ತಿದಳು. ಆಗ ಬಲಗಣ್ಣ ನೋಟಕ್ಕೆ ಚಂಪಾವತಿಯ ಸೀರೆಯ ಸೆರಗು
ಕಾಣಿಸಿತು. ರಾಗ ಅರ್ಧದಲ್ಲೇ ತುಂಡಾಯಿತು.
ಅಹಲ್ಯೆಯ ಮನೆ ಬಾಗಿಲ ಮುಂದೆ ನಿಂತು ಚಂಪಾ ಕೇಳಿದಳು:
"ಯಾಕಮ್ಮಾ ಹಾಡೋದು ನಿಲ್ಲಿಸ್ಬಿಟ್ರಿ?"
"ಎಲ್ಲಿ ನಾನೆಲ್ಲಿ ಹಾಡ್ತಿದ್ದೆ?"
"ಸಾಕ್ರೀ ಸಾಕ್ರೀ..ಪರವಾಗಿಲ್ಲ ನೀವು..."
ಅಡುಗೆಯ ಮನೆಯಲ್ಲಿದ್ದ ಅಹಲ್ಯೆಯ ತಾಯಿ ಬಾಗಿಲಿಗೆ ಬಂದು ಹೇಳಿದಳು:
"ಅದ್ಯಾಕಮ್ಮಾ ಮಗೂನ ಅವರು ಇವರು ಅಂತೀರಾ?"
ದೂರು ಕೊಡುವಂತೆ ಅಹಲ್ಯೆ ತಾನೂ ಅಂದಳು.
"ನೋಡಮ್ಮಾ ಎರಡುಮೂರು ಸಲ ನಾನೇ ಹೇಳ್ದೇ ಅವರಿಗೆ."
"ಅದು ನನ್ನದೊಂದು ಅಭ್ಯಾಸ," ಎಂದಳು ಚಂಪಾವತಿ ಕೊರಳು ಕೊಂಕಿಸುತ್ತಾ.
ಮಾತಿನ ನಡುವೆ ಮೌನ ಸುಳಿಯಬಾರದೆಂದು ಆಕೆ ಮುಂದುವರಿಸಿದಳು:
"ನಿಮ್ಮ ಮಗಳ ಕಂಠ ಚೆನ್ನಾಗಿದೆ ಕಣ್ರೀ."
ಅಹಲ್ಯೆ ತಾಯಿಗೆ ಹೆಮ್ಮೆ ಎನಿಸಿದರೂ ಅದನ್ನು ಆಕೆ ತೋರಿಸಿಕೊಳ್ಳಲಿಲ್ಲ.
"ಏನು ಚೆನ್ನಾಗಿದೆಯೋಮ್ಮ.ಯಾವುದೋ ಒಂದೆರಡು ದೇವರ ನಾಮ
ಕಲಿತ್ಕೊಂಡಿದ್ದಾಳೆ.ಇಲ್ಲಿ ಹೇಳ್ಕೊಡೋರು ಯಾರೂ ಇಲ್ಲ."
ಹಾಡು ಹೇಳಿಕೊಡುವುದು ಚಂಪಾವತಿಗೆ ಹೊಸ ವಿಷಯವಾಗಿರಲಿಲ್ಲ. ಆದರೆ
ವಠಾರಕ್ಕೆ ಬಿಡಾರ ಬಂದು ಒಂದೂವರೆ ತಿಂಗಳಾಗಿದ್ದರೂ ಹಾಡುವ ಇಚ್ಛೆ ಆವರೆಗೂ
ಆಗದೆ ಇದ್ದುದರಿಂದ, ಆಕೆಯ ಕಂಠದ ಪರಿಚಯವಿರಲಿಲ್ಲ ಬೇರೆಯವರಿಗೆ. ಕೊನೆಯ
ಮನೆಯ ಜೋಡಿ ಸ್ವಲ್ಪ ವಿಚಿತ್ರವಾಗಿ ಇತರರಿಗೆ ತೋರಿ ಬಂದುದರಿಂದ, ವಠಾರದೊಳ
ಗಿದ್ದರೂ ಅದೊಂದು ಬಿಡಾರ ಬೇರೆಯೇ ಎನ್ನುವ ಹಾಗೆ ಆಗಿತ್ತು
ಮನಸ್ಸಿನಲ್ಲಿಯೇ ಮುಂದಿನ ಹೆಜ್ಜೆಯನ್ನು ಲೆಕ್ಕ ಹಾಕಿ ಚಂಪಾ ಹೇಳಿದಳು:
"ನಿಮ್ಮ ಮಗಳು ಎಲ್ಲಿಗೋ ಹೊರಟ ಹಾಗಿದೆ."
ಅಹಲ್ಯೆ ಎದ್ದು ಕನ್ನಡಿಯನ್ನು ಎತ್ತಿಡುತ್ತ ಅಂದಳು:
"ಇಲ್ಲವಪ್ಪ. ನಾನೆಲ್ಲಿಗೂ ಹೋಗೋಲ್ಲ"
"ಅವಳಣ್ಣ ಬರೋ ಹೊತ್ತಾಯ್ತು,"ಎಂದು ಹೇಳಿ ಅಹಲ್ಯೆಯ ತಾಯಿ ಮತ್ತೆ
ಅಡುಗೆ ಮನೆಯೊಳಕ್ಕೆ ಹೋದಳು .
"ಅಹಲ್ಯಾ ನಮ್ಮನೆಗೆ ಬರ್ತಿರಾ ಸ್ವಲ್ಪ?"
ಚಂಪಾವತಿಯ ಆಹ್ವಾನವನ್ನು ಕೇಳಿ ಅಹಲ್ಯೆಗೆ ಆಸ್ಚರ್ಯವಾಗಿದೆ ಇರಲಿಲ್ಲ.
ಆದರೆ ಯಾವುದೋ ಅಸ್ಪಷ್ಟ ಕಾರಣಕ್ಕಾಗಿ ಆ ಹೊಸಬಳ ಬಗೆಗೆ ಗೌರವ ಭಾವವನ್ನು
ತಳೆದಿದ್ದ ಅಹಲ್ಯೆಗೆ ಆಕರೆಯಿಂದ ಸಂತೋಷವೂ ಆಯಿತು .ಆಕೆಯೆಂದಳು:
"ಒಂದ್ನಿಮಿಷ ಬಂದ್ಬಿಟ್ಟೆ...."
ಹತ್ತು ನಿಮಿಷ ತಡೆದು ಬಂದ ಅಹಲ್ಯಾ ಚಂಪಾವತಿಗೆ ಸುಂದರಿಯಾಗಿ ಕಂಡಳು.
ಸ್ವಚ್ಛವಾಗಿ ತೊಳೆದಿದ್ದ ಮುಖ ಪ್ರಸನ್ನವಾಗಿತ್ತು .ಅಗಲ ಕಿರಿದಾಗಿದ್ದ ತುಟಿಗಳು
ಒಂದಕ್ಕೊಂದು ಅಂಟಿ ಕುಳಿತಿದ್ದವು...ಪುಟ್ಟ ಬಾಯಿ ....
"ಇದೆಲ್ಲಾ ಗಂಡ ಬರುವವರೆಗೆ.ಆಮೇಲೆ!...."
-ಎಂದು ಚಂಪಾ ಮನಸಿನೊಳಗೇ ಅಂದುಕೊಂಡು ನಕ್ಕಳು.
"ಯಾಕ್ರೀ ಬಾ ಅಂದದ್ದು?"
ಚಂಪಾ ಚಾಪೆ ಹಾಸಿ ಹೇಳಿದಳು:
"ಕೂತ್ಕೊಳ್ಳಿ,ಹೇಳ್ತೀನಿ."
ಅಹಲ್ಯಾ ಕುಳಿತುಕೊಳ್ಳುತ್ತಾ ಅಂದಳು:
"ನಾನು ನಿಮಗಿಂತ ಚಿಕ್ಕೋಳು ಕಣ್ರೀ.ನೀವು ನನ್ನ ಹೋಗು, ಬಾ ಅಂತ
ಅನ್ಬೇಕು"
"ಒಂದು ಶರತದ ಮೇಲೆ."
"ಏನು?"
"ನೀವು ಈಗ ಹಾಡ್ಬೇಕು."
ಅಹಲ್ಯೆಯ ಮುಖ ಕೆಂಪೇರಿತು.
"ಹೋಗ್ರೀ, ನಿಮಗೊಂದು ತಮಾಷೆ. ನಾನು ಹೊರಟ್ಹೋಗ್ತೀನಿ."
"ಮಹಾ ಕೆಟ್ಟವಳಮ್ಮ ನೀನು. ಅದು ಹ್ಯಾಗೆ ಹೋಗ್ತೀಯೋ ನೋಡ್ತೀನಿ,"
ಎಂದು ಚಂಪಾವತಿ ಬಾಗಿಲಿಗೆ ಅಡ್ಡವಾಗಿ ನಿಂತಳು. ಸಲಿಗೆಯ ಏಕವಚನ ಅಹಲ್ಯೆಯ
ಸಂಕೋಚವನ್ನೆಲ್ಲಾ ದೂರ ಮಾಡಿತು. ಆಕೆಯನ್ನು ಎರಡು ಸಾರಿ ತೋರಿಸಲು ಕರೆದು
ಕೊಂಡು ಹೋಗಿದ್ದರು. ಆ ಎರಡು ಬಾರಿಯೂ ಆಕೆ ಹಾಡಿದ್ದಳು.ಆದರೆ
ನೋಡಿದವರಿಗೋ ಅವರ ಹಿರಿಯರಿಗೋ ಆಕೆ ಒಪ್ಪಿಗೆಯಾಗಿರಲಿಲ್ಲ. ಯಾರಾದರೂ
"ಹಾಡು" ಎಂದಾಗಲೆಲ್ಲ, ತಾನು ತಲೆ ತಗ್ಗಿಸಿಕೊಂಡು ಎರಡು ಕಡೆ ಹಾಡಿದ್ದ ನೆನಪು
ಆಕೆಗೆ ಆಗುತ್ತಿತ್ತು.
"ಎಲ್ಲಿ, ಹೇಳಮ್ಮಾ."
ಅಹಲ್ಯಾ ಕಣ್ಣೆವೆಗಳನ್ನು ಕುಣಿಸುತ್ತ ಅಂದಳು:
"ನೀವೂ ಒಂದು ಹಾಡೋ ಹಾಗಿದ್ರೆ, ನಾನು ಹಾಡ್ತೀನಿ."
"ನಾನು! ನಂಗೆ ಬರೋಲ್ವಮ್ಮ."
"ಬೂಶಿ ಬಿಡ್ತಿದೀರಾ. ಘಾಟಿ ಕಣ್ರಿ ನೀವು."
ಹುಡುಗಿಯ ಬಾಲಭಾಷೆ ತಮಾಷೆಯಾಗಿ ತೋರಿತು, ಮಗುವನ್ನೆತ್ತಿಕೊಂಡಿದ್ದ
ಚಂಪಾವತಿಗೆ.
"ನಿಜವಾಗ್ಲೂ ನಂಗೆ ಹಾಡೋಕೆ ಬರೋಲ್ಲ ಅಹಲ್ಯಾ."
"ಸುಳ್ಳು! ಸುಳ್ಳು!"
ಒಂದು ಕ್ಷಣ ಸುಮ್ಮನಿದ್ದು ಮುಗುಳ್ನಕ್ಕು ಚಂಪಾ ಹೇಳಿದಳು;
“ಆಗಲಮ್ಮ. ಒಪ್ದೆ : ನೀನು ನಗಬಾರು ನೋಡು."
ಚಿತ್ರಕಾರನ ಹೆಂಡತಿಗೆ ಹಾಡುಗಾರಿಕೆ ಖಂಡಿತವಾಗಿಯೂ ಗೊತ್ತಿರಬೇಕೆಂದು
ತಾನು ಮಾಡಿದ್ದ ಊಹೆ ಸರಿಯೆ ತಪ್ಪೆ ಎಂದು ತಿಳಿಯುವ ಹೋತ್ತು ಬ೦ತೆoದು,
ಅಹಲ್ಯೆಗೆ ಸಂತೋಷವಾಯಿತು. ಚಂಪಾವತಿಯ ಹಾಡನ್ನು ಕೇಳುವ ತವಕದಲ್ಲೆ
ಇದ್ದ ಆಕೆಯೆಂದಳು:
"ಯಾವುದು ಹೇಳ್ಲಿ?"
"ಯಾವುದಾದರೂ."
ಅಹಲ್ಯಾ, ದೇವರ ನಾಮದ ಬದಲು ತಾನು ಪ್ರೀತಿಸಿದ ಬೇರೊಂದು ಹಾಡ
ನ್ನೆತ್ತಿಕೊಂಡಳು:
"ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು..."
ಆ ಚರಣ ಮುಗಿದಾಗಲೊಮ್ಮೆ ಅಹಲ್ಯಾ ಚಂಪಾವತಿಯನ್ನು ದಿಟ್ಟಿಸಿ ನೋಡಿ
ದಳು. ಬಳಿಕ, ಗೋಡೆಯ ಒಂದು ಮೂಲೆಯತ್ತ ಕನಸು ಕಾಣುತ್ತಿದ್ದವಳಂತೆ
ನೋಡುತ್ತ, ಆಕೆ ಹಾಡಿದಳು.
ಕೇಳುತ್ತಿದ್ದವರ ಹೃದಯದ ತಂತಿಗಳನ್ನು ವಟುತ್ತಿದ್ದ ಮಧುರ ಸ್ವರ, ಭಾವ
ಪೂರ್ಣವಾದ ಅರ್ಥಪೂರ್ಣವಾದ ಮಾತುಗಳು. ಚಂಪಾ ತನ್ಮಯಳಾಗಿ ಕೇಳಿದಳು.
ನಿಂತಿದ್ದವಳು ಅಹಲ್ಯೆಗೆದುರು ಗೋಡೆಗೆ ಒರಗಿ ಕುಳಿತು ಕೇಳಿದಳು. ಆಕೆಯ ಮಗುವೂ
ತಾಯಿಯ ಎದೆಯ ಮೇಲೆ ತಲೆಯಿಟ್ಟು ಬೆಟ್ಟು ಚೀಪುತ್ತ, ಅಹಲ್ಯೆಯನ್ನೇ ನೋಡಿತು.
ಅಹಲ್ಯೆಯ ತಾಯಿಯೊಮ್ಮೆ ತನ್ನ ಬಾಗಿಲ ಬಳಿ ನಿಂತು ಹೋದಳು.
ಮೀನಾಕ್ಷಮ್ಮ ಹೊರಗೆ ಬಂದು ಒಂದು ನಿಮಿಷ ಅಹಲ್ಯೆಯ ಹಾಡಿಗೆ ಕಿವಿಗೊಟ್ಟಳು.
ಹಾಡು ಮುಗಿದೊಡನೆ,ಕೆಂಪೇರಿದ್ದ ಮುಖದಿಂದ ಅಹಲ್ಯಾ ಚಂಪಾವತಿ
ಯನ್ನು ನೋಡಿದಳು.
"ಸೊಗಸಾಗಿತ್ತು ಅಹಲ್ಯಾ. ಎಷ್ಟು ಚೆನ್ನಾಗಿ ಹಾಡ್ತೀಯಾ ನೀನು! ನನಗೆ
ಗೊತ್ತೇ ಇರ್ಲಿಲ್ಲ."
ಅಹಲ್ಯೆಯ ಹೃದಯ ಹಿಗ್ಗಿತು. ಚಂಪಾವತಿಗೆ ಆ ಹಾಡಿನ ಸಾಲುಗಳು ಅರ್ಥ
ವಾಗಿದ್ದುವು. ಅಹಲ್ಯೆಗೆ ಅವೆಲ್ಲಾ ತಿಳಿದಿದೆಯೋ ಇಲ್ಲವೋ ಎಂದು ಚಂಪಾ ಶಂಕಿಸಿ
ದಳು. ಅಹಲ್ಯೆಯನ್ನು ಉದ್ದೇಶಿಸಿ ಆಕೆಯೆಂದಳು:
"ರಾಗ ಭಾವಗಳು ಬೆರೆತಾಗ ಹಾಡು ಯಾವಾಗ್ಲೂ ಚೆನ್ನಾಗಿರುತ್ತೆ, ಅಲ್ವಾ?"
ಚಂಪಾವತಿ ಹೇಳಿದುದು ಪೂರ್ತಿಯಾಗಿ ಅರ್ಥವಾಗದೆ ಹೋದರು ಅಹಲ್ಯಾ
'ಹೂಂ'ಗುಟ್ಟಿದಳು. ಆದರೆ,ಕಿವಿಗೆ ಇಂಪಾಗಿದ್ದ ಹೊಗಳಿಕೆಯ ಬಲೆಯಲ್ಲಿ, ಚಂಪಾ
ಹಾಡಲು ಒಪ್ಪಿದ್ದುದನ್ನು ಅಹಲ್ಯಾ ಮರೆಯಲಿಲ್ಲ.
"ಇನ್ನು ನಿಮ್ಮದು."
"ಹಾಡ್ಲೆಬೇಕೇನು?"
"ಹೂಂ ಮತ್ತೆ."
ಚಂಪಾವತಿ ಮಗುವನ್ನು ಪಕ್ಕದಲ್ಲಿ ತನ್ನ ತೊಡೆಗೆ ಒರಗಿಸಿ ಕುಳ್ಳುರಿಸಿ ಮುಗು
ಳ್ನಕ್ಕಳು. ಹುಬ್ಬುಗಳು ಚಲಿಸಿದುವು. ಕಣ್ಣುಗಳು ಮಾತನಾಡಿದುವು. ತುಟಿಗಳು
ತೆರೆದುಕೊಂಡವು.
"ತಲ್ಲಣಿಸದಿರು ಕಂಡ್ಯ ತಾಳು ಮನವೇ..."

ಅಹಲ್ಯಾ ಹೊತ್ತಿಸಿದ ಕಿರುಹಣತೆಯಿಂದ ಸೊಡರು ಅಂಟಿಸಿಕೊಂಡು ದೊಡ್ಡ
ಹಣತೆಯೊಂದು ಶೋಭಾಯಮಾನವಾಗಿ ಉರಿಯತೊಡಗಿತು. ಎಷ್ಟೋ ದಿನಗಳಿಂದ
ಪೂರೈಸದೆ ಇದ್ದ ಬಕೆಯನ್ನು ಈಡೇರಿಸುವವಳ ಹಾಗೆ ಚಂಪಾ ಹಾಡಿದಳು. ಹಿಂದೆ
ಶಂಕರನಾರಾಯಣಯ್ಯನೆದುರು ಹಾಡಿದಾಗಲೆಲ್ಲ ಆತನ ಮುಗುಳುನಗು ಆಕೆಯ
ಹೃದಯವನ್ನು ಅರಳಿಸುತ್ತ ಉತ್ತೇಜನವೀಯುತ್ತಿತ್ತು. ಈ ದಿನ ಆತ ಎದುರಿಗಿರಲಿಲ್ಲ.
ಅಹಲ್ಯಾ ಕುಳಿತಿದ್ದಳು. ಆದರೂ ಮುಗುಳ್ನಗುತ್ತಿದ್ದ ತನ್ನ ಪ್ರೀತಿಪಾತ್ರ ಮುಖವನ್ನೇ
ತನ್ನೆದುರು ಕಲ್ಪಿಸಿಕೊಳ್ಳುತ್ತ ಚಂಪಾ ಮೈಮರೆತು ಹಾಡಿದಳು. ಹಾಡುತ್ತಿದ್ದಾಗ,
ಯಾವುದೋ ನೆರಳು ಓಣಿಯಲ್ಲಿ ಚಲಿಸಿದ ಹಾಗೆ ಅಸ್ಪಷ್ಟವಾಗಿ ಆಕೆಗೆ ಭಾಸವಾ
ಯಿತು. ಆದರೆ ಅದೊಂದರ ಗೊಡವೆಯೂ ಇಲ್ಲದೆ ಚಂಪಾ ಹಾಡಿದಳು. ಹಾಡು
ಮುಗಿದು ಆಕೆ ಅಹಲ್ಯೆಯತ್ತ ನೋಡಿದಳು. ಅಹಲ್ಯೆಯ ದೃಷ್ಟಿಯನ್ನೇ ಹಿಂಬಾಲಿಸಿ,
ಬಾಗಿಲಿನತ್ತ ಮುಖ ತಿರುವಿದಳು. ಆಗ ಚಂಪಾವತಿಗೆ ಗಲಿಬಿಲಿಯಾಯಿತು.
"ಅಯ್ಯೋ ಇದೇನು!"

13

ಅಲ್ಲಿ ಕಾಮಾಕ್ಷಿ, ಕಮಲಮ್ಮ, ಪದ್ಮಾವತಿ, ಉಪಾಧ್ಯಾಯರ ಹೆಂಡತಿ, ಆಕೆಯ
ನಾದಿನಿ ಸುಮಂಗಳಾ, ಪೋಲೀಸರಾಯನ ಧರ್ಮಪತ್ನಿ ನಿಂತಿದ್ದರು. ಮೀನಾಕ್ಷಮ್ಮ
ತನ್ನ ಮನೆ ಬಾಗಿಲಲ್ಲಿ, ಅಹಲ್ಯೆಯ ತಾಯಿಯೊಡನೆಯೂ ಪದ್ಮನಾಭಯ್ಯನ ಹೆಂಡತಿ
ಯೊಡನೆಯೂ ನಿಂತಿದ್ದಳು. ರಂಗಮ್ಮನವರ ಪಕ್ಕದ ಮನೆಯಲ್ಲಿದ್ದ ಓದುವ ಹುಡು
ಗರ ತಾಯಿ ಬಂದಿರಲಿಲ್ಲ. ಮಹಡಿ ಮೇಲಿನವರೂ ಬಂದಿರಲಿಲ್ಲ.
"ರಾಧಾ ಬಂದೇ ಇಲ್ಲ! ರಾಧಾನ್ನ ಕರಕೊಂಬರ್ತೀನ್ರಿ!"
___ ಎನ್ನುತ್ತ ಅಹಲ್ಯಾ ಗಡಬಡಿಸಿ ಎದು ಹೊರಕ್ಕೆ ಹಾರಿದಳು.
ಆವರೆಗೂ ರಂಗಮ್ಮನ ವಠಾರದಲ್ಲಿ ಸ್ವಲ್ಪಮಟ್ಟಿಗೆ ಚೆನ್ನಾಗಿ ದೇವರ ನಾಮ
ಹಾಡುತ್ತಿದ್ದವಳು ಕಮಲಮ್ಮ ಒಬ್ಬಳೇ.. ತನ್ನನ್ನು ಸುಲಭವಾಗಿ ಹಾಡುಗಾರಿಕೆಯಲ್ಲಿ
ಮೀರಿಸುವಂತಿದ್ದ ಚಂಪಾವತಿಯನ್ನು ಕಂಡು ಆಕೆಗೆ ಒಂದು ತರಹೆಯಾಯಿತು. ಆದರೂ
ಮನಸ್ಸಿನ ಭಾವನೆಗಳನ್ನು ಹೊರಗೆ ತೋರಿಸದೆಯೇ ಆಕೆ ಅಂದಳು;
"ಇನ್ನೊಂದು ಹಾಡು ಹೇಳ್ರೀ...ಇಷ್ಟು ದಿನ ಮುಚ್ಚಿಟ್ಟುಕೊಂಡಿದ್ದಿ
ರರ್ಲಿ!......."
ನಡುಗೋಲಿನ ಟಕ್ ಟಕ್ ಸದ್ದು ರಂಗಮ್ಮ ಬಂದರೆಂದು ಮುನ್ಸೂಚನೆ
ಕೊಟ್ಟಿತು, ರಂಗಮ್ಮ ಬಂದರು, ಆಕೆಯನ್ನು ಹಿಂಬಾಲಿಸಿ ರಾಜಮ್ಮ, ಆಹಲ್ಯೆ-ರಾಧೆ
ಯರು ಗುಂಪನ್ನು ತೂರಿಕೊಂಡು ಒಳಬಂದರು. ನಾರಾಯಣಿ ಸತ್ತ ದಿನ ಹಾಗೆ
ಹೆಂಗಸರು ಆ ಕೊನೆಯ ಮನೆಯ ಮುಂದೆ ಗುಂಪು ಕೂಡಿದ್ದರು. ಆ ಬಳಿಕ ಈಗ.
ಸ್ವಲ್ಪ ಹೊಸ ರೀತಿಯದಾಗಿದ್ದ ಶಂಕರನಾರಾಯಣಯ್ಯನ ಸಂಸಾರವನ್ನು
ಕಂಡು, 'ವಠಾರ ಅಂದ್ಮಲೆ ಎಲ್ಲಾ ತರಹ ಜನರೂ ಇದ್ದೇ ಇರ್ತಾರೆ' ಎಂದು ಸಮಾ
ಧಾನ ಪಟ್ಟಿದ್ದ ರಂಗಮ್ಮ ರಂಗಮ್ಮ ಹಾಡು ಕೇಳಿ ಚಕಿತರಾಗಿದ್ದರು. ರಂಗಮ್ಮನಿಗೆ ತಿಳಿಯದೆಯೇ
ಅವರ ವಠಾರದೊಳಗಿಂದ ಕೇಳಿಸಿದ ಹಾಡು!
ಅದು ಯಾರ ಕಂಠ ಎಂದು ತಿಳಿದಿದ್ದರೂ ಯಾರದು? ಎಂದು ಕೇಳುವ ಅಧಿ
ಕಾರವನ್ನು ಉಪಯೋಗಿಸುತ್ತಾ ರಂಗಮ್ಮ ಕೇಳಿದರು:
"ಯಾರೇ ಅದು ಹಾಡಿದ್ದು ?”
"ಹೊಸ ಬಿಡಾರದವರು ಕಣ್ರೀ" ಎಂದು ಎರಡು ಮೂರು ಸ್ವರಗಳು
ಹೇಳಿದುವು.
"ಯಾರು ಚಂಪಾವತೀನೆ?" ಎಂದು ರಂಗಮ್ಮ , ತಮ್ಮ ಸ್ವರವನ್ನು ಆದಷ್ಟು
ಇಂಪಾಗಿಡಲು ಯತ್ನಿಸುತ್ತ ಅಂದರು. ಅದಕ್ಕೇನೂ ಪ್ರತ್ಯುತ್ತರ ಬೇಕಾಗಿರಲಿಲ್ಲ.
ಕಮಲಮ್ಮನ ಹೊರತಾಗಿ ಬಾಗಿಲಲ್ಲಿ ನಿಂತಿದ್ದ ಇತರ ಹೆಂಗಸರೆಲ್ಲ ಒಳಗೆ ಬಂದು
ಚಾಪೆಯ ಮೇಲೂ ನೆಲದ ಮೇಲೂ ಕುಳಿತರು.
"ಒಳಗ್ಬನ್ನಿ ರಂಗಮ್ನೋರೆ," ಎಂದು ಕಾಮಾಕ್ಷಿ ಕರೆದಳು.
ರಂಗಮ್ಮ ಬಾಗಿಲಲ್ಲೇ ನಿಂತರು. ಚಿತ್ರ ಬರೆಯುವವನ ಹೆಂಡತಿ. ಏನಿದ್ದರೂ
ಈಗಿನ ಕಾಲದವಳು. ಇವಳದೆಲ್ಲಾ ಸಿನಿಮಾ ಸಂಗೀತ ಇರಬಹುದು ಎಂದು ಭಾವಿಸಿ
ದ್ದರು ರಂಗಮ್ಮ. ತಮ್ಮ ಅನುಮಾನ ಸರಿ ಎಂಬುದು ಸ್ಪಷ್ಟವಾಗಲೆಂದು ಅವರು
ಗೋಡೆಯನ್ನು ಆಧರಿಸಿ ನಿಂತು ಹಾಡು ಕೇಳಲು ಸಿದ್ಧರಾದರು.
ಚಂಪಾವತಿ ಸುಮ್ಮನಿದ್ದಳು. ಸನ್ನಿವೇಶ ರೂಪುಗೊಂಡ ರೀತಿ ಕಂಡು ಆಕೆಗೆ
ಸಂತೋಷವಾಯಿತು.
ಹೊರಗೆ ನಿಂತಿದ್ದ ಕಮಲಮ್ಮನೇ ಮತ್ತೊಮ್ಮೆ ಹೇಳಿದಳು:
"ಹೇಳೀಮ್ಮಾ ಇನ್ನೊಂದು ಹಾಡು."
ಹಾಗೆ ಒತ್ತಾಯ ಮಾಡಿದ ಸ್ವರ ಇಂಪಾಗಿರಲಿಲ್ಲ.
ಚಂಪಾ ಮುಗುಳ್ನಕ್ಕು ಆರಂಭಿಸಿದಳು:
"ಕಾಲಹರಣ ಮೇಲರಾ ಹರೇ ಸೀತಾರಾಮ..."
ನಿಜವಾಗಿಯೂ! ಎಷ್ಟೋ ಜನರಿಗಿದು ಆನಿರೀಕ್ಷಿತವಾಗಿತ್ತು. ಈ ಸುಪ್ರಸಿದ್ದ
ಕೀರ್ತನೆ ಚಂಪಾವತಿಯ ಬಾಯಿಯಿಂದ ಹೊರಡಬಹುದೆಂದು ಯಾರೂ ನಿರೀಕ್ಷಿಸಿರ
ಲಿಲ್ಲ. ನಿಂತಿದ್ದ ರಂಗಮ್ಮ ಅಲ್ಲಿಯೆ ಕುಳಿತರು. ರಾಜಮ್ಮ ಎದುರು ಮನೆಯ
ಗೋಡೆಗೆ ಒರಗಿಕೊಂಡಳು.
ಹಾಡು ಮುಗಿದಾಗ ಒಂದು ಕ್ಷಣ ಯಾರೂ ಮಾತನಾಡಲಿಲ್ಲ. ಕೇಳುವವರು
ಮೂಕರಾಗುವಾಗ ಆ ಮೌನದ ಅರ್ಥವೇನೆಂಬುದು ಚಂಪಾವತಿಗೆ ಗೊತ್ತಿತ್ತು. ಸದ್ಯಃ
ಆಕೆಯ ಮಗು ಅತ್ತಿರಲಿಲ್ಲ. ಹಾಡು ಮುಗಿಸಿದ ತಾಯಿಯ ಮುಖವನ್ನೆ ನೋಡಿ ಆ
ಪೋರಿ ನಕ್ಕಳು.
ಈ ಸಭೆ ಸೇರಲು ತಾನೇ ಕಾರಣಳೆಂಬ ಹೆಮ್ಮೆಯಿಂದ ಅಹಲ್ಯಾ ಹೇಳಿದಳು:
"ಒಂದು ಕನ್ನಡ ಹಾಡು ಹೇಳ್ರೀ!"
ಬೇರೆಯೂ ಯಾರೋ ಸ್ವರ ಕೂಡಿಸಿದರು:
"ದೇವರ ನಾಮ ಹೇಳ್ರೀ!"
ವಠಾರದ ಒಡತಿಯನ್ನು ಮೆಚ್ಚಿಸಿದುದಾಯಿತೆಂದು ತಿಳಿದ ಚಂಪಾ, ಮತ್ತಷ್ಟು
ಸಮಾಧಾನದಿಂದ ಹಾಡಿದಳು:
"ಸುಲಭ ಪೂಜೆಯ ಮಾಡಿ ಬಲವಿಲ್ಲದವರು
ನಳಿನ ನಾಭನ ಪಾದ ನಳಿನ ಸೇವಕರು........."
ಕೇಳಿದವರನ್ನು ಮುಗ್ಧಗೊಳಿಸುವ ಸಮ್ಮೋಹನ ಶಕ್ತಿ ಚಂಪಾವತಿಗೆ ಇತ್ತೆಂಬು
ದರಲ್ಲಿ ಸಂದೇಹವಿರಲಿಲ್ಲ.
ಈ ಹಾಡು ಮುಗಿದಾಗ ರಂಗಮ್ಮ ತಲೆದೂಗುತ್ತ ಎದ್ದರು.
"ಇದು ದೇವರ ವರ ಚಂಪಾವತಿ,ನೀನು ಭಾಗ್ಯವಂತೆ," ಎಂದು ಹೇಳಿ, ಅವರು
ತಮ್ಮ ಬಾಗಿಲಿನತ್ತ ನಡೆದರು. ರಾಜಮ್ಮನೂ ಆಕೆಯನ್ನು ಹಿಂಬಾಳಿಸಿದಳು.

ಆದರೆ ಉಳಿದವರು ಹೊರಡಲು ಸಿದ್ಧರಿರಲಿಲ್ಲ. ಗಂಡಸರು ಯಾರೋ ಒಬ್ಬಿ

ಬ್ಬರು ವಠಾರಕೆ ಹಿಂತಿರುಗಿದ ಹಾಗಾಯಿತು. ಅದರ ಹೆಂಗಸರು ಯಾರೊ ಅದನ್ನು
ಗಮನಿಸಲಿಲ್ಲ.
ಮೌನವನ್ನು ಮುರಿದು ಅವರೆಲ್ಲ ಮಾತನಾಡಿದರು.
—"ಎಷ್ಟು ಚೆನಾಗಿ ಹಾಡ್ರೀರಾ ಚಂಪಾವತಿ..."
_"ಇನ್ನೊಂದು ಹಾಡು ಹೇಳ್ರೀ."
_"ಹೇಳ್ತೀ ಇನ್ನೊಂದು."
ಚಂಪಾವತಿ ಹೊಗಳಿಕೆಗೆ ಬಲಿಯಾಗಲಿಲ್ಲ, ಬಲು ಎಚ್ಚರಿಕೆಯಿಂದ ಆಕೆ
ಯೆಂದಳು:
"ಇನ್ನು ನೀವು ಹಾಡ್ಬೇಕು ಯಾರಾದ್ರೂ."
ಯಾರೋ ಅಂದರು:
"ಅಹಲ್ಯಾ, ನೀನು ಹಾಡೇ."
"ಕಮಲಮ್ಮ, ನೀವು ಹಾಡ್ರೀ."
ಅಹಲ್ಯಾ ಲಜ್ಞಾವತಿಯಾಗಿ ಸುಮ್ಮನೆ ಕುಳಿತಳು. ಕಮಲಮ್ಮ ಪ್ರಯತ್ನ ಪೂರ್ವಕ
ಕವಾಗಿ ಮುಗುಳುನಗಲೆತ್ನಿ ಸುತ್ತ ಹೇಳಿದಳು;
"ಇವರೆದುರಿನಲ್ಲಿ ನಮ್ಮದೆಲ್ಲಾ ಏನಮ್ಮ?"
ಕಮಲಮ್ಮ ಹಾಗೆ ಹೇಳಿದರೂ, ಹಾಡೆಂದು ತನ್ನನ್ನು ಕೇಳಿದರಲ್ಲಾ ಎಂದು
ಆಕೆಗೆ ಸಂತೋಷವೇ ಆಗಿತ್ತು.
ಆ ಧ್ವನಿಯ ಸ್ವರೂಪ ಚಂಪಾವತಿಗೆ ಅಪರಿಚಿತವಾಗಿರಲಿಲ್ಲ, ಕಮಲಮ್ಮ
ವಠಾರದ ಗಾನವಿಶಾರದೆ ಎಂಬುದು ಸ್ಪಷ್ಟವಾಗಿತ್ತು, ಮಾನವ ಸಹಜವಾದ ಕುತೂ
ಹಲ, ಅಸೂಯೆ ಚಂಪಾವತಿಯಲ್ಲಾ ಮೂಡಿದುವು.. ನೋಡಿಯೇ ಬಿಡೋಣವೆಂದು
ಆಕೆ ಕಮಲಮ್ಮನನ್ನು ಒತ್ತಾಯಿಸಿದಳು.
"ಹೇಳಿ ಕಮಲಮ್ಮೊರೆ."
ಆ ಕೇಳಿಕೆಯನ್ನು ಇತರರು ಪುಷ್ಟೀಕರಿಸಿದರು.
ಸೋಲನ್ನೊಪ್ಪಿಕೊಳ್ಳುವ ಅಪೇಕ್ಷೆ ಇಲ್ಲದೆ ಕಮಲಮ್ಮ ಹಾಡಿದಳು;
"ಬಾರೇ ನೀ ವರಲಕ್ಸ್ಮಿ ದೀವಿಯೇ
ಶ್ರೀಹರಿ ಸತಿಯೆ ನೀ ಪ್ರೇಮದಿ
ಬಾರೇ ನೀ ವರಲಕ್ಸ್ಮಿ ದೇವಿಯೆ.
ಜನಿಸಿ ಕ್ಷೀರಸಾಗರದೊಳು ಹರಿಯ
ನೋಡಿ ಮೋಹಿಸಿದೆ ನೀ
ಪರಮ ಮಂಗಳೆ ಲಕ್ಸ್ಮಿದೇವಿ ನೀ
ಬಾರೇ.......
ತಾನು ಚೆನ್ನಾಗಿಯೇ ಹಾಡಿದೆನೆಂದು ಕಮಲಮ್ಮ ಅಂದುಕೊಂಡಳು. ಆದರೆ
ಹೊಸಬಳೆದುರು ಹಳಬಳಿಗೆ ಸೋಲಾಗಿತ್ತು. ಬೇರೆಯವರೇನೋ ಸುಮ್ಮನಿದ್ದರು.
ಆದರೆ, ತನ್ನ ಸ್ನೇಹಿತೆಯದೇ ಮೇಲಣ ಸ್ಥಾನವೆಂದು ಸ್ಪಷ್ಟವಾದ ಅಹಲ್ಯೆಗೆ ಮುಗುಳು
ನಗೆಯನ್ನು ಹತ್ತಿಕ್ಕುವುದು ಪ್ರಯಾಸವಾಯಿತು. ಆಕೆ ರಾಧೆಯ ತೊಡೆಯನ್ನು
ಮೆಲ್ಲನೆ ಚಿವುಟಿದಳು. ಅವರ ಕಣ್ಣುಗಳು ಪರಸ್ಪರ ಮಾತನಾಡಿಕೊಂಡುವು. ಚಂಪಾ
ವತಿಯ ಸೂಕ್ಷ್ಮ ದೃಷ್ಟಿಗೆ ಇದೆಲ್ಲ ಬೀಳದೆ ಇರಲಿಲ್ಲ. ಆಕೆ ಮಾತ್ರ ಗಂಭೀರವಾಗಿಯೇ
ಇದ್ದಳು.
ಕಮಲಮ್ಮ ಹಾಡು ಮುಗಿಸಿದೊಡನೆ ಆಕೆಯೆಂದಳು:
"ಚೆನ್ನಾಗಿ ಹಾಡಿದ್ರಿ ಕಣ್ರೀ..."
"ಅಯ್ಯೋ ನಮ್ಮದೆಲ್ಲ ಏನಮ್ಮಾ..."
ಇನ್ನೂ ಒಬ್ಬಿಬ್ಬರು ಗಂಡಸರು ವಠಾರಕ್ಕೆ ಹಿಂದಿರುಗಿದ ಹಾಗಾಯಿತು.ಆದರೆ
ಹೆಂಗಸರು ಮಿಸುಕಲಿಲ್ಲ.
"ನೀನು ಹಾಡಮ್ಮ ಅಹಲ್ಯಾ",ಎಂದಳು ಚಂಪಾವತಿ.
"ಅಣ್ಣ ಬಂದ," ಎನ್ನುತ್ತ ಉಪಾಧ್ಯಾಯರ ತಂಗಿ ಸುಮಂಗಳಾ ಎದ್ದು
ಹೋದಳು. ಉಪಾಧ್ಯಾಯರ ಹೆಂಡತಿ ಮಾತ್ರ ಕದಲಲಿಲ್ಲ.
ಹಾಡಲು ಸಿದ್ಧಳಾದ ಅಹಲ್ಯಾ, ರಾಧೆಯನ್ನು ನೋಡಿ ನಕ್ಕಳು.
ಅಷ್ಟರಲ್ಲಿ ಪೋಲೀಸನ ಮಗ ಬಂದು ಹೇಳಿದ:
"ಅಮ್ಮಾ, ಅಪ್ಪ ಬಂದ."
ಆದರೆ ಪೊಲೀಸನ ಹೆಂಡತಿ ಏಳಲಿಲ್ಲ.

ಅಹಲ್ಯಾ ಆರಂಭಿಸಿದಳು:
"ಹುಣ್ಣಿಮೆ ಚಂದಿರ ಬಂದಿಹನೆಂದು__"
ಮೊದಲ ಸಾಲು ಕೇಳುತ್ತಲೆ ರಾಧೆಯ ಮುಖ ಕೆಂಪೇರಿತು. ಅಹಲಾ
ಮುಗುಳುನಕ್ಕು ಮುಂದುವರಿಸಿದಳು:
"ತಿಂಗಳ ಪೂಜೆಯ ಸಲ್ಲಿಸಲೆಂದು
ಬಂದಳು ರಾಧೆ ಯಮುನೆಯ ತಡಿಗೆ....."
ತನ್ನ ಹೆಸರು ಬಂದೊಡನೆ ರಾಧಾ ಕೊರಳು ಕೊಂಕಿಸಿದಳು. ಹೆಂಗಸರೆಲ್ಲ
ಗೊಳ್ಳನೆ ನಕ್ಕರು. ನಗೆಯ ತೆರೆಗಳು ಏರಿ ಬರುತ್ತಿದ್ದಂತೆಯೇ ಅಹಲ್ಯಾ ಹಾಡಿದಳು:
"...ತೋರಿತು ಹೊಸ ಶೃಂಗಾರದ ನಡಿಗೆ
ಹುಣ್ಣಿಮೆ ಚಂದಿರ ಬಂದಿಹನೆಂದು..."
ಕಂಠದ ಮಾಧುರ್ಯಕ್ಕೆ ಕೌಮಾರ್ಯದ ಮೋಹಕ ಮುಗ್ಧತೆಯೂ ಸೇರಿ ಆ ಹಾಡು
ಅಲ್ಲಿದ್ದವರನ್ನು ಮರುಳುಗೊಳಿಸಿತು.
ನಿಂತಲ್ಲಿಂದಲೆ ವಠಾರದ ಹೆಬ್ಬಾಗಿಲತ್ತ ನೋಡಿದ ಮೀನಾಕ್ಷಮ್ಮ ಹೇಳಿದಳು:
"ಚಂಪಾವತೀ, ನಿಮ್ಮ ಯಜಮಾನ್ರು ಬಂದ್ರು ಕಣ್ರೀ."

ಮತ್ತೊಬ್ಬ ಗಂಡಸಿನ ಆಗಮನ. ಇನ್ನು ಏಳಲೇಬೇಕಲ್ಲಾ ಎಂದು ಹೆಂಗಸರು
ಚಂಪಾವತಿಯ ಮುಖವನ್ನುಮಿಕಿ ಮಿಕಿ ನೋಡಿದರು.
ಕುಳಿತಲ್ಲಿಂದಲೆ ಚಂಪಾವತಿ ಕೇಳಿದಳು;
"ಬ೦ದೇಬಿಟ್ರೇನು?"
ಹೆಬ್ಬಾಗಿಲಿಗೆ ಬಂದ ಶಂಕರನಾರಾಯಣಯ್ಯನಿಗೆ ಅಹಲೈಯ ಹಾಡಿನ ಸ್ವರ ಕೇಳಿ
ಸಿತು. ತನ್ನ ಮನೆಯ ಒಳ ಹೊರಗೆ ಜನ ಸೇರಿದ್ದರೆಂಬುದೂ ಅಸ್ಪಷ್ಟವಾಗಿ ಕಂಡಿತು.
ಆತ ಮುಗುಳುನಕ್ಕು, ಹಾಗೆಯೇ ಹಿಂತಿರುಗಿ ಹೊರಟು ಬಿಟ್ಟ.
"ವಾಪಸು ಹೋದ್ರು ಕಣ್ರಿ!"
ಆ ಹೆಂಗಸರಲ್ಲಿ ಕೆಲವರಿಗೆ ಆಶ್ಚರ್ಯವಾಯಿತು. ಕೆಲವರಿಗೆ ಚಂಪಾವತಿಯ
ಯಜಮಾನರು ಸಿಟ್ಟಾದರೇನೋ ಎಂದು ಅಳಕು.
ಆದರೆ ತನ್ನ ಗಂಡನನ್ನು ಚೆನ್ನಾಗಿ ತಿಳಿದಿದ್ದ ಚಂಪಾವತಿ ಹೇಳಿದಳು:
"ಹೊಗಲಿ ಬಿಡಿ. ಆಮೇಲೆ ಬರ್ತಾರೆ."
ಕುಳಿತಿದ್ದವರಲ್ಲಿ ಕೆಲವರೆಂದರು:
"ಕೊನೆಯದು ಒಂದು ನೀವೇ ಹೇಳಿ ಚಂಪಾವತಿ."
ಯಾವುದನ್ನು ಹೇಳುವುದು ಯೋಗ್ಯವೆಂದು ಚಂಪಾ ಒಂದು ಕ್ಷಣ
ಯೋಚಿಸಿದಳು.
"ಯಾವುದಾದರೂ ಮೈಸೂರು ಮಲ್ಲಿಗೆ ಹಾಡು ಹೇಳ್ಲೇನ್ರೀ?"
"ಓ! ಚೆನಾಗಿರುತ್ತೆ, ಅದನ್ನೇ ಹೇಳಿ," ಎಂದಳು ಅಹಲ್ಯಾ. ಕಮಲಮ್ಮ
ಮುಖ ಸ್ವಲ್ಪ ಸೊಟ್ಟಗೆ ಮಾಡಿದರು. ಆದರೆ ಆ ಹೆಂಗಸರಿಗೆ 'ಮೈಸೂರು ಮಲ್ಲಿಗೆ'
ಹಾಡುಗಳು ಅಪರಿಚಿತವಾಗಿರಲಿಲ್ಲ. ರಂಗಮ್ಮನೆದುರು 'ಆ ಹಾಡುಗಳು ಚೆನ್ನಾಗಿವೆ'
ಎಂದು ಹೇಳುವುದು ಸಾಧ್ಯವಿಲ್ಲದೆ ಹೋಗಿದ್ದರೂ ಕದ್ದು ತಿನ್ನುವ ಕೊಬ್ಬರಿ ಬೆಲ್ಲದ
ಹಾಗೆ ಅವು ಸಿಹಿಯಾಗಿದ್ದುವು.
ಚಂಪಾ ಪ್ರತಿಯೊಂದು ಪದಕ್ಕೂ ಜೀವ ತುಂಬಿ ಮೋಹಕವಾಗಿ ಹಾಡಿದಳು:
"ರಾಯರು ಬ೦ದರು ಮಾವನ ಮನೆಗೆ
ರಾತ್ರಿಯಾಗಿತ್ತು.
ಹುಣ್ಣಿಮೇ ಹರಿಸಿದ ಬಾನಿನ ನಡುವೆ
ಚಂದಿರ ಬಂದಿತ್ತು ತುಂಬಿದ ಚಂದಿರ ಬಂದಿತ್ತು..."
ಈ ಹಾಡು ಮುಕ್ತಾಯವೇ ಇಲ್ಲದೆ ಹೀಗೆಯೇ ಸಾಗಲಿ ಎನ್ನಿಸಿತು ಎಲ್ಲರಿಗೂ.
ಮಾವನ ಮನೆ, ರಾಯರು, ಪದುಮ....ಪ್ರತಿಯೊಬ್ಬರ ದಾಂಪತ್ಯ ಜೀವನದಲ್ಲೂ.
ಒಂದಲ್ಲ ಒಂದು ರೀತಿಯಲ್ಲಿ ಆ ಘಟ್ಟಗಳು ಕಳೆದಿದ್ದುವು. ಕವಿ ಹಾಡಿದಷ್ಟು ಪ್ರಿಯ

ವಾಗಿರಲಿಲ್ಲ ಯಾವುದೂ, ಮಾವನ ಮನೆಗೆ ರಾಯರು ಮೊದಲು ಬಂದಾಗ ಆದ
ವಿವಾದಗಳು, "ನಿಮ್ಮ ಮಗಳೇ ಬೇಡ...." "ಬೇರೆ ಮದುವೆ..." ಬಂದು ತಲಪಿ
ದೊಡನೆ, ನಡೆದ ಆಯಾಸದಿಂದ ಗಾಢವಾಗಿ ನಿದ್ದೆ ಹೋಗಿದ್ದ ಅಳಿಯ....ಒಂದೊಂದು
ಒಂದೊಂದು ತರಹೆ . ಆದರೂ ಅವರಿಗೆಲ್ಲ ಆ ಹಾಡು ಪ್ರಿಯವಾಗಿತ್ತು. 'ಪದುಮ'
ಎಂಬ ಪದ ಬಂದಾಗ ಪದ್ಮಾವತಿ ಮಗುವನ್ನೆತ್ತಿಕೊಂಡು ಎದ್ದು ನಿಂತಳು. ಆದರೆ
ಯಾರೂ ಅದನ್ನು ಗಮನಿಸಲಿಲ್ಲ. ಅಹಲ್ಯೆ ರಾಧೆಯರಿಗೆ ಅಂತಹ ಅನುಭವಗಳಿರ
ಲಿಲ್ಲ. ಆದರೂ ಆ ಹಾಡು ಇಂಥವೇ ಎಂದು ಹೇಳಲಾಗದ ಸವಿಯನ್ನು ಅವರಿಗೆ
ನೀಡುತ್ತಿತ್ತು.
ಹಾಡು ಮುಗಿಯಿತು. ಕತ್ತಲಾಗಿತ್ತು ಆಗಲೆ.
"ಸಾಕಮ್ಮ ಇನ್ನು, ಎಲ್ಲರೂ ಕೆಲಸ ಬಿಟ್ಬಿಟ್ಟು ಬಂದಿದೀರಾ..."
ಹೆಂಗಸರೆಲ್ಲಾ ಒಬ್ಬೊಬ್ಬರಾಗಿ ಹೊರಟು ಹೋದರು. ಆದರೆ ಅಹಲ್ಯಾ ಮತ್ತು
ರಾಧಾ ಏಳಲಿಲ್ಲ.
ಚಲಚ್ಚಿತ್ರ ನೋಡಲು ಅಹಲ್ಯೆಗೆ ಅವಕಾಶವೇ ಸಿಗುತ್ತಿರಲಿಲ್ಲ. ಆದರೆ ಚಲ
ಚ್ಚಿತ್ರದಹಾಡುಗಳೆಂದರೆ ಬಲು ಪ್ರೀತಿ. ಚಂಪಾವತಿಗೆ ಸಿನಿಮಾ ಹಾಡು ಖಂಡಿತ
ಬರುತ್ತಿರಬಹುದೆಂದು ಈಗ ಅವಳಿಗೆ ನಂಬಿಕೆಯಾಗಿತ್ತು. ಅಂಗಲಾಚುವ ಧ್ವನಿಯಲ್ಲಿ
ಆಕೆ ಕೇಳಿದಳು:
"ರೀ, ನಿಮಗೆ ಸಿನಿಮಾ ಹಾಡು ಬರಲ್ವೇನ್ರೀ?...ಒಂದು ಹಾಡು ಹೇಳ್ರಿ....
ಒಂದೇ ಸಾಕು."
ಚಂಪಾವತಿಗೆ ನಗು ಬಂತು.
"ಬೇಡಮ್ಮಾ...ರಂಗಮ್ನೋರಿಗೆ ಗೊತ್ತಾದರೆ ಎಲ್ಲಾದರು..."
"ಹುಂ. ಅವರೇನು ಮಾಡ್ತಾರೆ!"
"ಕಮಲಮ್ಮನಂತೂ..."
"ಹೋಗಲಿ ಬಿಡ್ರಿ. ಅದೊಂದು... ಒಂದು ಹೇಳೀಂದ್ರೆ."
"ಮೆತ್ತಗೆ ಹೇಳ್ಲಾ?"
"ಹೂಂ. ಹೂಂ. ಮೆತ್ತಗೆ ಹೇಳಿ."
"ಬಾಗಿಲು ಹಾಕೊಂಡು ಬಿಡಿ."
ಅಹಲ್ಯಾ ತಟಕ್ಕನೆದ್ದು ಬಾಗಿಲು ಹಾಕಿದಳು. ಹಾಗೆಯೇ ವಿದ್ಯುತ್ ಗುಂಡಿ
ಯನ್ನೂ ಅಮುಕಿದಳು. ಆದರೆ ರಂಗಮ್ಮ ದೀಪ ಹಾಕಿರಲಿಲ್ಲ.
ಕತ್ತಲೆಯಲ್ಲಿ ಚಂಪಾವತಿಯ ಮಗು ತಾಯಿಯನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತ
ಆ ಮೂವರ ಮುಖಗಳನ್ನೂ ನೋಡಿತು.
ಮೃದುವಾದ ಹತ್ತಿಯ ಅತಿ ಸೂಕ್ಷ್ಮ ಎಳೆಗಳು ಗಾಳಿಯಲ್ಲಿ ತೇಲಾಡಿದ ಹಾಗೆ
ಚಂಪಾವತಿಯ ಸ್ವರ ಹೊರಟಿತು. ಪುಟ್ಟ ಕಿಟಕಿಯ ಮೂಲಕ ಸೊಳ್ಳೆಗಳು ಟುಂಯ್
ಗುಡುತ್ತ ಬಂದವು. ಆದರೂ ಚಂಪಾ ಮೆಲುದನಿಯಲ್ಲಿ ಹಾಡಿದಳು:

"ನಚೊ ನಾಚೊ ಪ್ಯಾರೆ ಮನ್ ಕೆ ಮೋ....
ನಚೊ ನಾಚೊ..."
ಅಹಲ್ಯಾ ರಾಧೆಯರು ನಾಚಲಿಲ್ಲ. ಆ ಹಾಡಿನ ಅರ್ಥವೇನೆಂಬುದೂ ಅವರಿಗೆ
ಗೊತ್ತಿರಲಿಲ್ಲ. ಆದರೆ ಅದು ಸಿನಿಮಾ ಹಾಡು. ಅವರಿಗೆ ಗೊತ್ತಿದ್ದುದಷ್ಟೇ.
ಅದೊಂದು ಒಳ್ಳೆಯ ಸಿನಿಮಾ ಹಾಡು.
ಹಾಡು ಕೊನೆಯ ಸಾಲು ಬಂದಂತೆಯೇ ದೀಪ ಹತ್ತಿಕೊಂಡಿತು.
"ಸಾಕಮ್ಮಾ, ಇನ್ನು ಸಾಕು," ಎಂದಳು ಚಂಪಾ.
ರಾಧೆ ಅಹಲ್ಯೆಯರು ಹೊರಡಲೆಂದು ಬಾಹಿಲು ತೆರೆಯುವುದಕ್ಕೂ "ಅಹಲ್ಯಾ"
ಎಂದು ಆಕೆಯ ಅಣ್ಣ ರಾಮಚಂದ್ರಯ್ಯ ಕರೆಯುವುದಕ್ಕೂ ಸರಿ ಹೋಯಿತು.
ಹೊರಡುತ್ತಲಿದ್ದ ಅಹಲ್ಯೆಯನ್ನು ಚಂಪಾವತಿ ಕೇಳಿದಳು:
"ಅಹಲ್ಯಾ, ಆ ಹಾಡು ನಿನಗೆಲ್ಲಿ ಸಿಕ್ತೆ?"
"ಯಾವುದ್ರಿ?"
"ಅದೇ, ಒಳಗೆ ಬಾ ಯಾತ್ರಿಕನೆ...."
"ಓ ಅದಾ? ರಾಧೆಯ ಅಣ್ಣ ಯಾವುದರಲ್ಲೋ ನೋಡಿ ಬರಕೊಂಡು ಬಂದಿ
ದ್ನಂತೆ."
"ನನಗೂ ಸ್ವಲ್ಪ ಬರಕೊಡ್ತೀಯಾ?"
"ನಾನು ಬರಕೊಡ್ತೀನ್ರೀ," ಎಂದು ರಾಧಾ ಆ ಕೆಲಸ ಮಾಡಿಕೊಡಲು
ಒಪ್ಪಿದಳು.
ಹುಡುಗಿಯರು ಹೊರಹೋಗುತ್ತಲೆ ಚಂಪಾವತಿ ತಾನು ಮೆಚ್ಚಿದ ಆ ಹಾಡಿನ
ಮೊದಲ ಸಾಲನ್ನು ನೆನಪು ಮಾಡಿಕೊಳ್ಳುತ್ತಾ ಗುಣಗುಣಿಸಿದಳು.
"ಅವರಿಗೆ ಈ ಹಾಡು ಖಂಡಿತ ಇಷ್ಟವಾಗುತ್ತೆ", ಎಂದು ಆಕೆ ಮನಸ್ಸಿನಲ್ಲೆ
ಅಂದುಕೊಂಡಳು.

೧೦
ಮಹಡಿಯೇರಲೆಂದು ರಾಧಾ ಹೆಬ್ಬಾಗಿಲಿನತ್ತ ಬರುತ್ತಲಿದ್ದಂತೆ ಬಲಬದಿಯ
ಮೊದಲ ಮನೆಯಿಂದ ರೋದನ ಕೇಳಿಸಿತು.
"ಅಯ್ಯೋ ಹೊಡೀಬೇಡೀಂದ್ರೆ....ನಿಮ್ಮ ದಮ್ಮಯ್ಯ!"
ಹುಂ-ಹುಂ-ಹೂಂಕಾರ. ಡುಬ್-ಡುಬ್-ಗುದ್ದಿನ ಸದ್ದು.
"ಅಯ್ಯಯ್ಯೋ-ಅಮ್ಮಾ!ಸತ್ತೆ-ಸತ್ತೆ....."